Karnataka
oi-Reshma P
ಬೆಂಗಳೂರು,ಜೂನ್ 21: ಕರುನಾಡಿನಲ್ಲಿ ಗ್ಯಾರಂಟಿ ಜಾರಿಗೆ ಕಾಂಗ್ರೆಸ್ ಸರ್ಕಾರ ಸರ್ಕಸ್ ನಡೆಸುತ್ತಿದೆ. ಈ ಹೊತ್ತಲ್ಲೇ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಸಾಕಷ್ಟು ಸದ್ದು ಮಾಡಿದೆ. ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಅಕ್ಕಿ ರಾಜಕೀಯ ತಾರಕಕ್ಕೇರಿದೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಿದ್ದ 5 ಕೆ.ಜಿ ಅಕ್ಕಿಯನ್ನ ತಡೆ ಹಿಡಿದಿದೆ ಅಂತಾ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಪಕ್ಷ ವು ಚುನಾವಣಾ ಪೂರ್ವದಲ್ಲಿ ಸಾಕಷ್ಟು ಭರವಸೆ ಗಳನ್ನು ನೀಡಿತ್ತು.
ಅನ್ನಭಾಗ್ಯ ಯೋಜನೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಂಘರ್ಷ ಶುರುವಾಗಿದೆ. ರೈಸ್ ಖರೀದಿಗೆ ಸಿದ್ದರಾಮಯ್ಯ ಸರ್ಕಾರ ಸರ್ಕಸ್ ಕೂಡಾ ಮಾಡುತ್ತಿದೆ. ಅನ್ನಭಾಗ್ಯದ ಅಕ್ಕಿ ವಿಚಾರವಾಗಿ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರ ರೈಸ್ ವಾಕ್ಸಮರ ಜೋರಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಅಡಿ ರಾಜ್ಯದ ಪ್ರತಿ ಪ್ರಜೆಗೂ ತಲಾ ಐದು ಕೆಜಿ ಕೊಡ್ತಿದೆ
ಇದರ ಜೊತೆ ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸಲು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು ಇದರ ಬಗ್ಗೆ ಕೇಂದ್ರ ಆಹಾರ ನಿಗಮಕ್ಕೆ ಪತ್ರ ಬರೆದು ಹೆಚ್ಚುವರಿ ಅಕ್ಕಿ ಕೊಡಲು ಮನವಿ ಮಾಡಿದೆ
ಕೇಂದ್ರ ಆಹಾರ ನಿಗಮದಿಂದ ಪ್ರತಿ ರಾಜ್ಯ ಮೂರು ಸಾವಿರ ಟನ್ ಅಕ್ಕಿಯನ್ನು ಹರಾಜಿನಲ್ಲಿ ಕೊಳ್ಳಬಹುದು. ಆದರೆ, ರಾಜ್ಯ ಏಕಾಏಕಿ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೇಳಿದ ಕೂಡಲೇ ಅಧಿಕಾರಿಗಳೂ ಸಹಾ ಆತುರಕ್ಕೆ ಬಿದ್ದು ಕೊಡುವುದಾಗಿ ಪತ್ರ ಬರೆದರು. ಆದರೆ ನಂತರ ಅಕ್ಕಿಯ ಕೊರತೆ ಆಗುವುದನ್ನು ಅರಿತು ಕೇಂದ್ರ ಅಕ್ಕಿ ಕೊಡಲು ಆಗುವುದಿಲ್ಲ ಎಂದು ಪತ್ರ ಬರೆದಿದೆ. ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಯಿತು. ಸದ್ಯಕ್ಕೆ ಲೋಕಸಭಾ ಚುನಾವಣೆಗೆ ಕಾಲ ಸನ್ನಿಹಿತ ಆಗಿರೋ ಕಾರಣ ಎರಡೂ ಪಕ್ಷಗಳು ಅಕ್ಕಿಯ ವಿಚಾರದಲ್ಲಿ ರಾಜಕಾರಣ ಕ್ಕೆ ಮುಂದಾಗಿರೋದು ಸತ್ಯವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಘೋಷಣೆ ಮಾಡುವಾಗ ಅದರ ಲಭ್ಯತೆ, ಜಾರಿ ಮಾಡುವಾಗ ಆಗಬಹುದಾದ ಸಾಧಕ ಬಾಧಕ ಗಳ ಬಗ್ಗೆ ಯೋಚನೆ ಮಾಡದೇ ಇರೋದೇ ಈ ಎಡವಟ್ಟಿಗೆ ಕಾರಣ ಅನ್ನೋದು ರಾಜಕೀಯ ತಜ್ಞರ, ಹಾಗೂ ಆರ್ಥಿಕ ತಜ್ಞರ ಅಭಿಪ್ರಾಯವಾಗಿದ್ದು, ಅದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ದಲ್ಲಿ ಎರಡು ವಿಭಿನ್ನ ಪಕ್ಷಗಳು ಇದ್ದಾಗ ಇಂತಹಾ ರಾಜಕೀಯ ಸಂಘರ್ಷ ಸಾಮಾನ್ಯ ಎಂಬಂತಾಗಿದೆ.
