Features
lekhaka-Lavakumar B M
ಮಡಿಕೇರಿ, ಜೂನ್, 22: ಹಿಂದಿನ ಒಂದೆರಡು ದಶಕಗಳಿಗೆ ಹೋಲಿಸಿದರೆ ಇತ್ತೀಚೆಗಿನ ವರ್ಷಗಳಲ್ಲಿ ಮಂಜಿನ ನಗರಿ ಕೊಡಗು ತುಂಬಾ ಬದಲಾವಣೆಯಾಗಿದೆ. ವಾತಾವರಣದಲ್ಲಿಯೂ ಏರುಪೇರು ಕಂಡಿದೆ. ಇನ್ನು ಅಭಿವೃದ್ಧಿ ವಿಚಾರಗಳು ಜಿಲ್ಲೆಯಲ್ಲಿ ಸಾಧಕ ಬಾಧಕಕ್ಕೆ ಕಾರಣವಾಗಿದೆ. ಆದರೂ ಕೆಲವೊಂದು ಬದಲಾವಣೆಗಳ ನಡುವೆಯೂ ತಮ್ಮ ಆಹಾರ ಕ್ರಮಗಳಲ್ಲಿ ಯಾವುದೇ ಬದಲಾವಣೆ ಕಾಣದೆ, ಹಿರಿಯರು ಬಳಸುತ್ತಾ ಬಂದಿದ್ದ ಆಹಾರ ಪದಾರ್ಥಗಳನ್ನೇ ಇಂದಿಗೂ ಬಳಸುತ್ತಿರುವುದು ವಿಶೇಷವಾಗಿದೆ.
ಮಳೆಗಾಲ ಬಂತೆಂದರೆ ಸಾಕು ಇಲ್ಲಿನ ಇಡೀ ಪ್ರದೇಶ ಅಚ್ಚಹಸಿರಿನ ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುತ್ತದೆ. ಮತ್ತು ಮಳೆಯ ಕಾರಣಗಳಿಗೆ ತರಕಾರಿಗಳನ್ನು ಬೆಳೆಯಲು ಸಾಧ್ಯವಾಗದ ಕಾರಣದಿಂದ ಹಿರಿಯರು ತಮ್ಮ ಆರೋಗ್ಯದ ದೃಷ್ಟಿಯಿಂದ ಸುತ್ತಮುತ್ತಲ ಪ್ರಕೃತಿಯಲ್ಲಿ ದೊರೆಯುವ ಸಸ್ಯಗಳು ಮತ್ತು ಅದರ ಉತ್ಪನ್ನಗಳನ್ನು ಬಳಸುವುದನ್ನು ರೂಢಿ ಮಾಡಿಕೊಂಡಿದ್ದರು. ಅದು ಇವತ್ತಿಗೂ ಮುಂದುವರೆದುಕೊಂಡು ಬಂದಿರುವುದನ್ನು ನಾವು ಕಾಣಬಹುದಾಗಿದೆ.
ಇನ್ನು ಮಳೆಗಾಲದಲ್ಲಿ ಯಾವ ಪದಾರ್ಥಗಳನ್ನು ಸೇವಿಸಬೇಕು? ಕಾಡಿನಲ್ಲಿ ಬೆಳೆಯುವ ಯಾವ ಸಸ್ಯ ಮತ್ತು ಅದರ ಉತ್ಪನ್ನವನ್ನು ಹೇಗೆ ಬಳಸಬೇಕು? ಎಂಬಿತ್ಯಾದಿ ವಿಚಾರಗಳನ್ನು ಅರಿತುಕೊಂಡು ಅದನ್ನು ಬಳಕೆ ಮಾಡುತ್ತಾ ಬಂದಿದ್ದರು. ಅದು ಇವತ್ತಿಗೂ ಮುಂದುವರೆದಿರುವುದು ವಿಶೇಷವಾಗಿದೆ. ಇದರಲ್ಲಿ ಮುಖ್ಯವಾಗಿ ಸಾಂಬಾರು ಪದಾರ್ಥಗಳಲ್ಲಿ ಬಳಕೆಯಾಗುವ ಕಾಚಂಪುಳಿಯೂ ಒಂದಾಗಿದೆ. ಇದನ್ನು ಉಪ್ಪಾಗೆ ಎಂಬ ಹಣ್ಣಿನಿಂದ ತಯಾರು ಮಾಡಲಾಗುತ್ತದೆ. ಮಲೆನಾಡಿಗರು ಹೊರತುಪಡಿಸಿದಂತೆ ಇತರರು ಇದರ ಬಳಕೆ ಮಾಡುವುದು ಕಡಿಮೆ.
