Mangaluru
lekhaka-Kishan Kumar
ಮಂಗಳೂರು, ಜೂನ್ 23: ಎಂದೂ ಕರಗದ ಪ್ಲಾಸ್ಟಿಕ್ ತ್ಯಾಜ್ಯ ಪರಿಸರ, ಸಮುದ್ರ, ನದಿ, ಇತರ ಜಲಮೂಲಗಳ ಒಡಲು ಸೇರಿ ಹಾನಿ ಮಾಡುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಆದರೆ ಇದೀಗ ನಾಗರಹಾವೊಂದರ ಉದರ ಸೇರಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಯುವ ವೈದ್ಯರೊಬ್ಬರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಬಂಟ್ವಾಳದ ವಗ್ಗದಲ್ಲಿರುವ ಸಾಲುಮರ ತಿಮ್ಮಕ್ಕ ಉದ್ಯಾನವನದ ಸಮೀಪದ ಕಾವಳಪಡೂರು ಗ್ರಾಪಂ ಉಪಾಧ್ಯಕ್ಷೆ ವಸಂತಿಯವರ ಮನೆ ಬಳಿಯಿದ್ದ ಬಿಲವೊಂದರಲ್ಲಿಸಿಲುಕಿ ಈ ನಾಗರಹಾವು ಹೊರಬರಲು ಹೆಣಗಾಡುತ್ತಿತ್ತು. ಮೂರು ದಿನಗಳಿಂದ ಅದನ್ನು ಗಮನಿಸುತ್ತಿದ್ದ ಮನೆಯವರು ಜೂನ್ 6ರಂದು ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಹಾವನ್ನು ಬಿಲದಿಂದ ಮೆಲ್ಲಗೆ ಹೊರ ತೆಗೆದು ರಕ್ಷಿಸಿದ್ದಾರೆ. ಈ ವೇಳೆ ಅದರ ತಲೆಯ ಕೆಳಭಾಗದಲ್ಲಿ ಎರಡು ಗಾಯಗಳಾಗಿತ್ತು. ಆದ್ದರಿಂದ ಚಿಕಿತ್ಸೆಗಾಗಿ ಮಂಗಳೂರಿನ ಪಶುವೈದ್ಯ ಡಾ.ಯಶಸ್ವಿ ನಾರಾವಿಯವರಲ್ಲಿಗೆ ತಂದಿದ್ದಾರೆ.
ಗಾಯಕ್ಕೆ ಚಿಕಿತ್ಸೆ ಒದಗಿಸಿದ ವೈದ್ಯರು ಹಾವಿನ ಹೊಟ್ಟೆ ಉಬ್ಬೇರಿದ್ದು ಗಮನಿಸಿ ಎಕ್ಸ್ ರೇ ಮಾಡುತ್ತಾರೆ. ಆಗ ಅದರ ಉದರದೊಳಗೆ ಪ್ಲಾಸ್ಟಿಕ್ ವಸ್ತುವಿರುವುದು ಗಮನಕ್ಕೆ ಬರುತ್ತದೆ. ಆದ್ದರಿಂದ ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿ ಉದರದೊಳಗಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಯಶಸ್ವಿಯಾಗಿ ಹೊರತೆಗೆಯಲಾಗುತ್ತದೆ.
ವಿಜಯಪುರ-ಮಂಗಳೂರು ಸೇರಿ ಹಲವು ರೈಲು ಸೇವೆ ವಿಸ್ತರಣೆ, ಪಟ್ಟಿ
ಡಾ.ಯಶಸ್ವಿಯವರ ಪ್ರಕಾರ ‘ಸುಮಾರು ಐದು ಅಡಿ ಉದ್ದದ ಸಾಕಷ್ಟು ದಪ್ಪವೂ ಇದ್ದ ಹೆಣ್ಣು ನಾಗರಹಾವು ಇದಾಗಿತ್ತು. 10ವರ್ಷ ಪ್ರಾಯವಾಗಿರಬಹುದು. ಹಾವು ಮೊಟ್ಟೆ ನುಂಗುವ ವೇಳೆ ಸುಣ್ಣದ ಡಬ್ಬವನ್ನು ಒಟ್ಟಿಗೆ ನುಂಗಿದ್ದಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ 15 ದಿನಗಳ ಕಾಲ ಶುಶ್ರೂಷೆ ಒದಗಿಸಿ ಯಾವುದೇ ತೊಂದರೆ ಇಲ್ಲವೆಂದು ಕಂಡ ಬಳಿಕ ಸ್ನೇಕ್ ಕಿರಣ್ ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಮತ್ತೆ ಹಾವನ್ನು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ. ಒಟ್ಟಿನಲ್ಲಿ ಕ್ಲಪ್ತ ಸಮಯದಲ್ಲಿ ಹಾವನ್ನು ರಕ್ಷಿಸಿ ಅದಕ್ಕೆ ಶಸ್ತ್ರಚಿಕಿತ್ಸೆ ನೀಡಿರುವುದರಿಂದ ಅದು ಬದುಕಿ ಉಳಿದಿರುವುದಂತೂ ಸತ್ಯ. ಪರಿಸರ ಜೀವಿಯ ಬಗ್ಗೆ ಕಾಳಜಿಯಿಟ್ಟು ಅದನ್ನು ರಕ್ಷಿಸಿದ ಸ್ನೇಕ್ ಕಿರಣ್ ಹಾಗೂ ಡಾ.ಯಶಸ್ವಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
English summary
A team of veterinarians led by Dr Yashaswi Naravi from Little Paws here successfully conducted surgery on a spectacled cobra. Know more
Story first published: Friday, June 23, 2023, 14:42 [IST]