ಕೇಂದ್ರದ ಒಪ್ಪಿಗೆ ಆಧಾರದಲ್ಲಿ ಜುಲೈ 1ರಿಂದ 10 ಕೆಜಿ ಅಕ್ಕಿಯನ್ನ ಕೊಡುತ್ತೇವೆ ಎಂದಿದ್ದೆವು. ಇದಾದ ಬಳಿಕ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಕ್ಕೆ ಭಾರತೀಯ ಆಹಾರ ನಿಗಮ (FCI) ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟಪಡಿಸಿತ್ತು. ಅಕ್ಕಿ ಮತ್ತು ಗೋಧಿ ಬೆಲೆ ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರವು ಒಎಂಎಸ್ಎಸ್ ಮೂಲಕ ಅವುಗಳನ್ನು ಮಾರಾಟ ಮಾಡಲಿದೆ. ಹೀಗೆ ಮಾರಾಟವಾದ ಸ್ಟಾಕ್ಗಳು ಸಾರ್ವಜನಿಕರಿಗೆ ವೇಗವಾಗಿ ತಲುಪಲು ಸಾಧ್ಯವಾಗಲಿದೆ. 2023-24ರ ಹಣಕಾಸು ವರ್ಷದ ಮೊದಲ ಹರಾಜು ಜೂನ್ 28 ರಂದು ನಡೆಯಲಿದೆ ಎಂದು ಎಫ್ಸಿಐ ಹೇಳಿತ್ತು.
ಇತ್ತ ಬಿಜೆಪಿ ರಾಜ್ಯದಲ್ಲಿ ಸೋಲಿನ ಹತಾಶೆಯಿಂದ ರಾಜ್ಯಕ್ಕೆ ಬರಬೇಕಾದ ಅಕ್ಕಿಗೆ ಬ್ರೇಕ್ ಹಾಕಿದೆ ಎಂದು ಸರ್ಕಾರದ ಸಚಿವರು ಆರೋಪಿಸಿದ್ದು, ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೂ ನಾವು ಜನರಿಗೆ ನೀಡಿದ ಮಾತನ್ನ ಉಳಿಸಿಕೊಳ್ಳುತ್ತೇವೆ, 10 ಕೆ ಜಿ ಅಕ್ಕಿಯನ್ನ ಕೊಡುವುದಾಗಿ ಹೇಳಿದ್ದು, ನೆರೆಹೊರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಅನ್ನಭಾಗ್ಯ ಯೋಜನೆಗೆ ಛತ್ತೀಸ್ ಗಡ ರಾಜ್ಯದಲ್ಲಿ 1.50 ಲಕ್ಷ ಮೆ. ಟನ್ ಅಕ್ಕಿ ಲಭ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಜೊತೆಗೆ ತೆಲಂಗಾಣದ ಮುಖ್ಯಮಂತ್ರಿ ಹಾಗೂ ಆಂಧ್ರಪ್ರದೇಶದವರೊಂದಿಗೆ ಖುದ್ದಾಗಿ ಮಾತನಾಡಿದ್ದೇನೆ ಎಂದು ತಿಳಿಸಿದರು.
ಇನ್ನು ಈ ಕುರಿತು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಮಾತನಾಡಿದ್ದು, ರಾಜ್ಯಕ್ಕೆ ಹೆಚ್ಚುವರಿ ಪೂರೈಕೆ ಮಾಡಲು ಯಾಕೆ ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮುಕ್ತ ಮಾರುಕಟ್ಟಯಲ್ಲಿ ಧಾನ್ಯಗಳ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಲು ಮತ್ತು ಕೈಗೆಟುಕುವ ದರದಲ್ಲಿ ಇರುವಂತೆ ಮಾಡಲು, ಕೇಂದ್ರ ಸರ್ಕಾರ ತನ್ನ ದಾಸ್ತಾನುಗಳಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಅಕ್ಕಿ ಕೊಡಲು ನಿರಾಕರಿಸಿದೆ ಎಂದು ತಿಳಿಸಿದ್ದಾರೆ.
