Karnataka
oi-Malathesha M
ಬೆಂಗಳೂರು: ರಾಜ್ಯದಲ್ಲಿ ಕರೆಂಟ್ ರಾಜಕೀಯ ಶುರುವಾಗಿದೆ. ಜನರಿಗೆ ವಿದ್ಯುತ್ ಉಚಿತ, ಉಚಿತ ಅಂತಾ ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ತಿಂಗಳೇ ವಿದ್ಯುತ್ ಏರಿಕೆ ಯುದ್ಧ ಶುರುವಾಗಿದೆ. ದರ ಏರಿಸಿದ್ದು ನಾವಲ್ಲ ಅಂತ ಅವರು, ಅವರೇ ಅಂತ ಇವ್ರು. ಹೀಗೆ ಬಿಜೆಪಿ & ಕಾಂಗ್ರೆಸ್ ಕಿತ್ತಾಟ ಬಲು ಜೋರಿದೆ. ಆದರೆ ಎರಡೂ ಪಕ್ಷಗಳ ಕಿತ್ತಾಟದಲ್ಲಿ ‘ಆಮ್ ಆದ್ಮಿ’ ನರಳುತ್ತಿದ್ದಾನೆ.
ಒಬ್ಬರಿಗೆ 1 ಲಕ್ಷ ರೂಪಾಯಿ.. ಇನ್ನೂ ಕೆಲವರಿಗೆ 2 ಲಕ್ಷ ರೂಪಾಯಿ.. ಯಾಮಾರಿದರೆ ಇದು 5 ಲಕ್ಷವೂ ಆಗಬಹುದು.. ಮುಂದೆ 10 ಲಕ್ಷ ರೂಪಾಯಿಗೂ ಹೋಗಬಹುದು. ಅರೆ ನಾವ್ ಹೇಳುತ್ತಿರೋದು ಚಿನ್ನದ ರೇಟ್ ಅಲ್ಲ ರೀ, ರಾಜ್ಯದಲ್ಲಿ ಸಾಮಾನ್ಯ ಜನರ ಮನೆಗೂ ಬರುತ್ತಿರುವ ಕರೆಂಟ್ ಬಿಲ್ ಲೆಕ್ಕ ಇದು. ಹೃದಯ ನಿಂತು ಹೋಗುವಷ್ಟು ಕರೆಂಟ್ ಬಿಲ್ ಕಂಡ ಜನ ಬೆಚ್ಚಿಬಿದ್ದಿದ್ದಾರೆ. ಸಮಸ್ಯೆ ಬಗೆಹರಿಸಬೇಕಿದ್ದ ಸರ್ಕಾರ ಮಾತ್ರ ಬಿಜೆಪಿ ಜೊತೆಗೆ ಫೈಟ್ ಶುರುಮಾಡಿದೆ. ಇನ್ನು ಬಿಜೆಪಿ ಕೂಡ ಇದೇ ವಿಚಾರದಲ್ಲಿ ತನ್ನ ರಾಜಕೀಯ ಅಸ್ತ್ರ ಪ್ರಯೋಗಿಸಲು ಯತ್ನಿಸುತ್ತಿದ್ದು, ಬಿಜೆಪಿ & ಕಾಂಗ್ರೆಸ್ ನಾಯಕರ ವರ್ತನೆ ವಿರುದ್ಧ ಜನರು ಕೂಡ ರೊಚ್ಚಿಗೇಳುವ ಪರಿಸ್ಥಿತಿ ಬಂದಿದೆ.
ರಾಜ್ಯದಲ್ಲಿ ವಿದ್ಯುತ್ ದರ ಏರಿಸಿದ್ದು ಯಾರು?
