Travel
lekhaka-Lavakumar B M

ಮಡಿಕೇರಿ, ಜುಲೈ 14: ಒಮ್ಮೊಮ್ಮೆ ಆಕಾಶವೇ ತೂತು ಬಿದ್ದಂತೆ ಜೋರಾಗಿ ಸುರಿಯುವ..ಮತ್ತೊಮ್ಮೆ ಜಿಟಿ ಜಿಟಿ ಸಿಂಚನಗೈಯ್ಯುವ ಮಳೆಯಲ್ಲಿ ಮಂಜಿನ ಮೋಡದ ಹಿಮಗಿರಿಯ ನಗರ ಮಡಿಕೇರಿಯಲ್ಲಿ ಓಡಾಡುವುದೇ ಒಂದು ವಿಭಿನ್ನ ಅನುಭವ. ಹೀಗಿರುವಾಗ ಇಂತಹ ಸಮಯದಲ್ಲಿ ಇಲ್ಲಿರುವ ಪ್ರಮುಖ ತಾಣಗಳಿಗೆ ಭೇಟಿ ನೀಡಿದರೆ ಸ್ವರ್ಗದಲ್ಲಿ ತೇಲಿದ ಅನುಭವವಾಗುವುದರಲ್ಲಿ ಎರಡು ಮಾತಿಲ್ಲ.
ಬೀಸಿ ಬರುವ ಗಾಳಿ.. ಸುರಿಯುವ ಮಳೆಯಲ್ಲಿ..ಮೈಕೊರೆಯುವ ಚಳಿಯಲ್ಲಿ ಛತ್ರಿ ಹಿಡಿದು ನಡೆಯುವುದೇ ಒಂದು ಸವಾಲ್. ಆದರೂ ಕೊಡುವ ಅನುಭವ ಮಾತ್ರ ಹೊಸತು. ಕೊಡಗಿನವರಿಗೆ ಅದು ಮಾಮೂಲಿಯ ಬದುಕು ಆದರೆ ದೂರದಿಂದ ಹೋದವರಿಗೆ ಒಂಥರಾ ಮಜಾ. ಇಂತಹ ಸುಂದರ ಕ್ಷಣಗಳ ನಡುವೆ ಪ್ರಕೃತಿಯನ್ನೇ ಜೀವಾಳವಾಗಿಸಿಕೊಂಡು ಮೈಮನಕ್ಕೆ ಮುದ ನೀಡುವ ಕೆಲವು ತಾಣಗಳು ಮಡಿಕೇರಿ ನಗರ ಮತ್ತು ಹೊರವಲಯದಲ್ಲಿವೆ. ಈ ತಾಣಗಳಿಗೆ ಭೇಟಿ ನೀಡಿದರೆ ಮುಂಗಾರು ಮಳೆಯ ಲೀಲೆಗೆ ಸುಂದರ ನೋಟಗಳು ತಲೆದೂಗುವಂತೆ ಮಾಡುತ್ತವೆ.

ಮುಂಗಾರು ಮಳೆಗೆ ಮಿಂದೇಳುವ ಪ್ರಕೃತಿಯನ್ನು ನೋಡುವುದೇ ಚೆಂದ. ಹೀಗಿರುವಾಗ ಪ್ರಕೃತಿದತ್ತ ತಾಣಗಳಲ್ಲಿ ವಿಹರಿಸುವುದು ಸುಂದರ ಅನುಭವ. ಇಂತಹ ಅನುಭವ ನೀಡುವ ತಾಣಗಳಲ್ಲಿ ಮಡಿಕೇರಿ ನಗರದಲ್ಲಿರುವ ರಾಜಾಸೀಟ್, ನೆಹರುಮಂಟಪ, ನಿಶಾನೆ ಮೊಟ್ಟೆ, ಅಬ್ಬಿಫಾಲ್ಸ್, ಮಾಂದಾಲಪಟ್ಟಿ ಪ್ರಮುಖ ತಾಣವಾಗಿವೆ. ಈ ತಾಣಗಳು ನಿಸರ್ಗ ಸೌಂದರ್ಯವನ್ನೇ ತನ್ನೊಳಗೆ ಹುದುಗಿಸಿಕೊಂಡು ನಿಂತಿರುವ ತಾಣಗಳಾಗಿವೆ. ಇಲ್ಲಿಗೆ ಮಳೆಗಾಲದಲ್ಲಿ ಭೇಟಿ ನೀಡುವುದೇ ಮರೆಯಲಾರದ ಅನುಭವ.
