India
oi-Ravindra Gangal
ನವದೆಹಲಿ, ಜುಲೈ 05: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಳೆದ ಆರು ತಿಂಗಳಲ್ಲಿ ಮೂರನೇ ಬಾರಿಗೆ ಬಿಜೆಪಿ ಉನ್ನತ ನಾಯಕರನ್ನು ಜಗನ್ ಮೋಹನ ರೆಡ್ಡಿ ಭೇಟಿಯಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಕಳೆದ ತಿಂಗಳು ಆಂಧ್ರಪ್ರದೇಶದ ಮಾಜಿ ಸಿಎಂ, ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರು ಸಹ ಅಮಿತ್ ಶಾ ಅವರನ್ನು ಭೇಟಿಯಾಗಿ ಮೈತ್ರಿಯ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಇಬ್ಬರು ನಾಯಕರು ಬಿಜೆಪಿಯೊಂದಿಗೆ ಸಖ್ಯ ಬೆಳೆಸುತ್ತಿರುವ ವಿಚಾರವೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಆಂಧ್ರಪ್ರದೇಶದ ಈ ಎರಡು ಪಕ್ಷಗಳಲ್ಲಿ ಒಂದರ ಜೊತೆ ಬಿಜೆಪಿ ಮೈತ್ರಿ ಹೊಂದಲಿದೆ ಎಂಬ ಅಭಿಪ್ರಾಯವನ್ನು ರಾಜಕೀಯ ತಜ್ಞರು ವ್ಯಕ್ತಪಡಿಸಿದ್ದಾರೆ. ಆದರೆ, ಜಗನ್ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲವೆಂದು ವರದಿಗಳು ಹೇಳಿವೆ.
ಆಂಧ್ರಪ್ರದೇಶದ ಜನರು ಸಿಎಂ ಜಗನ್ ಮೋಹನ್ ರೆಡ್ಡಿ ಗುಲಾಮರಲ್ಲ ಎಂದ ಪವನ್ ಕಲ್ಯಾಣ್
ಜಗನ್ ಭೇಟಿಯ ಬಗ್ಗೆ ವರದಿಗಳು ಹೇಳುವುದೇನು?
ಆಂಧ್ರಪ್ರದೇಶದ ಅಭಿವೃದ್ಧಿ ಹಾಗೂ ಯೋಜನೆಗಳ ಅನುಷ್ಠಾನದ ವಿಚಾರವಾಗಿ ಜಗನ್ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗುತ್ತಿದೆ.
ಪೊಲಾವರಂ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಹಣವನ್ನು ನೀಡಬೇಕು. ಈ ಯೋಜನೆಗೆ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣವನ್ನು ತಕ್ಷಣವೇ ಮರುಪಾವತಿಸಬೇಕು. ಇದಕ್ಕಾಗಿ ಸೂಕ್ತ ನೆರವು ನೀಡಬೇಕು ಎಂದು ಪ್ರಧಾನಿಗೆ ಜಗನ್ ಮನವಿ ಮಾಡಿದರು ಎಂದು ವರದಿಯಾಗಿದೆ.
ಯೋಜನಾ ವೆಚ್ಚಕ್ಕೆ ಅನುಮೋದನೆ ನೀಡುವಂತೆ ಜಗನ್ ಕೋರಿದ್ದಾರೆ. ತಾಂತ್ರಿಕ ಸಲಹೆಗಾರರ ಸಮಿತಿಯು ನಿರ್ಧರಿಸಿದಂತೆ 55,548.87 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಫಲಾನುಭವಿಗಳ ಗುರುತನ್ನು ತಕ್ಷಣವೇ ಮರುಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಕೋರಿದ್ದಾರೆ.
ವಿಶೇಷ ಸ್ಥಾನಮಾನದ ಮೂಲಕ ಕೇಂದ್ರದಿಂದ ಕೈಗಾರಿಕಾ ವಲಯದ ಬೆಳವಣಿಗೆ, ಉದ್ಯೋಗ ಸೃಷ್ಟಿ, ಅನುದಾನ ಮತ್ತು ತೆರಿಗೆ ರಿಯಾಯ್ತಿಗಳ ಪ್ರಯೋಜನಗಳ ಬಗ್ಗೆ ಅವರು ಪ್ರಧಾನಿಗಳೊಂದಿಗೆ ಜಗನ್ ಮೋಹನ ರೆಡ್ಡಿ ಮಾತನಾಡಿದ್ದಾರೆ ಎಂದು ವರದಿಗಳು ಹೇಳಿವೆ.
English summary
Jagan Mohan Reddy’s meeting with top BJP leaders for the third time in the last six months has led to many speculations
Story first published: Wednesday, July 5, 2023, 20:15 [IST]