ಹಂಗೆ ನೋಡಿದರೆ ಇದು ಕನ್ನಡ ನಾಡಿನ ಜನರಿಗೆ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಉತ್ತರ ಸಿಗದ ಪ್ರಶ್ನೆಗೆ ಜನ ಕಾಯುತ್ತಿದ್ದಾರೆ. ದಿಢೀರ್ 2ರಿಂದ 3 ಪಟ್ಟು ಹೆಚ್ಚು ವಿದ್ಯುತ್ ಬಿಲ್ ಬಂದಿದ್ದನ್ನು ನೋಡಿ ಎಷ್ಟೋ ಜನರಿಗೆ ಉಸಿರು ಏರುಪೇರಾಗಿದೆ. ಹೃದಯ ಬಡಿತ ಕೂಡ ಹೆಚ್ಚು ಕಮ್ಮಿ ಆಗುತ್ತಿದೆ. ಅತ್ತ ಬಿಜೆಪಿ ತನ್ನ ಅಧಿಕಾರ ಅವಧಿ ಮುಗಿಸಿ ಹೋಗುವ ಮೊದಲು ವಿದ್ಯುತ್ ಬಿಲ್ ಏರಿಕೆ ಮಾಡಿ ಹೋಗಿದೆ ಅನ್ನೋದು ಕಾಂಗ್ರೆಸ್ ಆರೋಪ. ಈ ವಿಚಾರದಲ್ಲಿ ನಮ್ಮ ಪಾತ್ರವೇ ಇಲ್ಲ, ಕಾಂಗ್ರೆಸ್ ಸರ್ಕಾರವೇ ವಿದ್ಯುತ್ ದರ ಏರಿಸಿದೆ ಅಂತ ಬಿಜೆಪಿ ಹೇಳುತ್ತಿದೆ. ಹಾಗಾದ್ರೆ ನಿಮ್ಮ ಮನೆಯ ವಿದ್ಯುತ್ ಬಿಲ್ ಇಷ್ಟು ಜಾಸ್ತಿ ಆಗಿದ್ದೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ವಿದ್ಯುತ್ ದರ ಹೆಚ್ಚಳ: ಸಕ್ಕರೆ ನಾಡಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಣಿಜ್ಯೋದ್ಯಮಿಗಳ
2 ಸ್ಲ್ಯಾಬ್ ಮಾದರಿ ಶುಲ್ಕ ಜಾರಿ ಎಫೆಕ್ಟ್!
ಹೌದು ರಾಜ್ಯದಲ್ಲಿ ಇದೇ ಮೊದಲ ಬಾರಿ ಹೊಸ ವಿದ್ಯುತ್ ಬಿಲ್ ಮಾದರಿ ಜಾರಿಯಾಗಿದೆ. ಹಿಂದೆ ವಿದ್ಯುತ್ ಬಳಕೆ 150 ಯೂನಿಟ್ ಇದ್ದರೆ ಮೊದಲ 50 ಯೂನಿಟ್ಗೆ ಅಂದರೆ 0ರಿಂದ 50 ಯೂನಿಟ್ ಒಳಗೆ ಪ್ರತಿ ಯೂನಿಟ್ಗೆ 4.15 ರೂಪಾಯಿ ಬಿಲ್ ಬರುತ್ತಿತ್ತು. ನಂತರದ 50 ಯೂನಿಟ್ಗೆ ಪ್ರತಿ ಯೂನಿಟ್ಗೆ 5.60 ರೂಪಾಯಿ ರೀತಿ ದರ ವಿಧಿಸಲಾಗುತ್ತಿತ್ತು. ಆದ್ರೆ 100 ಯೂನಿಟ್ ದಾಟಿದ್ದರೆ ಪ್ರತಿ ಯೂನಿಟ್ಗೆ 7.17 ರೂಪಾಯಿ ಶುಲ್ಕ ಕಟ್ಟಬೇಕಿತ್ತು. ಆದ್ರೆ ಈಗ ಶುಲ್ಕ ಪರಿಷ್ಕರಣೆ ನಂತರ, ಶುಲ್ಕ ದರ ವಿಧಿಸುವ 3 ಸ್ಲ್ಯಾಬ್ನ 2 ಸ್ಲ್ಯಾಬ್ಗಳಿಗೆ ಇಳಿಸಲಾಗಿದೆ. ಮೊದಲ 100 ಯೂನಿಟ್ ವಿದ್ಯುತ್ಗೆ ಶುಲ್ಕ ವಿಧಿಸುವಾಗ ಪ್ರತಿ ಯೂನಿಟ್ಗೆ 4.75 ರೂಪಾಯಿ ನಿಗದಿ ಮಾಡಲಾಗಿದೆ. ಆದರೆ 100 ಯೂನಿಟ್ ದಾಟಿದರೆ ಪ್ರತಿ ಯೂನಿಟ್ ಗೆ 7 ರೂಪಾಯಿ ರೀತಿ ಶುಲ್ಕ ಕಟ್ಟಬೇಕಿದೆ.
ಏಪ್ರಿಲ್ ತಿಂಗಳಿಂದ ಹೊಸ ದರ ಅನ್ವಯ!
