Udupi
oi-Gururaj S

ಉಡುಪಿ, ಜುಲೈ 14; ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅನ್ನ ಭಾಗ್ಯ’ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದ್ದಾರೆ. ಆದರೆ ವಿವಿಧ ಜಿಲ್ಲೆಗಳಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಡಿ ಮೂಲಕ ಹಣ ಪಾವತಿ ಮಾಡಲು ಅವರು ಉಳಿತಾಯ ಖಾತೆ ಹೊಂದಿಲ್ಲ.
ಸರ್ಕಾರದ ಅಂತ್ಯೋದಯ (ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಸದಸ್ಯರು) ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ 5 ಕೆಜಿ ಆಹಾರಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ 10 ಕೆಜಿ ಆಹಾರಧಾನ್ಯ ಉಚಿತವಾಗಿ ವಿತರಿಸಲು ಸರ್ಕಾರ ನಿರ್ಧರಿಸಿದೆ, ಇದಕ್ಕಾಗಿ ಟೆಂಡರ್ ಕರೆದಿದೆ.
ಅನ್ನಭಾಗ್ಯ; ಕೊಪ್ಪಳದಲ್ಲಿ 20,560 ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ಇಲ್ಲ

ಈ ಪ್ರಕ್ರಿಯೆ ಪೂರ್ಣಗೊಂಡು ಬಿಡ್ದಾರರು ಆಹಾರಧಾನ್ಯವನ್ನು ಸರಬರಾಜು ಮಾಡುವವರೆಗೆ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆಜಿಗೆ ರೂ. 34ರಂತೆ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗುತ್ತದೆ.
ಅನ್ನಭಾಗ್ಯ; ಫಲಾನುಭವಿಗಳು ಅಂಚೆ ಕಚೇರಿಯಲ್ಲೂ ಖಾತೆ ತೆರೆಯಬಹುದು
ಬ್ಯಾಂಕ್ ಖಾತೆಗೆ ಹಣ; ಉಡುಪಿ ಜಿಲ್ಲಾಡಳಿತ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಸಿದ್ಧತೆ ನಡೆಸಿದೆ. ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರು ನಮೂದಾಗಿರಬೇಕು. ಕುಟುಂಬದ ಮುಖ್ಯಸ್ಥರು ನಿಧನ ಹೊಂದಿದ್ದಲ್ಲಿ, ಸಂಬಂಧಪಟ್ಟ ತಾಲೂಕಿನ ಆಹಾರ ಶಾಖೆಗೆ ಭೇಟಿ ನೀಡಿ, ಆಹಾರ ನಿರೀಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಮೃತರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಿ, ಇ-ಕೆವೈಸಿ ಮೂಲಕ ಕುಟುಂಬದ ಮುಖ್ಯಸ್ಥರನ್ನು ನಮೂದು ಮಾಡಿಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಥರು ನಮೂದಾಗಿದ್ದಲ್ಲಿ ಅಂತಹವರಿಗೆ ನಗದು ವರ್ಗಾವಣೆಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಅನ್ನಭಾಗ್ಯ; ಈ ತಪ್ಪುಗಳಿದ್ದರೆ ಡಿಬಿಟಿ ಮೂಲಕ ಹಣ ವರ್ಗಾವಣೆ ಆಗಲ್ಲ
ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲದ, ಬ್ಯಾಂಕ್ ಖಾತೆ ಹೊಂದಿರದ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದ ಪಡಿತರ ಚೀಟಿದಾರರ ಮಾಹಿತಿಯನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮೂಲಕ ನೀಡಲಾಗುತ್ತಿದೆ. ಪಡಿತರ ಚೀಟಿದಾರರು ಮಾಹಿತಿಯನ್ನು ಪಡೆದು ಕೂಡಲೇ ಬ್ಯಾಂಕ್ ಖಾತೆಯನ್ನು ತೆರೆಯುವ ಬಗ್ಗೆ/ ಚಾಲ್ತಿಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಜುಲೈ 2023 ಮಾಹೆಯಲ್ಲಿ ನಗದು ವರ್ಗಾವಣೆ ಆಗುವುದಿಲ್ಲ.
ಈ ಫಲಾನುಭವಿಗಳು 2023ರ ಜುಲೈ 20ರೊಳಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಚಾಲ್ತಿಗೊಳಿಸಿದಲ್ಲಿ ಅಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಪಡಿತರ ಚೀಟಿದಾರರು ನೇರ ನಗದು ವರ್ಗಾವಣೆ ಪ್ರಯೋಜನ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಪಡಿತರ ಚೀಟಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ಅಂಚೆ ಪೋಸ್ಟಲ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವತಿಯಿಂದ ಬ್ಯಾಂಕ್ ಖಾತೆ ತೆರೆಯುವ ಸಂಬಂಧ ಕ್ರಮ ಕೈಗೊಂಡಿದೆ.
ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಸಿಬ್ಬಂದಿಗಳು ಶಿಬಿರವನ್ನು ನಡೆಸಿ ಸದರಿ ಫಲಾನುಭವಿಗಳಿಗೆ ಆ ಕೂಡಲೇ ಬ್ಯಾಂಕ್ ಅಕೌಂಟ್ ತೆರೆದು ನೀಡುವರು. ಈ ಸಂಬಂಧ ಸದರಿ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ಓಟಿಪಿ ಸ್ವೀಕರಿಸಬೇಕಾದ ಮೊಬೈಲ್, ಆಧಾರ್ ಕಾರ್ಡ್ ಪ್ರತಿ, ತರಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ಅಂಚೆ ಇಲಾಖೆ ಈ ಸೇವೆಗಾಗಿಯೇ ‘ಡಿ ಕ್ಯೂಬ್ ‘ ಎಂಬ ಅಪ್ಲಿಕೇಶನ್ ಪರಿಚಯಿಸಿದೆ. ಜನರು ಇದರ ಸದುಪಯೋಗ ಪಡೆದುಕೊಂಡು ಉಳಿತಾಯ ಖಾತೆ ತೆರೆಯುವಂತೆ ಮನವಿ ಮಾಡಲಾಗಿದೆ. ಸರ್ಕಾರದ ಯೋಜನೆಗಳ ನೇರ ನಗದು ವರ್ಗವಣೆಗಾಗಿ ಅಂಚೆ ಉಳಿತಾಯ ಖಾತೆಗೆ ಆಧಾರ್ ಸೀಡಿಂಗ್ ಮಾಡಲಾಗುವುದು ಎಂದು ಅಂಚೆ ಇಲಾಖೆ ತಿಳಿಸಿದೆ.
English summary
Udupi district administration organized camp to open bank account for people in villages who beneficiaries of Karnataka government Anna Bhagya scheme.