Karnataka
oi-Gururaj S
ಬೆಂಗಳೂರು, ಜೂನ್ 22: ಕರ್ನಾಟಕ ಹೈಕೋರ್ಟ್ ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷ ರು ಮತ್ತು ಇಬ್ಬರು ಸದಸ್ಯರ ನೇಮಕ ಮಾಡುವ ಸಂಬಂಧ ಕೈಗೊಂಡ ಕ್ರಮಗಳ ಅಂತಿಮ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮೂರು ವಾರಗಳ ಗಡುವು ನೀಡಿದೆ.
ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಳೆ ಹಾಗೂ ನ್ಯಾ. ಎಂ. ಜಿ. ಎಸ್. ಕಮಲ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಕರ್ನಾಟಕ ಪೊಲೀಸರ ಆರೋಗ್ಯಕ್ಕಾಗಿ ‘ಅನನ್ಯ’ ಯೋಜನೆ, ವಿವರಗಳು
ಸರ್ಕಾರದ ಪರ ವಕೀಲರು, ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡುವ ಸಂಬಂಧ 2023ರ ಮಾರ್ಚ್ 31ರಂದು ಸರ್ಕಾರ ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆಯಂತೆ ಮುಂದಿನ ಕ್ರಮ ಕೈಗೊಳ್ಳಲು ಮೂರು ವಾರ ಕಾಲಾವಕಾಶ ಬೇಕೆಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅಂತಿಮವಾಗಿ 3 ವಾರಗಳ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.
ವೈರಲ್ ಆದ ತೋರಣಗಲ್ಲು ಪೊಲೀಸ್ ಅಧಿಕಾರಿಯ ರಜೆ ಪತ್ರದಲ್ಲಿ ಅಂತದೇನಿದೆ?
ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮೂವರ ಹೆಸರಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಒಬ್ಬರ ಆಯ್ಕೆ ಅಂತಿಮಗೊಳಿಸಬೇಕಿದೆ.
ಅಕ್ರಮ ಮರಳು ಗಣಿಗಾರಿಕೆ; ಹತ್ಯೆಯಾದ ಪೇದೆ ಕುಟುಂಬಕ್ಕೆ ಪರಿಹಾರ ವಿತರಣೆ
ಅದೇ ರೀತಿ ಸದಸ್ಯ ಸ್ಥಾನಕ್ಕೆ 19 ಅರ್ಜಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಆದರೆ, ರಾಜ್ಯ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಆಗಿದ್ದರಿಂದ ನೇಮಕಾತಿ ಪ್ರಕ್ರಿಯೆಗೆ ಒಂದಿಷ್ಟು ಕಾಲಾವಕಾಶಬೇಕು ಎಂದು ರಾಜ್ಯ ಸರ್ಕಾರ 2023ರ ಮಾ.31ರಂದು ಹೈಕೋರ್ಟ್ಗೆ ಕೇಳಿಕೊಂಡಿತ್ತು. ಅದರಂತೆ, ಹೈಕೋರ್ಟ್ ಕಾಲಾವಕಾಶ ನೀಡಿತ್ತು.
ಪ್ರಕರಣದ ಹಿನ್ನೆಲೆ: ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಅಧಿಕಾರಿಗಳ ವಿರುದ್ಧ ದೂರು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚಿಸಲಾಗಿದೆ. ಆದರೆ, ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡುತ್ತಿಲ್ಲ.
ಪ್ರಾಧಿಕಾರಕ್ಕೆ ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ನಿರ್ಲಕ್ಷ ವಹಿಸುತ್ತಿದೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸಬೇಕಿದೆ. ಅಧ್ಯಕ್ಷ ಹುದ್ದೆಯು 2022ರ ಆಗಸ್ಟ್ 11 ರಿಂದ ಖಾಲಿ ಉಳಿದಿದೆ.
ಒಂದು ಸದಸ್ಯ ಸ್ಥಾನ 2020ರ ಮೇ 8 ರಿಂದ ಮತ್ತು ಮತ್ತೊಂದು ಸದಸ್ಯ ಸ್ಥಾನ 2022ರ ಡಿ. 28 ರಿಂದ ಖಾಲಿಯಿದೆ. ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸದ ಕಾರಣ ಪ್ರಾಧಿಕಾರ ನಿಷ್ಕ್ರಿಯಯವಾಗಿದೆ. ಕೂಡಲೇ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
English summary
Karnataka High Court fixed 3 weeks dead line to appoint president and two members for the Karnataka State Police Complaints Authority.