Karnataka
oi-Reshma P
ಮಂಗಳೂರು, ಜೂನ್ 21: ಕೇಂದ್ರದಿಂದ ವೆಬ್ ಸೈಟ್ ಹ್ಯಾಕ್ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ನೃತ್ಯ ಮಾಡಲು ಬಾರದವ ಅಂಗಳ ಡೊಂಕು ಅಂದನಂತೆ ಈ ಗಾದೆಯಂತೆ ಕಾಂಗ್ರೆಸ್ ನ ಪರಿಸ್ಥಿತಿ ಆಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟಿ ಭಾಗ್ಯ ಘೋಷಿಸಿ ಅದನ್ನ ಕೊಡಲು ವ್ಯವಸ್ಥೆ ಆಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸೋ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಹತ್ತು ವರ್ಷಗಳಲ್ಲಿ ಹತ್ತು ಕೆ.ಜಿ.ಅಕ್ಕಿ ಕೊಡೋ ಕೆಲಸ ಮಾಡಿದೆ, ಈ ಹಿಂದೆ ಸಿದ್ದರಾಮಯ್ಯ ಇದ್ದಾಗಲೂ 27 ರೂ. ಕೇಂದ್ರ ಸರ್ಕಾರ ಕೊಡ್ತಾ ಇತ್ತು, ಮೂರು ರೂ. ರಾಜ್ಯ ಸರ್ಕಾರ ಕೊಟ್ಟರೂ ಭಾವಚಿತ್ರ ಸಿದ್ದರಾಮಯ್ಯರದ್ದೇ ಇತ್ತು ಎಂದರು.
ಚುನಾವಣೆ ಬಂದಾಗ ಪ್ರಣಾಳಿಕೆಯಲ್ಲಿ ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು, ಇವತ್ತು ಹತ್ತು ಕೆ.ಜಿ ಕೊಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಆವತ್ತು ಕೇಂದ್ರ ಸರ್ಕಾರ ಕೊಟ್ರೆ ಮಾತ್ರ ಕೊಡ್ತೀವಿ ಅಂತ ಹೇಳಿದ್ರಾ? ಎಂದು ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಕೇಂದ್ರ ಐದು ಕೆ.ಜಿ ಕೊಡ್ತಾ ಇದೆ, ಕೋವಿಡ್ ಬಂದಾಗಲೂ ಕೊಡ್ತಾ ಇದೆ. ಆದರೆ, ಎರಡು ಲಕ್ಷ ಟನ್ ಅಕ್ಕಿಗೆ ಪ್ರಧಾನಿ ಹತ್ರ ಯಾರೂ ಬೇಡಿಕೆ ಇಟ್ಟಿಲ್ಲ,ಸುಮ್ಮನೆ ಪ್ರಚಾರ ಮತ್ತು ರಾಜಕಾರಣ ಮಾಡಲು ಹೇಳಿಕೆ ಕೊಡ್ತಾ ಇದ್ದಾರೆ. ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನ ಹೋರಾಟಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರ ಭರವಸೆಯಂತೆ ಅಕ್ಕಿ ಕೊಡಲು ಆಗದ್ದಕ್ಕೆ ಕಾಂಗ್ರೆಸ್ ವಿರುದ್ದವೇ ಪ್ರತಿಭಟನೆ ಮಾಡ್ತಾ ಇದಾರೆ. ಇವರ ಸರ್ಕಾರದ ವಿರುದ್ದ ಮಾಡೊ ಪ್ರತಿಭಟನೆ ಮೂರ್ಖತನ ಎಂದು ಕಿಡಿಕಾರಿದರು.
ನಳಿನ್ ಕುಮಾರ್ ಕಟೀಲ್ ಮನೆಯಲ್ಲಿ ಶತ್ರು ಸಂಹಾರ ಪೂಜೆ?- ಸಂಸದರ ಮನೆಯಲ್ಲಿ ಸದ್ದಿಲ್ಲದೇ ಗೌಪ್ಯ ಹೋಮ
ಈಗಾಗಲೇ ಎಲ್ಲಾ ಆರೋಪಗಳ ನಂತರ ಈಗ ಹ್ಯಾಕ್ ಆರೋಪ ಮಾಡ್ತಾ ಇದಾರೆ. ಕೇಂದ್ರ ಸರ್ಕಾರ ಇಂಥ ಕೆಲಸ ಮಾಡಲ್ಲ, ಇದು ಕಾಂಗ್ರೆಸ್ ವಿಫಲತೆ, ಯಾವುದೇ ಹ್ಯಾಕ್ ಕೇಂದ್ರ ಅಥವಾ ಯಾವುದೇ ಸರ್ಕಾರ ಮಾಡಲ್ಲ. ಹಾಗಿದ್ರೆ ಇವರ ಸರ್ಕಾರ ಈಗ ಹ್ಯಾಕ್ ಮಾಡುತ್ತಾ? ಬಿಜೆಪಿ ಕೈಯ್ಯಲ್ಲಿರೋ ಪಾಲಿಕೆ ಹಾಗೂ ಬೇರೆ ಆಡಳಿತದಲ್ಲಿ ಇವರಿಗೆ ಹ್ಯಾಕ್ ಮಾಡಲು ಆಗುತ್ತಾ? ಆರೋಪವನ್ನು ಎಲ್ಲರೂ ಹಾಕಬಹುದು, ಇವರಿಗೆ ನೈತಿಕತೆ ಇಲ್ಲ, ನೈತಿಕತೆ ಇದ್ರೆ ಜನರಿಗೆ ಹತ್ತು ಕೆ.ಜಿ ಅಕ್ಕಿ ಕೊಡಲಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಯಾವುದೇ ಅಕ್ಕಿ ಕಡಿತ ಮಾಡಿಲ್ಲ. ಇಲ್ಲಿ ಮಾತ್ರ ನಮ್ಮ ವಿರೋಧ ಪಕ್ಷದ ಸರ್ಕಾರ ಇಲ್ಲ, ಕೆಲವು ರಾಜ್ಯದಲ್ಲಿ ಇದೆ. ಎಲ್ಲೂ ಕೇಂದ್ರ ಸರ್ಕಾರ ಇಂಥದ್ದನ್ನ ಮಾಡಿಲ್ಲ ಸಿದ್ದರಾಮಯ್ಯ ಸುಮ್ಮನೆ ಚಿಲ್ಲರೆ ರಾಜಕಾರಣ ಮಾಡ್ತಾ ಇದಾರೆ ಎಂದು ಕಿಡಿಕಾರಿದರು.
English summary
Nalin Kumar Kateel said that No website hacking done by central government
Story first published: Wednesday, June 21, 2023, 13:19 [IST]