Mysuru
oi-Madhusudhan KR
ಮೈಸೂರು, ಜೂನ್, 23: ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಈ ಸದ್ಭುತ ದೃಶ್ಯವನ್ನು ಸವಿಯಲು ಮೊದಲ ದಿನವೇ ಭಕ್ತ ಸಾಗರವೇ ಹರಿದುಬಂದಿದೆ. ಸಿಂಗಾರಗೊಂಡ ದೇವಿ ಮೂರ್ತಿಯನ್ನು ಕಣ್ಣುಂಬಿಕೊಳ್ಳಲು ಭಕ್ತರು ನಸುಕಿನ ಜಾವದಿಂದಲೇ ಧಾವಿಸಿದ ಪರಿಣಾಮ ಬೆಟ್ಟದಲ್ಲಿ ಸಂಭ್ರಮ ಮನೆ ಮಾಡಿದೆ.
ಸಿಂಗಾರಗೊಂಡ ನಾಗಲಕ್ಷ್ಮಿ ದೇವಿಗೆ ಬೆಳಗ್ಗೆ 3:30ಕ್ಕೆ ಪೂಜೆಯನ್ನು ಮಾಡಲಾಯಿತು. ನಂತರ ತಾಯಿ ಚಾಮುಂಡೇಶ್ವರಿಗೆ ಅಭಿಷೇಕ, ಪುಷ್ಪಾರ್ಚನೆ, ಅರ್ಚನೆ, ಕುಂಕುಮಾರ್ಚನೆ ಹಲವು ಪೂಜಾ ಕೈಂಕರ್ಯ ನಡೆದಿದ್ದು, 9:30ಕ್ಕೆ ಪೂಜೆ ಮುಕ್ತಾಯವಾಯಿತು. ಇನ್ನು ದೇವಾಲಯದ ಪ್ರಾಂಗಣವನ್ನು ಹಲವು ಬಗೆಯ ಹೂವುಗಳು, ಮುಸುಕಿನ ಜೋಳ, ಕಿತ್ತಲೆ, ತೆಂಗಿನಕಾಯಿ ಕಬ್ಬಿನಿಂದ ಅಲಂಕಾರ ಮಾಡಲಾಗಿದ್ದು, ಇದು ನೋಡುಗರ ಗಮನ ಸೆಳೆಯಿತು.
ಬೆಳಗ್ಗೆ 5:30ರಿಂಲೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ವೇಳೆ ನಟ ದರ್ಶನ್ ಕೂಡ ಆಗಮಿಸಿ ದೇವಿ ದರ್ಶನ ಪಡೆದರು. ಹಾಗೆಯೇ ರಾತ್ರಿ 11 ಗಂಟೆವರೆಗೂ ದರ್ಶನಕ್ಕೆ ಅವಕಾಶ ಇರುತ್ತದೆ. ಅಲ್ಲದೆ ದರ್ಶನಕ್ಕೆ ಬಂದಂತಹ 1 ಲಕ್ಷ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗೆ ಭಕ್ತರ ಅನುಕೂಲಕ್ಕೆ ತಕ್ಕಂತೆ ಅಚ್ಚುಕಟ್ಟಾಗಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ಆಷಾಢ ಶುಕ್ರವಾರ: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಈ ವಾಹನಗಳಿಗೆ ಮಾತ್ರ ಅವಕಾಶ, ಇಲ್ಲಿದೆ ವಿವರ
ಬೆಳಗ್ಗೆಯಿಂದ ರಾತ್ರಿವರೆಗೂ ಒಂದು ಲಕ್ಷ ಭಕ್ತರು ಬೆಟಕ್ಕೆ ಭೇಟಿ ನೀಡುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಎಲ್ಲಾ ಸಿದ್ಧತೆಯನ್ನು ಕೈಗೊಂಡಿದೆ. ನಗರದ ಲಲಿತಮಹಲ್ ಹೆಲಿಪ್ಯಾಡ್ ಸಮೀಪದಿಂದ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ತಮ್ಮ ಸ್ವಂತ ವಾಹನಗಳನ್ನು ಇಲ್ಲಿಯೇ ನಿಲ್ಲಿಸಿ ಬೆಟ್ಟಕ್ಕೆ ಹೊರಟರು. ಬೆಟ್ಟಕ್ಕೆ ಸಾರ್ವಜನಿಕರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಾಗೆಯೇ ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ 50 ರೂಪಾಯಿ ಮತ್ತು 300 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.