ನಿಸರ್ಗ ಸೌಂದರ್ಯದ ಗಣಿ ರಾಜಾಸೀಟ್
ಮಡಿಕೇರಿ ನಗರದಲ್ಲಿರುವ ರಾಜಾಸೀಟ್ ನಿಸರ್ಗ ಸೌಂದರ್ಯದ ಗಣಿಯಾಗಿದೆ. ಇಲ್ಲಿಂದ ನಿಂತು ನೋಡಿದರೆ ಕಂಡು ಬರುವ ನಿಸರ್ಗದ ಚೆಲುವು ನಮ್ಮನ್ನು ಒಂದು ಕ್ಷಣ ಮೂಕಸ್ಮಿತರನ್ನಾಗಿ ಮಾಡುತ್ತದೆ. ಇಲ್ಲಿಂದ ಕಂಡು ಬರುವ ದೃಶ್ಯಗಳನ್ನು ನೋಡಿ ರಾಜರೇ ಬೆರಗಾಗಿದ್ದರು. ಅಷ್ಟೇ ಅಲ್ಲದೆ ಸಂಜೆ ಹೊತ್ತಿನಲ್ಲಿ ತಮ್ಮ ಪರಿವಾರದೊಂದಿಗೆ ಬಂದು ಪ್ರಕೃತಿ ರಮಣೀಯ ದೃಶ್ಯಗಳನ್ನು ನೋಡಿ ಖುಷಿ ಪಡುತ್ತಿದ್ದರಂತೆ. ಹೀಗೆ ರಾಜರು ವಿಹರಿಸುತ್ತಿದ್ದ ತಾಣ ಇವತ್ತು ರಾಜಾಸೀಟ್ ಆಗಿದೆ. ಇಲ್ಲಿನ ಪ್ರಶಾಂತತೆ ಮನಸ್ಸಿಗೆ ಆನಂದ ನೀಡುತ್ತದೆ.
ಮಾನ್ಸೂನ್ ಋತುವಿನಲ್ಲಿ ಪ್ರವಾಸ ಮಾಡಬಹುದಾದ ಕರ್ನಾಟಕದ 5 ಉತ್ತಮ ಪ್ರವಾಸಿ ತಾಣಗಳು
ಬ್ರಿಟೀಷರ ಆಡಳಿತಾವಧಿಯಲ್ಲಿ ಸಿಮೆಂಟ್ ಹಾಗೂ ಹೆಂಚು ಬಳಸಿ ಕಟ್ಟಲಾಗಿರುವ ನಾಲ್ಕು ಕಮಾನಿನ ಭವ್ಯ ಮಂಟಪ ಇಲ್ಲಿನ ಆಕರ್ಷಣೆಯಾಗಿದೆ. ಇಲ್ಲಿ ಉದ್ಯಾನ ಸೇರಿದಂತೆ ಹಲವು ನೋಡತಕ್ಕ ವಿಶೇಷತೆಗಳಿದ್ದರೂ ಇಲ್ಲಿಂದ ನಿಂತು ನೋಡಿದಾಗ ಕಂಡು ಬರುವ ನಿಸರ್ಗ ಸುಂದರ ನೋಟ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಇದರ ಪಕ್ಕದ ಗುಡ್ಡದಲ್ಲಿ ನೆಹರು ಮಂಟಪವಿದ್ದು, ಗುಡ್ಡದ ಮೇಲೆ ನಿಸರ್ಗದ ಸುಂದರ ದೃಶ್ಯವನ್ನು ಆಸ್ವಾದಿಸಲೆಂದು ನಿರ್ಮಿಸಿದ ಸುಂದರ ಮಂಟಪ ಇದಾಗಿದೆ. ಈ ಮಂಟಪವನ್ನು 1957ರಲ್ಲಿ ಕೊಡಗಿಗೆ ಭೇಟಿ ನೀಡಿದ ಪ್ರಧಾನಿ ಜವಾಹರಲಾಲ್ ನೆಹರುರವರ ಸವಿನೆನಪಿಗಾಗಿ ಆಗಿನ ರಾಜ್ಯಪಾಲ ಧರ್ಮವೀರ ಎಂಬುವರು ನಿರ್ಮಿಸಿದ್ದಾರೆ.