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಷನ್ ಮತ್ತು ನಾಫೆಡ್ನಂತಹ ಕೇಂದ್ರೀಯ ಸಂಸ್ಥೆಗಳಿಂದ ಖರೀದಿಸಲು ಸಿದ್ಧ ಎಂದು ಕರ್ನಾಟಕ ಹೇಳಿದ್ದರೂ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ. ಇತ್ತೀಚೆಗೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಅಡಿಯಲ್ಲಿ ಕೇಂದ್ರದಿಂದ ಅಕ್ಕಿ ಮತ್ತು ಗೋಧಿ ಮಾರಾಟವನ್ನು ನಿಲ್ಲಿಸಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಅಕ್ಕಿಗೆ ಬೇಡಿಕೆಗಳನ್ನು ಸ್ವೀಕರಿಸಿದ್ದೇನೆ. ವಿವಿಧ ರಾಜ್ಯಗಳು ದೊಡ್ಡ ಪ್ರಮಾಣದಲ್ಲಿ ಅಕ್ಕಿಗೆ ಬೇಡಿಕೆ ಇಡುತ್ತವೆ. ಆದರೆ ನಾವು ಎಲ್ಲರಿಗೂ ಅಕ್ಕಿ ನೀಡಲು ನಿರಾಕರಿಸಿದ್ದೇವೆ. ಸರ್ಕಾರದ ಬಳಿ ಇರುವ ಅಕ್ಕಿ ದಾಸ್ತಾನನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ದೇಶದ ಯಾವುದೇ ಭಾಗದಲ್ಲಿ ಅಕ್ಕಿ ಬೆಲೆ ಏರಿಕೆಯಾಗುವುದಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ದೇಶದ 140 ಕೋಟಿ ಜನರೂ ಅಕ್ಕಿ ಖರೀದಿಸಬೇಕಾಗಿದೆ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಒಟ್ನಾಲಿ ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರಗಳನ್ನ ಗೆಲ್ಲಲ್ಲು ತಯಾರಿ ನಡೆಸಿರುವ ಕಾಂಗ್ರೆಸ್ ಇದೀಗ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಐದು ಗ್ಯಾರಂಟಿಗಳ ಗೊಂದಲ ಹಾಗೂ ಜಾರಿ ತಡವಾಗುತ್ತಿರುವ ಕುರಿತು ರಾಜ್ಯ ಬಿಜೆಪಿ ಟೀಕಾಪ್ರಹಾರ ನಡೆಸಿದ್ದು, ಅಕ್ಕಿ ವಿಚಾರದಲ್ಲಿ ಕರ್ನಾಟಕಕ್ಕೆ ಮಾತ್ರ ಈ ರೀತಿ ಅನ್ಯಾಯವಾಗುತ್ತಿದೆ ಎಂಬ ಆರೋಪಕ್ಕೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸ್ಪಷ್ಟಪಡಿಸಬೇಕಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಕೇಂದ್ರದ ಯೋಜನಗಳಿಗೆ ಬ್ರೇಕ್ ಎಂದು ಜೆ ಪಿ ನಡ್ಡಾ ಹೇಳಿಕೆಗೆ ಕಾಂಗ್ರೆಸ್ ನಾಯಕರು ವಿರೋಧವನ್ನ ವ್ಯಕ್ತಪಡಿಸಿದ್ದು, ಕರ್ನಾಟಕಕ್ಕೆ ಮಾತ್ರ ಅಕ್ಕಿ ನೀಡಲು ಸಾಧ್ಯವಿಲ್ಲವಾ ಅಥವಾ ಉತ್ತರ ಪ್ರದೇಶ, ಮಧ್ಯಪ್ರದೇಶ, ಮತ್ತು ಆಂಧ್ರಪ್ರದೇಶ, ತಮಿಳುನಾಡಿಗೂ ಅಕ್ಕಿಯನ್ನ ನೀಡಿಲ್ವಾ ಎಂಬುದನ್ನ ಭಾರತೀಯ ಆಹಾರ ನಿಗಮ (FCI) ಸ್ಪಷ್ಟಪಡಿಸಬೇಕಿದೆ.
English summary
Is the Central Govt Really Doing Politics in Supply of Rice to State? What is Karnataka Rice Issue.
Story first published: Wednesday, June 21, 2023, 17:00 [IST]