NEET Exam ಬರೆದಿದ್ದ 71ರ ಅಜ್ಜನಿಗೆ ಶಾಕ್! ಪೇಪರ್ ಲೀಕ್ ಸುದ್ದಿ ತಿಳಿದ ನಂತರ ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

NEET: ಪೇಪರ್ ಲೀಕ್ ಸುದ್ದಿ ಕೇಳಿ, 71ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದಿದ್ದ ಅಜ್ಜ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ವಯಸ್ಸಿನಲ್ಲೂ ಕಷ್ಟಪಟ್ಟು ಓದಿ ಸಿದ್ಧತೆ ನಡೆಸಿದ್ದ ಅವರ ಪರಿಶ್ರಮಕ್ಕೆ ತಣ್ಣೀರೆರಚಿದಂತಾಗಿದೆ. ಪೇಪರ್​ ಲೀಕ್ ಸುದ್ದಿ​ ತಿಳಿದ ನಂತರ ಆಗಿದ್ದೇನು ಗೊತ್ತಾ?

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ದೇಶಾದ್ಯಂತ ನೀಟ್-ಯುಜಿ 2026 ಪೇಪರ್ ಲೀಕ್ (NEET Paper Leak) ವಿವಾದ ಸದ್ದು ಮಾಡುತ್ತಿರುವ ನಡುವೆಯೇ ಉತ್ತರ ಪ್ರದೇಶದ (Uttar Pradesh) 71 ವರ್ಷದ ಅಶೋಕ್ ಬಹಾರ್ (Ashok Bahar) ಅವರ ಕಥೆ ಲಕ್ಷಾಂತರ ಮಂದಿಗೆ ಪ್ರೇರಣೆಯಾಗಿ ಪರಿಣಮಿಸಿದೆ. ವೈದ್ಯರಾಗಬೇಕು (Doctor) ಎಂಬ ತಾಯಿಗೆ ನೀಡಿದ್ದ ಮಾತನ್ನು ಈಡೇರಿಸಲು ವೃದ್ಧಾಪ್ಯದಲ್ಲಿಯೂ ಅವರು ನೀಟ್ ಪರೀಕ್ಷೆ ಬರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾಗಿರುವುದು ಅವರ ಕನಸಿಗೆ ಆಘಾತ ನೀಡಿದೆ.

ಸಾಮಾನ್ಯ ಅಭ್ಯರ್ಥಿಯಾಗಿರಲಿಲ್ಲ ಬಹಾರ್​!

ಲಖನೌ ಮೂಲದ ಅಶೋಕ್ ಬಹಾರ್ ಅವರು ಸಾಮಾನ್ಯ ಅಭ್ಯರ್ಥಿಯಲ್ಲ. ಜೀವನದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿ ನಿವೃತ್ತಿ ಹೊಂದಿದ ಬಳಿಕವೂ ಕಲಿಕೆಯ ಹಂಬಲವನ್ನು ಕೈಬಿಡದ ವ್ಯಕ್ತಿ. ಅವರು ಭಾರತೀಯ ಔಷಧ ನಿರ್ಮಾಣ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರೆ, ಬಳಿಕ ವಿದೇಶಾಂಗ ಸಚಿವಾಲಯದಲ್ಲೂ ಕೆಲಸ ಮಾಡಿದ್ದರು. 2000ರಲ್ಲಿ ನಿವೃತ್ತರಾದ ಬಳಿಕ ಬಹುತೇಕರು ವಿಶ್ರಾಂತಿ ಜೀವನವನ್ನು ಆಯ್ಕೆಮಾಡುವಾಗ, ಬಹಾರ್ ಮಾತ್ರ ತಮ್ಮ ಬಾಲ್ಯದ ಕನಸನ್ನು ಪೂರ್ಣಗೊಳಿಸಲು ನಿರ್ಧರಿಸಿದರು.

ಒಂದೇ ಕುಟುಂಬದಲ್ಲಿದ್ದಾರೆ 20 ಕ್ಕೂ ಹೆಚ್ಚು ವೈದ್ಯರು!

ಅಶೋಕ್ ಬಹಾರ್ ಅವರ ಕುಟುಂಬದಲ್ಲಿ ಸುಮಾರು 20ಕ್ಕೂ ಹೆಚ್ಚು ವೈದ್ಯರಿದ್ದಾರೆ. ಅವರ ತಂದೆಯೂ ವೈದ್ಯರಾಗಿದ್ದರು. ಇದೇ ಕಾರಣಕ್ಕೆ ಬಾಲ್ಯದಿಂದಲೇ ವೈದ್ಯರಾಗಬೇಕೆಂಬ ಕನಸು ಅವರ ಮನದಲ್ಲಿ ಬಿತ್ತನೆಗೊಂಡಿತ್ತು. ಆದರೆ ಕುಟುಂಬದ ಜವಾಬ್ದಾರಿಗಳು, ಕಾಲದ ಪರಿಸ್ಥಿತಿ ಮತ್ತು ಉದ್ಯೋಗದ ಅನಿವಾರ್ಯತೆಗಳಿಂದ ಆ ಕನಸು ನನಸಾಗಲಿಲ್ಲ. ಆದರೂ ತಮ್ಮ ತಾಯಿಗೆ “ಒಂದು ದಿನ ವೈದ್ಯನಾಗುತ್ತೇನೆ” ಎಂದು ನೀಡಿದ್ದ ಮಾತು ಅವರನ್ನು ಸದಾ ಕಾಡುತ್ತಲೇ ಇತ್ತು.

