International
oi-Malathesha M
ಯುದ್ಧ ಒಮ್ಮೆ ಶುರುವಾದರೆ ಮುಗಿಯಿತು, ಅಲ್ಲಿ ಜೀವಕ್ಕೆ ಬೆಲೆಯೇ ಇರುವುದಿಲ್ಲ. ಎದುರಾಳಿ ಪಡೆಗಳನ್ನ ನಾಶ ಮಾಡಬೇಕು & ಯುದ್ಧ ಗೆಲ್ಲಬೇಕು. ಇದಿಷ್ಟೇ ಗುರಿಯೊಂದಿಗೆ ಪ್ರತಿಯೊಂದು ದೇಶವೂ ಮುನ್ನುಗ್ಗುತ್ತದೆ. ರಷ್ಯಾ & ಉಕ್ರೇನ್ ಯುದ್ಧ ಕೂಡ ಇದೇ ರೀತಿ ಭೀಕರವಾಗುತ್ತಿದೆ. ಗೆದ್ದೇ ಗೆಲ್ಲಬೇಕು ಎಂಬ ಪ್ರತಿಷ್ಠೆಯಲ್ಲಿ ಮನುಷ್ಯರ ಸಂತತಿಗೆ ಯುದ್ಧ ಅಪಾಯ ತಂದೊಡ್ಡಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಜಪೋರಿಝಿಯಾ.. ಈ ಹೆಸರು ಕೇಳಿದರೆ ಸಾಕು ಇಡೀ ಜಗತ್ತಿನ ನಿದ್ದೆ ಹಾರಿಹೋಗುತ್ತಿದೆ. ಅರೆ ಯಾಕೆ ಅಂದ್ರಾ..? ಅಕಸ್ಮಾತ್ ಒಂದೇ ಒಂದು ಎಡವಟ್ಟು ಈ ಜಾಗದಲ್ಲಿ ನಡೆದು ಹೋದರೂ ಭೂಮಿಯ ಭಾಗಶಃ ಜನರು ಸಮಸ್ಯೆಗೆ ಸಿಲುಕಲಿದ್ದಾರೆ. ಹೌದು, ರಷ್ಯಾ ಆಕ್ರಮಿತ ಉಕ್ರೇನ್ನ ಜಪೋರಿಝಿಯಾ ಪರಮಾಣು ಸ್ಥಾವರ ಬಳಿ ನೆಲಬಾಂಬ್ ಇರಿಸಿರುವ ಬಗ್ಗೆ ಭೀಕರ ಮಾಹಿತಿಯು ಹೊರಬಿದ್ದಿದೆ. ಈ ಕುರಿತು ವಿಶ್ವಸಂಸ್ಥೆ ಪರಮಾಣು ಮೇಲ್ವಿಚಾರಣಾ ಸಂಸ್ಥೆ ವರದಿ ನೀಡಿದೆ. ಆ ಸ್ಥಳದಲ್ಲಿ ಬಳಕೆ ಮಾಡಿರುವ ಸ್ಫೋಟಕಗಳು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ನಿಯಮ ಮೀರಿದೆ, ಅಲ್ಲದೆ ಪರಮಾಣು ಭದ್ರತಾ ನಿಯಮಾವಳಿಗೆ ವಿರುದ್ಧವಾಗಿದೆ ಎಂಬ ಆರೋಪ ಈಗ ಕೇಳಿಬಂದಿದೆ.
ಒಂದು ಬಾಂಬ್ ಬಿದ್ದರೂ ಎಲ್ಲಾ ಉಡೀಸ್!
ಅಷ್ಟಕ್ಕೂ ಕಳೆದ ವರ್ಷ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ್ದಾಗ, ಉಕ್ರೇನ್ನ ಪ್ರದೇಶವನ್ನು ರಷ್ಯಾ ವಶಕ್ಕೆ ಪಡೆದಿತ್ತು. ಅಲ್ಲದೆ ರಷ್ಯಾದ ವಾಯು ಸೇನೆಯು ಜಪೋರಿಝಿಯಾ ಅಣುಸ್ಥಾವರದ ಮೇಲೆ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ಬಳಿಕ ಸ್ವತಃ ಉಕ್ರೇನ್ ಸೇನೆ ದುರುದ್ದೇಶ ಇಟ್ಟುಕೊಂಡು ಜಪೋರಿಝಿಯಾ ಅಣುಸ್ಥಾವರದ ಮೇಲೆ ದಾಳಿ ನಡೆಸುತ್ತಿದೆ ಎಂದು ರಷ್ಯಾ ಕಳೆದ ತಿಂಗಳು ಆರೋಪ ಮಾಡಿತ್ತು. ಈ ಎಲ್ಲಾ ಆರೋಪ ಮತ್ತು ಪ್ರತ್ಯಾರೋಪಗಳು ಹಸಿಯಾಗಿರುವ ಸಂದರ್ಭದಲ್ಲೇ, ಜಗತ್ತಿನ ನಿರೀಕ್ಷೆ ಹುಸಿಯಾಗಿದೆ. ಜಪೋರಿಝಿಯಾ ಸ್ಥಾವರದ ಸುತ್ತಲೂ ಭೀಕರ ನೆಲಬಾಂಬ್ಗಳು ಪತ್ತೆಯಾಗಿ ಭಾರಿ ಆತಂಕ ಹುಟ್ಟುಹಾಕಿವೆ.
ನೆಲಬಾಂಬ್ ಇಟ್ಟಿರುವುದು ಯಾರು?
ರಷ್ಯಾ ಹಾಗೂ ಉಕ್ರೇನ್ ಯುದ್ಧ ಶುರುವಾದ ಮರುದಿನದಿಂದಲೇ ಜಗತ್ತಿಗೆ ಒಂದಲ್ಲ ಒಂದು ಕಂಟಕ ಎದುರಾಗುತ್ತಿದೆ. ಅದರಲ್ಲೂ ಪರಮಾಣು ಯುದ್ಧದ ಕಾರ್ಮೋಡ ಆವರಿಸಿರುವಾಗಲೇ ವಿಶ್ವಸಂಸ್ಥೆ ಸ್ಫೋಟಕ ಮಾಹಿತಿ ನೀಡಿದೆ. ಏಪ್ರಿಲ್ ಆರಂಭದಲ್ಲಿ ಜಪೋರಿಝಿಯಾ ಪರಮಾಣು ಸ್ಥಾವರದ ಮೇಲೆ ಉಕ್ರೇನ್ ಸೇನೆ ಸೂಸೈಡ್ ಡ್ರೋನ್ ಮೂಲಕ ದಾಳಿಗೆ ಯತ್ನಿಸಿದ್ದ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ರಷ್ಯಾ ಪದೇ ಪದೆ ಉಕ್ರೇನ್ ವಿರುದ್ಧ ಈ ವಿಚಾರದಲ್ಲಿ ಆರೋಪ ಮಾಡುತ್ತಾ ಬಂದಿದೆ. ಆದರೆ ಈಗ ನೋಡಿದರೆ ಪರಮಾಣು ಸ್ಥಾವರದ ಸುತ್ತಲೂ ನೆಲಬಾಂಬ್ ಹಾಕಿರುವ ವಿಚಾರ ಭಯ ಹುಟ್ಟಿಸಿದೆ. ಅದರಲ್ಲೂ ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಮೇಲೂ ಈ ಎಲ್ಲಾ ಬೆಳವಣಿಗೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಭಯದಲ್ಲೇ ನರಳುತ್ತಿರುವ ಉಕ್ರೇನ್ ಜನ
ಯೂರೋಪಿನ ಅತಿ ದೊಡ್ಡ ಅಣುಸ್ಥಾವರ ಈ ಜಪೋರಿಝಿಯಾ ನ್ಯೂಕ್ಲಿಯರ್ ಪ್ಲಾಂಟ್. 2022ರ ಮಾರ್ಚ್ ತಿಂಗಳಲ್ಲಿ ತನ್ನ ಅಣುಸ್ಥಾವರದ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪ ಮಾಡಿತ್ತು. ಆ ಬಳಿಕ ಜಗತ್ತು ಬೆಚ್ಚಿಬಿದ್ದಿತ್ತು, ನಂತರ ಸ್ವತಃ ಉಕ್ರೇನ್ ದಾಳಿ ಮಾಡಿ ನ್ಯೂಕ್ಲಿಯರ್ ಪ್ಲಾಂಟ್ ಟಾರ್ಗೆಟ್ ಮಾಡಿದೆ ಅಂತಿತ್ತು ರಷ್ಯಾ. ಆದರೆ ಈಗ ಬೇರೆಯೇ ವಿಷಯ ಹೊರಬಿದ್ದಿದೆ. ಪರಮಾಣು ಸ್ಥಾವರದ ಸುತ್ತಲೂ ನೆಲಬಾಂಬ್ ಇಟ್ಟಿರುವುದು ಆತಂಕವನ್ನೂ ಸೃಷ್ಟಿಮಾಡಿದೆ. ಇನ್ನೂ ಅಕಸ್ಮಾತ್ ಈ ಜಪೋರಿಝಿಯಾ ಸ್ಥಾವರ ಸ್ಫೋಟವಾಗಿದ್ದೇ ಆದರೆ ಅದು ಚೆರ್ನೊಬಿಲ್ ದುರಂತಕ್ಕಿಂತ 10 ಪಟ್ಟು ಹೆಚ್ಚು ಸಂಕಷ್ಟ ನೀಡಲಿದೆ. ಏಕೆಂದರೆ ಜಗತ್ತಿನ ದೊಡ್ಡ ಪರಮಾಣು ಸ್ಥಾವರಗಳ ಪೈಕಿ ಜಪೋರಿಝಿಯಾ ಕೂಡ ಒಂದಾಗಿದೆ.
English summary
UNO says that Landmines placed around Zaporizhzhia nuclear plant
Story first published: Wednesday, July 26, 2023, 20:03 [IST]