Bengaluru
oi-Shankrappa Parangi

ಬೆಂಗಳೂರು, ಜೂನ್ 21: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿಯು ಸಹ ಜಿಟಿ ಜಿಟಿ ಮಳೆ ಮುಂದುವರಿಯಿತು. ಮುಂಗಾರು ಚುರುಕು ಪಡೆದ ಪರಿಣಾಮ ಕಳೆದ ಎರಡು ದಿನದಿಂದ ನಗರದಲ್ಲಿ ಮಳೆಗಾಲ ಛಾಯೆ ಆವರಿಸಿದೆ. ಮುಂದಿನ ಕೆಲವು ದಿನಗಳು ವಾತಾವರಣ ಹೀಗೆಯೇ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರವು ಸಹ ಇಡಿ ದಿನ ಮೋಡ ಕವಿದ ಮತ್ತು ತಂಪು ವಾತಾವರಣವೇ ನಿರ್ಮಾಣವಾಗಿತ್ತು. ರಾತ್ರಿಯಾಗುತ್ತಿದ್ದಂತೆ ತಂತುರು ರೂಪದಲ್ಲಿ ಆರಂಭವಾದ ಮಳೆ ಎರಡು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಕೆಲವೆಡೆ ಇಡಿ ರಾತ್ರಿ ಜಿಟಿ ಜಿಟಿ ಮಳೆ ಮುಂದುವರಿಯಿತು. ಇದರ ಹೊರತು ಎಲ್ಲಿಯೋ ಹೇಳಿಕೊಳ್ಳುವಷ್ಟು ಜೋರು ಮಳೆ ಬಿದ್ದಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC).

ಕೇಂಗೇರಿಯಲ್ಲಿ ಅಧಿಕ ಮಳೆ 27 ಮಿಲಿ ಮೀಟರ್ ಮಳೆ ಬಿದ್ದರೆ, ದಕ್ಷಿಣ ವಲಯದ ಕೋರಮಂಗಲದಲ್ಲಿ 25.5 ಮಿ.ಮೀ, ಮಳೆ ದಾಖಲಾಗಿದೆ. ಉಳಿದಂತೆ ಕೆಂಗೇರಿ (2) 18.5 ಮಿ.ಮೀ, ವಿದ್ಯಾಪೀಠ 19ಮಿ.ಮೀ, ಎಚ್.ಗೊಲ್ಲಹಳ್ಳಿ 18.5ಮಿ.ಮೀ, ವನ್ನಾರಪೇಟೆ 11.5ಮಿ.ಮೀ, ಹಂಪಿನಗರ 11.5ಮಿ.ಮೀ, ಉತ್ತರಹಳ್ಳಿ 11.5ಮಿ.ಮೀ, ಪಟ್ಟಾಭಿರಾಮನಗರ 11.5ಮಿ.ಮೀ ಮಳೆ ದಾಖಲಾಗಿದೆ.
ಕೆಂಗೇರಿ ವ್ಯಾಪ್ತಿಯಲ್ಲಿ ಮಳೆ ಹೆಚ್ಚು ಕಾಲ ಸುರಿದ ಪರಿಣಾಮ ಆ ಭಾಗದ ಮುಖ್ಯ ರಸ್ತೆಗಳು ಮತ್ತು ಬಡಾವಣೆಗಳ ಉಪ ರಸ್ತೆಗಳ ಮೇಲೆ ಅಲ್ಲಲ್ಲಿ ಮಳೆನೀರು ನಿಂತದ್ದು ಕಂಡು ಬಂತು. ನಾಯಂಡಹಳ್ಳಿ ಜಂಕ್ಷನ, ಆರ್‌ಆರ್ ನಗರ ಗೇಟ್, ಜ್ಞಾನಭಾರತಿ, ನಾಗರಭಾವಿ, ಕೋರಮಂಗಲ, ಡೈರಿ ವೃತ್ತ, ನಿಮ್ಹಾನ್ಸ್, ಚಾಮರಾಜಪೇಟೆ, ಲಾಲ್ ಬಾಗ್ ಸೇರಿದಂತೆ ಕೆಲವೆಡೆ ಸಂಚಾರ ದಟ್ಟಣೆ ಕಂಡು ಬಂತು.
ನಗರದಲ್ಲಿ 4-5 ದಿನ ಮಳೆ-ತಂಪು ವಾತಾವರಣ
ಇದರೊಂದಿಗೆ ವಿಜಯನಗರ, ಬಸವೇಶ್ವರ ನಗರ, ಹೆಬ್ಬಾಳ, ಬಸವನಗುಡಿ, ಸ್ಯಾಟ್‌ಲೈಟ್, ಮೈಸೂರು ರಸ್ತೆ, ಅಗ್ರಹಾರ ದಾಸರಹಳ್ಳಿ, ಮೆಜೆಸ್ಟಿಕ್ ಸುತ್ತಮುತ್ತ ತುಂತುರು ಮಳೆ ಸುರಿಯಿತು.

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಮುಂದಿನ ಐದು ದಿನ ಬೆಂಗಳೂರು ನಗರದಲ್ಲಿ ಹೀಗೆ ಮಳೆ ಮುಂದುವರಿಯಲಿದೆ. ದಿನಪೂರ್ತಿ ಬಿಸಿಲಿನ ದರ್ಶನ ಅಪರೂಪ ಎನ್ನಲಾಗಿದೆ. ತಂಪು ವಾತಾವರಣ ಜೊತೆಗೆ ಆಗಾಗ ಒಂದೆರಡು ಕಡೆ ವ್ಯಾಪಕ ಮಳೆ ಬರಲಿದೆ, ಇನ್ನೂ ಹಲವೆಡೆ ಜಿಟಿ ಜಿಟಿ ಮಳೆ ಹಿಡಿದುಕೊಳ್ಳಲಿದೆ ಎಂದು ತಿಳಿಸಿದೆ.
ಕರ್ನಾಟಕ ಮಳೆ ಮುನ್ಸೂಚನೆ
ಕರ್ನಾಟಕ ರಾಜ್ಯಾದ್ಯಂತ ಮುಂದಿನ ಐದು ದಿನವು ಅಬ್ಬರಿಸಲಿದೆ. ಈ ಪೈಕಿ ಮೊದಲ ಮೂರು ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ವ್ಯಾಪಕ ಮಳೆ ಆಗುವ ಸಂಭವವಿದೆ. ಮೂರು ದಿನಗಳ ನಂತರ ಉತ್ತರ ಒಳನಾಡಿನಾದ್ಯಂತ ಧಾರಾಕಾರ ಮಳೆ ಅಬ್ಬರಿಸಲಿದೆ.
ಈ ಒಳನಾಡಿನ ಭಾಗದಲ್ಲಿ ಹತ್ತು ಜಿಲ್ಲೆಗಳಿಗೆ ಮತ್ತು ಕರಾವಳಿಯ ಮೂರು ಜಿಲ್ಲೆಗಳಿಗೆ ಜೂನ್ 25 ಮತ್ತು ಜೂನ್ 26 ರಂದು ಹಳದಿ ಎಚ್ಚರಿಕೆ ನೀಡಲಾಗಿದೆ. ನಾಳೆ ಗುರುವಾರ ಒಂದು ದಿನ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ಐಎಂಡಿ ನೀಡಿದೆ.
English summary
Bengaluru city has recorded light Rain at wednesday night, Next 4-5 days moderate rain expect, Says IMD forecast report.
Story first published: Wednesday, June 21, 2023, 22:23 [IST]