ವಿದ್ಯುತ್ ದರ ಭಾರಿ ಏರಿಕೆಗೆ ಮತ್ತೊಂದು ಕಾರಣ 2 ತಿಂಗಳ ಹಿಂದೆಯೇ ಅನ್ವಯವಾಗುವ ರೀತಿ ಬಿಲ್ ನೀಡಲಾಗಿದೆ. ಅಂದರೆ ಹೊಸ ಶುಲ್ಕ ಪದ್ಧತಿ ಅಳವಡಿಸಿಕೊಳ್ಳುವಂತೆ ಕೆಇಆರ್ಸಿ ರಾಜ್ಯ ಸರ್ಕಾರಕ್ಕೆ ಮಾರ್ಚ್ ತಿಂಗಳಲ್ಲೇ ಪ್ರಸ್ತಾವನೆ ಸಲ್ಲಿಸಿತ್ತು. 2023ರ ಏ. 1ರಿಂದಲೇ ಹೊಸ ಶುಲ್ಕ ಪದ್ಧತಿ ಜಾರಿಯಾಗಬೇಕು ಎಂದು ಉಲ್ಲೇಖಿಸಲಾಗಿತ್ತು. ಆದ್ರೆ ಚುನಾವಣೆ ಹಿನ್ನೆಲೆಯಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಇದಕ್ಕೆ ಒಪ್ಪಿಗೆ ನೀಡದೆಯೆ ಮುಂದೂಡಿತ್ತು. ಆದ್ರೆ ಈಗ ದರ ಏರಿಕೆ ಜಾರಿಗೆ ಬಂದಿದೆ. ಮೊದಲೇ ಏಪ್ರಿಲ್ 1ರಿಂದ ಇದು ಜಾರಿಯಾಗಬೇಕೆಂಬ ಸಲಹೆ ಇದ್ದಿದ್ದರಿಂದ ಹೊಸ ಶುಲ್ಕ ಪದ್ಧತಿ ಏಪ್ರಿಲ್ 1ರಿಂದಲೇ ಅನ್ವಯ ಆಗಿದೆ.
ವಿದ್ಯುತ್ ದರ ನಿರ್ಧಾರ ಮಾಡೋದು ಯಾರು?
ಅಂದಹಾಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಅಂದರೆ ಕೆಇಆರ್ಸಿ ಸ್ವಾಯತ್ತ ಸಂಸ್ಥೆ. ಚುನಾವಣಾ ಆಯೋಗ & ಲೋಕಾಯುಕ್ತ ಸಂಸ್ಥೆಗಳ ರೀತಿ ಒಂದು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆ. ಕೆಇಆರ್ಸಿ ಸಂಸ್ಥೆ ಮೇಲೆ ರಾಜ್ಯ ಸರ್ಕಾರದ ಸಂಪೂರ್ಣ ನಿಯಂತ್ರಣವೇ ಇರಲ್ಲ. ರಾಜ್ಯದಲ್ಲಿ ವಿದ್ಯುತ್ ಸರಬರಾಜು ಮಾಡುವ ಬೆಸ್ಕಾಂ, ಚೆಸ್ಕಾಂ, ಸೆಸ್ಕ್, ಹೆಸ್ಕಾಂ, ಮೆಸ್ಕಾಂ ಸಂಸ್ಥೆ ಪದಾಧಿಕಾರಿಗಳು ಕೆಇಆರ್ಸಿ ಆಡಳಿತ ಮಂಡಳಿಯಲ್ಲಿ ಸದಸ್ಯರು. ಬೆಸ್ಕಾಂ ಮತ್ತು ಚೆಸ್ಕಾಂ, ಸೆಸ್ಕ್, ಹೆಸ್ಕಾಂ, ಮೆಸ್ಕಾಂ ಸಂಸ್ಥೆಗಳ ಸಂಸ್ಥೆಗಳ ವಾರ್ಷಿಕ ಲೆಕ್ಕಾಚಾರದಲ್ಲಿ ಆಗುವ ನಷ್ಟದ ಅನುಸಾರವಾಗಿ ವಿದ್ಯುತ್ ದರ ನಿರ್ಧಾರ ಆಗುತ್ತದೆ.
ವಿದ್ಯುತ್ ದರ ಏರಿಸದಿದ್ದರೆ ನಷ್ಟ ಭರಿಸಬೇಕು!