Fennel Seeds Benefits: ಅಜೀರ್ಣ, ತೂಕ ಇಳಿಕೆ ಜೊತೆಗೆ ಸೋಂಪು ಕಾಳುಗಳ ಉಪಯೋಗ ಎಷ್ಟೇಲ್ಲಾ ಇದೆ ಗೊತ್ತೆ?
ಉಪ್ಪಾಗೆಯಿಂದ ತಯಾರಾಗುವ ಕಾಚಂಪುಳಿ
ಅದರಲ್ಲೂ ಕೊಡಗಿನಲ್ಲಿ ಕಾಚಂಪುಳಿ ಬಳಕೆ ತುಸು ಹೆಚ್ಚೇ ಎಂದರೆ ತಪ್ಪಾಗಲಾರದು. ಇಲ್ಲಿನ ಮಾಂಸದ ಅಡುಗೆಗಳಲ್ಲಿ ಕಾಚಂಪುಳಿ ಹೆಚ್ಚು ಪ್ರಮಾಣದಲ್ಲಿ ಬಳಕೆ ಆಗುತ್ತದೆ. ಇದೊಂದು ಕಾಡು ಉತ್ಪನ್ನವಾಗಿದ್ದು, ಕೊಡಗಿನ ಕಾಡುಗಳಲ್ಲಿ, ಕಾಫಿ ತೋಟಗಳ ನಡುವೆ ಮರವಾಗಿ ಬೆಳೆಯುತ್ತದೆ. ಇದನ್ನು ಉಪ್ಪಾಗೆ(ಪಣಂಪುಳಿ) ಅಂತಲೂ ಕರೆಯಲಾಗುತ್ತದೆ.
ಕಾಡಿನಲ್ಲಿ ಮರವಾಗಿ ಬೆಳೆಯುವ ಉಪ್ಪಾಗೆ ಮಳೆಗಾಲದಲ್ಲಿ ಹಣ್ಣಾಗುತ್ತದೆ. ಈ ಹಣ್ಣನ್ನು ತಂದು ಅದರೊಳಗಿನ ಬೀಜಗಳನ್ನು ತೆಗೆದು ಒಣಗಿಸಲಾಗುತ್ತಿದೆ. ಇದಕ್ಕೆ ಉತ್ತಮ ಬೆಲೆಯೂ ಇದೆ. ಇದರ ಜೊತೆಗೆ ಇದೇ ಹಣ್ಣನ್ನು ಕೊಳೆಯಲು ಹಾಕಿ ಅದರಿಂದ ಬರುವ ರಸವನ್ನು ಚೆನ್ನಾಗಿ ಕುದಿಸಿದಾಗ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅದನ್ನು ಬಾಟಲಿಯಲ್ಲಿ ತುಂಬಿಸಿಟ್ಟುಕೊಳ್ಳುತ್ತಾರೆ. ಅದುವೇ ಕಾಚಂಪುಳಿಯಾಗಿದೆ.
