Karnataka
oi-Reshma P
ಬೆಂಗಳೂರು,ಜೂನ್ 24: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಸರ್ಕಾರ ರಚನೆಯ ಬಳಿಕ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೊಂದಾಣಿಕೆ ರಾಜಕಾರಣದ ಕುರಿತು ಇಬ್ಬರು ಬಿಜೆಪಿ ನಾಯಕರ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣದ ಕುರಿತಾಗಿ ಪ್ರತಾಪ ಸಿಂಹ ಹಾಗೂ ಸಿಟಿ ರವಿ ಹೇಳಿಕೆ ನೀಡಿರುವುದು ಕಮಲ ಪಾಳಯದಲ್ಲಿ ತಳಮಳ ಸೃಷ್ಟಿ ಮಾಡಿದ್ದು, ಈ ವಿಚಾರ ಬಿಜೆಪಿ ಆಂತರಿಕ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಅಲ್ಲದೇ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊಂದಾಣಿಕೆಯಾಗಿತ್ತು ಎಂದು ಸಂಸದ ಪ್ರತಾಪ ಸಿಂಹ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೀಡಿರುವ ಹೇಳಿಕೆ ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎನ್ನುವ ಪ್ರಶ್ನೆಗಳು ಉದ್ಭವಿಸಿದೆ. ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದ ಹಲವು ಜನ ನಾಯಕರು ಹೀನಾಯವಾಗಿ ಸೋಲು ಅನುಭವಿಸಿದ್ದು, ಸೋಲಿನ ಬಳಿಕ ಬಿಜೆಪಿ ಕೆಲ ನಾಯಕರೇ ಇದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.
ಈಗಾಗಲೇ ಸೋಲಿನ ಪರಾಮರ್ಶೆ ನಡೆಸುತ್ತಿರುವ ಬಿಜೆಪಿ ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಸಮರ್ಥ ವಿಪಕ್ಷ ನಾಯಕರ ಆಯ್ಕೆಯಾಗಬೇಕು ಎಂದು ಕಮಲ ಪಾಳಯದಲ್ಲಿ ಚರ್ಚೆಯಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕನ ಸ್ಥಾನ ನೀಡಬೇಕು ಎಂಬ ನಿಟ್ಟಿನಲ್ಲಿ ಚರ್ಚೆಗಳು ಒಂದು ಕಡೆಯಲ್ಲಿ ನಡೆಯುತ್ತಿದ್ದರೆ ಇತ್ತ ಸೈದ್ದಾಂತಿಕ ಬದ್ಧತೆ ಹೊಂದಿರುವವರಿಗೆ ಪಟ್ಟ ಕಟ್ಟಬೇಕು ಎಂಬ ಚರ್ಚೆಯೂ ಕಮಲಕೋಟೆಯಲ್ಲಿ ನಡೆಯುತ್ತಿದೆ.
ಚುನಾವಣೆ ವೇಳೆ ಬಿಜೆಪಿ ವಿರುದ್ಧ 40%, ಬಿಟ್ ಕಾಯಿನ್ ಸೇರಿದಂತೆ ಹಲವು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದ ಕೈ ಪಡೆ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ ಈ ಆರೋಪಗಳ ಕುರಿತಾಗಿ ಕಾಂಗ್ರೆಸ್ ತನಿಖೆ ನಡೆಸುತ್ತಾ? ಎಂಬ ಪ್ರಶ್ನೆಯೂ ಇದೀಗ ಉದ್ಭವಿಸಿದೆ. ಒಂದು ವೇಳೆ ತನಿಖೆ ನಡೆಸಿಲ್ಲ ಎಂದಾದರೆ ಸಹಜವಾಗಿ ಹೊಂದಾಣಿಕೆ ರಾಜಕಾರಣದ ಬಗೆಗಿನ ಚರ್ಚೆ ಮತ್ತೆ ಮುನ್ನಲೆಗೆ ಬರಲಿದೆ ಎಂದು ಹೇಳಲಾಗಿದೆ.
