Travel
lekhaka-Lavakumar B M

ಮಡಿಕೇರಿ, ಜುಲೈ 07: ಕೊಡಗಿನ ಕುಲದೇವಿ ಕಾವೇರಿ ಜನ್ಮತಾಳುವ ತಲಕಾವೇರಿ ಮತ್ತು ಭಗಂಡೇಶ್ವರ ಮುನಿಗಳಿಂದ ಪ್ರತಿಷ್ಠಾಪನೆಗೊಂಡ ಭಾಗಮಂಡಲ ಪವಿತ್ರತಾಣವಾಗಿದ್ದು, ಪ್ರತಿದಿನವೂ ಇಲ್ಲಿಗೆ ಭಕ್ತರು ಆಗಮಿಸಿ ಕಾವೇರಿ ತಾಯಿಯ ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ.
ಇದರ ನಡುವೆ ಈ ತಾಣವನ್ನು ಪ್ರವಾಸೋದ್ಯಮ ಪಟ್ಟಿಗೆ ಸೇರಿಸಿರುವ ಕಾರಣ ಇಲ್ಲಿಗೆ ಮೋಜು ಮಸ್ತಿಗಾಗಿ ಆಗಮಿಸುವ ಪ್ರವಾಸಿ ವರ್ಗವೂ ಇದೆ. ಇದರಿಂದ ಪುಣ್ಯಕ್ಷೇತ್ರಕ್ಕೆ ಧಕ್ಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಹೀಗಾಗಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಭಾಗಮಂಡಲ ತಲಕಾವೇರಿಯನ್ನು ಪ್ರವಾಸೋದ್ಯಮ ಪಟ್ಟಿಯಿಂದ ದೂರವಿಡಿ ಎಂದು ಮನವಿ ಮಾಡಿದೆ.

ಈ ಸಂಬಂಧ ಸ್ಥಳೀಯ ಶಾಸಕರು ಸೇರಿದಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದೆ. ಇಷ್ಟಕ್ಕೂ ತಲಕಾವೇರಿ ಮತ್ತು ಭಾಗಮಂಡಲವನ್ನು ಪ್ರವಾಸೋದ್ಯಮ ಪಟ್ಟಿಯಿಂದ ಏಕೆ ಹೊರಗಿಡಬೇಕು ಎಂಬ ಪ್ರಶ್ನೆಗೆ ಪತ್ರದಲ್ಲಿ ಕಾರಣಗಳನ್ನು ಪತ್ರದಲ್ಲಿ ನೀಡಲಾಗಿದೆ. ಇಷ್ಟಕ್ಕೂ ಪತ್ರದಲ್ಲೇನಿದೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಡಿಕೇರಿ; ಮೇ 26 ರಿಂದ ಮಾವು, ಹಲಸು ಮೇಳ, ವಿಶೇಷತೆಗಳು
ಕೊಡವರ ಕುಲದೇವತೆ ಹಾಗೂ ಕೊಡಗಿನ ಆರಾಧ್ಯ ದೇವತೆ ಮತ್ತು ಸಮಸ್ತ ಹಿಂದೂ ಜನಾಂಗದ ಮನೆ ಮನೆಗಳಲ್ಲಿ ಮನೆ ಮಾಡಿರುವ ಹಾಗೂ ಭಾರತ ದೇಶ ಮಾತ್ರವಲ್ಲ ಇಡೀ ಪ್ರಪಂಚದಲ್ಲಿಯೇ ಅಪಾರ ಭಕ್ತಿ ಸಮೂಹವನ್ನು ಹೊಂದಿರುವ ಪೂಜ್ಯ ದೇವತೆ, ವೇದಶ್ಲೋಕದಲ್ಲಿ ಸ್ಥಾನವನ್ನು ಪಡೆಯುವ ಮೂಲಕ ಪ್ರತಿನಿತ್ಯ ವಿಶ್ವದ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಆರಾಧಿಸಲ್ಪಡುವ ಜಲದೇವತೆ ತಾಯಿ ಕಾವೇರಿಯ ಪವಿತ್ರ ಪುಣ್ಯಕ್ಷೇತ್ರ ಕೊಡಗಿನಲ್ಲಿ ಇದೇ ಎನ್ನುವುದು ತಮಗೆಲ್ಲರಿಗೂ ತಿಳಿದಿರುವ ವಿಷಯ.
ಪವಿತ್ರ ಪುಣ್ಯ ಕ್ಷೇತ್ರ ಹೊರತು ಪ್ರವಾಸಿತಾಣವಲ್ಲ
ಕೊಡವರಿಗೆ ಹಾಗೂ ಕೊಡಗಿನವರಿಗೆ ಕಾವೇರಿ ಕೇವಲ ನದಿಯಾಗಿ ಉಳಿದಿಲ್ಲ. ಈಕೆ ಹರಿದಾಡುವ ಜಲದೇವತೆಯಾಗಿ ಮನೆಮನಗಳಲ್ಲಿ ತುಂಬಿಕೊಂಡು ಹೃದಯದಲ್ಲಿ ಪೂಜಿಸಲ್ಪಡುತ್ತಾಳೆ. ಅದರಲ್ಲೂ ಕೊಡವರು ಕಾವೇರಿ ಮಾತೆಯನ್ನು ತಮ್ಮ ಮನೆ ದೇವರಾಗಿ ಅಂದರೆ ಕುಲದೇವತೆಯಾಗಿ ಪೂಜಿಸುತ್ತಿದ್ದು, ಹುಟ್ಟಿನಿಂದ ಹಿಡಿದು ಸಾವಿನವರೆಗೂ ಮಾತ್ರವಲ್ಲ ಸತ್ತ ನಂತರವೂ ಮೋಕ್ಷಕ್ಕಾಗಿ ಹಾತೊರೆಯುತ್ತಾರೆ ಹಾಗೂ ಆರಾಧಿಸುತ್ತಾರೆ. ಹಾಗೆ ಇತರ ಜನಾಂಗ ಕೂಡಾ ತಮ್ಮನ್ನು ಆ ತಾಯಿಗೆ ಅರ್ಪಿಸಿಕೊಂಡಿದ್ದಾರೆ. ಹೀಗಿರುವಾಗ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರ ಕೊಡವರು ಹಾಗೂ ಹಿಂದೂಗಳ ಪಾಲಿಗೆ ಒಂದು ಪವಿತ್ರ ಪುಣ್ಯ ಕ್ಷೇತ್ರ ಹೊರತು ಪ್ರವಾಸಿತಾಣವಂತು ಅಲ್ಲವೇ ಅಲ್ಲ.

ಈ ಕ್ಷೇತ್ರಕ್ಕೆ ಅದರದೇಯಾದ ಕಟ್ಟುಪಾಡುಗಳಿಗೆ, ತನ್ನದೆಯಾದ ಪಾವಿತ್ರ್ಯತೆ ಇದೆ, ಮದ್ಯಮಾಂಸ ಸೇವಿಸಿ ಈ ಕ್ಷೇತ್ರಕ್ಕೆ ಕಾಲಿಟ್ಟರೇ ಅದು ಅಪವಿತ್ರ ಎನ್ನುವ ನಂಬಿಕೆ ನಮ್ಮದು. ಮೋಜು ಮಸ್ತಿಗಾಗಿ ಈ ಕ್ಷೇತ್ರಕ್ಕೆ ಬಂದರೆ ಅದು ಅಪವಿತ್ರ ಎನ್ನುವ ಭಾವನೆ ನಮ್ಮದು. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಪ್ರವಾಸಿಗರು ಭಕ್ತರಾಗಿ ಭೇಟಿ ನೀಡದೆ ಪ್ರವಾಸಿ ಕ್ಷೇತ್ರವಾಗಿ ಭೇಟಿ ನೀಡಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವುದು ನಮ್ಮ ಮನಸಿಗೆ ತುಂಬಾ ನೋವು ತಂದಿದೆ.
ಅನ್ಯಧರ್ಮಿಯರು ಈ ಕ್ಷೇತ್ರದ ಮಹಿಮೆಯನ್ನು ಅರಿತು ಭಕ್ತಿಭಾವದಿಂದ ಕ್ಷೇತ್ರದ ಕಟ್ಟುಪಾಡುಗಳಿಗೆ ಪೂರಕವಾಗಿ ಭಯಭಕ್ತಿಯಿಂದ ಭೇಟಿನೀಡಿ ಪೂಜೆ ಮಾಡಿಸಿಕೊಂಡು ಹೋದರೆ ನಮ್ಮದು ಯಾವುದು ಅಭ್ಯಂತರವಿಲ್ಲ, ಆದರೆ ಕೇವಲ ಸೈಡ್ ಸೀನ್ ನೋಡಲು ಮೋಜು ಮಸ್ತಿಗಾಗಿ ಬಂದು ಹೋಗುವುದು ನಮ್ಮಗಳ ಧಾರ್ಮಿಕ ಭಾವನೆಗಳಿಗೆ ನೋವು ತಂದಿದೆ. ಹಾಗೆಯೇ ಸ್ವಧರ್ಮಿಯರು ಕೂಡ ಈ ಕ್ಷೇತ್ರಕ್ಕೆ ಪ್ರವಾಸಿಗರಾಗಿ ಬಂದು ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವುದು ನಮ್ಮ ಮನಸ್ಸನ್ನು ಘಾಸಿಗೊಳಿಸುತ್ತಿದೆ.
ಕಾವೇರಿ ಮುನಿದಿದ್ದಾಳೆ, ಕಟ್ಟುಪಾಡು ಅನುಸರಿಸಿ..!
ಇದೆಲ್ಲದಕ್ಕೂ ಒಂದೇ ಪರಿಹಾರವೆಂದರೆ, ದಯವಿಟ್ಟು ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರವನ್ನು ಪ್ರವಾಸೋದ್ಯಮ ಪಟ್ಟಿಯಿಂದ ಹೊರಗಿಡಿ. ಈ ಕ್ಷೇತ್ರವನ್ನು ಪ್ರವಾಸೋದ್ಯಮ ಪಟ್ಟಿಯಿಂದ ಹೊರಗಿಟ್ಟು ಒಂದು ಪವಿತ್ರ ಪುಣ್ಯಕ್ಷೇತ್ರವಾಗಿ ಮಾಡಲು ಇಂದಿನಿಂದಲೇ ಪಣತೊಡಬೇಕಿದೆ. ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರವನ್ನು ಟೆಂಪಲ್ ಟೌನ್ ವ್ಯಾಪ್ತಿಗೆ ಒಳಪಡಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದಂತೆ ಪಾವಿತ್ರ್ಯತೆ ಕಾಪಾಡಲು ಅನುವುಮಾಡಿಕೊಡಬೇಕಾಗಿದೆ.
ಈಗಾಗಲೇ ಕಾವೇರಿ ಮುನಿಸಿಕೊಂಡಿದ್ದಾಳೆ ಎನ್ನುವುದಕ್ಕೆ ಕೊಡಗಿನಲ್ಲಿ ಕೆಲವು ಬಾರಿ ಮಳೆಯ ಪ್ರಮಾಣ ತೀವ್ರ ಕಡಿಮೆಯಾಗಿದರೆ, ಮತ್ತೊಮ್ಮೆ ಪ್ರವಾಹದ ವಾತಾವಣ ನಿರ್ಮಾಣಗೊಳ್ಳುತ್ತದೆ. ಕೊಡಗು ಮಾತ್ರವಲ್ಲ ಕಾವೇರಿ ಹರಿಯುವ ಪ್ರದೇಶ ಬತ್ತಿ ಬರಡಾಗುವ ಮುನ್ನ ಮಾತೆಯ ಕ್ಷೇತ್ರದಲ್ಲಿ ಪಾವಿತ್ರ್ಯತೆಗೆ ಒತ್ತುಕೊಡಿ. ನಿಮಮಗಳಿಗೆ ಕಾವೇರಿಯ ಮೇಲೆ ಭಕ್ತಿ ಭಾವ ಇಲ್ಲದಿದ್ದರೂ ಚಿಂತೆ ಇಲ್ಲೆ ಕಾವೇರಿಯನ್ನು ಮನೆ ಮನೆಗಳಲ್ಲಿ ಆರಾಧಿಸುವ ಭಕ್ತರ ಭಾವನೆಗಳಿಗೆ ಬೆಲೆಕೊಡುತ್ತಿರೆಂದು ನಂಬಿ ಈ ತೆರೆದ ಪತ್ರವನ್ನು ಬರೆಯುತ್ತಿರುವುದಾಗಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹೇಳಿದ್ದಾರೆ.
English summary
Why Akhila Kodava Community Youth Wing requested to Bhagamandala Talakaveri to be removed from the tourism list. Know more
Story first published: Friday, July 7, 2023, 11:34 [IST]