Bengaluru
oi-Shankrappa Parangi
ಬೆಂಗಳೂರು, ಜೂನ್ 20: ಸಿಲಿಕಾನ್ ಸಿಟಿ ಬೆಂಗಳೂರು ಬಹುದಿನಗಳ ಬಳಿಕ ಮಳೆಗಾಲ ವಾತಾವರಣ ಮಂಗಳವಾರ ನಿರ್ಮಾಣವಾಗಿತ್ತು. ಬೆಳಗ್ಗೆಯೇ ಭಾರೀ ಮೋಡಗಳಿಂದ ಆವೃತವಾಗಿ ಮಬ್ಬು ಕವಿದಿತ್ತು. ಜಿಟಿ ಜಿಟಿಯಾಗಿ ಶುರುವಾದ ಮಳೆ ಗಂಟೆಗಳ ಕಾಲ ಸುರಿಯಿತು. ಮಹೇವಪುರ ವಲಯ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ದಾಖಲಾಯಿತು ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬಿಸಿಲಿನ ದರ್ಶನವೇ ಆಗದಷ್ಟು ಮಳೆಗಾಲದ ತಂಪು, ಒಂದೇ ಸಮನೇ ತುಂತುರು ಮಳೆಗೆ ಬೆಂಗಳೂರಿಗರು ಮಂಗಳವಾರ ಸಾಕ್ಷಿಯಾದರು. ಕೆಲವು ಪ್ರದೇಶಗಳಲ್ಲಿ ಇಡೀ ದಿನ ಮಳೆ ಸುರಿಯಿತು. ಮಹಾದೇವಪುರ ವಲಯದ ಹೊರಮಾವು ವ್ಯಾಪ್ತಿಯಲ್ಲಿ ಅಧಿಕ 47 ಮಿಲಿ ಮೀಟರ್ ಮಳೆ ದಾಖಲಾಯಿತು.
ನಗರದ ಎಂಜಿ ರಸ್ತೆ, ಮೆಜೆಸ್ಟಿಕ್, ಕೆ.ಆರ್.ವೃತ್ತ, ಕೆ.ಆರ್ ಮಾರುಕಟ್ಟೆ, ವಿಜಯನಗರ, ನಾಯಂಡಹಳ್ಳಿ, ನಾಗಪುರ, ಯಶವಂತಪುರ, ಹೆಬ್ಬಾಳ, ಯಲಹಂಕ ಸೇರಿದಂತೆ ಮುಖ್ಯ ರಸ್ತೆಗಳು ಜಲಾವೃತಗೊಂಡವು. ಕೆಲವು ಜಂಕ್ಷನಗಳಲ್ಲಿ ರಸ್ತೆ ಸಂಚಾರ ಅಸ್ತವೆಸ್ತವಾಯಿತು. ರಸ್ತೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತ ಪರಿಣಾಮ ಜನರು ಸಂಚರಿಸಲು ಹಿಂದೇಟು ಹಾಕಿದ್ದು ಕಂಡು ಬಂತು.
ಈ ಪ್ರದೇಶಗಳಲ್ಲಿ ಅಧಿಕ ಮಳೆ ದಾಖಲು
ಬೆಂಗಳೂರಿನ ಮಹಾದೇವಪುರ ವಲಯ ವ್ಯಾಪ್ತಿಯ ಹೊರಮಾವು (2) ಅಧಿಕ 47ಮಿ.ಮೀ ಮಳೆ ಕಂಡಿದೆ. ಅದರೊಂದಿಗೆ ನಗರದ ಕೊಡಿಗೆನಹಳ್ಳಿ 38 ಮಿ.ಮೀ, ಕೊಟ್ಟಿಗೆಪಾಳ್ಯ 36 ಮಿ.ಮೀ, ವಿದ್ಯಾಪೀಠ 33 ಮಿ.ಮೀ, ವಿಶ್ವನಾಥ್ ನಾಗೇನಹಳ್ಳಿ 28ಮಿ.ಮೀ, ಯಲಹಂಕ 27.5 ಮಿ.ಮೀ, ವಿದ್ಯಾರಣ್ಯಪುರ 27ಮಿ.ಮೀ, ಜಕ್ಕೂರು 26 ಮಿ.ಮೀ, ನಾಗಪುರ 26 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 24 ಮಿ.ಮೀ, ಪುಲಕೇಶಿನಗರ 23.5ಮಿ.ಮೀ, ಗಾಳಿಆಂಜನೇಯ ಟೆಂಪಲ್ ವಾರ್ಡ್ 22ಮಿ.ಮೀ, ಹಂಪಿನಗರ 21.5 ಮಿ.ಮೀ, ದಯಾನಂದಸಾಗರ್ 21ಮಿ.ಮೀ, ಸಂಪಂಗಿರಾಮನಗರ (1) 20.5 ಮಿ.ಮೀ, ಸಂಪಂಗಿರಾಮನಗರ (2) 20ಮಿ.ಮೀ, ಯಶವಂತಪುರ 20ಮಿ.ಮೀ, ಶೆಟ್ಟಿಹಳ್ಳಿ 17ಮಿ.ಮೀ, ನಂದಿನಿ ಬಡಾವಣೆ 17ಮಿ.ಮೀ, ಮತ್ತು ರಾಜಾಜಿನಗರ ತಲಾ 17 ಮಿ.ಮೀ. ಮಳೆ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ಸಿಟಿಯಲ್ಲಿ ಮುಂಗಾರು ಚುರುಕು
ರಾಜಧಾನಿಯಲ್ಲಿ ಮುಂಗಾರು ಮಳೆ ಚುರುಕಾಗುವ ಲಕ್ಷಣಗಳು ದಟ್ಟವಾಗಿವೆ. ಕೆಲವು ದಿನಗಳನ್ನು ಹೊರತುಪಡಿಸಿದರೆ ಸರಿಸುಮಾರು ನಾಲ್ಕೈದು ತಿಂಗಳಿಂದ ಬಿಸಿಲಿನ ಧಗೆಗೆ ಕಂಗೆಟ್ಟಿದೆ ನಗರದ ಜನರಿಗೆ ಮಳೆರಾಯ ತಂಪೆರೆದಿದ್ದಾರೆ. ಈ ಮಳೆ ಮುಂದಿನ ನಾಲ್ಕು ದಿನ ಹೀಗೆ ಮುಂದುವರಿಯಲಿದೆ.
ಜೂನ್ 24ರವರೆಗೂ ಬೆಂಗಳೂರು ನಗರ ವಿವಿಧ ಕಡೆಗಳಲ್ಲಿ ಜಿಟಿ ಮಳೆ, ಇನ್ನೂ ಕೆಲವು ಬಡಾವಣೆಗಳಲ್ಲಿ ಗಾಳಿ ಸಹಿತ ಜೋರು ಮಳೆ ಬೀಳುವ ಮುನ್ಸೂಚನೆ ಇದೆ. ಈ ಅವಧಿಯಲ್ಲಿ ನಗರದ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಬವವಿದೆ.
ಮಳೆಗಾಲ ಎದುರಿಸಲು ಬಿಬಿಎಂಪಿ ತಯಾರಿ
ಮಳೆಗಾಲ ಆರಂಭವಾಗಿದ್ದು, ನಗರದ ತಗ್ಗು ಪ್ರದೇಶಗಳಲ್ಲಿರುವ ಮಳೆಗಳಿಗೆ ಮಳೆಗಾಲದಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಅಂಡರ್‌ಪಾಸ್‌ನಲ್ಲಿ ಯುವತಿಯೊಬ್ಬಳು ಮೃತಪಟ್ಟ ಬಳಿಕ ಬಿಬಿಎಂಪಿ ಅಂಡರ್‌ಪಾಸ್‌ಗಳಲ್ಲಿ ಅಗತ್ಯ ಎಚ್ಚರಿಕೆ ವಹಿಸಿದ್ದು, ಸುರಕ್ಷತಾ ಕ್ರಮ ಸಹ ಕೈಗೊಂಡಿದ್ದಾರೆ. ಮಳೆ ನೀರು ಬಿದ್ದು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಮಹಾದೇವಪುರದ ದೊಡ್ಡಾನಕ್ಕುಂದಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತಿದ್ದಾರೆ. ಮಳೆಗಾಲ ಸಮರ್ಪಕ ನಿರ್ವಹಣೆಗಾಗಿ ಬಿಬಿಎಂಪಿ ಈಗಾಗಲೇ ಸಭೆ ನಡೆಸಿದೆ.
English summary
Silicon City Bengaluru received 47 mm rain on Tuesday, rain will continue till June 24th, IMD predicts,