International
oi-Ravindra Gangal
ಮಾಸ್ಕೋ, ಜೂನ್ 24: ರಷ್ಯಾದ ಬಲಿಷ್ಠ ಖಾಸಗಿ ಮಿಲಿಟರಿ ಪಡೆಯಾಗಿರುವ ಮರ್ಸಿನರಿ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಬಂಡಾಯವೆದ್ದಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬದಲಿಸಿಯೇ ತೀರುತ್ತೇವೆ ಎಂದು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಷ್ಯಾ ರಾಜಧಾನಿ ಕಡೆಗೆ ತಮ್ಮ ಸಶಸ್ತ್ರ ಮಿಲಿಟರಿ ಪಡೆಯನ್ನು ಮುನ್ನೆಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಷ್ಯಾದ ನಗರವಾದ ರೋಸ್ಟೊವ್-ಆನ್-ಡಾನ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ ಎಂದು ಯೆವ್ಗೆನಿ ಪ್ರಿಗೊಜಿನ್ ತಿಳಿಸಿದ್ದಾರೆ. ವೊರೊನೆಜ್ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ಹೆಲಿಕಾಪ್ಟರ್ ಅನ್ನು ಹೊಡೆದು ಉರಿಳಿಸಿರುವ ಫೋಟೊಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಪುಟಿನ್ ಹೇಳಿದ್ದೇನು?
ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿರುವ ವ್ಲಾಡಿಮಿರ್ ಪುಟಿನ್ ಅವರು ಆಕ್ರೋಶ ಭರಿತರಾಗಿಯೇ ಮಾತನಾಡಿದ್ದಾರೆ. ಇದು ಬೆನ್ನಿಗೆ ಚೂರಿ ಇರಿಯುವ ಕೆಲಸವಾಗಿದೆ. ನನ್ನ ದೇಶ ಹಾಗೂ ಅದರ ಜನರನ್ನು ಕಾಪಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.
ಈ ಬೆಳವಣಿಯನ್ನು ಆಂತರಿಕ ದೇಶದ್ರೋಹ ಎಂದು ಕರೆದಿರುವ ಪುಟಿನ್, ‘ದಂಗೆಕೋರರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ರೋಸ್ಟೋವ್ನಲ್ಲಿನ ಪರಿಸ್ಥಿತಿಯು ಬಿಗಡಾಯಿಸಿದೆ ಎಂದು ರಷ್ಯಾ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ.
‘ಅತಿಯಾದ ಮಹತ್ವಾಕಾಂಕ್ಷೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ದೇಶದ್ರೋಹಕ್ಕೆ ಕಾರಣವಾಗಿವೆ’ ಎಂದು ಪುಟಿನ್ ಹೇಳಿದ್ದಾರೆ.
‘ಇದು ರಷ್ಯಾಕ್ಕೆ, ನಮ್ಮ ಜನರಿಗೆ ಬಿದ್ದಿರುವ ಹೊಡೆತವಾಗಿದೆ. ಅಂತಹ ಬೆದರಿಕೆಯ ವಿರುದ್ಧ ಫಾದರ್ಲ್ಯಾಂಡ್ ( ರಷ್ಯಾ ) ಅನ್ನು ರಕ್ಷಿಸಲು ನಮ್ಮ ಕ್ರಮಗಳು ಕಠಿಣವಾಗಿರುತ್ತದೆ’ ಎಂದು ಪುಟಿನ್ ತಿಳಿಸಿದ್ದಾರೆ.
ಇದೇ ವೇಳೆ, ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ಪ್ರಾರಂಭಿಸುವುದಾಗಿ ಮಾಸ್ಕೋ ಮೇಯರ್ ಹೇಳಿದ್ದಾರೆ.
ಮಾಸ್ಕೋ ಕಡೆಗೆ ಸಶಸ್ತ್ರ ಬೆಂಗಾವಲು ಪಡೆ
ಯೆವ್ಗೆನಿ ಪ್ರಿಗೊಜಿನ್ ಅವರು ತಮ್ಮ ಮಿಲಿಟರಿ ಪಡೆಯನ್ನು ಮಾಸ್ಕೋ ಕಡೆಗೆ ಕಳುಹಿಸಿದ್ದಾಗಿ ಹೇಳಿದ್ದಾರೆ. ಮಿಲಿಟರಿ ಬೆಂಗಾವಲು ಪಡೆ ಯುರೋಪಿನ ರಷ್ಯಾದ ದಕ್ಷಿಣ ಭಾಗವನ್ನು ಸಂಪರ್ಕಿಸುವ ಮುಖ್ಯ ಮೋಟಾರು ಮಾರ್ಗದಲ್ಲಿದೆ. ಉಕ್ರೇನ್ ಗಡಿಯಲ್ಲಿದೆ ಕಂಡುಬಂದಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದಲ್ಲಿರುವ ಪ್ರಮುಖ ಮಿಲಿಟರಿ ಪ್ರಧಾನ ಕಛೇರಿಯ ನಿಯಂತ್ರಣವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಮಾಸ್ಕೋದ ಮಿಲಿಟರಿ ನಾಯಕರನ್ನು ಹೊಡೆದುರಿಳಿಸುವುದಾಗಿ ಪ್ರಿಗೊಜಿನ್ ಪ್ರತಿಜ್ಞೆ ಮಾಡಿದ್ದಾರೆ. ಇದಕ್ಕೆ ತಮ್ಮ ಪಡೆಯ 25,000 ಹೋರಾಟಗಾರರು ‘ಸಾಯಲು ಸಿದ್ಧರಿದ್ದಾರೆ’ ಎಂದು ಹೇಳಿದ್ದಾರೆ.
ನಾವು ಪುಟಿನ್ ಅವರನ್ನು ಬದಲಾಯಿಸಲು ಬಯಸಿದ್ದೇವೆ. ಇದಕ್ಕಾಗಿ ಏನು ಬೇಕಾದರೂ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಳಿದಿರುವುದು ಎರಡೇ ಆಯ್ಕೆ
ರಷ್ಯಾದ ಖಾಸಗಿ ಮಿಲಿಟಿರಿ ಮರ್ಸಿನರಿ ಪಡೆಯು ಜಗತ್ತಿನ ಅತ್ಯಂತ ಕ್ರೂರ ಸಶಸ್ತ್ರ ಪಡೆಯೆಂದೇ ಕುಖ್ಯಾತಿ ಹೊಂದಿದೆ. 2014 ರಲ್ಲಿ ಕೇವಲ 5 ಸಾವಿರ ಸೈನಿಕರನ್ನು ಹೊಂದಿದ್ದ ಪಡೆಯು, ಈಗ 50 ಸಾವಿರ ಸೈನಿಕರನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಮರ್ಸಿನರಿ ಪಡೆಯು ಮಾಸ್ಕೊಗೆ ಬಂದರೆ, ಪುಟಿನ್ಗೆ ಬೇರೆ ಆಯ್ಕೆಯೇ ಇಲ್ಲದಂತಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
English summary
Russia’s FSB security service opened a criminal case against the Wagner chief and called on the Wagner private military company forces to ignore his orders and arrest him.
Story first published: Saturday, June 24, 2023, 15:03 [IST]