ಚನ್ನಪಟ್ಟಣ: ಬರೀ ಎಳನೀರು ಕುಡಿಯುವುದಲ್ಲೇ 15ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಿತ್ತೆಸೆದ “ಗಜ” ಗ್ಯಾಂಗ್‌.! | Elephants destroy more than 15 coconut trees in Thagachagere village

Agriculture

lekhaka-Ramesh Ramakirshna

By ರಾಮನಗರ ಪ್ರತಿನಿಧಿ

|

Google Oneindia Kannada News

ರಾಮನಗರ, ಜುಲೈ, 27: ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ದಾಳಿ ನಡೆಸಿದ ಕಾಡಾನೆಗಳ ಹಿಂಡು ತೋಟದಲ್ಲಿನ 5 ದೊಡ್ಡ ತೆಂಗಿನ ಮರ, 10ಕ್ಕೂ ಹೆಚ್ಚು ಸಸಿಗಳನ್ನು ನಾಶ ಮಾಡಿದೆ.

ತಗಚಗೆರೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ದಾಳಿ ಮಾಡಿದ ಕಾಡಾನೆಗಳ ಹಿಂಡು ಶಶಿಧರ ಎಂಬುವರಿಗೆ ಸೇರಿದ ತೆಂಗಿನಮರಗಳನ್ನು ನಾಶ ಮಾಡಿವೆ. ಅಷ್ಟೇ ಅಲ್ಲದೆ ತೋಟದಲ್ಲಿ 20ಕ್ಕೂ ಹೆಚ್ಚು ಎಳನೀರು ಕುಡಿದು, ಪಕ್ಕದ ತೋಟದಲ್ಲಿಯೂ ತೆಂಗು, ಟೊಮ್ಯಾಟೊ ಬೆಳೆಯನ್ನು ನಾಶ ಮಾಡಿವೆ. ಇಷ್ಟೆಲ್ಲ ಆದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಅಸಹಾಯಕರಂತೆ ಕೈಕಟ್ಟಿ ಕುಳಿತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

Elephants destroy more than 15 coconut trees in Thagachagere village

ಇತ್ತೀಚೆಗಷ್ಟೇ ರಾಮನಗರ ಜಿಲ್ಲೆಯಲ್ಲಿ ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲಾಗಿತ್ತು. ಆದರೂ ಕೂಡ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ನಿಂತಿಲ್ಲ. ಜಿಲ್ಲೆಯ ಕಬ್ಬಾಳು ಅರಣ್ಯ ಪ್ರದೇಶ ಹಾಗೂ ತೆಂಗಿನಕಲ್ಲು ಅರಣ್ಯ ಪ್ರದೇಶ ಸೇರಿ ವಿವಿಧೆಡೆ 20ಕ್ಕೂ ಹೆಚ್ಚು ಕಾಡಾನೆಗಳು ಬಿಡುಬಿಟ್ಟಿವೆ. ಕಳೆದ ಮೂರು ವರ್ಷಗಳಿಂದ ಇವುಗಳ ಉಪಟಳ ಹೆಚ್ಚಾಗಿದ್ದು, ಈಗಾಗಲೇ ಹಲವರ ಜೀವವನ್ನು ತೆಗೆದಿವೆ. ಈ ಭೀತಿಯಿಂದಲೇ ನಾವು ಕೃಷಿಯನ್ನೇ ಕೈಬಿಟ್ಟಿದ್ದೇವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ

ಹಾಗೆಯೇ ಇತ್ತೀಚೆಗಷ್ಟೇ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಸಿರಗುರ ಗ್ರಾಮದಲ್ಲಿನ ಕಾಫಿ ತೋಟಗಳಲ್ಲಿ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ, ಮೆಣಸು, ಅಡಿಕೆ ಬೆಳೆ ನಾಶ ಮಾಡಿದ್ದವು.

ಅಕ್ಷತಾ, ಸಂದೇಶ್, ಕಪಿಲ್, ಅಂಜನ್ ಹಾಗೂ ಇತರೇ ರೈತರಿಗೆ ಸೇರಿದ ಕಾಫಿ ತೋಟ ಹಾನಿಯಾಗಿತ್ತು. ಅಷ್ಟೇ ಅಲ್ಲದೆ ನೀರು ತುಂಬಿದ್ದ ಬ್ಯಾರಲ್‌ಗಳನ್ನು ಧ್ವಂಸ ಮಾಡಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿದರೂ ಕಾಡಾನೆ ಪಡೆ ಕದಲಿರಲಿಲ್ಲ. ಒಂದು ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಹೋಗಿ ಬೀಡುಬಿಡುತ್ತಿದ್ದ ಕಾಡಾನೆ ನಷ್ಟ ಮಾತ್ರವಲ್ಲದೆ ಆತಂಕವನ್ನು ಸೃಷ್ಟಿ ಮಾಡಿದ್ದವು.

