Reviews
oi-Narayana M
By ಫಿಲ್ಮಿಬೀಟ್ ಡೆಸ್ಕ್
|
ಒಂದ್ಕಡೆ ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಮತ್ತೊಂದು ಕಡೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಮುಂದಿನ ಆಂಧ್ರ ವಿಧಾನಸಭೆ ಚುನಾವಣೆಗೂ ಮುನ್ನ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಜೇಬು ತುಂಬಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಕೇವಲ 25 ದಿನ ಕಾಲ್ಶೀಟ್ ಕೊಟ್ಟು ಬರೋಬ್ಬರಿ 45 ಕೋಟಿ ರೂ. ಸಂಭಾವನೆ ಪಡೆದು ‘ಬ್ರೋ’ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಸಿನಿಮಾ ರಿಲೀಸ್ ಆಗಿದೆ.
ತಮಿಳಿನಲ್ಲಿ ಸಮುದ್ರ ಖನಿ ನಿರ್ದೇಶಿಸಿ ನಟಿಸಿದ್ದ ‘ವಿನೋದಯ ಸಿತಂ’ ರೀಮೆಕ್ ‘ಬ್ರೋ: ದಿ ಅವತಾರ್’. ಮೂಲ ಚಿತ್ರದಲ್ಲಿ ಸಮುದ್ರ ಖನಿ ಮಾಡಿದ್ದ ಪಾತ್ರವನ್ನು ಇಲ್ಲಿ ಪವನ್ ಕಲ್ಯಾಣ್ ಮಾಡಿದ್ದಾರೆ. ಅಲ್ಲಿ ತಂಬಿ ರಾಮಯ್ಯ ಮಾಡಿದ್ದ ಪಾತ್ರ ಪವನ್ ಸೋದರಳಿಯ ಸಾಯಿ ಧರಮ್ ತೇಜ್ ಪಾಲಾಗಿದೆ. ಸಮುದ್ರ ಖನಿ ತೆಲುಗಿನಲ್ಲೂ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕಥೆ, ಸಂಭಾಷಣೆ ‘ಬ್ರೋ’ ಚಿತ್ರಕ್ಕಿದೆ. ಈ ಫ್ಯಾಂಟಸಿ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ.
‘ಬ್ರೋ’ ಸಿನಿಮಾ ಕಥೆ
ಪೀಪಲ್ಸ್ ಟೆಕ್ಸ್ಟೈಲ್ ಫ್ಯಾಕ್ಟರಿ ಉದ್ಯೋಗಿ ಮಾರ್ಕ್ ಅಲಿಯಾಸ್ ಮಾರ್ಕಂಡೇಯ (ಸಾಯಿಧರಂ ತೇಜ್). ಚಿಕ್ಕಂದಿನಲ್ಲೇ ತಂದೆ ತೀರಿಕೊಂಡ ನಂತರ ಇಡೀ ಕುಟುಂಬದ ಜವಾಬ್ದಾರಿ ಹೊರುತ್ತಾನೆ. ಯಾವುದಕ್ಕೂ ಟೈಂ ಇಲ್ಲ ಟೈಂ ಇಲ್ಲ ಎಂದು ಟೈಂ ಜೊತೆ ಹೋರಾಟ ಮಾಡುತ್ತಿರುತ್ತಾನೆ. ಇಬ್ಬರು ತಂಗಿಯರು (ಪ್ರಿಯಾ ವಾರಿಯರ್, ಯುವ ಲಕ್ಷ್ಮಿ), ಕಿರಿಯ ಸಹೋದರ ಮತ್ತು ತಾಯಿ (ರೋಹಿಣಿ) ಜವಾಬ್ದಾರಿಯನ್ನು ತಾನು ಹೊತ್ತಿದ್ದೇನೆ ಎಂಬ ಭ್ರಮೆಯಲ್ಲಿರುತ್ತಾನೆ. ಪ್ರೇಯಸಿ ರಮ್ಯಾಗೂ (ಕೇತಿಕಾ ಶರ್ಮಾ) ಸಮಯ ಕೊಡದೇ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ಒಮ್ಮೆ ಕೆಲಸದ ನಿಮಿತ್ತ ವೈಜಾಗ್ಗೆ ಹೊರಟ ಮಾರ್ಕ್ ಕಾರು ಅಪಘಾತದಲ್ಲಿ ಸಾವನ್ನಪ್ಪುತ್ತಾನೆ. ಸತ್ತಮೇಲೆ ಟೈಟಾನ್ ಅಲಿಯಾಸ್ ಟೈಮ್ (ಪವನ್ ಕಲ್ಯಾಣ್)ನ ಭೇಟಿಯಾಗುತ್ತಾನೆ. ಮಾರ್ಕ್ಗೆ ಟೈಮ್ ಮತ್ತೆ 90 ದಿನ ಬದುಕುವ ಅವಕಾಶ ನೀಡುತ್ತಾನೆ.
Pawan Kalyan: “ನಮ್ಮ ಅತ್ತಿಗೆ ಮಾಡಿದ ದ್ರೋಹದಿಂದ ನಾನು ಇವತ್ತು ನಿಮ್ಮ ಮುಂದೆ ನಿಂತಿದ್ದೀನಿ”: ಪವನ್ ಕಲ್ಯಾಣ್
ಜೀವ ಬಿಟ್ಟಿದ್ದ ಮಾರ್ಕ್ಗೆ 90 ದಿನಗಳ ಕಾಲ ಬದುಕುವ ಅವಕಾಶ ಸಿಕ್ಕಾಗ ಆತ ಏನು ಮಾಡ್ತಾನೆ? ಕುಟುಂಬ ಸದಸ್ಯರು ಆತನ ವಿರುದ್ಧವೇ ತಿರುಗಿ ಬೀಳುವುದ್ಯಾಕೆ? ಒಡಹುಟ್ಟಿದವರ ಕಥೆ ಮುಂದೆ ಏನಾಗುತ್ತದೆ? ಅಸ್ವಸ್ಥ ತಾಯಿಯ ವಿಚಾರದಲ್ಲಿ ಕುಟುಂಬಸ್ಥರು ತೆಗೆದುಕೊಂಡ ನಿರ್ಧಾರವೇನು? ಪ್ರೇಯಸಿ ರಮ್ಯಾಳನ್ನು ಮಾರ್ಕ್ ದೂರ ಮಾಡಿಕೊಳ್ಳೋದ್ಯಾಕೆ? ಸಮಸ್ಯೆಗಳ ಸುಳಿಗೆ ಸಿಲುಕಿದ ಮಾರ್ಕ್ಗೆ ಟೈಂ ಗೀತೊಪದೇಶ ಹೇಗಿರುತ್ತದೆ? 90 ದಿನ ಮುಗಿಯೋಕು ಮುನ್ನ ಮಾರ್ಕ್ ಯಾಕೆ ಸಾವು ಬಯಸುತ್ತಾನೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕು ಅಂದರೆ ನೀವು ಸಿನಿಮಾ ನೋಡಬೇಕು.
‘ಬ್ರೋ’ ಸಿನಿಮಾ ಹೇಗಿದೆ?
ಸಮುದ್ರ ಖನಿ ನಿರ್ದೇಶಿಸಿ ನಟಿಸಿದ ‘ವಿನೋದಯ ಸಿತಂ’ ಕೋವಿಡ್ ಸಮಯದಲ್ಲಿ ಓಟಿಟಿಗೆ ಬಂದು ಸಕ್ಸಸ್ ಕಂಡಿತ್ತು. 2 ಗಂಟೆ ಚಿತ್ರದ ಕೆಲ ಸನ್ನಿವೇಶಗಳು ಸಾಮಾನ್ಯ ಜೀವನಕ್ಕೆ ಬಹಳ ಹತ್ತಿರ ಎನಿಸಿತ್ತು. ಇನ್ನು ಓಟಿಟಿಯಲ್ಲಿ ಸಕ್ಸಸ್ ಕಂಡ ಚಿತ್ರವನ್ನು ಬೆಳ್ಳಿ ಪರದೆಗೆ ಕೊಂಡೊಯ್ಯುವುದು. ಅದು ಕೂಡ ಪವರ್ ಕಲ್ಯಾಣ್ ರೀತಿಯ ಸ್ಟಾರ್ ನಟನನ್ನು ಬಳಸಿಕೊಂಡು ಸಿನಿಮಾ ಮಾಡುವುದು ಸವಾಲಿನ ಕೆಲಸ. ಆರಂಭದಲ್ಲಿ ಭಾವನಾತ್ಮಕ ಶುರುವಾಗುವ ಕಥೆ ಮಾರ್ಕ್ ಅಪಘಾತದ ಬಳಿಕ ಟೈಂ ಎಂಟ್ರಿಯಾಗಿ ಮಾಸ್ ಕಡೆ ವಾಲುತ್ತದೆ.
Ramcharan: “ಪ್ರೀತಿಯಿಂದ ಕೊಟ್ಟ ಗಿಫ್ಟ್ ಉಪಾಸನಾ ಮುಖದ ಮೇಲೆ ಬಿಸಾಕಿದ್ಲು”: ಪುರುಷರಿಗೆ ರಾಮ್ಚರಣ್ ಟಿಪ್ಸ್ ಏನು?
ಫಸ್ಟ್ ಹಾಫ್ ಸನ್ನಿವೇಶಗಳನ್ನು ಅಭಿಮಾನಿಗಳಿಗಂತ್ಲೇ ಬರೆದುಕೊಂಡಿರೋದು ಗೊತ್ತಾಗುತ್ತದೆ. ಸೆಕೆಂಡ್ ಹಾಫ್ನಲ್ಲಿ ಎಮೋಷನ್ ಸನ್ನಿವೇಶಗಳು ಆವರಿಸಿಕೊಳ್ಳುತ್ತವೆ. ಪವರ್ ಸ್ಟಾರ್ ಸ್ಟೈಲ್, ಸ್ವ್ಯಾಗ್ ಮಜಾ ಕೊಡುತ್ತದೆ. ಇನ್ನು ಪವನ್- ಸಾಯಿ ಕಾಂಬಿನೇಷನ್ ದೃಶ್ಯಗಳು ಇಷ್ಟವಾಗುತ್ತದೆ. ಮಾರ್ಕ್ ತಾಯಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡ ಮೇಲೆ ಶುರುವಾಗುವ ಸನ್ನಿವೇಶಗಳು ಭಾವುಕರನ್ನಾಗಿಸುತ್ತದೆ. ಇನ್ನು ಮಾರ್ಕ್- ಟೈಂ ನಡುವಿನ ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರನ್ನು ಕಟ್ಟಿಹಾಕುತ್ತವೆ.
ಮೂಲ ಕತೆಯ ಆತ್ಮ ಹಾಗೂ ಪಾತ್ರಗಳನ್ನು ಹೆಚ್ಚು ಬದಲಾಯಿಸದೇ ಸಮುದ್ರ ಖನಿ ಜಾಣ್ಮೆ ಮರೆದಿದ್ದಾರೆ. ಪವನ್ ಕಲ್ಯಾಣ್ ಕ್ರೇಜ್ ಗಮನದಲ್ಲಿಟ್ಟುಕೊಂಡು ಒಂದಷ್ಟು ಸನ್ನಿವೇಶಳು ಮತ್ತು ಸಾಂಗ್ಸ್ನಿಂದ ಅಭಿಮಾನಿಗಳ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದ್ದಾರೆ. ಪವರ್ ಸ್ಟಾರ್ ಇದ್ದಾರೆ ಎಂದು ಹೆಚ್ಚಾಗಿ ಬಳಸಿಕೊಳ್ಳದೇ ಕಥೆಗೆ ಬೇಕಿರುಷ್ಟೇ ಆ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ. ಆದರೂ ತಮಿಳಿನ ಸೀದಾ ಸಾದಾ ಕತೆಯನ್ನು ತೆಲುಗಿನಲ್ಲಿ ಮಾಸ್ ಅಂಶಗಳನ್ನು ಸೇರಿಸಿ ಚೆಂದಗಾಣಿಸಿದ್ದಾರೆ.
ಕಲಾವಿದರ ಅಭಿನಯ
ಚಿತ್ರದಲ್ಲಿ ಪವನ್ ಕಲ್ಯಾಣ್ ಮತ್ತು ಸಾಯಿಧರಂ ತೇಜ್ ಪಾತ್ರಗಳೇ ಹೈಲೆಟ್. ಹಾಗಾಗಿ ಬೇರೆ ಪಾತ್ರಗಳಿಗೆ ಹೆಚ್ಚಿನ ಮಹತ್ವ ಸಿಕ್ಕಿಲ್ಲ. ಪವನ್ ಕಲ್ಯಾಣ್ ಸ್ಟೈಲ್, ಆಟಿಟ್ಯೂಡ್ ಚಿತ್ರಕ್ಕೆ ಪ್ಲಸ್ ಆಗಿದೆ. ಸಾಯಿಧರಮ್ ತೇಜ್ ತಮ್ಮ ಪಾತ್ರವನ್ನು ಬಹಳ ಸೊಗಸಾಗಿ ನಿಭಾಯಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಇಷ್ಟವಾಗುತ್ತದೆ. ಕೇತಿಕಾ ಶರ್ಮಾ ಮತ್ತು ಪ್ರಿಯಾ ಪ್ರಕಾಶ್ ಪಾತ್ರಗಳಿಗೆ ಹೆಚ್ಚಿನ ಸ್ಕೋಪ್ ಇಲ್ಲ. ಇನ್ನುಳಿಂದ ರಾಜಾ, ತನಿಕೆಲ್ಲ ಭರಣಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ ಹೇಗಿದೆ?
ಸುಜಿತ್ ವಾಸುದೇವ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ತಮನ್ ಸಂಗೀತದಲ್ಲಿ ಸಾಂಗ್ಸ್ ಸೂಪರ್ ಹಿಟ್ ಆಗದೇ ಇದ್ದರೂ ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ. ಪವನ್ ಕಲ್ಯಾಣ್ ಮತ್ತು ಸಾಯಿಗೆ ನೀತಾ ಲುಲ್ಲಾ ಕಾಸ್ಟ್ಯೂಮ್ಸ್ ಡಿಸೈನ್ ಚೆನ್ನಾಗಿದೆ. ಪವರ್ ಸ್ಟಾರ್ ಸಿನಿಮಾ ಅಂದ್ರೆ ಅದರಲ್ಲೂ ತ್ರಿವಿಕ್ರಮ್ ಡೈಲಾಗ್ಸ್ ಬರಿತ್ತಿದ್ದಾರೆ ಅಂದಮೇಎ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿರುತ್ತದೆ. ಆದರೆ ಯಾಕೋ ಈ ವಿಚಾರದಲ್ಲಿ ನಿರಾಸೆಯಾಗಿದೆ. ಪೀಪುಲ್ಸ್ ಮೀಡಿಯಾ ಸಂಸ್ಥೆ ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತಂದಿದೆ.
ಕೊನೆ ಮಾತು
ಫಸ್ಟ್ ಹಾಫ್ ಕೊಂಚ ಸ್ಲೋ ಎನಿಸಿದರೂ ಸೆಕೆಂಡ್ ಹಾಫ್ ಎಮೋಷನಲ್ ಆಗಿ ಕನೆಕ್ಟ್ ಆಗುವಲ್ಲಿ ವಿಫಲವಾಗಿದೆ. ಇನ್ನು ಇದು ಪವನ್ ಕಲ್ಯಾಣ್ ರೆಗ್ಯುಲರ್ ಸಿನಿಮಾ ಕಂಡಿತ ಅಲ್ಲ. ದೇವರಂತೆ ಕಾಣಿಸಿಕೊಳ್ಳುವ ಪವರ್ ಸ್ಟಾರ್ ವಿಂಟೇಜ್ ಲುಕ್ಗಳಲ್ಲಿ ಇದ್ದಷ್ಟು ಹೊತ್ತು ಪ್ರೇಕ್ಷಕರನ್ನು ರಂಜಿಸಿ ಹೋಗುತ್ತಾರೆ. ಒಂದಷ್ಟು ನೀತಿಪಾಠ ಕೂಡ ಹೇಳ್ತಾರೆ. ಆದರೆ ಅಭಿಮಾನಿಗಳು ಕೇಳುವ ಡೈಲಾಗ್ಸ್ ಮಿಸ್ ಆಗಿದೆ. ಇನ್ನು ಬರೀ ಅಭಿಮಾನಿಗಳಿಗಷ್ಟೆ ಅಲ್ಲ ಫ್ಯಾಮಿಲಿ ಆಡಿಯನ್ಸ್ಗೂ ಸಿನಿಮಾ ಇಷ್ಟವಾಗುತ್ತದೆ. ಫ್ಯಾಮಿಲಿ ಜೊತೆ ಒಮ್ಮೆ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.
English summary
Pawan Kalyan’s Bro Movie Ratings and Review in Kannada. know more.
Friday, July 28, 2023, 13:57
Story first published: Friday, July 28, 2023, 13:57 [IST]