India
oi-Mamatha M
ಪಾಟ್ನಾ, ಜೂನ್. 15: 2024ರ ಲೋಕಸಭೆ ಚುನಾವಣೆ ನಿಗದಿತ ಅವಧಿಗೂ ಮುನ್ನವೇ ನಡೆಯಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಹೇಳಿದ್ದಾರೆ. ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಕರ್ನಾಟಕ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಲೋಕಸಭಾ ಚುನಾವಣೆ ಬೇಗ ಮಾಡಬಹುದು ಎಂದಿದ್ದರು.
ಬಿಹಾರ ರಾಜಧಾನಿ ಪಾಟ್ನಾದಿಂದ ಗ್ರಾಮೀಣ ಕಾಮಗಾರಿ ಇಲಾಖೆಯ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ 6,680.67 ಕೋಟಿ ರೂಪಾಯಿ ಮೊತ್ತದ 5,061 ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಸಿಎಂ ನಿತೀಶ್ ಕುಮಾರ್ ಮಾತನಾಡಿದ್ದರು. ಈ ವೇಳೆ 2024ಕ್ಕೂ ಮೊದಲು ಕಾಮಗಾರಿಗಳನ್ನು ಮುಗಿಸುವಂತೆ ಸೂಚಿಸಿದ್ದಾರೆ.
ಕಾಮಗಾರಿಯನ್ನು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ನಿತೀಶ್ ಕುಮಾರ್, “ಜನವರಿ 2024 ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ನೀವು ಹೇಳುತ್ತಿದ್ದೀರಿ, ಆದರೆ ಅದಕ್ಕೂ ಮೊದಲು ಕಾಮಗಾರಿ ಮುಗಿಸಲು ನಾನು ನಿಮಗೆ ಸೂಚಿಸುತ್ತೇನೆ. ಅದು ಎಷ್ಟು ಬೇಗ ಆಗುತ್ತದೆಯೋ ಅಷ್ಟು ಒಳ್ಳೆಯದು, ಏಕೆಂದರೆ ಚುನಾವಣೆ ಯಾವಾಗ ನಡೆಯಲಿದೆ ಎಂದು ಯಾರಿಗೆ ಗೊತ್ತು..? “ಎಂದಿದ್ದಾರೆ.
ಮುಂದುವರೆದು, “ಮುಂದಿನ ವರ್ಷವೇ (2024) ಚುನಾವಣೆ ನಡೆಯುವುದು ಅಗತ್ಯವೇ..? ಅವಧಿಗೂ ಮುನ್ನ ಚುನಾವಣೆ ನಡೆಯುತ್ತದೆಯೇನೋ ಯಾರಿಗೆ ಗೊತ್ತು? ಆದ್ದರಿಂದ, ತ್ವರಿತವಾಗಿ ಕಾರ್ಯನಿರ್ವಹಿಸಿ” ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆನೆ ಮಾರ್ಗ್ನಲ್ಲಿ ಕಾರ್ಯಕ್ರಮ ನಡೆದಿದ್ದು, ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಕೂಡ ಉಪಸ್ಥಿತರಿದ್ದರು.
ಕರ್ನಾಟಕದ ಸೋಲಿನಿಂದ ಬಿಜೆಪಿ ಅವಧಿಗೂ ಮುನ್ನ ಸಂಸತ್ ಚುನಾವಣೆ ಘೋಷಿಸಬಹುದು?: MK ಸ್ಟಾಲಿನ್
ಈ ಹಿಂದೆ, ನಿತೀಶ್ ಕುಮಾರ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೆಲಸ ಮಾಡಿದ್ದಾರೆ. ಅವರು ದೇಶಾದ್ಯಂತ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಪ್ರಾರಂಭಿಸಿದವರು. ಬಿಜೆಪಿಯ ಹೆಸರನ್ನು ತೆಗೆದುಕೊಳ್ಳದೆ, ನಿತೀಶ್ ಕುಮಾರ್ ಅವರು, “ಅಟಲ್ ಜಿಯವರ ಕಾಲದಲ್ಲಿ, ಕೇಂದ್ರ ಸರ್ಕಾರವು 100% ನಿಧಿಯನ್ನು ಮಂಜೂರು ಮಾಡಿತು. ಆದರೆ ಪ್ರಸ್ತುತ ಸರ್ಕಾರವು 60 ಮತ್ತು 40 ಅನುಪಾತಗಳಲ್ಲಿ ವಿಂಗಡಿಸಿದೆ. ಅಂದರೆ ಶೇ.60ರಷ್ಟು ಕೇಂದ್ರದಿಂದ ಹಾಗೂ ಶೇ.40ರಷ್ಟು ರಾಜ್ಯ ಸರಕಾರದಿಂದ ಸಿಗಲಿದೆ. ಆದರೆ, ವಾಸ್ತವವನ್ನು ನೋಡಿದರೆ, ಖರ್ಚು 50-50 ಆಗಿದೆ” ಎಂದು ಆರೋಪಿಸಿದ್ದಾರೆ.
ಇನ್ನು, ಕಳೆದ ವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು, ಸೇಲಂನಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ ಕರ್ನಾಟಕದಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಅವಧಿಗೂ ಮುನ್ನವೇ 2024ರ ಸಂಸತ್ ಚುನಾವಣೆಯನ್ನು ನಡೆಸಲು ಪ್ರಯತ್ನಿಸುತ್ತಿದೆ ಎಂದು ಸೂಚನೆ ನೀಡಿದ್ದರು.
“ದೇಶದಾದ್ಯಂತ ಬಿಜೆಪಿ ಪ್ರಭಾವ, ವರ್ಚಸ್ಸು ಕ್ರಮೇಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಬಿಜೆಪಿ ನಾಯಕರು ಯಾವ ನಿರ್ಧಾರವನ್ನು ಕೈಗೊಳ್ಳಬಹುದು. ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರು ಸಂಸತ್ತಿನ ಚುನಾವಣೆಯನ್ನು ಮೊದಲೇ ಘೋಷಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಸಿಎಂ ಸ್ಟಾಲಿನ್ ಹೇಳಿದ್ದರು.
English summary
2024 Lok Sabha elections may happen before schedule says Bihar Chief Minister Nitish Kumar in patna. know more.