India
oi-Sunitha B
ನವದೆಹಲಿ ಜುಲೈ 27: ಭಾರತದಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರ, ಉತ್ತರಾಖಂಡ, ಹಿಮಾಚಲದಲ್ಲಿ ಇಂದು ಭಾರೀ ಮಳೆ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಮುಂದಿನ ನಾಲ್ಕು ದಿನಗಳವರೆಗೆ ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಮಳೆ ಮುಂದುವರೆಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಗೆ ರಸ್ತೆಗಳು, ಮನೆಗಳು ಜಲಾವೃತವಾಗಿದ್ದು, ಹಲವೆಡೆ ವಾಹನಗಳು, ಮನೆಗಳು, ಸೇತುವೆಗಳು ಸೇರಿದಂತೆ ಇತರ ವಸ್ತುಗಳು ಮಳೆ ನೀರಿಗೆ ಕೊಚ್ಚಿ ಹೋಗಿವೆ. ಸತತ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಉತ್ತರಾಖಂಡದ ಹಲವಾರು ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಮುಂಬೈನ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಉತ್ತರಾಖಂಡದಲ್ಲಿ ಮಳೆ
ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಹವಮಾನ ಇಲಾಖೆ ರಾಜ್ಯದ ರಾಜಧಾನಿ ಡೆಹ್ರಾಡೂನ್ ಸೇರಿದಂತೆ ಎಲ್ಲಾ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ. ಪ್ರತ್ಯೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ.
ಋಷಿಕೇಶ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಉತ್ತರಾಖಂಡದಲ್ಲಿ 241 ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಅಲ್ಲಿ ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇನ್ನೂ ತ್ಯುನಿ-ತೆಹ್ರಿ 707A NH ಅನ್ನು ಸಂಚಾರಕ್ಕೆ ಮುಚ್ಚಲಾಗಿದೆ ಮತ್ತು ಚಮೋಲಿ ಜಿಲ್ಲೆಯ ಪಗಲ್ನಾಲಾದಲ್ಲಿ ರಿಷಿಕೇಶ್ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ಸಹ ನಿರ್ಬಂಧಿಸಲಾಗಿದೆ.
ಸಂಚಾರಕ್ಕಾಗಿ ರಸ್ತೆಗಳನ್ನು ತೆರೆಯಲು ಇನ್ನೂರು ಜೆಸಿಬಿಗಳನ್ನು ನಿಯೋಜಿಸಲಾಗಿದೆ. ಇದೇ ವೇಳೆ ಗಂಗಾ ನದಿಯ ನೀರಿನ ಮಟ್ಟ 292.80 ಮೀಟರ್ ದಾಖಲಾಗಿದೆ.
ಮಹಾರಾಷ್ಟ್ರದಲ್ಲಿ ಮಳೆಯ ಎಚ್ಚರಿಕೆ
ಮಹಾರಾಷ್ಟ್ರದಲ್ಲಿ ಮಳೆಯ ಎಚ್ಚರಿಕೆಯ ನಡುವೆ ಶಾಲೆಗಳನ್ನು ಮುಚ್ಚಲಾಗಿದೆ. ಮುಂಬೈ ಮತ್ತು ಮಹಾರಾಷ್ಟ್ರದ ರಾಯಗಡ, ರತ್ನಗಿರಿ ಮತ್ತು ಸಿಂಧುದುರ್ಗ ಪ್ರದೇಶಗಳು ಸೇರಿದಂತೆ ಹಲವು ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ನಾಗ್ಪುರದ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ.
ಇಂದು ಮುಂಬೈ ಮತ್ತು ಉಪನಗರಗಳಲ್ಲಿ ಭಾರೀ ಮೋಡ ಕವಿದ ವಾತಾವರಣ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಳೆಯ ಎಚ್ಚರಿಕೆಯ ನಡುವೆ ನಾಗರಿಕರು ಮನೆಯೊಳಗೆ ಇರಲು ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ. ಇಂದು ಭಾರೀ ಮಳೆಯಾಗುವ ಸೂಚನೆ ಇರುವುದರಿಂದ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಮುಂಬೈ ವಿಶ್ವವಿದ್ಯಾಲಯವು ಜುಲೈ 27 ರ ಎಲ್ಲಾ ಪರೀಕ್ಷೆಗಳನ್ನು ಗುರುವಾರಕ್ಕೆ ಮುಂದೂಡಿದೆ.
ಹಿಮಾಚಲ ಪ್ರದೇಶ: 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಶಿಮ್ಲಾ, ಸೋಲನ್ ಮತ್ತು ಮಂಡಿ, ಸಿರ್ಮೌರ್, ಬಿಲಾಸ್ಪುರ್, ಕಂಗ್ರಾ, ಚಂಬಾ, ಹಮೀರ್ಪುರ್ ಮತ್ತು ಉನಾ ಸೇರಿದಂತೆ ಹಿಮಾಚಲ ಪ್ರದೇಶದ ಒಂಬತ್ತು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಆರೆಂಜ್ ಅಲರ್ಟ್ ನೀಡಿದೆ. ಮುಂದಿನ ಮೂರು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೇಘಸ್ಫೋಟ ಮತ್ತು ಹಠಾತ್ ಪ್ರವಾಹದಿಂದಾಗಿ ರಾಜ್ಯ ಅಲರ್ಟ್ ಆಗಿದೆ.
ದೆಹಲಿಯಲ್ಲಿ ವರುಣನ ಅರ್ಭಟ
ದೆಹಲಿಯಲ್ಲಿ ಬುಧವಾರ ಭಾರೀ ಮಳೆಯಾಗಿದ್ದು, ಹಲವಾರು ಪ್ರದೇಶಗಳಲ್ಲಿ ಜಲಾವೃತವಾಗಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ತುಂತುರು ಮಳೆಯು ತಾಪಮಾನವನ್ನು 23.8 ಡಿಗ್ರಿ ಸೆಲ್ಸಿಯಸ್ಗೆ ಇಳಿಸಿದೆ. ಇದು ಸಾಮಾನ್ಯಕ್ಕಿಂತ ಮೂರು ಹಂತಗಳಿಗಿಂತ ಕಡಿಮೆಯಾಗಿದೆ.
ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್ಜಂಗ್ ವೀಕ್ಷಣಾಲಯ 24 ಗಂಟೆಗಳಲ್ಲಿ 37.1ಮಿಮೀ ಮಳೆಯನ್ನು ದಾಖಲಿಸಿದೆ ಎಂದು ಅಧಿಕೃತ ಮಾಹಿತಿ ತೋರಿಸಿದೆ. ಜೊತೆಗೆ ಇಂದೂ ಕೂಡ ದೆಹಲಿಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿತ್ತು.
ಪ್ರಾದೇಶಿಕ ಹವಾಮಾನ ಇಲಾಖೆ (ಆರ್ಎಂಸಿ) ಏಳು ದಿನಗಳ ಮುನ್ಸೂಚನೆಯ ಪ್ರಕಾರ, ದೆಹಲಿಯು ಮುಂದಿನ ಕೆಲವು ದಿನಗಳವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದರಿಂದ ತಾಪಮಾನ ಕ್ರಮವಾಗಿ 34.4 ಮತ್ತು 27.1 ಡಿಗ್ರಿ ಸೆಲ್ಸಿಯಸ್ನಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.
ರಾಜಧಾನಿ ಮತ್ತು ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯ ನಂತರ ಬುಧವಾರ ದೆಹಲಿಯ ಯಮುನಾ ಮತ್ತೊಮ್ಮೆ 205.33 ಮೀಟರ್ ಅಪಾಯದ ಮಾರ್ಕ್ ಅನ್ನು ದಾಟಿದೆ.
ಕರ್ನಾಟಕಕ್ಕೆ ಹಠಾತ್ ಪ್ರವಾಹದ ಎಚ್ಚರಿಕೆ
ಇನ್ನೂ ಕರ್ನಾಟಕಕ್ಕೆ ಹಠಾತ್ ಪ್ರವಾಹದ ಎಚ್ಚರಿಕೆಯನ್ನು ಐಎಂಡಿ ನೀಡಿದೆ. ಇದರೊಂದಿಗೆ ಕೇರಳ ಮತ್ತು ಕರಾವಳಿ ಆಂಧ್ರಪ್ರದೇಶಕ್ಕೆ ಭಾರೀ ಮಳೆ ಎಚ್ಚರಿಕೆಯನ್ನು ನೀಡಿದೆ. ಇಂದು (ಜುಲೈ 27) ಈ ಎಲ್ಲಾ ಪ್ರದೇಶಗಳ್ಲಲಿ ಭಾರೀ ಮಳೆಯಾಗುವ (115.6 ರಿಂದ 204.4 ಮಿಮೀ) ಸಾಧ್ಯತೆ ಇದೆ.
ನಿರಂತರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಜುಲೈ 27 ರಂದು ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
English summary
Heavy rain has been warned in Maharashtra, Uttarakhand, Himachal today and schools have been closed in Mumbai.
Story first published: Thursday, July 27, 2023, 12:03 [IST]