Chikkaballapur
oi-Naveen Kumar N
ಚಿಕ್ಕಬಳ್ಳಾಪುರ, ಜೂನ್ 23: ಮೊದಲ ಬಾರಿಗೆ ಶಾಸಕರಾದವರಿಗೆ ಮತ್ತು ಕೆಲವು ಹಿರಿಯ ಶಾಸಕರಿಗೂ ಒರಿಯಂಟೇಶನ್ ಪ್ರೋಗ್ರಾಂ ನೀಡುವ ಅಗತ್ಯವಿದೆ ಎಂದು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಕ್ಕೆ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಖಡಕ್ ಉತ್ತರ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ. ಪಾಟೀಲ್ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ನೀಡುತ್ತಿದ್ದಾರೆ. ವಿಷಯಾಧಾರಿತವಾಗಿ ಮಾತನಾಡಲಿ, ಅದು ಬಿಟ್ಟು ವೈಯಕ್ತಿಕ ವಿಚಾರ ಯಾಕೆ ಎಂದು ಪ್ರಶ್ನೆ ಮಾಡಿದರು.
ಪ್ರತಾಪ್ ಸಿಂಹ ಅವರೇ ನೀವು ಪತ್ರಕರ್ತರಾಗಿದ್ದಾಗ ಓದಿದ್ದೀರಾ, ಸಂಸದರಾದ ಮೇಲೆ ಅಧ್ಯಯನ ನಿಲ್ಲಿಸಿದ್ದೀರಾ ಎನಿಸುತ್ತದೆ. ನಿಮಗೆ ತಾಕತ್ತಿದ್ರೆ ಎಫ್‌ಸಿಐ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಹಿರಂಗವಾಗಿಯೇ ಸವಾಲಾಕಿದ್ದಾರೆ.
ಸೋಲಿನ ಭಯದಿಂದ ಪ್ರತಾಪ್ ಸಿಂಹ ಮಾತನಾಡುತ್ತಿದ್ದಾರೆ
ಸೋಲಿನ ಭಯದಲ್ಲಿ ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಿಮ್ಮ ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆ ಗೆಲ್ಲೋಕೆ ಆಗುತ್ತಾ? ಪ್ರಧಾನಿ ನರೇಂದ್ರ ಮೋದಿ ಹೆಸರೇಳಿಕೊಂಡೇ ಗೆಲುವು ಸಾಧಿಸಿದ್ದೀರಿ, ನಿಮ್ಮ ವೈಯಕ್ತಿಕ ವರ್ಚಸ್ಸು ಏನಿದೆ. ನಿಮ್ಮ ಸಾಧನೆ ಏನೆಂದು ಹೇಳಿ? ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾತಾಡ್ತೀರಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿದೆ, ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ತಿರುಗೇಟು ಕೊಟ್ಟರು.
ಫುಡ್ ಕಾರ್ಪೊರೇಷನ್ ಇಂಡಿಯಾ ಬಗ್ಗೆ ಚರ್ಚೆಗೆ ಆಹ್ವಾನ
ಫುಡ್ ಕಾರ್ಪೊರೇಷನ್ ಇಂಡಿಯಾಗೆ ಅದರದೇ ಆದ ಇತಿಹಾಸವಿದೆ. ಅಲ್ಲಿ ಶೇಖರಣೆಯಾಗುವ ದವಸ, ಧಾನ್ಯ ಬಡವರಿಗೆ ತಲುಪಬೇಕು, ಅದು ಎಫ್‌ಸಿಐ ಕರ್ತವ್ಯ. ರಾಜ್ಯಕ್ಕೆ ಬೇಕಾದ ಅಕ್ಕಿ ಕೊಡುವುದಾಗಿ ಎಫ್‌ಸಿಐ ಒಪ್ಪಿಕೊಂಡಿತ್ತು, ಹಣ ಕಟ್ಟಲು ಕೂಡ ಕೇಳಿತ್ತು, ಹಣ ಕಟ್ಟುವಂತೆ ಕೂಡ ಕೇಳಿತ್ತು, ಇದನ್ನು ಗೋಡೌನ್ ಎಂದು ಕರೆಯುತ್ತಾರಲ್ಲ ಅವರಿಗೆ ಏನು ಹೇಳಬೇಕು. ಸಿದ್ದರಾಮಯ್ಯ, ಎಂ.ಬಿ. ಪಾಟೀಲ್‌ಗೆ ಬೈದರೆ ಸ್ಥಾನಮಾನ ಸಿಗುತ್ತದೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದರು.
ಅಕ್ಕಿ ಕೊಡದರಿಲು ಬಿಜೆಪಿ ಕಾರಣ ಎಂದು ಆರೋಪ
ಎಫ್‌ಸಿಐ ರಾಜ್ಯಕ್ಕೆ ಹೆಚ್ಚುವರಿ ಕೊಡಲು ನಿರಾಕರಿಸಿದ್ದರ ಹಿಂದೆ ರಾಜ್ಯ ಬಿಜೆಪಿ ನಾಯಕರ ಕೈವಾಡ ಇದೆ ಎಂದು ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಈಗ 10 ಕೆ.ಜಿ. ಅಕ್ಕಿ ಕೊಟ್ಟರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ. ರಾಜಕೀಯ ದುರುದ್ದೇಶದಿಂದ ರಾಜ್ಯಕ್ಕೆ ಬರುವ ಅಕ್ಕಿಯನ್ನು ತಡೆಯಲಾಗಿದೆ, ಇದರ ಹಿಂದೆ ರಾಜ್ಯ ಬಿಜೆಪಿ ಸಂಸದರ ಕುತಂತ್ರ ಇದೆ, ರಾಜ್ಯ ಸರ್ಕಾರ ಅಕ್ಕಿ ಕೊಡಬಾರದು, ಬಿಜೆಪಿ ಪ್ರತಿಭಟನೆ ಮಾಡಿ ಅದರ ಲಾಭ ಪಡೆಯಬೇಕು ಎನ್ನುವ ದುರುದ್ದೇಶವಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರವನ್ನು ಸಿಂಗಾಪುರ ಮಾಡಲು ಆಗಲ್ಲ, ಇದು ಚಿಕ್ಕಬಳ್ಳಾಪುರ ಆಗುವುದಕ್ಕೇ ಇನ್ನೂ 20 ವರ್ಷ ಬೇಕು. ಈ ಮೊದಲು ಶಾಸಕರಾಗಿದ್ದವರು ಏನು ಕೆಲಸ ಮಾಡಿದ್ದಾರೋ ಗೊತ್ತಿಲ್ಲ, ನಗರದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಒಂದೊಂದಾಗಿ ಸರಿಪಡಿಸುತ್ತೇನೆ ಎಂದು ಹೇಳಿದರು.
English summary
Chikkaballapur MLA Pradeep Eshwar Challenges BJP MP Pratap Simha to Open Debate on FCI; Response to Simha’s Remarks on Congress MLA’s Orientation Program.
Story first published: Friday, June 23, 2023, 13:46 [IST]