Raichur
oi-Umapathi Ramoji
ರಾಯಚೂರು, ಜುಲೈ, 29: ಲಿಂಗಸೂಗೂರು ತಾಲೂಕಿನ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ, ಯಾದಗಿರಿ ಜಿಲ್ಲೆಯ ಉರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ನಿಂದ ಭೀಮಾ ನದಿಗೆ ಹೆಚ್ಚಿನ ನೀರು ಬಿಟ್ಟಿರುವುದರಿಂದ ಜಿಲ್ಲೆಯ ನದಿ ಪಾತ್ರದ ಜನರಿಗೆ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಪ್ರಾರಂಭದಲ್ಲಿ ಮುಂಗಾರು ಮಳೆಯಾಗದೇ ಕೃಷ್ಣಾನದಿ ಸಂಪೂರ್ಣ ಬತ್ತಿ ಹೋಗಿತ್ತು. ಇದರಿಂದ ಇಲ್ಲಿನ ಜನ, ಜಲವಾಸಿಗಳಿಗೂ ಕುಡಿವ ನೀರಿಗೂ ತೊಂದರೆ ಉಂಟಾಗಿತ್ತು. ಆದರೆ ಕಳೆದ 9 ದಿನಗಳಿಂದ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಹಾಗೂ ಯಾದಗಿರಿ ಜಿಲ್ಲೆಯ ಉರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ನಿಂದ ಭೀಮಾ ನದಿಗೆ 35 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದು, ಇದರಿಂದ ನದಿಯಲ್ಲಿ ನೀರು ಹೆಚ್ಚುತ್ತಿರುವುದರಿಂದ ಮೊಸಳೆಗಳು ಹೊರಬರುತ್ತಿವೆ.

ಈಗಾಗಗಲೇ ರಾಯಚೂರು ತಾಲೂಕಿನ ಕುರ್ವಕಲಾ ಗ್ರಾಮದ ನದಿ ದಡ ಸಮೀಪ ಸ್ಟೀಮರ್ ಬೋಟ್ನಲ್ಲಿ ಪ್ರಯಾಣಿಸುತ್ತಿದ್ದ ಗ್ರಾಮಸ್ಥರ ಕಣ್ಣಿಗೆ 20ಕ್ಕೂ ಹೆಚ್ಚು ಮೊಸಳೆಗಳು ಕಾಣಿಸಿವೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಎದುರಾಗಿದೆ. ಜಿಲ್ಲೆಯ ಕೃಷ್ಣಾನದಿ ತೀರದ ಸುಮಾರು 72 ಗ್ರಾಮಗಳಲ್ಲಿ 82,168 ಜನರಿದ್ದಾರೆ. ಇದರಲ್ಲಿ ರಾಯಚೂರು ತಾಲೂಕಿನ 5,829 ಕುಟುಂಬಗಳಲ್ಲಿ 29,905 ಜನ ಜೀವನ ಇದೆ. ಲಿಂಗಸೂಗೂರು ತಾಲೂಕಿನ 13 ಗ್ರಾಮಗಳಲ್ಲಿ 1,845 ಕುಟುಂಬದ 11,263 ಜನರು ಜೀವನ ನಡೆಸುತ್ತಿದ್ದಾರೆ.
