India
oi-Naveen Kumar N

ಭಾರತದಲ್ಲಿ ಟೊಮೆಟೋ ಬೆಲೆ ಗ್ರಾಹಕರ ಕಣ್ಣೀರಿಗೆ ಕಾರಣವಾಗಿದೆ. ದೇಶಾದ್ಯಂತ ಟೊಮ್ಯಾಟೋ ದರ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಕೆಲವು ರಾಜ್ಯಗಳಲ್ಲಿ ಟೊಮೆಟೋ ದರ 150 ರೂಪಾಯಿ ದಾಟಿದೆ. ಆದರೆ ಉತ್ತರಾಖಂಡದಲ್ಲಿ ಮಾತ್ರ ಟೊಮೆಟೋ ದರ 200-250 ರೂಪಾಯಿಗೆ ತಲುಪಿದೆ.
ಉತ್ತರಾಖಂಡದ ಗಂಗೋತ್ರಿಯಲ್ಲಿ ಪ್ರತಿ ಕೆ.ಜಿ. ಟೊಮೆಟೋ ದರ 250 ರೂಪಾಯಿ ತಲುಪಿದೆ. ಉತ್ತರ ಕಾಶಿಯಲ್ಲಿ ಕೂಡ ಟೊಮೆಟೋ ಬೆಲೆ ಗಗನಕ್ಕೇರಿದ್ದು 180-200 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಗಂಗೋತ್ರಿ, ಯಮುನೋತ್ರಿಯಲ್ಲಿ ಟೊಮೆಟೊ ಪ್ರತಿ ಕೆ.ಜಿ.ಗೆ 200-250 ರೂಪಾಯಿಗೆ ಮಾರಟವಾಗುತ್ತಿದೆ ಎಂದು ಸ್ಥಳೀಯ ತರಕಾರಿ ವ್ಯಾಪಾರಿ ತಿಳಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಭಾರತ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೂಡ ಟೊಮೆಟೊ ದರ 100 ರುಪಾಯಿ ದಾಟಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಪ್ರತಿ ಕೆಜಿ ಟೊಮೆಟೋ 160 ರೂಪಾಯಿಗೆ ಮಾರಾಟವಾಗುತ್ತಿದೆ. ನವದೆಹಲಿಯಲ್ಲಿ ಕೂಡ 150 ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ತಮಿಳುನಾಡಿನ ಚೆನ್ನೈನಲ್ಲಿ 110-130 ರೂಪಾಯಿ ಇದ್ದು, ಸರ್ಕಾರವೇ ಖಾಸಗಿಯವರಿಂದ ಖರೀದಿ ಮಾಡಿ ಪಡಿತರ ಅಂಗಡಿಗಳಲ್ಲಿ ಪ್ರತಿ ಕೆ.ಜಿಗೆ 60 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. ಅಗತ್ಯವಿದ್ದರೆ ರಾಜ್ಯದ ಇತರ ಜಿಲ್ಲೆಗಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸಹಕಾರಿ ಸಚಿವ ಕೆಆರ್ ಪೆರಿಯಕರುಪ್ಪನ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೂಡ ಟೊಮೆಟೋ ಬೆಲೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಸುಫಲ್ ಬಾಂಗ್ಲಾದಲ್ಲಿ ಪ್ರತಿ ಕೆ.ಜಿ. ಟೊಮ್ಯಾಟೊವನ್ನು 115 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ 100 ರೂಪಾಯಿ ಆಸುಪಾಸಿನಲ್ಲಿ ಟೊಮೆಟೊ ದರ
ಬೆಂಗಳೂರಿನಲ್ಲಿ ಕೂಡ ಟೊಮೆಟೊ ದರ 100 ರೂಪಾಯಿ ಆಸುಪಾಸಿನಲ್ಲಿದೆ ಹೈಬ್ರಿಡ್ ಟೊಮೆಟೋ 100-120 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ಸ್ಥಳೀಯ ಟೊಮೆಟೋ 90-110 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ.
ದರ ದುಬಾರಿಯಾದ ಕಾರಣ ಮಾರಾಟ ಪ್ರಮಾಣ ಕೂಡ ಕಡಿಮೆಯಾಗಿದೆ. ಗ್ರಾಹಕರು ಟೊಮೆಟೋ ಕೊಳ್ಳಲು ಹಿಂದೇಟಾಕುತ್ತಿದ್ದಾರೆ. ಆದರೂ ಅನಿವಾರ್ಯವಾಗಿ ಕೆಲವರು ಕೊಳ್ಳಲೇಬೇಕಾದ ಕಡೆ ವ್ಯಾಪಾರ ನಡೆಯುತ್ತಿದೆ.
ಇನ್ನೂ 15 ಕಡಿಮೆಯಾಗಲ್ಲ ದರ!
15 ದಿನಗಳ ನಂತರ ಟೊಮೆಟೋ ದರ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದುವರೆಗೂ ಟೊಮೆಟೋ ಬೆಲೆ ಶತಕದ ಆಸುಪಾಸಿನಲ್ಲೇ ಇರಲಿದೆ. ಪ್ರತಿಕೂಲ ಹವಾಮಾನ, ಭಾರಿ ಮಳೆಯಿಂದಾಗಿ ಉತ್ತರ ಭಾರತದಲ್ಲಿ ಟೊಮೆಟೋ ಬೆಳೆಯಲು ಸಾಧ್ಯವಾಗುತ್ತಿಲ್ಲ.
ದೇಶದ ಪ್ರಮುಖ ಟೊಮೆಟೋ ಮಾರುಕಟ್ಟೆಯಾದ ಕೋಲಾರದಲ್ಲಿ ಕೂಡ ಟೊಮೆಟೋ ಆವಕ ಕಡಿಮೆಯಾಗಿದೆ. ಎಲೆ ಸುರುಳಿ ರೋಗದಿಂದ ಇಳುವರಿಯಲ್ಲಿ ಭಾರಿ ಕುಸಿತವಾಗಿದ್ದು, ಹೆಚ್ಚು ಬೆಲೆ ಸಿಕ್ಕರೂ ಕೈತುಂಬಾ ಬೆಳೆ ಇಲ್ಲದೆ ರೈತರು ಪರಿತಪಿಸುತ್ತಿದ್ದಾರೆ.
English summary
The price of tomatoes continues to rise in India. In Uttarakhand, it has reached a new high of Rs. 250 per kilogram. In Gangotri and Yamunotri, tomatoes are being sold for Rs. 200-250 per kilogram. Tomato price in Different States of Inida.
Story first published: Friday, July 7, 2023, 11:03 [IST]