ಮನುಷ್ಯನ ಕೊಬ್ಬು ಕರಗಿಸುವಲ್ಲಿ ಸಹಕಾರಿ
ಕಾಚಂಪುಳಿಯನ್ನು ಅಡುಗೆ ಮತ್ತು ಕೆಲವು ಸಂದರ್ಭಗಳಲ್ಲಿ ಮನೆ ಔಷಧಿಯಾಗಿಯೂ ಬಳಸಿಕೊಳ್ಳಲಾಗುತ್ತದೆ. ಇನ್ನು ಕಾಚಂಪುಳಿ ತಯಾರು ಮಾಡುವ ಉಪ್ಪಾಗೆಯನ್ನು ಹಿಂದಿಯಲ್ಲಿ ಬಿಲಿಟಿ ಆಮ್ಲಿ, ಇಂಗ್ಲೀಷ್‌ನಲ್ಲಿ ಮಲಬಾರ್ ಗಾಂಬೂಗೆ, ತುಳುವಿನಲ್ಲಿ ಮಂತಪುಳಿ, ಮಲೆಯಾಳಂನಲ್ಲಿ ಕುಟ್ಟಪುಳಿ, ತಮಿಳುವಿನಲ್ಲಿ ಕೊಟುಕ್ಕಾಪುಳಿ, ತೆಲುಗಿನಲ್ಲಿ ವೃಕ್ಷಾಮ್ಲ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಗಾರ್ಸಿನಿಯಾ ಇಂಡಿಕಾ ಆಗಿದೆ.
ಈ ಉಪ್ಪಾಗೆಯಲ್ಲಿರುವ “ಹೈಡಾಕ್ಸಿ ಸಿಟ್ರಿಕ್” ಎಂಬ ವಸ್ತುವಿಗೆ ಮಾನವನ ದೇಹದ ಕೊಬ್ಬನ್ನು ಕರಗಿಸುವ ಶಕ್ತಿ ಇದೆ. ಗಾರ್ಸಿನಿಯಾ ಕುಟುಂಬಕ್ಕೆ ಸೇರಿದ ಎಲ್ಲಾ ಪ್ರಬೇಧದ ಹಣ್ಣುಗಳಲ್ಲಿಯೂ ಸಹಾ ಕೊಬ್ಬು ಕರಗಿಸಲು ಸಹಕಾರಿಯಾಗಬಲ್ಲಂತಹ ರಾಸಾಯನಿಕಗಳು ಕಂಡುಬಂದಿದೆ. ಆದರೆ, ಉಪ್ಪಾಗೆಯ ಹಣ್ಣುಗಳಲ್ಲಿ ಇದು ಹೇರಳವಾಗಿದೆ ಎಂದು ಬೆಂಗಳೂರಿನ ಇಕೋ ವಾಚ್ ಸಂಸ್ಥೆಯ ಸಸ್ಯ ಸಂಶೋಧನಾ ಸಹಾಯಕ ಎಂ.ಬಿ.ನಾಯ್ಕ ಕಡಕೇರಿ ಅಭಿಪ್ರಾಯಪಟ್ಟಿದ್ದಾರೆ.
ಮಾಂಸ ಪದಾರ್ಥಗಳಿಗೆ ಬಳಕೆ
ಇದು ಮಾರ್ಚ್‌ನಲ್ಲಿ ಹೂ ಬಿಟ್ಟು ಜೂನ್ ಜುಲೈ ತಿಂಗಳಲ್ಲಿ ಹಣ್ಣಾಗುತ್ತದೆ. ಬಿದ್ದ ಅಥವಾ ಕೊಯ್ಲು ಮಾಡಿದ ಹಣ್ಣು ಕಾಯಿಗಳನ್ನು ಹೆಣೆದ ಬಿದಿರಿನ ತಟ್ಟಿ, ಕಬ್ಬಿಣದ ಪರದೆ ಮೇಲೆ ಬೆಂಕಿಯ ಶಾಖದಿಂದ ಒಣಗಿಸಿ ಬಳಿಕ ಮಾರಾಟ ಮಾಡಲಾಗುತ್ತದೆ. ಈ ಹಣ್ಣನ್ನು ಒಣಗಿಸಿದ ಬಳಿಕ ಬೇಯಿಸಿ ಅದರಿಂದ ಬಿಡುವ ರಸವನ್ನು ಅಥವಾ ಹಣ್ಣನ್ನು ನೇರವಾಗಿ ಕೊಳೆಯಲು ಹಾಕಿ ಅದರಿಂದ ಸಿಗುವ ದ್ರವವನ್ನು ಮಣ್ಣಿನ ಮಡಕೆಯಲ್ಲಿ ಚೆನ್ನಾಗಿ ಕುದಿಸುತ್ತಾ ಹೋಗಿ ಕೊನೆಯಲ್ಲಿ ಗಟ್ಟಿಯಾಗುವ ಕಪ್ಪಗಿನ ದ್ರವವೇ ಕಾಂಚಪುಳಿ.
