Karnataka
oi-Reshma P

ಹುಬ್ಬಳ್ಳಿ, ಜೂನ್ 21: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ ಪಡೆಯುವುದಕ್ಕಾಗಿ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಕಾಂಗ್ರೆಸ್, ಇದೀಗ ಕೇಂದ್ರ ಸರಕಾರದ ಮೇಲೆ ಗೂಬೆಕೂರಿಸುವ ಯತ್ನಕ್ಕೆ ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಚುನಾವಣೆ ವೇಳೆ ಘೋಷಿಸಿದ ಐದು ಗ್ಯಾರಂಟಿ ಗಳಿಗೆ ದಿನಕ್ಕೊಂದು ಷರತ್ತು ವಿಧಿಸುವ ಮೂಲಕ ಜನರಿಗೆ ಮೋಸ ಮಾಡುವ ಕೆಲಸಕ್ಕೆ ಮುಂದಾಗಿದೆ ಎಂದು ಆರೋಪಿಸಿದ ಅವರು, ಕೇಂದ್ರ ಸರಕಾರ ಹೆಚ್ಚುರಿಯಾಗಿ ಅಕ್ಕಿ ನೀಡಲು ಸಾಧ್ಯವಿಲ್ಲ ಇಂತಿಷ್ಟು ಅಕ್ಕಿ ಸಂಗ್ರಹ ಇರಬೇಕೆಂಬ ನಿಯಮ ಇದೆ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್, ಇದೀಗ ಕೇಂದ್ರ ಸರಕಾರ ಅಕ್ಕಿ ಕೊಡುತ್ತಿಲ್ಲ ಎಂಬ ಕುಂಟು ನೆಪ ತೆಗೆದಿದ್ದು ಇದು ಜನರಿಗೆ ಮಾಡುವ ಮೋಸವಾಗಿದೆ. ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಪ್ರತಿಯೊಬ್ಬರಿಗೆ 5 ಕೆಜಿಯಂತೆ ಅಕ್ಕಿ ನೀಡುತ್ತಿದ್ದು ಕರ್ನಾಟಕಕ್ಕೂ ಅದೇ ಮಾದರಿಯಲ್ಲಿ ಅಕ್ಕಿ ದೊರೆಯುತ್ತಿದೆ ಆದರೆ ಕಾಂಗ್ರೆಸ್ ಘೋಷಿಸಿದಂತೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ನೀಡುವುದು ಆ ಪಕ್ಷದ ಜವಾಬ್ದಾರಿಯಾಗಿದೆ ಎಂದರು.
ಹೆಚ್ಚುವರಿ ಐದು ಕೆಜಿಯನ್ನು ಘೋಷಣೆ ಮಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಕೇಳಿದ್ದರೆ ಅಥವಾ ಚುನಾವಣೆ ಸಂದರ್ಭದಲ್ಲಿ ಜನರಿಗೆ 10 ಕೆಜಿ ಅಕ್ಕಿಯ ನೀಡಿಕೆ ಘೋಷಣೆ ವೇಳೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 5 ಕೆ.ಜಿ ನೀಡಿದರೆ ಅಕ್ಕಿ ನೀಡುವುದಾಗಿ ಹೇಳಿದ್ದರೆ ಎಂದು ಪ್ರಶ್ನಿಸಿದರು.
ಗ್ಯಾರೆಂಟಿ ಯೋಜನೆಗಳ ಜಾರಿಗೆ ಬಳಕೆಯಾಗುವ ಸರ್ವರ್ ನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡುತ್ತಿದೆ ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಇದೊಂದು ಅತ್ಯಂತ ಹಾಸ್ಯಾಸ್ಪದ ಹೇಳಿಕೆಯಾಗಿದೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮುನ್ನ ಸಚಿವರು ಯೋಚಿಸಬೇಕಾಗಿತ್ತು.
ಸಚಿವ ಜಾರಕಿಹೊಳಿಯವರು ಸರ್ವರ್ ಹ್ಯಾಕ್ ಆಗಿದೆ ಎಂಬ ಹೇಳಿಕೆ ಸಂದರ್ಭದಲ್ಲಿ ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡಿದ ಮಾದರಿಯಲ್ಲಿ ಸರ್ವರ್ ಹ್ಯಾಕ್ ಮಾಡಲಾಗಿದೆ ಎಂದಿದ್ದಾರೆ ಅದೇ ಇವಿಎಂ ಯಂತ್ರಗಳ ಸಹಾಯದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಪಡೆದು ಅಧಿಕಾರ ಕೇಳಿದೆ ಎಂಬುದನ್ನು ಅವರು ಮರೆತಂತಿದೆ ಎಂದು ವ್ಯಂಗ್ಯವಾಡಿದರು.
ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರಕಾರದ ವಿರುದ್ಧ ಪೋಸ್ಟ್ ಹಾಕುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರ ಆದೇಶದ ಬಗ್ಗೆ ಪ್ರತಿಕ್ರಿಯಿಸಿ , ಅದೇ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ಹಾಕುವಾಗ ಇದು ನೆನಪಾಗಲಿಲ್ಲವೇ ಮುಖ್ಯಮಂತ್ರಿಯವರೇ, ಸರ್ವಾಧಿಕಾರ ಧೋರಣೆ ಸರಿಯಲ್ಲ ಜನರು ನಿಮಗೆ ನಿಮಗೆ ಅಧಿಕಾರ ನೀಡಿದ್ದು ವಿನಮ್ರತೆಯಿಂದ ಆಡಳಿತ ನಡೆಸುವ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ರಾಜ್ಯ ಸರಕಾರ ಸಾರಿಗೆ ಸಂಸ್ಥೆ ಗಳ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರವಾಸಕ್ಕೆ ಅವಕಾಶ ನೀಡಿದ್ದು ಬಸ್ಸುಗಳ ಸಂಖ್ಯೆ ಹೆಚ್ಚಳ ಮಾಡದೆ ಇರುವುದರಿಂದ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುವಂತಿದ್ದು ಇದರಿಂದ ಅನೇಕ ಅಪಘಾತ ಅವಘಡಗಳು ನಡೆಯುತ್ತಿವೆ ಎಂದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನ ಕೊಪ್ಪ ಅವರು ಕಾಂಗ್ರೆಸ್ ಸೇರುವುದಿಲ್ಲ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಾಗಿ ಬಂದಿರುವ ಅವರು ಪಕ್ಷದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.
English summary
Union Minister Pralhad Joshi said that Rice Issue Congress Trying To Bully Central Government
Story first published: Wednesday, June 21, 2023, 15:13 [IST]