Bengaluru
oi-Naveen Kumar N
ಬೆಂಗಳೂರು ಮಹಾನಗರದ ಹೆಬ್ಬಾಗಿಲು ಎಂದೇ ಪರಿಗಣಿಸುವ ಗೊರಗುಂಟೆಪಾಳ್ಯದ ಟ್ರಾಫಿಕ್ ಸಮಸ್ಯೆ ಇಲ್ಲಿನ ಜನರನ್ನು ಹೈರಾಣಾಗಿಸಿತ್ತು. ಒಮ್ಮೆ ಟ್ರಾಫಿಕ್ನಲ್ಲಿ ಸಿಲುಕಿದರೆ ಕನಿಷ್ಠ 5-15 ನಿಮಿಷ ಕಾಯಬೇಕಾಗುತ್ತಿತ್ತು. ಕೆಲವು ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಿರುತ್ತಿತ್ತು.
ಆದರೆ, ಗೊರಗುಂಟೆಪಾಳ್ಯ ಜಂಕ್ಷನ್ ಮತ್ತು ಸಿಎಂಐಟಿ ಜಂಕ್ಷನ್ನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಪೊಲೀಸರು ಹೊಸ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದು ಸೋಮವಾರದಿಂದ ಜಾರಿ ಮಾಡಿದ್ದಾರೆ. ಇದರೊಂದಿಗೆ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವ ವಿಶ್ವಾಸದಲ್ಲಿದ್ದಾರೆ.
ಸುಮನಹಳ್ಳಿ ರಿಂಗ್ರಸ್ತೆ ಕಡೆಯಿಂದ ಚಲಿಸುವ ತುಮಕೂರು ಮತ್ತು ಹೆಬ್ಬಾಳ ಕಡೆಗೆ ಚಲಿಸುವ ಎಲ್ಲಾ ವಾಹನಗಳು ಲಗ್ಗೆರೆ ಬ್ರಿಡ್ಜ್ ದಾಟಿದ ಬಳಿಕ ಮುಂದೆ ಸಾಗಿ ಮಾಡ್ರನ್ ಬ್ರೆಡ್ ಫ್ಯಾಕ್ಟರಿ ಹತ್ತಿರ ಎಡತಿರುವು ಪಡೆದು ಮುಂದೆ ಸಾಗಿ ನಂತರ ಬಲ ತಿರುವು ಪಡೆದು ಅಲ್ಲಿಂದ ತುಮಕೂರು ರಸ್ತೆಗೆ ಸಂಪರ್ಕಿಸಬಹುದು.
ಹೆಬ್ಬಾಳ ಕಡೆ ಸಾಗುವ ವಾಹನಗಳು ಎಸ್ಆರ್ಎಸ್ ಜಂಕ್ಷನ್ ಬಳಿ ಯೂ-ಟರ್ನ್ ಪಡೆದು ಬೆಂಗಳೂರು ಅಥವಾ ಹೆಬ್ಬಾಳದ ಕಡೆಗೆ ಚಲಿಸಬಹುದಾಗಿದೆ ಎಂದು ಯಶವಂತಪುರ ಸಂಚಾರ ಪೊಲೀಸ್ ಠಾಣೆ ಮಾಹಿತಿ ನೀಡಿದೆ.
ಗೊರಗುಂಟೆಪಾಳ್ಯ ಜಂಕ್ಷನ್ /ಸಿ.ಎಂ.ಟಿ.ಐ ಜಂಕ್ಷನ್
#Goraguntepalya_Junction and #CMTI_Junction pic.twitter.com/k7eU4QP8vg— YASHAVANTHAPURA TRAFFIC BTP (@yspuratrfps) June 18, 2023
ಜಾಲಹಳ್ಳಿ ಕ್ರಾಸ್ ಜಂಕ್ಷನ್ ಅಂಡರ್ ಪಾಸ್ ನಿರ್ಮಾಣ
ಇನ್ನು 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಾಲಹಳ್ಳಿ ಕ್ರಾಸ್ ಜಂಕ್ಷನ್ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಕೂಡ ಆರಂಭವಾಗಿದ್ದು, ಅಂಡರ್ ಪಾಸ್ ಕಾಮಗಾರಿ ಮುಕ್ತಾಯವಾದ ಬಳಿಕ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಕಡಿಮೆಯಾಗಲಿದೆ. ಆದರೆ ಅಂಡರ್ ಪಾಸ್ ನಿರ್ಮಾಣಕ್ಕೆ ಇನ್ನೂ ಎರಡು ವರ್ಷಗಳ ಕಾಲಾವಕಾಶ ಬೇಕಾಗಿದ್ದು ಅದುವರೆಗೂ ಟ್ರಾಫಿಕ್ ಕಿರಿ ಕಿರಿ ತಡೆದುಕೊಳ್ಳಬೇಕಾಗುತ್ತದೆ. ಶೀಘ್ರದಲ್ಲೇ ಸಂಚಾರ ಪೊಲೀಸರು ಬದಲೀ ಮಾರ್ಗಗಳನನ್ನು ತಿಳಿಸಲಿದ್ದಾರೆ.
ಸಂಚಾರ ನಿಯಂತ್ರಣಕ್ಕೆ ಡ್ರೋಣ್ ಬಳಕೆ
ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಪೊಲೀಸ್ ಇಲಾಖೆ ಡ್ರೋಣ್ಗಳ ಮೊರೆ ಹೋಗಿದೆ. ಅತಿ ಹೆಚ್ಚು ಟ್ರಾಫಿಕ್ ಇರುವ ಪ್ರಮುಖ 8 ಜಂಕ್ಷನ್ಗಳಲ್ಲಿ ಡ್ರೋಣ್ ಕ್ಯಾಮರಾಗಳು ಕಾರ್ಯನಿರ್ವಹಿಸಲಿವೆ. ಸಂಚಾರ ದಟ್ಟಣೆಗೆ ಪ್ರಮುಖ ಕಾರಣಗಳನ್ನು ತಿಳಿಯಲು ಈ ಡ್ರೋಣ್ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಸಂಚಾರ ದಟ್ಟಣೆಯ ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಯಾವ ಸಮಯದಲ್ಲಿ ಸಂಚಾರ ಹೆಚ್ಚಿದೆ, ಯಾವ ಸಮಯದಲ್ಲಿ ಟ್ರಾಫಿಕ್ ಆಗುತ್ತದೆ, ಸಂಚಾರ ದಟ್ಟಣೆಗೆ ಕಾರಣಗಳೇನು ಎನ್ನುವ ಬಗ್ಗೆ ಅಧ್ಯಯನ ಮಾಡಲಾಗುತ್ತದೆ.
ಪ್ರಾಯೋಗಿಕ ಹಂತದಲ್ಲಿ ಹೆಬ್ಬಾಳ ಮೇಲ್ಸೇತುವೆ, ಸಾರಕ್ಕಿ ಜಂಕ್ಷನ್, ಸಿಲ್ಕ್ ಬೋರ್ಡ್ ಜಂಕ್ಷನ್, ಬನಶಂಕರಿ ಬಸ್ ನಿಲ್ದಾಣದ ಬಳಿ, ಮಾರತ್ಹಳ್ಳಿ, ಇಬ್ಬಲೂರು ಜಂಕ್ಷನ್, ಕೆ.ಆರ್.ಪುರ ಮೇಲ್ಸೇತುವೆ ಹಾಗೂ ಟ್ರಿನಿಟಿ ಜಂಕ್ಷನ್ ನಲ್ಲಿ ಬಳಕೆ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಸದ್ಯ 1 ಕೋಟಿ ವಾಹನಗಳಿದ್ದು, 70 ಲಕ್ಷಕ್ಕೂ ಅಧಿಕ ವಾಹನಗಳು ಪ್ರತಿನಿತ್ಯ ರೋಡಿಗಿಳಿಯುತ್ತಿವೆ.
English summary
There will be no traffic congestion at Goraguntepalya Junction and CMIT Junction starting from June 19. Traffic police have implemented measures to control the traffic flow at these junctions.
Story first published: Monday, June 19, 2023, 14:30 [IST]