Silk Smitha: ಪರದೆಯ ಮೇಲೆ ಮೋಡಿ, ಬದುಕಿನಲ್ಲಿ ನೋವು; ಸಿಲ್ಕ್ ಸ್ಮಿತಾ ಹೇಳದೆ ಉಳಿದ ಕಥೆ! | | ACTPnews

Silk Smitha: ಪರದೆಯ ಮೇಲೆ ಮೋಡಿ, ಬದುಕಿನಲ್ಲಿ ನೋವು; ಸಿಲ್ಕ್ ಸ್ಮಿತಾ ಹೇಳದೆ ಉಳಿದ ಕಥೆ! |


36ನೇ ವಯಸ್ಸಿನಲ್ಲೇ ಸಿಲ್ಕ್ ಸ್ಮಿತಾ ಬದುಕಿಗೆ ಅಂತ್ಯ

ಸಿಲ್ಕ್ ಸ್ಮಿತಾ 1996ರ ಸೆಪ್ಟೆಂಬರ್ 23ರಂದು ಚೆನ್ನೈನ ಕೋಡಂಬಾಕಂನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಗ ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ನಟಿ ಸಾವಿನ ಕುರಿತು ನಡೆದ ಅಧಿಕೃತ ಪರೀಕ್ಷೆ ಮತ್ತು ಮರಣೋತ್ತರ ವರದಿಯಲ್ಲಿ ಆತ್ಮಹತ್ಯೆ ಎಂದು ದಾಖಲಾಗಿತ್ತು. ಆದರೆ ಸ್ಮಿತಾ ಸಾವಿನ ಸುತ್ತ ಹಲವು ಪ್ರಶ್ನೆಗಳು ಮತ್ತು ಚರ್ಚೆಗಳು ನಂತರವೂ ಮುಂದುವರಿದಿವೆ. ಅಲ್ಪಾವಧಿಯಲ್ಲೇ ಚಿತ್ರರಂಗದಲ್ಲಿ ದೊಡ್ಡ ಹೆಸರು ಗಳಿಸಿದ್ದ ನಟಿಯ ಅಕಾಲಿಕ ಅಂತ್ಯ ಅವರ ಅಭಿಮಾನಿಗಳು ಮತ್ತು ಚಿತ್ರರಂಗದವರಲ್ಲಿ ಆಘಾತ ಮೂಡಿಸಿತ್ತು.

ಸಿಲ್ಕ್ ಸ್ಮಿತಾ ನಿಜವಾದ ಹೆಸರು ವಿಜಯಲಕ್ಷ್ಮಿ. ಆಂಧ್ರಪ್ರದೇಶದ ಏಲೂರು ಸಮೀಪದ ಪ್ರದೇಶದಲ್ಲಿ ಜನಿಸಿದರು ಎಂದು ದಾಖಲೆಗಳು ಹೇಳುತ್ತವೆ. ಬಾಲ್ಯದಲ್ಲೇ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ತಂದೆ ಕುಟುಂಬವನ್ನು ತೊರೆದ ಬಳಿಕ ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ಜೀವನ ಸಾಗಿಸುವ ಜವಾಬ್ದಾರಿ ಹೆಚ್ಚಾಯಿತು. ಆರ್ಥಿಕ ಸಮಸ್ಯೆಗಳ ಕಾರಣದಿಂದಾಗಿ ವಿಜಯಲಕ್ಷ್ಮಿ ನಾಲ್ಕನೇ ತರಗತಿಯಲ್ಲೇ ಶಾಲಾ ಶಿಕ್ಷಣವನ್ನು ನಿಲ್ಲಿಸಬೇಕಾಯಿತು.

ಬಾಲ್ಯದಿಂದಲೂ ಸಿನಿಮಾ ಕನಸು

ವಿಜಯಲಕ್ಷ್ಮಿಗೆ ಚಿಕ್ಕ ವಯಸ್ಸಿನಿಂದಲೇ ಚಿತ್ರರಂಗ ಪ್ರವೇಶಿಸಬೇಕೆಂಬ ಆಸೆ ಇತ್ತು. ಜೀವನದಲ್ಲಿ ಹಲವು ಕಷ್ಟಗಳು ಎದುರಾದರೂ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಕನಸನ್ನು ಅವರು ಕೈಬಿಡಲಿಲ್ಲ. ಹದಿಹರೆಯದಲ್ಲೇ ಮದುವೆಯಾದರೂ ಆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ನಂತರ ಮದ್ರಾಸ್‌ಗೆ ತೆರಳಿದ ಸಿನಿಮಾದಲ್ಲಿ ಅವಕಾಶಕ್ಕಾಗಿ ಪ್ರಯತ್ನ ಆರಂಭಿಸಿದರು.

