ಶುಂಠಿ ಬೆಳೆಯೋದು ಸುಲಭದ ಮಾತಲ್ಲ, ಅದೊಂಥರಾ ಜೂಜಾಟ.! | Ginger crops Growing is like Gambling, Why?, know details

Agra

lekhaka-Lavakumar B M

By ಮೈಸೂರು ಪ್ರತಿನಿಧಿ

|

Google Oneindia Kannada News

ಮೈಸೂರು, ಜುಲೈ, 21: ಈಗಾಗಲೇ ಶುಂಠಿ ಬೆಳೆದು ಕೈಸುಟ್ಟುಕೊಂಡ ರೈತರು ಈ ಕೃಷಿಯ ಸಹವಾಸವೇ ಬೇಡವೆಂದು ಕೈಕಟ್ಟಿ ಕುಳಿತಿದ್ದರು. ಆದರೆ ಇದೀಗ ಶುಂಠಿ ಬೆಲೆ ಗಗನಕ್ಕೇರುತ್ತಿರುವುದನ್ನು ನೋಡಿ ರೈತರು ಬೆರಗಾಗಿದ್ದಾರೆ. ಅಲ್ಲದೆ ಈ ಬಾರಿ ಶುಂಠಿ ಕೃಷಿ ಮಾಡಬೇಕಿತ್ತು ಎಂದು ಹೇಳುವ ಮೂಲಕ ಕೊರಗುತ್ತಿದ್ದಾರೆ. ಆದರೆ ಕಾಲ ಮಿಂಚಿ ಹೋಗಿದೆ. ಈಗ ಕೃಷಿ ಮಾಡುತ್ತೇನೆಂದರೂ ಅದು ಸಾಧ‍್ಯವಾಗದ ಮಾತಾಗಿದೆ.

ಹಾಗೆನೋಡಿದರೆ ಶುಂಠಿ ಕೃಷಿ ಒಂಥರಾ ಜೂಜಾಟದಂತೆ. ಇದನ್ನು ಬೆಳೆದು ಶ್ರೀಮಂತರಾದವರೂ ಮತ್ತು ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಇದೊಂದು ರೀತಿಯಲ್ಲಿ ಅದೃಷ್ಟ ಬೆಳೆ ಎಂದರೂ ತಪ್ಪಾಗಲಾರದು. ಹೆಚ್ಚು ಬಂಡವಾಳ ಕೇಳುವ ಈ ಬೆಳೆಯನ್ನು ಬೆಳೆದವರು ನಸೀಬು ಚೆನ್ನಾಗಿದ್ದರೆ ಕುಬೇರರೂ ಆಗಬಹುದು ಅಥವಾ ಬೀದಿಗೂ ಬೀಳಬಹುದು.

Ginger crops Growing is like Gambling, Why?, know details

ಕೇರಳದ ಕೃಷಿಕರು ಶುಂಠಿ ಕೃಷಿಯಿಂದ ಆರಂಭಗೊಂಡು ಮಾರಾಟದ ತನಕವೂ ಅರಿತಿದ್ದಾರೆ. ಹೀಗಾಗಿ ನಷ್ಟವಾಗದಂತೆ ಏನು ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ. ಆದರೆ ನಮ್ಮ ರೈತರು ಅವರಂತೆ ದೊಡ್ಡ ಪ್ರಮಾಣದಲ್ಲಿ ಶುಂಠಿ ಕೃಷಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅವರಂತೆ ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡಿದರೂ ಅದನ್ನು ನಿರ್ವಹಣೆ ಮಾಡಿ ಫಸಲು ಪಡೆಯುವ ಹೊತ್ತಿಗೆ ಸಾಕಾಗುತ್ತದೆ. ಶುಂಠಿಯನ್ನು ಮಾರಾಟ ಮಾಡುವ ಸಮಯದಲ್ಲಿ ಉತ್ತಮ ದರವಿದ್ದರೆ ಮಾತ್ರ ಕಷ್ಟಪಟ್ಟು, ಹಣ ಖರ್ಚು ಮಾಡಿ ಬೆಳೆ ಬೆಳೆದಿದಕ್ಕೆ ಸಾರ್ಥಕವಾಗುತ್ತದೆ.

ಚಿತ್ರದುರ್ಗ: ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ, ವಿವರ ತಿಳಿಯಿರಿಚಿತ್ರದುರ್ಗ: ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ, ವಿವರ ತಿಳಿಯಿರಿ

ಶುಂಠಿ ಬೆಳೆದು ನಷ್ಟ ಅನುಭವಿಸದವರೇ ಜಾಸ್ತಿ

ಈ ಬಾರಿ ಶುಂಠಿ ಕೃಷಿ ಮಾಡಿದವರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಕೃಷಿ ಮಾಡಿಲ್ಲ ಎಂಬುದು ಸುಳ್ಳೇನಲ್ಲ. ಕಳೆದ ಕೆಲವು ವರ್ಷಗಳಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದ ಶುಂಠಿ ಗದ್ದೆಯಲ್ಲಿ ನೀರು ನಿಂತು ಬೆಳೆ ಕೊಳೆರೋಗಕ್ಕೆ ತುತ್ತಾಗಿತ್ತು. ಜೊತೆಗೆ ಪ್ರವಾಹದಿಂದಾಗಿ ಶುಂಠಿ ಬೆಳೆಯನ್ನು ಅನ್ಯಮಾರ್ಗವಿಲ್ಲದೆ ನಿಗದಿತ ಸಮಯಕ್ಕೆ ಮುನ್ನವೇ ಕೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಶುಂಠಿ ಬೆಳೆದ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿತ್ತು. ಅಲ್ಲದೆ, ಕೆಲವರಿಗೆ ಕೃಷಿಗೆ ಖರ್ಚು ಮಾಡಿದ ಹಣವೂ ಬಾರದ ಪರಿಸ್ಥಿತಿ ಬಂದೊದಗಿತ್ತು.

ಇನ್ನು ಶುಂಠಿ ಕೃಷಿಯ ಬಗ್ಗೆ ಮೆಲುಕು ಹಾಕಿದರೆ, ಶುಂಠಿ ಕೃಷಿಯನ್ನು ಹೆಕ್ಟೇರ್‌ಗಟ್ಟಲೆ ಮಾಡಬಹುದು ಎಂಬ ಕಲ್ಪನೆಯೂ ಇಲ್ಲದ ಕಾಲದಲ್ಲಿ ಶುಂಠಿ ಕೃಷಿ ಮಾಡುತ್ತೇವೆಂದು ಬಂದ ಕೇರಳದ ಬೆಳೆಗಾರರು ಎಕರೆಗೆ ಇಂತಿಷ್ಟು ಎಂಬಂತೆ ಒಂದು ವರ್ಷದ ಅವಧಿಗೆ ರೈತರ ಜಮೀನನ್ನು ಗುತ್ತಿಗೆ ಪಡೆದಿದ್ದರು. ಆದರೆ ಶುಂಠಿ ಕೃಷಿ ವಿಧಾನ ಮತ್ತು ಮಾರುಕಟ್ಟೆಯ ಗುಟ್ಟು ಬಿಟ್ಟುಕೊಡದ ಅವರು ಉತ್ತಮವಾಗಿ ಬೆಳೆ ಬೆಳೆದು ಒಂದಷ್ಟು ಹಣ ಮಾಡಿಕೊಂಡರು.

ಶುಂಠಿ ಬೆಳೆಯೋದು ಸುಲಭದ ಮಾತಲ್ಲ

ನಂತರ ಸ್ಥಳೀಯರೇ ಶುಂಠಿ ಕೃಷಿಯನ್ನು ಆರಂಭಿಸಿದರು. ಬಂಡವಾಳ ಹಾಕಿ ಕೃಷಿ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಪಡೆಯಬಹುದು ಎಂಬ ಆಲೋಚನೆಯಲ್ಲಿಯೇ ಸಾಲ ಮಾಡಿ ಹಣ ತಂದು ಸುರಿದರು. ಆದರೆ ಅಂದುಕೊಂಡಂತೆ ಹೆಚ್ಚಿನವರಿಗೆ ಲಾಭ ಆಗಲೇ ಇಲ್ಲ. ಕೆಲವರಂತೂ ಅವತ್ತಿನಿಂದ ಇವತ್ತಿನ ತನಕ ಶುಂಠಿ ಕೃಷಿಯನ್ನು ಮಾಡುತ್ತಲೇ ಬಂದಿದ್ದಾರೆ. ಲಾಭವೋ ನಷ್ಟವೋ ಬೆಳೆ ಬೆಳೆಯುವುದನ್ನು ಮಾತ್ರ ಬಿಟ್ಟಿಲ್ಲ. ಅಂತಹವರ ಕೈಯನ್ನು ಈ ಬಾರಿ ಶುಂಠಿ ಬೆಳೆ ಕೈಹಿಡಿದಿದೆ.

ಶುಂಠಿ ಕೃಷಿ ಮಾಡಬೇಕಾದರೆ ಹೆಚ್ಚಿನ ಬಂಡವಾಳ ಬೇಕಾಗುತ್ತದೆ. ಇವತ್ತಿನ ದುಬಾರಿ ಯುಗದಲ್ಲಿ ಕಾರ್ಮಿಕರ ಸಮಸ್ಯೆ, ಜೊತೆಗೆ ಕೂಲಿಯೂ ಹೆಚ್ಚು ನೀಡಬೇಕು. ಕೊಟ್ಟಿಗೆ ಮತ್ತು ರಾಸಾಯನಿಕ ಗೊಬ್ಬರಗಳನ್ನು ಕಾಲಕಾಲಕ್ಕೆ ನೀಡಬೇಕು. ಔಷಧಿ ಸಿಂಪಡಿಸಬೇಕು. ರೋಗಗಳ ಬಾರದಂತೆ ನೋಡಿಕೊಳ್ಳಬೇಕು. ಆಗಾಗ್ಗೆ ನೀರು ಹಾಯಿಸಬೇಕು. ಕಳೆಗಳನ್ನು ಕೀಳುತ್ತಿರಬೇಕು. ಹೀಗೆ ಕೈತುಂಬಾ ಕೆಲಸ ಮಾಡಬೇಕು. ಈಗಿನ ಪರಿಸ್ಥಿತಿಯಲ್ಲಿ ಇಷ್ಟೊಂದು ಕೆಲಸ ಮಾಡಬೇಕಾದರೆ ಹೆಕ್ಟೇರ್‌ಗೆ ಕನಿಷ್ಟ ಎಂದರೂ 2-3 ಲಕ್ಷ ರೂಪಾಯಿ ಬೇಕಾಗುತ್ತದೆ.

ಗಗನಕ್ಕೇರಿದ ಶುಂಠಿ ಬೆಲೆ

ಇಷ್ಟೊಂದು ಹಣ ಖರ್ಚು ಮಾಡಿ ಬೆಳೆ ಬೆಳೆದರೂ ಅದು ಫಸಲಿಗೆ ಬರುವ ವೇಳೆಗೆ ರೈತರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತದೆ. ಕಾರಣ ಮಾರುಕಟ್ಟೆಯಲ್ಲಿ ದರದ ಏರು ಪೇರು, ಖರೀದಿದಾರರು ಮಾಡುವ ಮೋಸ, ವಂಚನೆಗಳು ಎಲ್ಲವೂ ರೈತರನ್ನು ಕಂಗೆಡುವಂತೆ ಮಾಡುತ್ತದೆ.

ಇದೀಗ ಶುಂಠಿ ಬೆಲೆ ಗಗನಕ್ಕೇರಿದ್ದರಿಂದ ರೈತನಿಗೆ ಅದೃಷ್ಟ ಖುಲಾಯಿಸಿದೆ. 60 ಕೆ.ಜಿ.ಯ ಒಂದು ಚೀಲಕ್ಕೆ ಹನ್ನೊಂದು ಸಾವಿರದಷ್ಟಿದೆ. ಆದರೆ ಒಂದೆರಡು ವರ್ಷಗಳ ಹಿಂದೆ ದಿಢೀರ್ ಅಂಥ 450ಕ್ಕೆ ಕುಸಿದಿತ್ತು. ಅವತ್ತು ಶುಂಠಿ ಬೆಳೆದ ಬೆಳೆಗಾರನ ಪರಿಸ್ಥಿತಿ ಏನಾಗಿರಬಹುದು ಎಂದು ನೀವೆ ಆಲೋಚಣೆ ಮಾಡಿ.

ಶುಂಠಿ ಬೆಳೆದ ರೈತರು ಹೇಳುವ ಪ್ರಕಾರ ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಶುಂಠಿ ಕೃಷಿ ಮಾಡಬೇಕಾದರೆ ಕನಿಷ್ಟ ಎರಡೂವರೆಯಿಂದ ಮೂರು ಲಕ್ಷ ರೂಪಾಯಿ ಖರ್ಚು ತಗಲುತ್ತದೆಯಂತೆ. ಎಲ್ಲವೂ ಸರಿ ಹೋಗಿ ಉತ್ತಮ ಬೆಳೆ ಬಂದರೆ 400-500 ಚೀಲದಷ್ಟು ಇಳುವರಿ ಪಡೆಯಬಹುದಂತೆ. ಕನಿಷ್ಟ ಚೀಲವೊಂದಕ್ಕೆ 800-1000 ರೂಪಾಯಿ ಸಿಕ್ಕರೆ ರೈತರು ನಷ್ಟದಿಂದ ಪಾರಾಗಿ ಸ್ವಲ್ಪ ಲಾಭಾಂಶ ಪಡೆಯಬಹುದು. ಆದರೆ ಈ ಬಾರಿ ಸರಿಸುಮಾರು 11,000 ರೂಪಾಯಿನಷ್ಟು ಸಿಗುತ್ತಿದೆ. ಇದೊಂಥರಾ ಜಾಕ್ ಪಾಟ್ ಎಂದರೆ ತಪ್ಪಾಗಲಾರದು. ಆದರೆ ಬೇಸರದ ಸಂಗತಿ ಏನೆಂದರೆ ಶುಂಠಿ ಬೆಳೆದ ರೈತರ ಸಂಖ್ಯೆ ತೀರಾ ಕಡಿಮೆಯಾಗಿರುವುದು.

English summary

Ginger Price Hike: Leaves Mysuru Farmers Regretful Over Missed Opportunity

Story first published: Friday, July 21, 2023, 17:48 [IST]

Source link