ಇದನ್ನು ಅಡುಗೆಯಲ್ಲಿ ರುಚಿ ಬರಲು ಹುಳಿ ಪದಾರ್ಥವಾಗಿ ಬಳಸಲಾಗುತ್ತದೆ. ಅದರಲ್ಲಿಯೂ ಹಂದಿಮಾಂಸ ಮತ್ತು ಮೀನು ಸಾರಿಗೆ ಇದನ್ನು ಬಳಸುವುದರಿಂದ ರುಚಿ ಹೆಚ್ಚುವುದಲ್ಲದೆ, ಆರೋಗ್ಯಕ್ಕೂ ಸಹಕಾರಿ ಆಗಿದೆ.
ಇದು ಜಂತುಹುಳು ನಿವಾರಣೆಗೆ ಅಪೂರ್ವ ಔಷಧಿಯೂ ಆಗಿದೆ. ಹಣ್ಣಿನ ಸಿಪ್ಪೆಯಲ್ಲಿರುವ ಆಮ್ಲದಿಂದ ಕೊಲೆಸ್ಟ್ರಾಲ್ ಮತ್ತು ಬೊಜ್ಜು ನಿಯಂತ್ರಿಸಬಹುದಾಗಿದೆ. ಕಾಲಿನ ಬಿರುಕುಗಳಿಗೆ ಇದರ ಬೀಜದ ಎಣ್ಣೆಯನ್ನು ಸವರುವುದರಿಂದ ಬಿರುಕು ಮುಚ್ಚುತ್ತದೆ. ಕೆಮ್ಮು ಗಂಟಲು ಕಟ್ಟಿಕೊಳ್ಳುವುದು ಕಂಡು ಬಂದರೆ ಗಂಟಲಿಗೆ ಕಾಚಂಪುಳಿಯನ್ನು ಹಚ್ಚಿ ಅದರ ಮೇಲೆ ತೆಳುವಾಗಿ ಸುಣ್ಣ ಸವರಿದರೆ ಗಂಟಲು ನೋವು ಕಡಿಮೆಯಾಗುತ್ತದೆ. ಇನ್ನು ಬೀಜದಿಂದ ತೆಗೆದ ಎಣ್ಣೆಯನ್ನು ಅಡುಗೆಗೂ ಬಳಸಲಾಗುತ್ತಿದೆ.
ಉತ್ಪನ್ನ ಬಳಕೆ ಮಾಡೋಣ
ಒಟ್ಟಾರೆಯಾಗಿ ಹೇಳಬೇಕೆಂದರೆ ಮಲೆನಾಡಿನ ನಿಸರ್ಗದೊಳಗೆ ನಮ್ಮ ಆರೋಗ್ಯವನ್ನು ಕಾಪಾಡುವಂತಹ ಆರೋಗ್ಯಕಾರಿ ಉತ್ಪನ್ನಗಳಿದ್ದು, ಅವುಗಳನ್ನು ಬಳಸಿ ಹಿಂದಿನವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಇದರ ಉಪಯೋಗವನ್ನು ನಾವುಗಳು ಅರಿತು ಅದರ ಬಳಕೆಯನ್ನು ಮುಂದುವರೆಸಿದರೆ ರೋಗದಿಂದ ಮುಕ್ತವಾಗಲು ಸಾಧ್ಯ ಎಂದರೆ ತಪ್ಪಾಗಲಾರದು.
English summary
What Is the Speciality of Kodogu’s Garcinia Cambogia (Uppage Hannu)?, How to Use in Cooking?, here see details,
Story first published: Thursday, June 22, 2023, 18:14 [IST]