ನಿಶಾನೆ ಬೆಟ್ಟದಲ್ಲಿ ಕಣ್ಣಿಗೆ ಸುಂದರ ನೋಟ
ಇದರಾಚೆಗೆ ಸ್ಟೋನ್ ಹಿಲ್ ಮಾರ್ಗವಾಗಿ ಹತ್ತು ಕಿ.ಮೀ.ಸಾಗಿದರೆ ನಿಶಾನೆಮೊಟ್ಟೆ ಸಿಗುತ್ತದೆ. ಇಲ್ಲಿಂದ ಸುಮಾರು ಮುನ್ನೂರು ಹೆಜ್ಜೆ ಹಾಕಿದರೆ ಸಾಕು ನಿಶಾನೆಮೊಟ್ಟೆಯ ತುತ್ತತುದಿ ತಲುಪಬಹುದು. ಬೀಸಿಬರುವ ತಂಗಾಳಿಗೆ ಮೈಯೊಡ್ಡಿ ನಿಂತು ಒಂದು ಸುತ್ತು ಕಣ್ಣು ಹಾಯಿಸಿದ್ದೇ ಆದರೆ ಅಲ್ಲಿಂದ ಕಂಡುಬರುವ ನಿಸರ್ಗದ ಸುಂದರನೋಟ ಕಣ್ಣಿಗೆ ರಸದೂಟವಾಗುತ್ತದೆ.

ಹಿಂದೆ ಕೊಡಗನ್ನು ಆಳುತ್ತಿದ್ದ ರಾಜರ ಕಾಲದಲ್ಲಿ ಶತ್ರುಗಳು ದಂಡೆತ್ತಿ ಬರುವುದನ್ನು ಅರಿಯಲು ಈ ಗುಡ್ಡದ ಮೇಲೆ ಸೈನಿಕರನ್ನಿರಿಸುತ್ತಿದ್ದರಂತೆ. ಆ ಸೈನಿಕರು ಇಲ್ಲಿ ಪಹರೆ ಕಾಯುತ್ತಿದ್ದರಂತೆ. ಈ ಗುಡ್ಡದಿಂದ ನಿಂತು ನೋಡಿದರೆ ದೂರದಿಂದ ಬರುವ ಶತ್ರು ಸೈನ್ಯ ಕಾಣುತ್ತಿತ್ತಂತೆ. ತಕ್ಷಣ ರಾಜನಿಗೆ ಸುದ್ದಿ ಮುಟ್ಟಿಸಿ ಸೈನ್ಯವನ್ನು ಸಜ್ಜುಗೊಳಿಸಿ ಶತ್ರುಗಳನ್ನು ಹಿಮ್ಮೆಟ್ಟಿಸುತ್ತಿದ್ದರಂತೆ. ಘಟ್ಟವನ್ನೇರಿ ಬರುವ ಶತ್ರು ಸೈನಿಕರ ಮೇಲೆ ‘ನಿಶಾನೆ’ ಇಡಲು ಈ ಗುಡ್ಡ ಯೋಗ್ಯವಾಗಿದ್ದರಿಂದ ‘ನಿಶಾನೆ ಮೊಟ್ಟೆ’ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತಿದೆ.
ಬೆಟ್ಟಗುಡ್ಡಗಳ ನಡುವೆ ಮಂಜು ಮುಸುಕಿನ ಆಟ
ಇಲ್ಲಿಗೆ ಟ್ರಕಿಂಗ್‌ಗೆ ಹೋಗುವವರ ಸಂಖ್ಯೆ ಜಾಸ್ತಿ. ಆದರೆ ಇಲ್ಲಿಗೆ ತೆರಳುವುದು ಅಷ್ಟು ಸುಲಭವಲ್ಲ. ಕಾರಣ ಮಳೆಗಾಲದಲ್ಲಿ ಜಿಗಣೆಗಳ ಕಾಟ ಜಾಸ್ತಿಯಿರುತ್ತದೆ. ಆದರೆ ಮಳೆಗಾಲದಲ್ಲಿ ಇಡೀ ಬೆಟ್ಟಗಳ ಮೇಲೆ ಮಂಜಿನ ಮುಸುಕು ಹಾಕುವ ಅಚ್ಚರಿಯ ನೋಟ ಗಮನಾರ್ಹವಾಗಿರುತ್ತದೆ.
ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದೇ ಅದ್ಭುತ ಅನುಭವ. ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ಛತ್ರಿ ಹಿಡಿದು ಸುರಿಯುವ ಮಳೆಯಲ್ಲಿ ನೋಡುವುದು ಖುಷಿ ಕೊಡುವ ವಿಚಾರವಾಗಿದೆ. ಮಳೆಗಾಲದ ರೌದ್ರಾವತಾರವನ್ನು ಹತ್ತಿರದಿಂದ ನೋಡಿದರೆ ಆ ಸುಂದರ ಕ್ಷಣಗಳನ್ನು ಖಂಡಿತಾ ಮರೆಯಲಾರರು. ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯಲೆಂದೇ ಇಲ್ಲಿ ತೂಗು ಸೇತುವೆಯಿದೆ.
ಧರೆಗಿಳಿದ ನಿಸರ್ಗದ ಸ್ವರ್ಗ ಮಾಂದಲಪಟ್ಟಿ
ಇದರ ಪಕ್ಕದಲ್ಲಿಯೇ ನಿಸರ್ಗ ಸೌಂದರ್ಯದ ನೆಲೆವೀಡಾದ ಮಾಂದಲಪಟ್ಟಿಯಿದೆ. ಇಲ್ಲಿಗೆ ಮಡಿಕೇರಿಯಿಂದ ಸುಮಾರು ಇಪ್ಪತ್ತು ಕಿ.ಮೀ. ದೂರವಾಗುತ್ತದೆ. ಪುಷ್ಪಗಿರಿ ವನ್ಯಧಾಮಕ್ಕೆ ಸೇರಿರುವ ಈ ತಾಣ ಅರಣ್ಯ ಇಲಾಖೆಯ ಅಧೀನದಲ್ಲಿರುವುದರಿಂದ ತೆರಳುವವರು ಅನುಮತಿ ಪಡೆಯುವುದು ಅಗತ್ಯ. ಮಡಿಕೇರಿಯಿಂದ ಅಬ್ಬಿಪಾಲ್ಸ್ ನ ಕಡಿದಾದ ರಸ್ತೆಯಲ್ಲಿ ಸಾಗುವುದೇ ಒಂದು ರೀತಿಯ ಥ್ರಿಲ್. ಇನ್ನು ಸುತ್ತ ಮುತ್ತ ಕಾಣಸಿಗುವ ಕಾಫಿ, ಏಲಕ್ಕಿ ತೋಟಗಳು. ತೊರೆ ಝರಿಗಳು.. ಒಂದನ್ನೊಂದು ಮುತ್ತಿಕ್ಕುತ್ತಾ ಸಾಲಾಗಿ ನಿಂತ ಪಶ್ಚಿಮಘಟ್ಟ ಶ್ರೇಣಿಗಳು. ಅವುಗಳ ನಡುವಿನ ಕಂದಕದಲ್ಲಿ ಬೆಳೆದು ನಿಂತ ಗಿಡಮರಗಳು.. ನೋಡುತ್ತಾ ಹೋದಂತೆ ಪ್ರಕೃತಿಯ ವಿಹಂಗಮ ನೋಟ ಕಣ್ಣಿಗೆ ರಾಚುತ್ತಿರುತ್ತದೆ.
ಒಟ್ಟಾರೆ ಮಡಿಕೇರಿಗೆ ಮಳೆಗಾಲದಲ್ಲಿ ಭೇಟಿ ನೀಡುವ ಪ್ರವಾಸಿಗರು ಹೊಸ ಅನುಭವ ಪಡೆದು ಬರುವುದರಲ್ಲಿ ಎರಡು ಮಾತಿಲ್ಲ. ಆದರೆ ಭಾರೀ ಮಳೆಗಾಲದಲ್ಲಿ ಇತ್ತ ತೆರಳುವ ಮನಸ್ಸು ಮಾಡುವುದು ಕ್ಷೇಮಕರವಲ್ಲ. ಹೀಗಾಗಿ ಮಳೆ ಕಡಿಮೆಯಿರುವಾಗ ತೆರಳಿದರೆ ಉತ್ತಮ. ಸೆಪ್ಟಂಬರ್ ನಂತರದ ದಿನಗಳು ಉತ್ತಮವಾಗಿರುತ್ತವೆ.
English summary
Weekend Travel: Here is the more information about Best Places visit in Madikeri at Monsoon season. Know more