ಕೆಲ ಬಿಜೆಪಿ ನಾಯಕರಿಂದ ಹೊಂದಾಣಿಕೆ ರಾಜಕಾರಣ: ಬಿಎಲ್ ಸಂತೋಷ್ ಭೇಟಿ ಬಳಿಕ ಸಿಪಿ ಯೋಗೇಶ್ವರ್ ಹೇಳಿಕೆ
ಈಗಾಗಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಡಿಸಿಎಂ ಡಿ ಕೆ ಶಿವಕುಮಾರ್ ಸಾಲು ಸಾಲು ಬಿಜೆಪಿ ನಾಯಕರನ್ನ ಭೇಟಿ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದಾರೆ.
ಬಿಬಿಎಂಪಿ ಚುನಾವಣೆಗಳ ನಡುವೆ ಪರಸ್ಪರ ರಾಜಕೀಯ ನಾಯಕರು ಭೇಟಿ ಮಾಡಿದ್ದು, ಸಾಮಾನ್ಯವಾಗಿ ಕುತೂಹಲ ಮೂಡಿಸಿದೆ. ಯಡಿಯೂರಪ್ಪ ಹಾಗ ಡಿ ಕೆ ಶಿವಕುಮಾರ್ ನಡುವೆ ಉತ್ತಮ ಸಂಬಂಧವಿದ್ದು, ಯಾವುದೇ ರಾಜಕೀಯ ಆರೋಪಗಳ ಸಂದರ್ಭದಲ್ಲಿಯೂ ಯಡಿಯೂರಪ್ಪ ಅವರ ವಿರುದ್ದವಾಗಿ ಡಿ ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿರುವ ಉದಾಹರಣೆಗಳಿಲ್ಲ.
ಇತ್ತ ಯಡಿಯೂರಪ್ಪ ಭೇಟಿಯ ಬಳಿಕ ಶಿವಮೊಗ್ಗ ಕ್ಷೇತ್ರದ ಸಂಸದರಾದ ಬಿ.ವೈ ರಾಘವೇಂದ್ರ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಶುಕ್ರವಾರ ನಗರದ ರೇಸ್ಕೋರ್ಸ್ ರಸ್ತೆಯ ನಿವಾಸದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಯವರನ್ನ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದು, ಹೊಂದಾಣಿಕೆ ರಾಜಕಾರಣದ ಕುರಿತಾಗಿ ಪ್ರತಾಪ ಸಿಂಹ ಹಾಗೂ ಸಿಟಿ ರವಿ ಹೇಳಿಕೆಗೆ ರಾಜ್ಯ ರಾಜಕಾರಣದಲ್ಲಿ ಅಚ್ಚರಿ ಮೂಡುವಂತೆ ಮಾಡಿದೆ.
ವಿಧಾನಸಭಾ ಚುನಾವಣೆಯ ಬಲಿಕ ಲೋಕಸಭಾ ಚುನಾವಣೆಗೆ ತಯಾರಿಯನ್ನ ನಡೆಸಿಕೊಳ್ಳುತ್ತಿರುವಾಗಲೇ ಬಿಜೆಪಿಯ ಸ್ವಪಕ್ಷೀಯರಿಂದಲೇ ಹೊಂದಾಣಿಕೆ ರಾಜಕಾರಣದ ಆರೋಪ ಕೇಳಿ ಬಂದಿದ್ದು, ಪಕ್ಷಕ್ಕೆ ಸಾಕಷ್ಟು ಮುಜಗರ ಉಂಟು ಮಾಡಿದೆ. ಇನ್ನೂ ಈ ಕುರಿತು ಬಿಜೆಪಿ ಹೈಕಮಾಂಡ್ ಯಾವ ನಿಲುವು ಕೈಗೊಳ್ಳುತ್ತದೆ ಎಂಬುವುದು ಕೂಡಾ ಕುತೂಹಲ ಮೂಡಿಸಿದೆ.
English summary
BJP- Congress Adjustment Politics; DK Shivakumar meets Basavaraj bommai and BS Yadiyurappa
Story first published: Saturday, June 24, 2023, 15:36 [IST]