Hubballi
lekhaka-Sandesh R Pawar

ಧಾರವಾಡ, ಜೂನ್ 20: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಕೊನೆಗೂ ಎರಡನೇ ಬಾರಿಗೆ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇದರಿಂದ
ಬಿಜೆಪಿಯಿಂದ ವೀಣಾ ಭರದ್ವಾಡ ಮೇಯರ್ ಆಗಿ ಹಾಗೂ ಉಪಮೇಯರ್ ಆಗಿ ಸತೀಶ ಹಾನಗಲ್ ಅವರು ಆಯ್ಕೆಯಾಗಿದ್ದಾರೆ. ಬಿಜೆಪಿ ಪಾಲಿಕೆಯಲ್ಲಿ ಮತ್ತೆ ತನ್ನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಪಾಲಿಕೆಯಲ್ಲಿ ಅಧಿಕಾರ ರಚನೆ ಮಾಡಬೇಕು ಎಂಬ ಕಾಂಗ್ರೆಸ್ ಕನಸು ಕೊನೆಗೂ ಕಮರಿದಂತಾಗಿದೆ.

ಶತಾಯಗತಾಯ ಪಾಲಿಕೆಯಲ್ಲಿ ಅಧಿಕಾರ ರಚನೆ ಮಾಡಲು ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಸಂತೋಷ ಲಾಡ್ ಅವರು ಕಾರ್ಯತಂತ್ರ ರೂಪಿಸಿದ್ದರು. ಆದರೆ, ಅವರ ಕಾರ್ಯತಂತ್ರ ಕೊನೆಗೂ ಫಲಿಸಲಿಲ್ಲ. ಬಿಜೆಪಿ ಗೆಲುವಿನಿಂದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಕೊಟ್ಟಿದ್ದ ಟಾಸ್ಕ್‌ನಲ್ಲಿ ಶೆಟ್ಟರ್ ತೀವ್ರ ಮುಖಭಂಗ ಎದುರಿಸಿದಂತಾಗಿದೆ.
ಕಾಂಗ್ರೆಸ್ ಪಕ್ಷ ಬಿಜೆಪಿ ಸದಸ್ಯರಿಗೆ ಆಸೆ, ಆಮಿಷಗಳನ್ನು ಒಡ್ಡಬಹುದು ಎಂದು ಬಿಜೆಪಿ ತನ್ನೆಲ್ಲ ಪಾಲಿಕೆ ಸದಸ್ಯರನ್ನು ದಾಂಡೇಲಿ ರೆಸಾರ್ಟ್‌ಗೆ ಶಿಫ್ಟ್ ಮಾಡಿತ್ತು. ಚುನಾವಣೆ ದಿನವೇ ಅವರನ್ನು ದಾಂಡೇಲಿಯಿಂದ ನೇರವಾಗಿ ಧಾರವಾಡದ ಮಂದಾರ ಹೋಟೆಲ್‌ಗೆ ಕರೆತಂದು ಅಲ್ಲಿಂದ ನೇರವಾಗಿ ಪಾಲಿಕೆಗೆ ಕರೆತಂದಿತು. ಬಿಜೆಪಿ ಪಕ್ಷದ ಸದಸ್ಯರು ಅಡ್ಡ ಮತದಾನ ಮಾಡದಂತೆ ಅವರಿಗೆ ವಿಪ್ ಕೂಡ ಜಾರಿ ಮಾಡಲಾಗಿತ್ತು. ಕಾಂಗ್ರೆಸ್, ಬಿಜೆಪಿ, ಎಂಐಎಂ ಹಾಗೂ ಪಕ್ಷೇತರ ಸದಸ್ಯರು ಕೂಡ ಸಭೆಗೆ ಹಾಜರಾಗಿದ್ದರು.
ಹು- ಧಾರವಾಡ ಪಾಲಿಕೆ ಚುನಾವಣೆ: ಕೇಸರಿ ಶಾಲು ಹಾಕಿಕೊಂಡು ನಾಮಪತ್ರ ಸಲ್ಲಿಕೆ: ಬಿಜೆಪಿ ಅಭ್ಯರ್ಥಿ ನಡೆಗೆ
ಎಲ್ಲಾ ಸದಸ್ಯರು ಸಭೆಗೆ ಹಾಜರಾಗುತ್ತಿದ್ದಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಪ್ರಭಾರ ಆಯುಕ್ತ ನಿತೇಶ್ ಪಾಟೀಲ ಅವರು ಸಭೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. 46 ಜನ ಸದಸ್ಯರು ಬಿಜೆಪಿ ಅಭ್ಯರ್ಥಿಗಳ ಪರ ಮತ ಕೈ ಎತ್ತುವ ಮೂಲಕ ಮತ ಚಲಾವಣೆ ಮಾಡಿದರು. ಆ ಮೂಲಕ ಪೂರ್ಣ ಬಹುಮತ ಬಿಜೆಪಿ ಅಭ್ಯರ್ಥಿಗಳ ಪರವಾಗಿಯೇ ಬಂದಿದ್ದರಿಂದ ಆಯುಕ್ತರು ಬಿಜೆಪಿ ಅಭ್ಯರ್ಥಿಗಳನ್ನೇ ಮೇಯರ್ ಹಾಗೂ ಉಪಮೇಯರ್ ಎಂದು ಘೋಷಣೆ ಮಾಡಿದರು.
ಪಾಲಿಕೆಯ ಬಿಜೆಪಿ ಸದಸ್ಯರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಪ್ರದೀಪ್ ಶೆಟ್ಟರ್, ಎಸ್.ವಿ.ಸಂಕನೂರ ಕೂಡ ಆಗಮಿಸಿದ್ದರು. ಕಾಂಗ್ರೆಸ್ ಸದಸ್ಯರು ಕೂಡ ಪಾಲಿಕೆಗೆ ಬಂದು ಪೈಪೋಟಿ ನೀಡಿದರು. ಶಾಸಕ ಪ್ರಸಾದ್ ಅಬ್ಬಯ್ಯ ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಚಲಾವಣೆಗೆ ಆಗಮಿಸಿದ್ದರು.
ಕೊನೆಗೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಹೆಚ್ಚಿನ ಮತಗಳು ಬಂದಿದ್ದರಿಂದ 22ನೇ ಅವಧಿಗೆ ವೀಣಾ ಭರದ್ವಾಡ ಅವರು ಮೇಯರ್ ಹಾಗೂ ಹಾಗೂ ಸತೀಶ್ ಹಾನಗಲ್ ಅವರು ಉಪಮೇಯರ್ ಆಗಿ ಆಯ್ಕೆಯಾದರು. ಪಾಲಿಕೆ ಅಧಿಕಾರ ಬಿಜೆಪಿ ತೆಕ್ಕೆಗೆ ಬೀಳುತ್ತಿದ್ದಂತೆ ಪಾಲಿಕೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ಮಾಜಿ ಶಾಸಕ ಅಮೃತ ದೇಸಾಯಿ ಕೂಡ ಪಾಲಿಕೆಗೆ ಬಂದು ನೂತನ ಮೇಯರ್ ಹಾಗೂ ಉಪಮೇಯರ್ ಅವರಿಗೆ ಶುಭಾಶಯ ಕೋರಿದರು.
English summary
BJP won in Hubballi-Dharwad Municipal Corporation Mayor And Deputy Mayor Election oKnow more
Story first published: Tuesday, June 20, 2023, 15:03 [IST]