ಇನ್ನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಈ ಬಗ್ಗೆ ಮಾತನಾಡಿ, ಪ್ರತಿದಿನ ದೇವಿಗೆ ವಿಶೇಷ ಅಲಂಕಾರ ಇರಲಿದೆ. ದೀಪಾಲಂಕಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ಹೂವಿನ ಅಲಂಕಾರ ಹಾಗೂ ಪ್ರಸಾದ ನೀಡುವವರಿಗೆ ದಿನಾಂಕ ನಿಗದಿಪಡಿಸಲಾಗಿದೆ. ಚಾಮುಂಡಿಬೆಟ್ಟಕ್ಕೆ ತಾವರೆಕಟ್ಟೆ ಕಡೆಯಿಂದ, ಉತ್ತನಹಳ್ಳಿ ರಸ್ತೆ ಕಡೆಯಿಂದ ಮತ್ತು ವ್ಯಾಲಿ ರಸ್ತೆ ಮೂಲಕ ಹೋಗುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು.
ಈ ಬಾರಿ ಪಾಸ್ ಇಲ್ಲ
ಪಾಸ್ ನೀಡಿ ಸಾಕಷ್ಟು ಸಮಸ್ಯೆ ಉಂಟಾಗಿದೆ. ಹಾಗಾಗಿ ಈ ಬಾರಿ ಪಾಸ್ ಇರುವುದಿಲ್ಲ, ಶಿಷ್ಟಾಚಾರದ ಪ್ರಕಾರ ಅವಕಾಶ ಇರುವವರಿಗೆ ವಾಹನದಲ್ಲಿ ಮೇಲೆ ಹೋಗಲು ಅನುಮತಿ ನೀಡಲಾಗಿದೆ. ಉಪ ತಹಶೀಲ್ದಾರ್ ಹಾಗೂ ಇನ್ಸ್ಪೆಕ್ಟರ್ ದರ್ಜೆಯ ತಂಡ ಈ ಕಾರ್ಯವನ್ನು ನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಲ್ಲೆಂದರಲ್ಲೇ ಪ್ಲಾಸಿಕ್ ಬಿಸಾಡಿದವರಿಗೆ ದಂಡ
ಪ್ಲಾಸಿಕ್ ಮುಕ್ತ ಆಷಾಢ ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಎಲ್ಲೆಂದರಲ್ಲಿ ಪ್ಲಾಸಿಕ್ ಬಿಸಾಡಿದವರಿಗೆ ದಂಡ ಬೀಳಲಿದೆ. ಆದ್ದರಿಂದ ಮೆಟ್ಟಿಲು, ದೇವಸ್ಥಾನ ಸೇರಿದಂತೆ ಅನೇಕ ಭಾಗಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಾಗೆಯೇ ಪ್ಲಾಸ್ಟಿಕ್ ಬಳಸಿದವರಿಗೆ ದಂಡ ವಿಧಿಸಲು ಗ್ರೀನ್ ವಾರಿಯರ್ಸ್ಗಳನ್ನು ನೇಮಿಸಲಾಗಿದೆ.
ಇಂದಿನಿಂದ ಜೂನ್ 30, ಜುಲೈ 7, 14ರ ಆಷಾಢ ಶುಕ್ರವಾರ ಮತ್ತು ಜುಲೈ 10ರ ಶ್ರೀ ಚಾಮುಂಡೇಶ್ವರಿ ವರ್ಧಂತಿಯಂದು ಉಚಿತ ಬಸ್ ಸೇವೆ ಇರಲಿದೆ. ಬೆಟ್ಟಕ್ಕೆ ಬರುವ ಭಕ್ತರು ತಮ್ಮ ವಾಹನಗಳನ್ನು ಲಲಿತ ಮಹಲ್ ಮೈದಾನದಲ್ಲಿ ನಿಲುಗಡೆ ಮಾಡಿ ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆ ಮಾಡಿರುವ ಬಸ್ಗಳಲ್ಲಿ ದೇವಸ್ಥಾನಕ್ಕೆ ತೆರಳಬಹುದಾಗಿದೆ. ಮುಂಜಾನೆ 3 ಗಂಟೆಯಿಂದ ರಾತ್ರಿ 10ರವರೆಗೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ಕೂಡ ನೀಡಿದ್ದಾರೆ.
English summary
Ashada Shukravara Celebration in Mysuru’s Chamundi hill, Devotees flocked to Mysuru’s Chamundi hill.
Story first published: Friday, June 23, 2023, 13:32 [IST]