Kalaburagi
oi-Gururaj S
ಕಲಬುರಗಿ, ಜುಲೈ 27; ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ತಂಡದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಕಲಬುರಗಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಕುರಿತು ಸಭೆಯನ್ನು ಅವರು ನಡೆಸಿದರು. ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ನೆರೆ ಹಾವಳಿ ಸಂದರ್ಭದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಲು ಅಗತ್ಯ ಸೂಚನೆ ನೀಡಿದ್ದು, ಅದನ್ನು ತಪ್ಪದೆ ಎಲ್ಲರು ಪಾಲಿಸಬೇಕು ಎಂದರು.
ಕಲಬುರಗಿ, ಉಡುಪಿಯಲ್ಲಿ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಹಾಕಿ
ಸಭೆಯಲ್ಲಿ ಮಾತನಾಡಿದ ಪಂಕಜ್ ಕುಮಾರ್ ಪಾಂಡೆ, “ಮುಂದಿನ ದಿನದಲ್ಲಿ ಮಳೆ ಹೆಚ್ಚಾದಲ್ಲಿ ಸಹಜವಾಗಿ ಮಹಾರಾಷ್ಟ್ರದ ಜಲಾಶಯದಿಂದ ಜಿಲ್ಲೆಯ ಪ್ರಮುಖ ಜೀವನಾಡಿ ಭೀಮಾ ನದಿಗೆ ನೀರು ಹರಿಬಿಡಲಾಗುತ್ತದೆ. ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿರಬೇಕು” ಎಂದರು.
ಮುಂಗಾರು ಮಳೆ ಅಬ್ಬರ; ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು
ಜೀವಹಾನಿ ತಪ್ಪಿಸಲು ಸೂಚನೆ; “ಸೇತುವೆ ಮುಳಗಡೆ ಭೀತಿಯಿದ್ದಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಳಿಸಿ ಜನ ಸಂಚಾರ ಮಾಡದಂತೆ ತಡೆಗಟ್ಟಬೇಕು. ಪೊಲೀಸರು, ಗೃಹ ರಕ್ಷಕ ಸಿಬ್ಬಂದಿಯನ್ನು ಸೇತುವೆಗಳಿಗೆ ಮುನ್ನೆಚ್ಚರಿಕೆಯಾಗಿ ನಿಯೋಜಿಸಬೇಕು” ಎಂದು ಪಂಕಜ್ ಕುಮಾರ್ ಪಾಂಡೆ ನಿರ್ದೇಶನ ನೀಡಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ; ಕಾರ್ಯಗಳು
“ನದಿ ದಂಡೆಯಲ್ಲಿ ವಾಸಿಸುವ ಜನರ ಸ್ಥಳಾಂತರಕ್ಕೂ ಈಗಲೇ ನೀಲಿ ನಕ್ಷೆ ಸಿದ್ಧಪಡಿಸಿ. ಇನ್ನು ಕಲಬುರಗಿ ನಗರದಲ್ಲಿ ಮಳೆಯಿಂದ ಮನೆಗೆ ನೀರು ನುಗ್ಗುವುದು, ರಸ್ತೆ ಸಂಚಾರ, ಗಿಡ ಮರಗಳು ಉರುಳುವುದು ಸಾಮಾನ್ಯ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ತಂಡ ರೂಪಿಸಬೇಕು. ಸಹಾಯವಾಣಿ ಸ್ಥಾಪಿಸಬೇಕು” ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಭುವನೇಶ ಕುಮಾರ ಪಾಟೀಲ, “ಈಗಾಗಲೇ ನಗರದ 3 ವಲಯಗಳಿಗೆ ವಲಯ ಆಯುಕ್ತರ ನೇತೃತ್ವದಲ್ಲಿ ವಾರ್ಡ್‍ವಾರು ಅಧಿಕಾರಿಗಳ ತಂಡ ರಚಿಸಿದೆ. ಸಹಾಯವಾಣಿ ಸ್ಥಾಪಿಸಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ 24 ಗಂಟೆಯಲ್ಲಿಯೇ ಪರಿಹಾರ ನೀಡುವಂತಹ ಕೆಲಸ ಪಾಲಿಕೆ ಮಾಡುತ್ತಿದೆ” ಎಂದರು.