ಹೌದು ಬೆಸ್ಕಾಂ, ಚೆಸ್ಕಾಂ, ಸೆಸ್ಕ್, ಹೆಸ್ಕಾಂ, ಮೆಸ್ಕಾಂ ಸಂಸ್ಥೆಗಳ ವಾರ್ಷಿಕ ಲೆಕ್ಕಾಚಾರದಲ್ಲಿ ಆಗುವ ನಷ್ಟದ ಅನುಸಾರವಾಗಿ ವಿದ್ಯುತ್ ದರ ಯಾವಾಗ ಹೆಚ್ಚಿಸಬೇಕು ಎಂಬುದನ್ನ ಸದಸ್ಯರೇ ನಿರ್ಧಾರ ಮಾಡ್ತಾರೆ. ಆಯೋಗ ನೀಡುವ ಶಿಫಾರಸ್ಸನ್ನು ಯಾವುದೇ ಸರ್ಕಾರ ಮುಂದೂಡಲು ಅವಕಾಶ ಇದೆ ಅಥವಾ ಶುಲ್ಕ ಹೆಚ್ಚಳ ಮಾಡಬೇಡಿ ಎಂದು ಸೂಚಿಸಬಹುದು. ಆದರೆ ಶುಲ್ಕ ಹೆಚ್ಚಳ ಮಾಡಬೇಡಿ ಎಂದು ಸರ್ಕಾರ ಸೂಚನೆ ನೀಡಿದಾಗ, ವಿದ್ಯುತ್ ಕಂಪನಿಗಳಿಗೆ ಆಗುವ ನಷ್ಟವನ್ನು ಸರ್ಕಾರವೇ ಭರಿಸಬೇಕು. ಈ ಎಲ್ಲಾ ಪರಿಣಾಮಗಳ ಕಾರಣ ಡಬಲ್, ತ್ರಿಬಲ್ ಬಿಲ್ ಬಂದಿದೆ. ಕರ್ನಾಟಕದ ಸಾಮಾನ್ಯ ಜನರು ಪರದಾಡುತ್ತಿದ್ದಾರೆ.
ಇದೆಲ್ಲಾ ಏನೇ ಇರಲಿ ತಾಂತ್ರಿಕ ಕಾರಣಗಳನ್ನ ಬದಿಗಿಟ್ಟು ರಾಜ್ಯದ ಪರಿಸ್ಥಿತಿ ಅವಲೋಕನ ಮಾಡಬೇಕಿದೆ. ರಾಜ್ಯದ ಜನರು ವಿದ್ಯುತ್ ಬಿಲ್ ಏರಿಕೆ ಕಂಡು ಬೆಚ್ಚಿಬಿದ್ದಿದ್ದಾರೆ. ಬಿಜೆಪಿ ಆಡಳಿತದಲ್ಲಿ ಕೈಗೊಂಡ ಕ್ರಮಗಳನ್ನ ಹಿಂದಕ್ಕೆ ಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರ, ಈಗ ವಿದ್ಯುತ್ ಬಿಲ್ ಏರಿಕೆಯನ್ನೂ ಹಿಂದಕ್ಕೆ ಪಡೆಯಲಿ ಅಂತಿದ್ದಾರೆ ಜನ ಸಾಮಾನ್ಯರು. ಆದ್ರೆ ಇಲ್ಲಿ ಕ್ರಮಕ್ಕಿಂತ ವಾಗ್ವಾದ ಹೆಚ್ಚಾಗುತ್ತಿದೆ. ಅತ್ತ ಬಿಜೆಪಿ ನಾಯಕರು ನಮ್ಮ ಸರ್ಕಾರದಲ್ಲಿ ವಿದ್ಯುತ್ ದರ ಏರಿಕೆ ಆಗಿಲ್ಲ ಅಂತಾ ಸಬೂಬು ಹೇಳುತ್ತಿದ್ದರೆ, ಕಾಂಗ್ರೆಸ್ ಸರ್ಕಾರ ಮಾತ್ರ ಬಿಜೆಪಿ ಸರ್ಕಾರವೇ ದರ ಏರಿಕೆ ಮಾಡಿಹೋಗಿದೆ ಅಂತಿದೆ. ಆದರೆ ಇವರಿಬ್ಬರ ರಾಜಕೀಯ ಬಡಿದಾಟದಲ್ಲಿ ಜನಸಾಮಾನ್ಯ ಏನು ಮಾಡಬೇಕು ಹೇಳಿ?
English summary
Karnataka electricity price hike effect on the people.
Story first published: Thursday, June 22, 2023, 18:08 [IST]