Karnataka
oi-Reshma P
ಬೆಂಗಳೂರು, ಜೂನ್ 24: ಕರ್ನಾಟಕ ವಿಧಾನಸಭಾ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ರಾಜ್ಯ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಹಾಗೂ 40% ಕಮಿಷನ್ ವಿಚಾರವನ್ನ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಲೋಕಸಮರಕ್ಕೆ ಕೈ ಪಾಳಯ ಸಜ್ಜಾಗಿದೆ.
ಹೌದು, ವಿಧಾನಸಭಾ ಚುನಾವಣಾ ಗೆಲುವಿನ ಬಳಿಕ ಲೋಕಸಭಾ ಚುನಾವಣೆಯಲ್ಲೂ 20 ಸ್ಥಾನಗಳನ್ನ ಗೆಲ್ಲುವ ಲೆಕ್ಕಾಚಾರವನ್ನ ಹಾಕಿಕೊಂಡಿರುವ ರಾಜ್ಯ ಕಾಂಗ್ರೆಸ್ ಹಲವು ತಂತ್ರಗಾರಿಕೆಯನ್ನ ನಡೆಸುತ್ತಿದೆ. ಇತ್ತ ಗ್ಯಾರಂಟಿ ಘೋಷಣೆಗಳ ಜಾರಿಯಲ್ಲಿ ಹಲವು ಅಡೆತಡೆಗಳು ಎದುರಾಗಿದ್ದು, ಅನ್ನಭಾಗ್ಯ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ ವಾಕ್ಸಮರ ಜೋರಾಗಿದೆ.
ನೀ ಕೊಡೆ, ನಾ ಬಿಡೆ ಎಂಬಂತೆ ಅಕ್ಕಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಕಾಳಗ ಏರ್ಪಟ್ಟಿದೆ. ಗ್ಯಾರಂಟಿ ಭರವಸೆಗಳನ್ನ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನಾಯಕರಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದ್ದದು, ಇತ್ತ ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ದ್ವೇಷ ರಾಜಕೀಯನ್ನ ನಡೆಸುತ್ತಿದೆ ಎಂದು ಆರೋಪಿಸಿದ್ದು, ಇದೀಗ ಲೋಕಸಮರಕ್ಕೆ ಸಜ್ಜಾಗಿರುವ ಕಾಂಗ್ರೆಸ್ ಗೆ ಅಕ್ಕಿಯನ್ನೇ ಅಸ್ತ್ರವಾಗಿಸಿಕೊಂಡು ಮೋದಿ ವಿರುದ್ದ ವಾಕ್ಸಮರಕ್ಕೆ ಕಾಂಗ್ರೆಸ್ ಪಾಳಯ ತಯಾರಿ ನಡೆಸಿದೆ.
ಸರ್ಕಾರ ರಚನೆಯ ಬಳಿಕ ಮೊದಲ ಕ್ಯಾಬಿನೆಟ್ ನಲ್ಲೇ ಐದು ಗ್ಯಾರಂಟಿಗಳನ್ನ ಜಾರಿಗೊಳಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಗೆ ಗ್ಯಾರಂಟಿ ಜಾರಿಗೆ ಸರ್ಕಸ್ ಮಾಡುತ್ತಿದೆ. ಈ ಹೊತ್ತಲ್ಲೇ ಅನ್ನಭಾಗ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿಯನ್ನ ನೀಡದೇ ಸೋಲಿನ ಹತಾಶೆ ದ್ವೇಷ ರಾಜಕೀಯವನ್ನ ನಡೆಸುತ್ತಿದೆ ಎಂದು ಕೇಂದ್ರದ ವಿರುದ್ದ ತಿರುಗಿಬಿದ್ದಿದ್ದಾರೆ. ಕಳೆದ ಹಲವು ದಿನಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಕಾಂಗ್ರೆಸ್ ನಡುವೆ ಅಕ್ಕಿ ಸಂಘರ್ಷ ತಾರಕಕ್ಕೇರಿದೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಿದ್ದ 5 ಕೆ.ಜಿ ಅಕ್ಕಿಯನ್ನ ತಡೆ ಹಿಡಿದಿದೆ ಅಂತಾ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಇದೀಗ ಇದೇ ಅಕ್ಕಿಯನ್ನೇ ಲೋಕಾಸ್ತ್ರವಾಗಿ ಪ್ರಯೋಗಿಸುವ ಮೂಲಕ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸಿದೆ. ರಾಜ್ಯದ ಬಡವರ ಮಡಿಲಿಗೆ ಅಕ್ಕಿಯನ್ನ ಹಾಕಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಹಸಿದವರ ಹೊಟ್ಟೆ ತುಂಬಿಸಲು 10
ಕೆಜಿ ಗ್ಯಾರಂಟಿ ಅಕ್ಕಿ ನೀಡಲು ನಿರ್ಧರಿಸಿತ್ತು. ಆದ್ರೆ ಅನ್ನಭಾಗ್ಯ ಯೋಜನೆ ಜಾರಿಗೆ ಕೇಂದ್ರ ಅಡ್ಡಗಾಲು ಹಾಕಿದೆ ಎಂದು ಕಾಂಗ್ರೆಸ್ ನಾಯಕರು ಕೇಂದ್ರದ ವಿರುದ್ದ ಆರೋಪಿಸಿದ್ದಾರೆ.
ಇನ್ನೂ ಈ ಅಕ್ಕಿ ವಿಚಾರ ಜಟಾಪಟಿ ನಡುವೆ ನೀವು ಸುಳ್ಳು ರಾಮಯ್ಯ ಅಲ್ಲವಾದ್ರೆ ಅಕ್ಕಿ ಕೊಡ್ತೀವಿ ಅಂತಾ ಎಫ್‌ಸಿಐ ರಾಜ್ಯಕ್ಕೆ ನೀಡಿರೋ ಕಮಿಟ್ವೆಂಟ್ ಪತ್ರ ಬಿಡುಗಡೆ ಮಾಡಿ ಅಂತಾ ಸಿ.ಟಿ.ರವಿ ಸವಾಲು ಹಾಕಿದ್ರು. ಸಿ.ಟಿ ರವಿ ಚಾಲೆಂಜ್‌ನ ಅಕ್ಸೆಪ್ಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಕಮಿಟ್ಟೆಂಟ್ ಪತ್ರವನ್ನ ಬಿಡುಗಡೆ ಮಾಡಿದ್ದು, ಬಿಜೆಪಿ ನಾಯಕನಿಗೆ ತಿರುಗೇಟು ನೀಡಿದ್ದಾರೆ.
ನಮ್ಮ ಅನ್ನಭಾಗ್ಯಕ್ಕೆ ಬಿಜೆಪಿ ಅಡ್ಡಿಯಾಗಿದೆ. ಇದ್ರಿಂದ ಗ್ಯಾರಂಟಿಗಳ ಜಾರಿ ವಿಳಂಬಕ್ಕೆ ಬಿಜೆಪಿ ಕಾರಣವಾಗಿದೆ ಅಂತ ಬಿಂಬಿಸಲು ಕಾಂಗ್ರೆಸ್ ಪ್ಲಾನ್ ರೂಪಿಸಿದೆ ಎಂದು ತಿಳಿದುಬಂದಿದೆ. ರಾಜ್ಯದ ಜನತೆಗೆ ಅಕ್ಕಿ ನೀಡಲು ನಾವು ಮುಂದಾಗಿದ್ದೇವೆ. ಆದರೆ ಅನ್ನಭಾಗ್ಯ ಜಾರಿಗೆ ಸಹಕರಿಸ್ತಿಲ್ಲ ಅಂತಾ ಆರೋಪಿಸಿರೋ ಕಾಂಗ್ರೆಸ್, ಕೇಂದ್ರ ಸರ್ಕಾರ ಬಡವರ ವಿರೋಧಿ ಎಂದು ಬಿಂಬಿಸಲು ತಂತ್ರ ರೂಪಿಸಿದೆ.
ಈ ಎಲ್ಲಾ ತಂತ್ರಗಾರಿಕೆಯ ಮೂಲಕ ಬಿಜೆಪಿಯ ವರ್ಚಸ್ಸು ಕಳೆಗುಂದುವಂತೆ ಮಾಡುವುದು ರಾಜ್ಯ ಕಾಂಗ್ರೆಸ್ ಪಡೆ ಮಾಸ್ಟರ್ ಪ್ಲಾನ್ ಮಾಡಿದೆ. ಇನ್ನೂ ಗ್ಯಾರಂಟಿ ಸ್ಟೀಮ್‌ಗಳನ್ನ ಲೋಕಸಭೆ ಚುನಾವಣೆ ತನಕ ಜೀವಂತವಾಗಿ ಇಡುವುದು, ಈ ಮೂಲಕ ಗ್ಯಾರಂಟಿ ಜಾರಿಗೆ ಬಿಜೆಪಿ ಅಡ್ಡಿಯಾಗಿದ್ದು, ಬಿಜೆಪಿ ನಾಯಕರೇ ಇದಕ್ಕೆ ಹೊಣೆ ಎಂದು ಬಿಂಬಿಸುವುದು ಕಾಂಗ್ರೆಸ್ ರಣತಂತ್ರವಾಗಿದೆ. ನಾವು ಗ್ಯಾರಂಟಿ ಘೋಷಣೆ ಜಾರಿಗೆ ಸಿದ್ದ ಆದರೆ, ಕೇಂದ್ರ ಗ್ಯಾರಂಟಿಗಳ ಜಾರಿಗೆ ಸಹಕಾರ ನೀಡಿಲ್ಲ ಎಂದು ಜನರ ಮನಸ್ಸಿಗೆ ಮುಟ್ಟುವಂತೆ ಮಾಡಲು ಕಾಂಗ್ರೆಸ್ ಪ್ಲಾನ್ ರೂಪಿಸಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇತ್ತ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರನ್ನ ಕೆ ಹೆಚ್ ಮುನಿಯಪ್ಪ ಭೇಟಿ ಮಾಡಿ ಅಕ್ಕಿಗೆ ವಿತರಣೆಗೆ ಸಹಕಾರಿಸಿ ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಅಕ್ಕಿ ವಿತರಣ ವಿಚಾರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ನೀ ಕೊಡೆ.. ನಾ ಬಿಡೆ ಎನ್ನುವಂತೆ ಮೋದಿ ಸರ್ಕಾರ ಮತ್ತು ಸಿದ್ದರಾಮಯ್ಯ ಸರ್ಕಾರದ ಮಧ್ಯೆ ತಿಕ್ಕಾಟ ಜೋರಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರಾಜಕೀಯ ಜಗಳದಲ್ಲಿ ಮುಂದಿನ ತಿಂಗಳು ಬಡಜನರಿಗೆ ಅಕ್ಕಿ ಸಿಗುತ್ತೋ? ಇಲ್ವೋ ಎಂಬುದನ್ನ ಕಾದು ನೋಡಬೇಕಿದೆ.
English summary
Congress And BJP Rice Politics : Karnataka Rice Issue as Main Weapon in Lok Sabha Elections.
Story first published: Saturday, June 24, 2023, 11:02 [IST]