ಕಾಡಾನೆಗಳನ್ನು ಕಾಡಿಗಟ್ಟಲು ಹರಸಾಹಸ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೆ, ಕೆಲ ಕಾಡಾನೆಗಳು ರಸ್ತೆಯಲ್ಲಿ ಬಂದು ನಿಲ್ಲುತ್ತಿದ್ದವು. ಕಾಡಾನೆ ಕಾಟ ಹಾಗೂ ಜೀವ ಭಯದಿಂದ ಶಾಲಾ, ಕಾಲೇಜಿಗೆ ತೆರಳುವ ಮಕ್ಕಳನ್ನು ರೈತರು ಸಂಬಂಧಿಕರ ಮನೆಯಲ್ಲೇ ಬಿಡುವಂತಾಗಿತ್ತು.

ಹೀಗೆ ಕಾಡಾನೆ ದಾಂಧಲೆಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಹಾಗೂ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ಇಲ್ಲವಾದಲ್ಲಿ ನಮಗೆ ವಿಷ ಕೊಡಿ ಎಂದು ಇಲ್ಲಿನ ರೈತರು ದುಃಖ ವ್ಯಕ್ತಪಡಿಸಿದ್ದರು.

ಕಾಫಿನಾಡಿನಲ್ಲಿ ಕಾಡಾನೆಗಳ ಹಾವಳಿ

ಇನ್ನೂ ಚಿಕ್ಕಮಗಳೂರಿನ ಹಲವೆಡೆ ಕಾಡಾನೆಗಳು ಅಲ್ಪಸ್ವಲ್ಪ ಬಂದಿರುವ ಬೆಳಗಳನ್ನೆಲ್ಲ ನಾಶ ಮಾಡಿದ್ದವು. ಹಾಗೆಯೇ ಕಾಡಾನೆ ದಾಳಿಯಿಂದ ಲಕ್ಷಾಂತರ ಮೌಲ್ಯದ ಕಾಫಿ, ಅಡಿಕೆ, ಬಾಳೆ ಬೆಳೆ ನಾಶ ಆಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಕೆಸವಿನಹಕ್ಲು ಗ್ರಾಮದಲ್ಲಿ ನಡೆದಿತ್ತು.

ಇನ್ನು ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನ ಸಮೀಪವೇ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನ ಆತಂಕದಿಂದ ಇರುವಂತಾಗಿತ್ತು. ಭದ್ರಾ ಹಿನ್ನೀರಿನಿಂದ ಆಗಾಗ ಬರುತ್ತಿರುವ ಕಾಡಾನೆಗಳು ಗ್ರಾಮಗಳ ಸಮೀಪವೇ ಬೀಡು ಬಿಡುತ್ತಿದ್ದವು. ಹಾಗಾಗಿ, ಗ್ರಾಮೀಣ ಭಾಗದ ಜನ ಆತಂಕದಲ್ಲಿ ಜೀವನ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈಗಾಗಲೇ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ಜೀವ ಹಾನಿ ಕೂಡ ಸಂಭವಿಸಿದೆ. ಆನೆ ದಾಳಿಯಿಂದ ಕಂಗೆಟ್ಟ ಜನ ಶಾಸಕರ ಮೇಲೆ ಹಲ್ಲೆ ಮಾಡಿ, ಅರಣ್ಯ ಅಧಿಕಾರಿಗಳ ಕ್ಯಾಂಪ್‌ ಅನ್ನು ಕೂಡ ಇತ್ತೀಚೆಗಷ್ಟೇ ದ್ವಂಸ ಮಾಡಿದ್ದರು. ಈ ವೇಳೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕುವಾಗ ಲಾಠಿ ಚಾರ್ಜ್ ಕೂಡ ನಡೆದಿದೆ. ಆದ್ದರಿಂದ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಆನೆಗಳ ಹಿಂಡನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದರು.

English summary

Elephants destroy more than 15 coconut trees in Thagachagere village of Channapatna taluk.

Story first published: Thursday, July 27, 2023, 14:23 [IST]

Source link