ವಿಲ್ ಯಂಗ್ ಮತ್ತು ಲಾಥಮ್ ಅಬ್ಬರ
ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ ಉತ್ತಮ ಆರಂಭ ಪಡೆಯಲಿಲ್ಲ. ಪವರ್ಪ್ಲೇನಲ್ಲೇ ಪ್ರಮುಖ 2 ವಿಕೆಟ್, 73 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಡೆವೊನ್ ಕಾನ್ವೆ 10, ವಿಲಿಯಮ್ಸನ್ 1 ರನ್, ಡ್ಯಾರಿಲ್ ಮಿಚೆಲ್ 10 ರನ್ ಗಳಿಸಿ ನಿರಾಸೆ ಮೂಡಿಸಿದರು. ಸಂಕಷ್ಟದಲ್ಲಿದ್ದರೂ ಬ್ಯಾಟಿಂಗ್ ವೇಗವನ್ನು ಕಾಯ್ದುಕೊಂಡ ಕಿವೀಸ್ ಸ್ಕೋರ್ ಗಳಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಆರಂಭಿಕ ಆಟಗಾರ ವಿಲ್ ಯಂಗ್ ಮತ್ತು ಟಾಮ್ ಲಾಥಮ್ 4ನೇ ವಿಕೆಟ್ಗೆ 118 ರನ್ಗಳ ಪಾಲುದಾರಿಕೆ ನೀಡಿದರು. ಅದರಲ್ಲಿ ವಿಲ್ ಯಂಗ್ 113 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಿತ 107 ರನ್ ಬಾರಿಸಿದರು. ಬಳಿಕ ಟಾಮ್ ಲಾಥಮ್ ಕೂಡ ಭರ್ಜರಿ ಶತಕ ಬಾರಿಸಿದರು. 104 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 118 ರನ್ ಸಿಡಿಸಿದರು. 5ನೇ ವಿಕೆಟ್ಗೆ ಗ್ಲೆನ್ ಫಿಲಿಪ್ಸ್ ಜೊತೆ ಸೇರಿ 125 ರನ್ಗಳ ಜೊತೆಯಾಟವಾಡಿದರು. ಫಿಲಿಪ್ಸ್ 39 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಿತ 61 ರನ್ ಬಾರಿಸಿದರು. ಒಟ್ಟಾರೆ ಪಾಕಿಸ್ತಾನದ ಬೌಲಿಂಗ್ ವಿಭಾಗ ಕಿವೀಸ್ ಮೇಲೆ ಒತ್ತಡ ಹಾಕಲು ವಿಫಲವಾಯಿತು.