ಗೃಹ ಜ್ಯೋತಿ ಅಲ್ಲ, ಸುಡುವ ಜ್ಯೋತಿ ಎಂದ ಹೆಚ್ಡಿಕೆ; ಕುಮಾರಣ್ಣ ಪಾಪ ಎಂದು ಡಿ ಕೆ ಶಿವಕುಮಾರ್‌ ಹೇಳಿದ್ಯಾಕೆ? | DK Shivakumar Reaction to HD Kumaraswamy’s Defaming Statement on Gruha Jyothi Scheme

Karnataka

oi-Reshma P

|

Google Oneindia Kannada News

ಬೆಂಗಳೂರು, ಜೂನ್‌ 23: ಕಾಂಗ್ರೆಸ್‌ ಗ್ಯಾರಂಟಿ ಘೋಷಣೆಗಳಲ್ಲಿ ಒಂದಾಗಿರುವ ಗೃಹ ಜ್ಯೋತಿ ಯೋಜನೆ ಕುರಿತು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದ್ದು, ಗೃಹ ಜ್ಯೋತಿ ಅಲ್ಲ ಇದು ಸುಡುವ ಜ್ಯೋತಿ ಎಂದು ಕುಮಾರಸ್ವಾಮಿ ಮಾತಿಗೆ ಡಿ ಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾವು ಎಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದೀವಿ..? ಚುನಾವಣಾ ಫಲಿತಾಂಶ ಬರುವ ಮೊದಲೇ ಹೆಚ್ಚಾಗಿತ್ತು. ನಿಮ್ಮ ಕಾಲದಲ್ಲೇ ಸಾವಿರಾರು ಕೋಟಿ ಜಾಸ್ತಿ ಮಾಡಿದ್ದಾರೆ, ಕುಮಾರಸ್ವಾಮಿ ಗೆ ಗೊತ್ತಿಲ್ಲದೇ ಇರಬಹುದು. ಆದರೆ ನಾನೊಬ್ಬ ಪವರ್ ಮಿನಿಸ್ಟರ್ ಆಗಿದ್ದವನು ನನಗೆ ಎಲ್ಲವೂ ಗೊತ್ತಿದೆ. ಕುಮಾರಣ್ಣ ಪಾಪ, ಕುಮಾರಣ್ಣ ಬೇಕಿದ್ರೆ ಸಲಹೆ ಕೊಡಲಿ ಎಂದರು.

DK Shivakumar Reaction to HD Kumaraswamy

ಕುಮಾರಣ್ಣ ಅವರು ಮಾತನಾಡಲಿ, ನಾನು ಅವರ ಸಲಹೆ ಪಡೆಯುತ್ತೇನೆ. ವಿದ್ಯುತ್ ನಿಗಮದವರು ಜನವರಿಯಿಂದ ಇದನ್ನು ಜಾರಿಗೆ ಮುಂದಾಗಿದ್ದು, ಇದರಿಂದ ವಿದ್ಯುತ್ ಬಿಲ್ ಹೆಚ್ಚಾಗಿ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಚಿವರು, ನಾವು ಕೂತು ಚರ್ಚೆ ಮಾಡಿ ತೀರ್ಮಾನ ಮಾಡಿ ಪರಿಹಾರ ನೀಡುತ್ತಾರೆ. ನಾವು ಕೊಟ್ಟ ಮಾತಿನಂತೆ ಗೃಹಜ್ಯೋತಿ ಯೋಜನೆ ಜಾರಿ ಮಾಡುತ್ತೇವೆ’ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಅವರು 2 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಬೆಂಗಳೂರಿನ ಅಭಿವೃದ್ಧಿಗೆ ಕೆಲವು ಉತ್ತಮ ಯೋಜನೆ ಹಾಕಿಕೊಂಡಿದ್ದರು. ಆದರೆ ಅವರದ್ದು ಸಮ್ಮಿಶ್ರ ಸರ್ಕಾರವಾಗಿದ್ದ ಕಾರಣ ಆ ಯೋಜನೆಗಳನ್ನು ಜಾರಿ ಮಾಡಲು ಬಿಡಲಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿ ಅವರ ಸಲಹೆ, ಅಭಿಪ್ರಾಯ ಪಡೆಯಲಿದ್ದೇನೆ.

ನಾನು ಈ ಹಿಂದೆ ಜಗದೀಶ್ ಶೆಟ್ಟರ್, ದೇವೇಗೌಡರು, ಎಸ್.ಎಂಕೃಷ್ಣ, ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಇರಲಿಲ್ಲ. ಸಾಧ್ಯವಾದರೆ ಅವರನ್ನು ಭೇಟಿ ಮಾಡುತ್ತೇನೆ. ಎಲ್ಲರ ಅನುಭವ ಅವರ ವಿಚಾರಧಾರೆ ಕೇಳಿ ಪಡೆಯುತ್ತೇನೆ. ಇದರಲ್ಲಿ ರಾಜಕಾರಣ ಯಾಕೆ? ಅನ್ನಭಾಗ್ಯ ಯೋಜನೆ ತಡವಾಗಿಯಾದರೂ ಸರಿ ಜಾರಿ ಮಾಡುತ್ತೇವೆ. ಈ ಯೋಜನೆಯ ಜಾರಿ ವಿಚಾರವಾಗಿ ಬಡವರು, ಫಲಾನುಭವಿಗಳು ಹೋರಾಟ ಮಾಡುತ್ತಿಲ್ಲ. ಬದಲಿಗೆ ಹೊಟ್ಟಿ ತುಂಬಿರುವ ಕೆಲವರು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ.

 ಬಿಆರ್‌ಎಸ್ ಪ್ರಮುಖ ನಾಯಕ ಪೊಂಗುಲೇಟಿ ಶ್ರೀನಿವಾಸ್ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಖಚಿತ- ಆಪರೇಶನ್‌ 'ಕೈ'ಗೆ ಡಿಕೆಶಿ ಚಾಲನೆ? ಬಿಆರ್‌ಎಸ್ ಪ್ರಮುಖ ನಾಯಕ ಪೊಂಗುಲೇಟಿ ಶ್ರೀನಿವಾಸ್ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಖಚಿತ- ಆಪರೇಶನ್‌ ‘ಕೈ’ಗೆ ಡಿಕೆಶಿ ಚಾಲನೆ?

ಈ ಸರ್ಕಾರದಿಂದ ನಮಗೆ ಸಹಾಯವಾಗುತ್ತಿದೆ ಎಂದು ಬಡವರು ಸಂತೋಷದಿಂದ ಇದ್ದಾರೆ. ನಮ್ಮ ಅಕ್ಕ ತಂಗಿಯರು ನಮ್ಮ ಶಕ್ತಿ ಯೋಜನೆಯಿಂದ ದೇವಸ್ಥಾನಗಳಿಗೆ ಭೇಟಿ ನೀಡಿ ಧರ್ಮಯಾತ್ರೆ ಮಾಡುತ್ತಿದ್ದಾರೆ. ಅವರ ಖುಷಿ ನೋಡಲಾಗದೇ, ಒಂದು ಕಾಳು ಅಕ್ಕಿ ಕಡಿಮೆ ಕೊಟ್ಟರೂ ಹೋರಾಟ ಮಾಡುತ್ತೇನೆ ಎಂದು ಸಂಕಟಪಡುತ್ತಿದ್ದಾರೆ. ಯಡಿಯೂರಪ್ಪನವರು ಧರಣಿ ಮಾಡುವುದರಲ್ಲಿ ಸಮರ್ಥರು. ಈಗಲೂ ಅವರು ವಿಧಾನಸಭೆಗೆ ಬಂದು ಹೋರಾಟ ಮಾಡಲಿ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆ ಜಾರಿ ವಿಚಾರಪವಾಗಿ ಮುನಿಯಪ್ಪ ಅವರು ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಜತೆ ಮಾತನಾಡಲಿದ್ದಾರೆ. ಮುಖ್ಯಮಂತ್ರಿಗಳು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಈ ವಿಚಾರವಾಗಿ ಮಾತನಾಡಿದ್ದು, ಈ ಸಂದರ್ಭದಲ್ಲಿ ಅವರು ಕೇಂದ್ರ ಸಚಿವರ ಜತೆ ಮಾತನಾಡುವ ಭರವಸೆ ನೀಡಿದ್ದಾರೆ.

ವಿದ್ಯುತ್ ಬೆಲೆ ಏರಿಕೆ ವಿರುದ್ಧ ಹೋರಾಟದ ಕುರಿತು ಮಾತನಾಡಿ, ನಾವು ಎಲ್ಲಿ ವಿದ್ಯುತ್ ಬೆಲೆ ಏರಿಕೆ ಮಾಡಿದ್ದೇವೆ? ಅವರದೇ ಸರ್ಕಾರ ಇದ್ದಾಗ ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಚುನಾವಣೆ ಫಲಿತಾಂಶ ಬರುವುದಕ್ಕೂ ಮುನ್ನವೇ ಅವರು ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ವಿದ್ಯುತ್ ದರ ಪರಿಷ್ಕರಣ ಸಮಿತಿ ಬೆಲೆ ನಿಗದಿಯಲ್ಲಿ ಸ್ವಂತ ಅಧಿಕಾರ ಹೊಂದಿದೆ.

ಬಿಜೆಪಿಯವರು ಎಷ್ಟು ಹೊಸ ಬಿಲ್ ಗಳನ್ನು ಸೃಷ್ಟಿಸಿ ಹಣ ನೀಡಿದ್ದಾರೆ ಎಂದು ಹೇಳಿದರೆ ಎಷ್ಟು ಜನ ಮನೆಗೆ ಹೋಗುತ್ತಾರೆ ಗೊತ್ತಿದೆಯೇ? ಸಾವಿರಾರು ಕೋಟಿ ನೀಡಲಾಗಿದೆ. ಈ ವಿಚಾರಗಳು ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರಿಗೆ ತಿಳಿದಿದೆ. ರಾಜ್ಯದಲ್ಲಿ ವಿದ್ಯುತ್ ಗೆ ಎಷ್ಟು ಖರ್ಚಾಗುತ್ತದೆ ಎಂದು ನನಗೆ ಗೊತ್ತಿದೆ.

ನನ್ನ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಿ ಅದನ್ನು ಬೇರೆ ರಾಜ್ಯಗಳಿಗೆ ನೀಡಿರುವ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಇಲ್ಲದೆ 3500 ಕೋಟಿ ಮೊತ್ತದ ವಿದ್ಯುತ್ ಹೇಗೆ ಮಾರಲಾಯಿತು? ಎಂದು ಪ್ರಶ್ನಿಸಿದರು.

ಗೃಹಲಕ್ಷ್ಮಿ ಯೋಜನೆ ಆರಂಭವಾಗಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳ ಜತೆ ಮಾತನಾಡಿ ಗೃಹಲಕ್ಷ್ಮಿ ಯೋಜನೆ ಜಾರಿಯನ್ನು ನಾನೇ ಸದ್ಯಕ್ಕೆ ತಡೆದಿದ್ದೇನೆ. ಗೃಹಜ್ಯೋತಿ ಯೋಜನೆ ಅರ್ಜಿ ವಿಚಾರವಾಗಿ ಸರ್ವರ ಸಮಸ್ಯೆ ನೋಡುತ್ತಿದ್ದೀರಿ. ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯೊಡತಿಯೇ ಸ್ವಯಂ ಅರ್ಜಿ ಸಲ್ಲಿಸುವಂತೆ ಸರಳೀಕರಣ ಮಾಡಲಾಗುತ್ತಿದೆ. ಆಲ್ ಲೈನ್ ಹಾಗೂ ಆಫ್ ಲೈನ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ವಿಚಾರವಾಗಿ ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ಮಾಡಲಾಗುವುದು.

ಈ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೆಲವರು 200-300 ರೂ. ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರು ಬಂದಿದೆ. ಈ ಅರ್ಜಿ ತುಂಬಲು ಏಜೆನ್ಸಿಗಳಾಗಲಿ ಅಥವಾ ಯಾರೇ ಲಂಚ ಪಡೆದರೆ ಅವರ ಪರವಾನಿಗೆ ರದ್ದಾಗುತ್ತದೆ, ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತಿದ್ದೇನೆ. ಈ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಲು ಹೋಗುವವರು ಯಾರಿಗೂ ಲಂಚ ನೀಡುವ ಅಗತ್ಯವಿಲ್ಲ. ಯಾರಾದರೂ ಲಂಚ ಕೇಳಿದರೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಲಂಚ ಮುಕ್ತ ರಾಜ್ಯ ನಮ್ಮ ಗುರಿ’ ಎಂದು ತಿಳಿಸಿದರು.

ಹೊಸ ಶಾಸಕರ ತರಬೇತಿಗೆ ಧಾರ್ಮಿಕ ಗುರುಗಳ ಭಾಷಣ ಕುರಿತಾಗಿ ಸ್ಪೀಕರ್ ವಿರುದ್ಧ ಎದ್ದಿರುವ ಅಸಮಾಧಾನದ ಕುರಿತು ಮಾತನಾಡಿ, ಸ್ಪೀಕರ್ ಅವರಿಗೆ ಅವರದೇ ಆದ ಅಧಿಕಾರ ಇದೆ. ನಾವು ಅದರ ಬಗ್ಗೆ ಮಾತನಾಡಲು ಆಗುವುದಿಲ್ಲ. ನಿಮ್ಮ ಬಳಿ ಏನಾದರೂ ಸಲಹೆ ಇದ್ದರೆ ಅವರಿಗೆ ನೀಡಿ. ಉಳಿದ ವಿಚಾರವನ್ನು ನಾನು ಅವರ ಜತೆ ಖಾಸಗಿಯಾಗಿ ಮಾತನಾಡುತ್ತೇನೆ ಎಂದರು.

English summary

DCM DK Shivakumar Said That We will implement Griha Jyoti Yojana as promised

Source link