Karnataka
oi-Ravindra Gangal

ಬೆಂಗಳೂರು, ಜೂನ್ 22: ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಕಾಂಗ್ರೆಸ್ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಇದು ತೀರ್ಥಕ್ಷೇತ್ರಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ. ಈ ಹಿನ್ನೆಲೆಯಲ್ಲಿ ಹಿಂದೂಪರ ಮತಗಳನ್ನು ಪರೋಕ್ಷವಾಗಿ ( ಪಕ್ಷದ ಅರಿವಿಗೆ ಬಂದಿಲ್ಲ ) ಕಾಂಗ್ರೆಸ್ ಸೆಳೆಯುತ್ತಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಶಕ್ತಿ ಯೋಜನೆಯ ಲಾಭವನ್ನು ಪಡೆದುಕೊಂಡಿರುವ ಮಹಿಳೆಯರು, ಕಳೆದ ಒಂದು ವಾರದಿಂದ ರಾಜ್ಯದ ಪ್ರಮುಖ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಎಂಬ ಮೂರು ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಬಸ್ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ಅತ್ಯದ್ಬುತ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ. ಜನಪ್ರಿಯ ದೇವಾಲಯಗಳಿರುವ ಸ್ಥಳಗಳಿಗೆ ಲಕ್ಷಾಂತರ ಮಹಿಳೆಯರು ಭೇಟಿ ನೀಡುತ್ತಿದ್ದಾರೆ.

ತಮ್ಮ ಆಯ್ಕೆಯ ದೇವಾಲಯದಗಳಿಗೆ ಭೇಟಿ ನೀಡಲು ಬಸ್ಗಳನ್ನು ಕಾಯ್ದಿರಿಸಬಹುದೇ ಎಂದು ಕೇಳುವ ಮಹಿಳೆಯರೂ ಇದ್ದಾರೆ ಎಂದು ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ.
ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಆರೋಪಗಳನ್ನು ಬಿಜೆಪಿ ಮಾಡುತ್ತಲೇ ಬಂದಿದೆ. ಈ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ನಡೆಸುತ್ತಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಹಿಂದುತ್ವದ ‘ನಿಜವಾದ ಪ್ರತಿಪಾದಕ’ ಎಂದು ಹೇಳಿದ್ದಾರೆ.

ಇತರ ಧರ್ಮಗಳನ್ನು ಗೌರವಿಸುತ್ತಾ ದೇವರನ್ನು ಪೂಜಿಸುವವನೇ ನಿಜವಾದ ಹಿಂದೂ ಎಂದು ರೆಡ್ಡಿ ಪ್ರತಿಪಾದಿಸಿದ್ದಾರೆ. ಇದು ಕಾಂಗ್ರೆಸ್ ಸರಕಾರದಿಂದ ಸಾಧ್ಯವಾಗಿದೆ. ಹಿಂದೂಗಳನ್ನು ರಕ್ಷಿಸಲು ಮತ್ತು ಅವರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ ಎಂದೂ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಈ ಯೋಜನೆಯು ಜೂನ್ 11 ರಂದು ಪ್ರಾರಂಭವಾದಾಗಿನಿಂದ ಸುಮಾರು 1. 2 ಕೋಟಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ. ಈ ಯೋಜನೆಗೆ ಸಿಕ್ಕಿರುವ ಪ್ರತಿಕ್ರಿಯೆಯನ್ನು ಕಂಡು ಕಾಂಗ್ರೆಸ್ಸಿನ ಉತ್ಸಾಹ ಇಮ್ಮಡಿಯಾಗಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಇದು ಮತಗಳಾಗಿ ಪರಿವರ್ತನೆಯಾಗುತ್ತದೆ ಎಂದು ಪಕ್ಷವು ಆಶಿಸುತ್ತಿದೆ. ಈ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ವರ್ಷಕ್ಕೆ 4,400 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಯೋಜನೆಯು ದೇಗುಲ ನಗರಿಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ, ಕಟೀಲು ದುರ್ಗಾಪರಮೇಶ್ವರಿ, ಉಡುಪಿ ಕೃಷ್ಣ ದೇವಾಲಯ, ಶೃಂಗೇರಿ, ಗೋಕರ್ಣ ಮತ್ತು ಹೊರನಾಡುಗಳಲ್ಲಿ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಿದೆ. ಭಕ್ತಾದಿಗಳ ನೂಕುನುಗ್ಗಲು ಎಷ್ಟಿತ್ತೆಂದರೆ ದೇವಾಲಯದ ಮೇಲ್ವಿಚಾರಕರು ವಿಶೇಷವಾಗಿ ವಾರಾಂತ್ಯದಲ್ಲಿ ಭಕ್ತಾದಿಗಳಿಗೆ ಹೆಚ್ಚುವರಿ ಆಹಾರವನ್ನು ಬೇಯಿಸಬೇಕಾಗಿ ಬಂದಿದೆ.
ಈ ದೇವಸ್ಥಾನಗಳು ಬಿಜೆಪಿಗೆ ಬೆಂಬಲವಾಗಿ ಎಂದು ನೋಡಲಾಗುತ್ತಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವುದಾಗಿ ಸೂಚಿಸಿದಾಗ ಕೇಸರಿ ಪಕ್ಷವು ಪ್ರತಿಭಟನೆ ನಡೆಸಿತು. ಶಕ್ತಿ ಯೋಜನೆಯು ದೇವಾಲಯಗಳಿಗೆ ನಿಯಮಿತವಾದ ಭಕ್ತರನ್ನು ಪಡೆಯುವುದನ್ನು ಖಚಿತಪಡಿಸಿದೆ. ಅವುಗಳ ಆದಾಯವನ್ನು ಹೆಚ್ಚಿಸಿದೆ. ಇದು ಕಾಂಗ್ರೆಸ್ಗೆ ಲಾಭ ತಂದು ಕೊಡಬಹುದು ಎಂದು ಹೇಳಲಾಗುತ್ತಿದೆ.
English summary
Shakti scheme in Karnataka: The free bus travel scheme for women in Karnataka has become a boon for the Congress.
Story first published: Thursday, June 22, 2023, 13:25 [IST]