ಭದ್ರಾ ನಾಲೆಯಲ್ಲಿ ಆ.1ರಿಂದ ನೀರು ಹರಿಸುವಂತೆ ಜಿಲ್ಲಾಧಿಕಾರಿಗೆ ರೈತ ಒಕ್ಕೂಟ ಮನವಿ
ಅದರಂತೆಯೇ ದೇವದುರ್ಗ ತಾಲೂಕಿನ 42 ಗ್ರಾಮಗಳಲ್ಲಿ 7,344 ಕುಟುಂಬದ ಪೈಕಿ 41,000 ಜನರು ಜೀವನ ಮಾಡುತ್ತಿದ್ದು, ಪ್ರತಿ ಬಾರಿ ಮಳೆ ಬಂದಾಗೊಮ್ಮೆ ಜನರು ಸಮಸ್ಯೆ ಎದುರಿಸುವುದು ಸಹಜವಾಗಿದೆ. ಲಿಂಗಸೂಗೂರು ನಡುಗಡ್ಡೆ ಪ್ರದೇಶದ ಜನರು, ರಾಯಚೂರು ತಾಲೂಕಿನ ಡೊಂಗರಾಂಪುರ, ಆತ್ಕೂರು ಹಾಗೂ ನಡುಗಡ್ಡೆ ಗ್ರಾಮಗಳಾದ ಕುರ್ವಕಲಾ, ಕುರ್ವಕುರ್ದಾ ಜನರು ನದಿ ದಾಟಲು ಹಿಂದೇಟು ಹಾಕುತ್ತಿದ್ದು, ನಡುಗಡ್ಡೆಗಳಿಂದ ನಿತ್ಯವೂ ಬೋಟ್ನಲ್ಲಿ ಜೀವವನ್ನು ಕೈಯಲ್ಲಿಡಿದುಕೊಂಡು ಸಾಗುವಂತಾಗಿದೆ.
ಸೇತುವೆ ಕಾರ್ಯ ಅಪೂರ್ಣಗೊಂಡಿದ್ದು, ಸೇತುವೆ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಮಳೆಗಾಲದ ವೇಳೆ ನದಿಯಲ್ಲಿ ನೀರು ಬಂದರೆ ಸಾಕು ಮೊಸಳೆಗಳ ಕಾಟ ಹೆಚ್ಚಲಿದೆ. ಇದರಿಂದ ಸಾಕಷ್ಟು ಬಾರಿ ಪ್ರಾಣಹಾನಿಯಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಕ್ರಮವಾಗಿಲ್ಲ. ಹೀಗಾಗಿ ಮಳೆಗಾಲದ ವೇಳೆ ನದಿ ತೀರದ ಗ್ರಾಮಗಳ ಜನರಿಗೆ ಪ್ರತಿವರ್ಷ ಜಾಗೃತಿ ಮೂಡಿಸಬೇಕು ಎಂದು ಕುರ್ವಕಲ ಗ್ರಾ.ಪಂ. ಸದಸ್ಯ ಜಯಪ್ಪ ಒತ್ತಾಯಿಸಿದ್ದಾರೆ.
ನದಿ ಪಾತ್ರದಲ್ಲಿ ಅರಣ್ಯ ಇಲಾಖೆಯಿಂದ ಸೂಚನಾ ಫಲಕಗಳನ್ನು ಅಳವಡಿಸಿ ಮೊಸಳೆಗಳು ಇರುವ ಬಗ್ಗೆ ಮಾಹಿತಿ ನೀಡಬೇಕು. ಆದರೆ ಜಿಲ್ಲೆಯ ನದಿ ಪಾತ್ರದಲ್ಲಿ ಯಾವುದೇ ಸೂಚನೆ ಫಲಕದಲ್ಲಿ ಮಾಹಿತಿ ಇಲ್ಲದೇ ಇರುವುದರಿಂದ, ಖಾಲಿ ಸೂಚನಾ ಫಲಕಕ್ಕೆ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆಗಳ ಪೋಸ್ಟ್ ಹಾಕಲಾಗಿದೆ. ಕಳೆದ ಮೂರು ದಿನಗಳಿಂದ ಹೆಚ್ಚಿನ ಮೊಸಳೆಗಳು ಕಂಡುಬಂದಿವೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಇದುವರೆಗೆ ಇತ್ತ ಗಮನಹರಿಸಿಲ್ಲದಿರುವುದು ಬೇಸರದ ಸಂಗತಿಯಾಗಿದೆ.
ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ನದಿ ಪಾತ್ರದಲ್ಲಿ ಯಾರು ಹೋಗಬಾರದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಾಗೃತಿ ಮೂಡಿಸಲಾಗಿದೆ. ಮೊಸಳೆಗಳ ಸಂಖ್ಯೆ ಹೆಚ್ಚಳದಿಂದ ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.
English summary
Water level Increase in Krishna river
Story first published: Saturday, July 29, 2023, 10:08 [IST]