ಟಚ್‌ಅಪ್ ಗರ್ಲ್ ಆಗಿ ಆರಂಭವಾದ ಪಯಣ

ಮದ್ರಾಸ್‌ಗೆ ಬಂದ ಬಳಿಕ ವಿಜಯಲಕ್ಷ್ಮಿ ನಟಿಯೊಬ್ಬರ ಬಳಿ ಟಚ್‌ಅಪ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಸ್ಮಿತಾ ಮನಸ್ಸಿನಲ್ಲಿದ್ದದ್ದು ಮಾತ್ರ ನಟಿಯಾಗಬೇಕೆಂಬ ಕನಸು. ಚಿತ್ರರಂಗದ ಒಳಜಗತ್ತನ್ನು ಹತ್ತಿರದಿಂದ ನೋಡುತ್ತಲೇ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದರು. ಕೊನೆಗೆ ಪರಿಶ್ರಮಕ್ಕೆ ಫಲ ಸಿಕ್ಕಿತು ಮತ್ತು ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳುವ ಅವಕಾಶ ದೊರೆಯಿತು.

1979ರಲ್ಲಿ ಆಂಥೋನಿ ಈಸ್ಟ್‌ಮನ್ ನಿರ್ದೇಶನದ ಮಲಯಾಳಂ ಚಿತ್ರ ಇನಾಯೆತೆಡಿ ಮೂಲಕ ವಿಜಯಲಕ್ಷ್ಮಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ತಮಿಳು ಚಿತ್ರರಂಗದಲ್ಲಿ ನಿರ್ದೇಶಕ ವಿನು ಚಕ್ರವರ್ತಿ ಅವರ ವಂಡಿಚಕ್ರಂ ಸಿನಿಮಾ ಸ್ಮಿತಾ ಬದುಕಿಗೆ ಮಹತ್ವದ ತಿರುವು ನೀಡಿತು.

ಈ ಚಿತ್ರದಲ್ಲಿ ನಟಿ ಬಾರ್ ಡ್ಯಾನ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಹಾಡು ಮತ್ತು ಪಾತ್ರ ಪ್ರೇಕ್ಷಕರ ಗಮನ ಸೆಳೆಯಿತು. ಇದೇ ಪಾತ್ರದ ಹೆಸರಿನಿಂದ ವಿಜಯಲಕ್ಷ್ಮಿ ಸಿಲ್ಕ್ ಸ್ಮಿತಾ ಎಂಬ ಹೆಸರಿನಿಂದ ಪ್ರಸಿದ್ಧರಾದರು. ಅಲ್ಲಿಂದ ಅವರ ಸಿನಿ ಪಯಣ ಹೊಸ ಹಂತಕ್ಕೆ ಕಾಲಿಟ್ಟಿತು.

ಅವರ ನೃತ್ಯ ಮತ್ತು ಅಭಿನಯದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಬೆಳೆಸಿಕೊಂಡರು. ಸಿನಿಮಾದಲ್ಲಿ ಅವರ ಉಪಸ್ಥಿತಿಯೇ ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸುವ ಮಟ್ಟಕ್ಕೆ ಅವರ ಜನಪ್ರಿಯತೆ ಬೆಳೆದಿತ್ತು. ಆ ಕಾಲದಲ್ಲಿ ಹಾಡಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ನಟಿಯರ ಪೈಕಿ ಸಿಲ್ಕ್ ಸ್ಮಿತಾ ಅವರಿಗೆ ವಿಶೇಷ ಬೇಡಿಕೆ ಇತ್ತು ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿದ್ದವು.

ಸಿಲ್ಕ್ ಸ್ಮಿತಾ ವೃತ್ತಿಜೀವನದಲ್ಲಿ ಹಲವು ಪ್ರಮುಖ ನಟರೊಂದಿಗೆ ಕೆಲಸ ಮಾಡಿದ ಅನುಭವವೂ ಇದೆ. ಶಿವಾಜಿ ಗಣೇಶನ್, ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ ಸೇರಿದಂತೆ ದಕ್ಷಿಣ ಭಾರತದ ಹಲವು ದಿಗ್ಗಜ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪರದೆಯ ಮೇಲೆ ಅವರ ವಿಭಿನ್ನ ವ್ಯಕ್ತಿತ್ವ ಮತ್ತು ಗ್ಲಾಮರ್‌ಪೂರ್ಣ ಉಪಸ್ಥಿತಿ ಆ ಕಾಲದ ಪ್ರಮುಖ ತಾರೆಗಳಲ್ಲಿ ಒಬ್ಬರನ್ನಾಗಿ ಮಾಡಿತು. ಆದರೆ ಅವರ ಬದುಕಿನ ಅಂತ್ಯ ಮಾತ್ರ ಅತ್ಯಂತ ನೋವಿನ ಅಧ್ಯಾಯವಾಗಿ ಉಳಿಯಿತು. 1996ರಲ್ಲಿ ಅವರು ನಿಧನರಾದರೂ, ಸಿಲ್ಕ್ ಸ್ಮಿತಾ ಎಂಬ ಹೆಸರು ದಕ್ಷಿಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಂದಿಗೂ ಚರ್ಚೆಯಾಗುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed