Karnataka
oi-Malathesha M

ಬೆಂಗಳೂರು: ಕಳೆದ 4 ವರ್ಷಗಳಿಂದಲೂ ಭಾರಿ ವಿವಾದ ಎಬ್ಬಿಸಿದ್ದ ಕನಕಪುರ ಮೆಡಿಕಲ್ ಕಾಲೇಜು ಸ್ಥಳಾಂತರ ವಿವಾದ ಬಗೆಹರಿದಿದೆ. ಈ ಹಿಂದೆ ಬಿಜೆಪಿ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಗೋಲಿ ಹೊಡೆದು, ಮತ್ತೊಮ್ಮೆ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸರ್ಕಾರ ಮುಂದಾಗಿದೆ. ಈ ಮೂಲಕ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತೊಮ್ಮೆ ಸೋತಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ಹಠ ಸಾಧಿಸಿದ್ದಾರೆ.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈಗ ಹೊಸ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ 14ನೇ ಬಾರಿಗೆ ಬಜೆಟ್ ಮಂಡಿಸಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಗೆ ಭರ್ಜರಿ ಉಡುಗೊರೆ ಕೊಟ್ಟಿದ್ದಾರೆ. ಅದರಲ್ಲೂ ಕಳೆದ ಕೆಲ ವರ್ಷಗಳಿಂದ ವಿವಾದದ ಬಿರುಗಾಳಿ ಎಬ್ಬಿಸಿದ್ದ ಕನಕಪುರ ವೈದ್ಯಕೀಯ ಕಾಲೇಜು ವಿವಾದ ಕೊನೆಯಾಗಿದೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ 2023ರ ಬಜೆಟ್‌ನಲ್ಲಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ. ಈ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆದ್ದು ಬೀಗಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಗೆ ಭರ್ಜರಿ ಗಿಫ್ಟ್!
ಈ ಬಾರಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರವು ಭಾರಿ ದೊಡ್ಡ ಉಡುಗೊರೆ ಕೊಟ್ಟಿದೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ಗದಗ, ಕೊಪ್ಪಳ, ಕಾರವಾರ, ಕೊಡಗು ಜಿಲ್ಲೆಗಳಲ್ಲಿ 450 ಹಾಸಿಗೆ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಪಣತೊಟ್ಟಿದೆ. ಇಷ್ಟು ಮಾತ್ರವಲ್ಲ, ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಭಾಗಗಳು ಸೇರಿದಂತೆ ಹಳೇ ಮೈಸೂರು ಭಾಗಕ್ಕೂ ಭಾರಿ ಅನುದಾನ ಘೋಷಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗಳಿಗೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಾಗಿ ನೀಡಿರುವ ಉಡುಗೊರೆಯ ಪಟ್ಟಿ ಇಲ್ಲಿದೆ, ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಸರ್ಕಾರಿ ಆಸ್ಪತ್ರೆಗಳ ನಿರ್ಮಾಣಕ್ಕೆ ಅನುದಾನದ ಲಾಟರಿ!
1) ರಾಜ್ಯದಲ್ಲಿ ಈಗಾಗಲೇ ಆರಂಭಿಸಿರುವ ಸರ್ಕಾರಿ ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ವೈದ್ಯಕೀಯ ಕಾಲೇಜುಗಳಿಗೆ 450 ಕೋಟಿ ರೂಪಾಯಿ ಮೀಸಲು.
2) ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕಾರ್ಯಾರಂಭ. ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ 155 ಕೋಟಿ ರೂಪಾಯಿ ಮೀಸಲು.
3) ಪ್ರಸಕ್ತ ಸಾಲಿನಲ್ಲಿ ಗದಗ, ಕೊಪ್ಪಳ, ಕಾರವಾರ ಮತ್ತು ಕೊಡಗು ಜಿಲ್ಲೆಗಳಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ.
4) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ವತಿಯಿಂದ ರಾಮನಗರ ಜಿಲ್ಲೆ, ಕನಕಪುರ ತಾಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ.
5) NIMHANS ಆವರಣದಲ್ಲಿ 146 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಗಾಂಗ ಜೋಡಣೆಗಾಗಿ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆ ಸ್ಥಾಪನೆ.
6) ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಖಾಯಿಲೆ (NAFLD)ಯಿಂದ ಬಳಲುತ್ತಿರುವವರಿಗೆ ಸಿರೋಸಿಸ್ ಮತ್ತು ಕ್ಯಾನ್ಸರ್ ಪತ್ತೆ ಹಚ್ಚಲು ಒಂದು FibroScan ಒದಗಿಸಲಾಗುವುದು.
7) ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (GIMS) 200 ಹಾಸಿಗೆ ಸಾಮರ್ಥ್ಯದ ಹೊಸ ತಾಯಿ & ಮಕ್ಕಳ ಆಸ್ಪತ್ರೆಯನ್ನು 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನ.
8) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ವತಿಯಿಂದ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಹಾಗೂ ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳ ಸ್ಥಾಪನೆ.
9) ಮೈಸೂರು ಮತ್ತು ಕಲಬುರಗಿಯಲ್ಲಿ ಟ್ರಾಮಾ ಕೇರ್ ಸೆಂಟರ್ ಕಾರ್ಯಾಚರಣೆಗೆ 30 ಕೋಟಿ ರೂಪಾಯಿ ಮೀಸಲು.
10) ಕ್ಯಾನ್ಸರ್ ಚಿಕಿತ್ಸೆ ನೀಡುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಕಲಬುರಗಿ ಹಾಗೂ ಮೈಸೂರಿನ ಪ್ರಾದೇಶಿಕ ಘಟಕಗಳಲ್ಲಿ ಸೌಲಭ್ಯ ಸುಧಾರಣೆಗೆ 20 ಕೋಟಿ ರೂಪಾಯಿ ಮೀಸಲು.
11) ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭ.
12) ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸ್ವಯಂಚಾಲಿತ ಮತ್ತು ಕೇಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆಯನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು ನಿರ್ಧಾರ.
English summary
Karnataka Budget 2023: Medical College for Kanakapura and Several districts will get new government hospitals.