Last Updated:
Dowry Harassment: ನಮ್ಮ ಸಮಾಜ ನಿಜಕ್ಕೂ ವಿಚಿತ್ರ. ಯಾಕೆಂದರೆ, ನಾವು ಕಾನೂನುಗಳನ್ನು ಮಾಡುವುದರಲ್ಲಿ ಬಹಳ ಮುಂದಿದ್ದೇವೆ, ಆದರೆ ಅವುಗಳನ್ನು ಪಾಲಿಸುವುದರಲ್ಲಿ ಅಷ್ಟೇ ಹಿಂದೆ ಇದ್ದೇವೆ. ಅದಕ್ಕೆ ಅತ್ಯುತ್ತಮ ಉದಾಹರಣೆ ವರದಕ್ಷಿಣೆ.
ನವದೆಹಲಿ: ನಮ್ಮ ಸಮಾಜ (Society) ನಿಜಕ್ಕೂ ವಿಚಿತ್ರ. ಯಾಕೆಂದರೆ, ನಾವು ಕಾನೂನುಗಳನ್ನು (Law) ಮಾಡುವುದರಲ್ಲಿ ಬಹಳ ಮುಂದಿದ್ದೇವೆ, ಆದರೆ ಅವುಗಳನ್ನು ಪಾಲಿಸುವುದರಲ್ಲಿ ಅಷ್ಟೇ ಹಿಂದೆ ಇದ್ದೇವೆ. ಅದಕ್ಕೆ ಅತ್ಯುತ್ತಮ ಉದಾಹರಣೆ ವರದಕ್ಷಿಣೆ (Dowry).
ಹೌದು, ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಅಪರಾಧ ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಇದು ಕೊಡುವವರಿಗೂ ಗೊತ್ತಿದೆ, ತೆಗೆದುಕೊಳ್ಳುವವರಿಗೂ ಗೊತ್ತಿದೆ. ಆದರೂ ಸಮಾಜದ ಭಯ, ಮರ್ಯಾದೆಯ ಒತ್ತಡ, ಮಗಳ ಭವಿಷ್ಯದ ಚಿಂತೆ ಎಂದು ಕೊಡುವವನು ಕೊಡುತ್ತಲೇ ಇರುತ್ತಾನೆ. ಅದನ್ನು ತನ್ನ ಹಕ್ಕು ಎಂಬಂತೆ ತೆಗೆದುಕೊಳ್ಳುವವನು ತೆಗೆದುಕೊಳ್ಳುತ್ತಲೇ ಇರುತ್ತಾನೆ. ಹಾಗಾದರೆ ಯಾರಿಗಾಗಿ ಈ ಕಾನೂನು ಇದೆ? ಅದು ಕೇವಲ ಕಾಗದದ ಮೇಲೆ ಉಳಿಯುವ ಅಕ್ಷರಗಳಷ್ಟೇನಾ? ಅಥವಾ ಜನರ ಮನಸ್ಸುಗಳನ್ನು ಬದಲಾಯಿಸುವ ಶಕ್ತಿ ಅದಕ್ಕಿದೆಯಾ? ಎಂಬ ಪ್ರಶ್ನೆ ಇಲ್ಲಿ ಎದ್ದು ನಿಲ್ಲುತ್ತದೆ. ಈ ಗಂಭೀರ ಸಮಸ್ಯೆಯ ಕುರಿತು ಭಾರತದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಗಂಭೀರವಾದ ಆಕ್ರೋಶವನ್ನು ಹೊರಹಾಕಿದೆ. ಆ ಕುರಿತ ವರದಿ ಇಲ್ಲಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಬಿ. ವಿ. ನಾಗರತ್ನ ಮತ್ತು ನ್ಯಾ. ಉಜ್ಜಲ್ ಭುಯಾನ್ ಅವರ ಪೀಠವು ವರದಕ್ಷಿಣೆ ಸಾವಿನ ಪ್ರಕರಣವೊಂದರ ವಿಚಾರಣೆ ನಡೆಸುತ್ತಾ, ಹುಡುಗರು ಮದುವೆಯಾಗಿ ನಂತರ ತಮ್ಮ ಹೆಂಡತಿಯರನ್ನು ಮತ್ತು ಅವರ ಕುಟುಂಬಗಳನ್ನು ಯಾಕೆ ಅವಮಾನಿಸುತ್ತಾರೆ? ಎಂದು ಪ್ರಶ್ನಿಸಿದೆ. ಹೆಂಡತಿ ಮತ್ತು ಅವಳ ಕುಟುಂಬವು ಅವಮಾನ ಎದುರಿಸಬಾರದು ಎಂಬ ಸ್ಪಷ್ಟ ಸಂದೇಶ ಸಮಾಜಕ್ಕೆ ಹೋಗಬೇಕು ಎಂದು ಹೇಳಿದ ನ್ಯಾಯಾಲಯ, ಕೇವಲ 498ಎ ಅಡಿ ಮೂರು ವರ್ಷ ಶಿಕ್ಷೆ ವಿಧಿಸಿದ್ದಕ್ಕೆ ಆರೋಪಿಗಳು ಸಂತೋಷಪಡಬೇಕು ಎಂದು ನ್ಯಾ. ನಾಗರತ್ನ ಅವರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಛತ್ತೀಸ್‌ಗಢದಲ್ಲಿ ನಡೆದ ಸುಚಿತ್ ಕೇಸರಿ v/s ಸ್ಟೇಟ್ ಆಫ್ ಛತ್ತೀಸ್‌ಗಢ ಪ್ರಕರಣದ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಮದುವೆಯಾದ ಕೇವಲ ಮೂರೇ ವರ್ಷಗಳಲ್ಲಿ ವಧುವೊಬ್ಬಳು ಕಾರು ಮತ್ತು ಹಣಕ್ಕಾಗಿ ನಿರಂತರ ವರದಕ್ಷಿಣೆ ಬೇಡಿಕೆ ಹಾಗೂ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ತನಿಖೆ ವೇಳೆ ಆಕೆಯ ತಂದೆ ಮಗಳ ಜೀವ ಉಳಿಸಲು 60,000 ರೂ. ಕೊಡುವುದಾಗಿ ಬೇಡಿಕೊಂಡರೂ, ಗಂಡನ ಮನೆಯವರು ಅವರನ್ನು ಭಿಕ್ಷುಕರು ಎಂದು ಕರೆದು ಅವಮಾನಿಸಿದ್ದರು.
ವರದಕ್ಷಿಣೆ ನಿಷೇಧ ಕಾಯ್ದೆ 1961 ರಿಂದಲೇ ಜಾರಿಯಲ್ಲಿದೆ. ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಅಪರಾಧ. ಆದರೂ ಇದು ಶತಮಾನಗಳಿಂದ ಆಚರಣೆಯಲ್ಲಿದೆ. ಕಾನೂನು ಪುಸ್ತಕದಲ್ಲಿ ಇದ್ದರೂ ಸಾಮಾಜಿಕ ಒತ್ತಡ, ಪ್ರತಿಷ್ಠೆಯ ಆಸೆ, ಮಗಳ ಮದುವೆ ಸುಗಮವಾಗಲಿ ಎಂಬ ಭಯದಿಂದ ಪೋಷಕರು ಹಣ ಕೊಡುತ್ತಾರೆ. ತೆಗೆದುಕೊಳ್ಳುವವರು ಅದನ್ನು ತಮ್ಮ ಹಕ್ಕು ಎಂದು ಭಾವಿಸುತ್ತಾರೆ.
ಮುಂದುವರೆದು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ ಪ್ರತಿ ವರ್ಷ ಸಾವಿರಾರು ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚು. ಬೆಂಗಳೂರು ಮತ್ತು ದೆಹಲಿಯಂತಹ ನಗರಗಳಲ್ಲಿಯೂ ಇತ್ತೀಚೆಗೆ ಯುವತಿಯರು ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ವರದಿಯಾಗಿವೆ.
New Delhi,New Delhi,Delhi