ನಿವೃತ್ತಿ ನಂತರ ಮತ್ತೆ ಪ್ರಾರಂಭವಾಯಿತು ಓದು!

ನಿವೃತ್ತಿಯ ನಂತರ ಅವರು ಮತ್ತೆ ಓದನ್ನು ಆರಂಭಿಸಿದರು. ಅವರ ಪತ್ನಿ ಡಾ. ಮಂಜುಲ್ ಬಹಾರ್, ಸ್ವತಃ ಗೈನಕಾಲಜಿಸ್ಟ್ ಆಗಿದ್ದು, ಪರೀಕ್ಷಾ ಸಿದ್ಧತೆಯಲ್ಲಿ ಅವರಿಗೆ ಮಾರ್ಗದರ್ಶನ ನೀಡಿದರು. ಯುವ ಅಭ್ಯರ್ಥಿಗಳ ಜೊತೆ ಸಮಾನವಾಗಿ ಓದಿ, ಪರೀಕ್ಷಾ ಮಾದರಿಯನ್ನು ಅರ್ಥಮಾಡಿಕೊಂಡು, 71ನೇ ವಯಸ್ಸಿನಲ್ಲಿ ಅವರು ನೀಟ್ ಪರೀಕ್ಷಾ ಕೇಂದ್ರಕ್ಕೆ ಹಾಜರಾದರು. ಪರೀಕ್ಷಾ ಕೇಂದ್ರದಿಂದ ಹೊರಬರುತ್ತಿದ್ದ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅನೇಕರಿಗೆ ಸ್ಫೂರ್ತಿಯಾಯಿತು.

ಸ್ಪೂರ್ತಿದಾಯಕ ಪಯಣಕ್ಕೆ ತಾತ್ಕಾಲಿಕ ಬ್ರೇಕ್!

ಆದರೆ ಅವರ ಈ ಸ್ಪೂರ್ತಿದಾಯಕ ಪ್ರಯಾಣಕ್ಕೆ ನೀಟ್-ಯುಜಿ 2026 ಪೇಪರ್ ಲೀಕ್ ಪ್ರಕರಣ ದೊಡ್ಡ ಹೊಡೆತ ನೀಡಿತು. ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪ ಸಾಬೀತಾಗುತ್ತಿದ್ದಂತೆ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ತನಿಖೆಯಲ್ಲಿ ಪ್ರಶ್ನೆಪತ್ರಿಕೆ ಹಸ್ತಲಿಖಿತ ರೂಪದಲ್ಲಿ ಸ್ಕ್ಯಾನ್ ಮಾಡಿ ಹರಡಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಈ ಬೆಳವಣಿಗೆ ಲಕ್ಷಾಂತರ ವಿದ್ಯಾರ್ಥಿಗಳಂತೆ ಅಶೋಕ್ ಬಹಾರ್ ಅವರ ಕನಸಿಗೂ ತಾತ್ಕಾಲಿಕ ವಿರಾಮ ತಂದಿದೆ.

ಬಹಾರ್​ಗೆ ಆಯ್ತಾ ನಿರಾಶೆ!

ಆದರೆ ಬಹಾರ್ ನಿರಾಶರಾಗಿಲ್ಲ. ವೈದ್ಯಕೀಯ ಶಿಕ್ಷಣ ಪಡೆದು ಹೆಪಟಾಲಜಿ ಕ್ಷೇತ್ರದಲ್ಲಿ ಪರಿಣತಿ ಗಳಿಸಿ, ಲಿವರ್ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಕನಸನ್ನು ಅವರು ಇನ್ನೂ ಬಿಟ್ಟಿಲ್ಲ. “ಕನಸುಗಳಿಗೆ ವಯಸ್ಸಿನ ಮಿತಿ ಇಲ್ಲ; ಅವಕಾಶ ಸಿಕ್ಕರೆ ಮತ್ತೆ ಪ್ರಯತ್ನಿಸುತ್ತೇನೆ” ಎನ್ನುವ ಅವರ ಧೈರ್ಯಭರಿತ ನಿಲುವು ಇಂದಿನ ಯುವಜನತೆಗೆ ದೊಡ್ಡ ಸಂದೇಶವಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed