Karnataka
oi-Gururaj S
ಬೆಂಗಳೂರು, ಜುಲೈ 02: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ಮೈತ್ರಿಕೂಟ ರಚನೆಯಾಗಿದೆ. ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಮೊದಲ ಸಭೆ ನಡೆದಿದೆ. ಬೆಂಗಳೂರಿನಲ್ಲಿ ಜುಲೈ 13 ಮತ್ತು 14ರಂದು ಮತ್ತೊಂದು ಸಭೆ ನಿಗದಿಯಾಗಿದೆ.
ಪಾಟ್ನಾದಲ್ಲಿ ನಡೆದ ಸಭೆಯಲ್ಲಿ 16 ವಿರೋಧ ಪಕ್ಷಗಳು ಪಾಲ್ಗೊಂಡಿದ್ದವು. 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು. ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದಲ್ಲಿ ಮತ್ತೊಂದು ಸಭೆ ನಡೆಯಲಿದೆ.
ಬಿಜೆಪಿ ವಿರುದ್ಧ ಒಂದಾಗಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಜೆಡಿಎಸ್ ಪಕ್ಷ ಹೇಳಿದೆ. ಪಾಟ್ನಾದಲ್ಲಿ ನಡೆದ ಸಭೆಗೆ ಸಹ ಜೆಡಿಎಸ್ ನಾಯಕರು ಗೈರಾಗಿದ್ದದರು. ಲೋಕಸಭೆಯಲ್ಲಿ ಜೆಡಿಎಸ್ ಒಂದು ಸದಸ್ಯ ಬಲ ಹೊಂದಿದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ರಾಜ್ಯಸಭಾ ಸದಸ್ಯರಾಗಿದ್ದಾರೆ.
ಸಭೆಗೆ ಆಹ್ವಾನವಿಲ್ಲ, ಹೋಗಲ್ಲ; ಭಾನುವಾರ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ, “ನಮ್ಮದು ಸಣ್ಣ ಪಕ್ಷ. ಅದನ್ನು ಬೆಳೆಸುತ್ತೇವೆ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಅದಕ್ಕಾಗಿ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ವಿರೋಧಿ ಪಕ್ಷಗಳ ಸಭೆಗೆ ನಮ್ಮ ಪಕ್ಷಕ್ಕೆ ಆಹ್ವಾನ ಕೊಟ್ಟಿಲ್ಲ, ನಮ್ಮನ್ನು ಯಾರೂ ಕರೆದಿಲ್ಲ. ಹೀಗಾಗಿ ಆ ಸಭೆಗೆ ಹೋಗುವುದಿಲ್ಲ” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಸಹ ಉಪಸ್ಥಿರಿದ್ದರು.
ಜೂನ್ 23ರಂದು ವಿರೋಧ ಪಕ್ಷಗಳ ಮೊದಲ ಸಭೆ ಪಾಟ್ನಾದಲ್ಲಿ ನಡೆದಿತ್ತು. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಸಭೆಯ ಬಳಿಕ ಮುಂದಿನ ಸಭೆಯ ದಿನಾಂಕ ಪ್ರಕಟಿಸಿದ್ದರು. 2ನೇ ಸಭೆಯನ್ನು ಶಿಮ್ಲಾದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಭಾರೀ ಮಳೆಯ ಕಾರಣ ಬೆಂಗಳೂರಿನಲ್ಲಿ ಸಭೆ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಮಾನಾಡಿದ್ದ ಶರದ್ ಪವಾರ್, “ಸಭೆಯಲ್ಲಿ ನಾವು ಹೇಗೆ ಒಗ್ಗಟ್ಟಾಗಿರಬೇಕು, ಹೇಗೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಬೇಕು ಎಂದು ಚರ್ಚೆ ನಡೆಸಿದ್ದೇವೆ. ನಾವು ಪ್ರಸ್ತುತ ಕೇಂದ್ರ ಸರ್ಕಾರದ ಸಂಸ್ಥೆಗಳ ದುರುಪಯೋಗದ ಕುರಿತು ಹೋರಾಟ ಮಾಡುವ ತಂತ್ರ ರೂಪಿಸುತ್ತಿದ್ದೇವೆ” ಎಂದು ಶರದ್ ಪವಾರ್ ಹೇಳಿದ್ದರು.
ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ದೆಹಲಿ ಮತ್ತು ಪಂಜಾಬ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಎಪಿ ಪಕ್ಷ ಮುಂದೆ ನಡೆಯುವ ಯಾವ ವಿರೋಧ ಪಕ್ಷಗಳ ನಡುವಿನ ಸಭೆಗೂ ಹಾಜರಾಗುವುದಿಲ್ಲ ಎಂದು ಈಗಾಗಲೇ ಹೇಳಿದೆ.
ಈಗ ಬಿಜೆಪಿ ವಿರೋಧ ಪಕ್ಷಗಳ ಸಭೆಗೆ ಹಾಜರಾಗುವುದಿಲ್ಲ ಎಂದು ಜೆಡಿಎಸ್ ಪಕ್ಷ ಸಹ ಹೇಳಿದೆ. ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಎಲ್ಲಾ ವಿರೋಧ ಪಕ್ಷಗಳು ಬಹಿಷ್ಕಾರ ಮಾಡಿದ್ದವು. ಆದರೆ ಎಚ್. ಡಿ. ದೇವೇಗೌಡ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
English summary
Will Not attend opposition parties meeting in Bengaluru on July 13 and 14 said Karnataka former chief minister H. D. Kumaraswamy. Meeting will be held to strategise a united front against the BJP.
Story first published: Sunday, July 2, 2023, 15:37 [IST]