ಪಂಕಜ್ ಕುಮಾರ್ ಪಾಂಡೆ ಮಾತನಾಡಿ, “ಪ್ರವಾಹ ಪರಿಸ್ಥಿತಿ ಗಂಭೀರತೆ ಅರಿತುಕೊಂಡು ಶಾಲಾ ಕಟ್ಟಡ, ಅಂಗನವಾಡಿ ಕೇಂದ್ರದಲ್ಲಿ ಕಾಳಜಿ ಕೇಂದ್ರ ತೆರೆದು ನಿರಾಶ್ರಿತರಿಗೆ ಆಶ್ರಯ ಒದಗಿಸಬೇಕು. ಸಾಂಕ್ರಾಮಿಕ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕು. ಮುನ್ನಚ್ಚೆರಿಕೆ ಕ್ರಮ ಕೈಗೊಂಡಲ್ಲಿ ಮಾತ್ರ ಮಾನವ ಪ್ರಾಣ ಹಾನಿ ತಪ್ಪಿಸಲು ಸಾಧ್ಯ” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿದ ಕಲಬುರಗಿ ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್, “ಜಿಲ್ಲೆಯಲ್ಲಿ ಕಳೆದ ಜೂನ್ ಮತ್ತು ಜುಲೈ ಮಾಹೆಯಲ್ಲಿ ವಾಡಿಕೆಯಂತೆ 225 ಮಿ. ಮೀ. ಮಳೆಯಾಗಬೇಕಿತ್ತು. 303 ಮಿ. ಮೀ. ಮಳೆಯಾಗಿದ್ದು, ಇದು ಶೇ.35 ರಷ್ಟು ಹೆಚ್ಚಳವಾಗಿದೆ. ವಾಡಿಕೆಗಿಂತ ಹೆಚ್ಚಿಗೆ ಮಳೆಯಾಗಿದ್ದರೂ ಯಾವುದೇ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿಲ್ಲ” ಎಂದರು.
“ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹ ಭೀತಿ ಇಲ್ಲ. ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲೆಯ ಕಲಬುರಗಿ, ಅಫಜಲಪೂರ, ಚಿತ್ತಾಪೂರ, ಶಹಾಬಾದ, ಕಾಳಗಿ ತಾಲೂಕಿನ ಭೀಮಾ, ಕಾಗಿಣಾ ನದಿ ದಡದಲ್ಲಿ ಪ್ರವಾಹಕ್ಕೆ ತುತ್ತಾಗುವ 159 ಗ್ರಾಮಗಳನ್ನು ಗುರುತಿಸಲಾಗಿದೆ. ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಜನ ಮತ್ತು ಜಾನುವಾರುಗಳ ಸ್ಥಳಾಂತರ ಸೇರಿದಂತೆ ಅಗತ್ಯ ಮುನ್ನಚ್ಚರಿಕೆ ಕ್ರಮಕೈಗೊಳ್ಳಲು 27 ಜನ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜವಾಬ್ದಾರಿ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
“ಇನ್ನು ಮಳೆಯಿಂದ ಜಿಲ್ಲೆಯಲ್ಲಿ 283 ಮನೆಗಳು ಭಾಗಶ: ಹಾನಿಯಾಗಿವೆ. ಒಂದು ಮಾನವ ಹಾನಿಯಾಗಿದ್ದು, ಪ್ರಾಣಿ ಹಾನಿ ಕುರಿತು ಯಾವುದೇ ವರದಿಯಾಗಿಲ್ಲ. ಮಳೆಯಿಂದ ಉರುಳಿದ 281 ವಿದ್ಯುತ್ ಕಂಬ, 35 ಟ್ರಾನ್ಸ್‌ಫಾರ್ಮರ್ ಬದಲಾಯಿಸಲಾಗಿದೆ. ವಿಪತ್ತು ನಿರ್ವಹಣೆ ಕಾರ್ಯಕ್ಕೆ ಯಾವುದೇ ಅನುದಾನದ ಕೊರತೆಯಿಲ್ಲ” ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ಕೊಟ್ಟರು.
English summary
Kalaburagi district in-charge secretary Pankaj Kumar Pandey directed officials to prepare to face flood situation if heavy rain lashed Maharashtra.