Karnataka
oi-Punith BU
ಬೆಂಗಳೂರು, ಜೂನ್ 24: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ 5 ತಿಂಗಳ ಅವಧಿಯಲ್ಲಿ 500 ಕ್ಕೂ ಹೆಚ್ಚು ಅಪಘಾತಗಳು ನಡೆದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸುರಕ್ಷತಾ ಆಡಿಟ್ಗೆ ಆದೇಶ ನೀಡಿದ್ದಾರೆ.
ಎಕ್ಸ್ಪ್ರೆಸ್ವೇಯಲ್ಲಿ ಐದು ತಿಂಗಳ ಅವಧಿಯಲ್ಲಿ 570 ಅಪಘಾತಗಳು ಸಂಭವಿಸಿದ್ದು, ಅಪಘಾತಗಳಲ್ಲಿ 55 ಜನರು ಸಾವನ್ನಪ್ಪಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಚಿವರು ಈ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಕರ್ನಾಟಕದ ರಾಜಧಾನಿಯನ್ನು ಮೈಸೂರು ನಗರಕ್ಕೆ ಸಂಪರ್ಕಿಸುವ ಹತ್ತು ಪಥಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಈ ವರ್ಷದ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.
ಇತ್ತೀಚಿಗೆ ಮಂಗಳವಾರ ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಎಕ್ಸ್ಪ್ರೆಸ್ವೇಯಲ್ಲಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರಿಗೆ ತೀವ್ರ ಗಾಯಗಳಾಗಿದ್ದವು ಎಂದು ಪೊಲೀಸರು ತಿಳಿಸಿದ್ದರು. ಈ ನಿಟ್ಟಿನಲ್ಲಿ ಜಾರಕಿಹೊಳಿ ಅವರು ಹಲವು ಸರ್ಕಾರಿ ಇಲಾಖೆಗಳೊಂದಿಗೆ ಸಭೆ ನಡೆಸಿ ಎಕ್ಸ್ಪ್ರೆಸ್ವೇಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿರುವುದಕ್ಕೆ ಕಾರಣಗಳನ್ನು ಕೇಳಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮೋಟಾರ್ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿರಬಹುದು. ಅದನ್ನು ಭಾರತೀಯ ಹೆದ್ದಾರಿ ಪ್ರಾಧಿಕಾರದ (NHAI) ಗಮನಕ್ಕೆ ತರಲಾಗುವುದು ಮತ್ತು ವಿಷಯಗಳನ್ನು ಸರಿಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಎಕ್ಸ್ಪ್ರೆಸ್ವೇ ಉದ್ಘಾಟನೆಗೆ ಮುಂಚೆಯೇ ಪೊಲೀಸ್ ಅಂಕಿಅಂಶಗಳ ಪ್ರಕಾರ ಸುಮಾರು ಆರು ತಿಂಗಳಲ್ಲಿ 77 ಅಪಘಾತಗಳು ನಡೆದಿದ್ದವು. ಎಕ್ಸ್ಪ್ರೆಸ್ವೇಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 28 ಜನರು ಪ್ರಾಣ ಕಳೆದುಕೊಂಡಿದ್ದು, ಆ ಅವಧಿಯಲ್ಲಿ 67 ಜನರು ಗಾಯಗೊಂಡಿದ್ದರು. ಎಕ್ಸ್ಪ್ರೆಸ್ವೇಯಲ್ಲಿ 16 ಅಪಘಾತ ಪೀಡಿತ ವಲಯಗಳಿವೆ ಎಂದು NHAI ಅಧಿಕಾರಿಗಳು ತಿಳಿಸಿದ್ದರು.
₹ 8,408 ಕೋಟಿ ವೆಚ್ಚದಲ್ಲಿ 118 ಕಿಮೀ ಎಕ್ಸ್ಪ್ರೆಸ್ವೇಯನ್ನು ನಿರ್ಮಿಸಲಾಗಿದೆ ಮತ್ತು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 3.5 ಗಂಟೆಗಳಿಂದ ಸುಮಾರು 1.5 ಗಂಟೆಗಳಿಗೆ ಕಡಿಮೆ ಮಾಡಿದೆ.
English summary
Public Works Minister Satish Jarkiholi has ordered a safety audit following reports of more than 500 accidents on the Bengaluru-Mysuru Expressway in a span of 5 months.
Story first published: Saturday, June 24, 2023, 12:53 [IST]