Karnataka Monsoon: ಅಂತೂ ಇಂತು ಉತ್ತರ ಒಳನಾಡಿಗೆ ಸಿಹಿ ಸುದ್ದಿ, ರೈತರಲ್ಲಿ ಮಂದಹಾಸ, 10 ಜಿಲ್ಲೆಗೆ ‘ಹಳದಿ ಎಚ್ಚರಿಕೆ’ | Karnataka Rain: IMD Predicts Heavy Rain Alert For Uttar Karnataka, 10 Districts got Yellow alert

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 21: ಕಳೆದ ಸುಮಾರು ಐದಾರು ತಿಂಗಳುಗಳಿಂದ ಒಣಹವೆಯನ್ನೇ ಕಂಡಿದ್ದ ಹಾಗೂ ಮುಂಗಾರು ಮಳೆ ಆರಂಭವಾದರೂ ಹೇಳಿಕೊಳ್ಳುವಂತಹ ಒಂದೂ ಮಳೆಯನ್ನೂ ಕಾಣದ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮುನ್ಸೂಚನೆ ಮೂಲಕ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ.

ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಾತ್ರವೇ ಅಬ್ಬರಿಸುತ್ತಿದ್ದ ಮಳೆರಾಯ ಇದೀಗ ಉತ್ತರ ಒಳನಾಡಿನತ್ತ ಮುಖ ಮಾಡಿದ್ದಾನೆ. ಐಎಂಡಿ ರಾಜ್ಯಕ್ಕೆ ಮುಂದಿನ ಐದು ದಿನಗಳ (ಜೂನ್ 26ರವರೆಗೆ) ಮಳೆ ಮುನ್ಸೂಚನೆ ನೀಡಿದೆ. ಇದರಲ್ಲಿ ಕೊನೆಯ ಎರಡು ದಿನ ಅಂದರೆ ಜೂನ್ 25 ಮತ್ತು ಜೂನ್ 26ರಂದು ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಿಗೂ ಅತ್ಯಧಿಕ ಭಾರೀ ಮಳೆಯ ನಿರೀಕ್ಷೆ ಇದೆ.

Karnataka Rain: IMD Predicts Heavy Rain Alert For Uttar Karnataka, 10 Districts got Yellow alert

ಆ ಎರಡು ದಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಪೈಕಿ ಬೀದರ್ ಜಿಲ್ಲೆಯಲ್ಲಿ ಅಷ್ಟಾಗಿ ಮಳೆ ಬಾರದೇ ಅಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ.

ಇನ್ನೂ ಕರ್ನಾಟಕ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹ ಅದೇ ಎರಡು ದಿನ (ಜೂನ್ 25 & 26ರಂದು) ವ್ಯಾಪಕ ಮಳೆ ಸುರಿಯಲಿದೆ. ಹೀಗಾಗಿ ಈ ಮೂರು ಜಿಲ್ಲೆಗಳು ಯೆಲ್ಲೋ ಅಲರ್ಟ್ ಪಡೆದಿವೆ. ಉಳಿದ ದಿನಗಳಲ್ಲಿ ಸಹ ಇಲ್ಲಿ ಸಾಧಾರಣ ಮಳೆ ಆಗಲಿದೆ.

ದಕ್ಷಿಣ ಒಳನಾಡಿನ 4 ಜಿಲ್ಲೆಗೆ ಭಾರಿ ಮಳೆ

ರಾಜ್ಯದಲ್ಲಿ ಮುಂದಿನ ಐದು ದಿನವು ಮುಂಗಾರು ಚುರುಕಾಗಿರಲಿದ್ದು, ಉತ್ತರ ಒಳನಾಡಿಗೆ ತುಸು ಹೆಚ್ಚೇ ಮಳೆ ಬೀಳಲಿದೆ. ದಕ್ಷಿಣ ಒಳನಾಡಿನಲ್ಲಿ ನಾಲ್ಕು ಜಿಲ್ಲೆಗಳಾದ ಚಿತ್ರದುರ್ಗ, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳ ಹಲವೆಡೆ ಮಾತ್ರ ಧಾರಾಕಾರ ಮಳೆ ಬೀಳಲಿದೆ. ಹೀಗಾಗಿ ಇವುಗಳಿಗೆ ನಾಳೆ ಜೂನ್ 22ರಂದು ಒಂದು ದಿನ ಮಾತ್ರ ಹಳದಿ ಎಚ್ಚರಿಕೆ ನೀಡಲಾಗಿದೆ.

Karnataka Rain: IMD Predicts Heavy Rain Alert For Uttar Karnataka, 10 Districts got Yellow alert

ಇನ್ನುಳಿದಂತೆ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು, ಕೋಲಾರ, ರಾಮನಗರ, ಹಾಸನ, ವಿಜಯನಗರ, ಸೇರಿದಂತೆ ಬೆರೆಲ್ಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಜೂನ್ 26ರವರೆಗೂ ಮುಂದುವರಿಯಲಿದೆ.

ಈಗಾಗಲೇ ದಕ್ಷಿಣ ಒಳನಾಡು ಸೇರಿದಂತೆ ಮಲೆನಾಡಿನ ಒಂದಷ್ಟು ಕಡೆಗಳಲ್ಲಿ ಬಿತ್ತನೆಗೆ ಅಗತ್ಯದಷ್ಟು ಮಳೆ ದಾಖಲಾಗಿದೆ. ಈ ಕಾರಣದಿಂದ ಇಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಆದರೆ ಉತ್ತರ ಒಳನಾಡಿನಲ್ಲಿ ಯಾವೊಂದು ಜಿಲ್ಲೆಯ ಭಾಗದಲ್ಲೂ ಹೇಳಿಕೊಳ್ಳುವಂತಹ ಮಳೆ ಇದುವರೆಗೂ ಆಗಿಲ್ಲ. ಹೀಗಾಗಿ ಮುಗಿಲು ನೋಡುತ್ತಾ ಮಳೆಯ ನಿರೀಕ್ಷೆಯಲ್ಲಿರುವ ಆ ಭಾಗದ ಜನರ ಮೊಗದಲ್ಲಿ ಐಎಂಡಿ ಮುನ್ಸೂಚನೆಯಿಂದ ಮಂದಹಾಸ ಮೂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬೇಸಾಯ ಕೆಲಸಗಳು ಆರಂಭಗೊಳ್ಳಲಿವೆ.

ಕಳೆದ 24 ಗಂಟೆಯ ಮಳೆ-ತಾಪಮಾನ ದಾಖಲಾತಿ

ಕಳೆದ 24 ಗಂಟೆಯಲ್ಲಿ ಚಿತ್ರದುರ್ಗದಲ್ಲಿ 7 ಸೆಂಟಿ ಮೀಟರ್ ಮಳೆ ಬಿದ್ದಿದೆ. ತುಮಕೂರು, ಉಡುಪಿ, ಚಾಮರಾಜನಗರ, ಶಿವಮೊಗ್ಗ, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮದ್ದೂರು, ಮಂಡ್ಯ ಕಡೆಗಳಲ್ಲೂ ಉತ್ತಮ ಮಳೆ ದಾಖಲಾಗಿದೆ.

ರಾಜ್ಯದ ಗರಿಷ್ಠ ತಾಪಮಾನ 40 ಡಿಗ್ರೆ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ. ರಾಯಚೂರಿನಲ್ಲಿ 38 ಮತ್ತು ಕೊಪ್ಪಳದಲ್ಲಿ 36.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನೂ ಕನಿಷ್ಠ ಉಷ್ಣಾಂಶ ಬಾಗಲಕೋಟೆ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.

English summary

Karnataka monsoon rain: IMD predicts heavy rain alert for uttar Karnataka next 5 days, last tow days few districts got yellow alert.

Story first published: Wednesday, June 21, 2023, 16:13 [IST]

Source link