ಮುಂಗಾರು ವೇಳೆಯಲ್ಲಿ ಭೇಟಿ ನೀಡಲೇಬೇಕಾದ 7 ಆಕರ್ಷಕ ಪ್ರವಾಸಿ ತಾಣಗಳು | Places To Visit in Monsoon: Know 7 Best Tourist Spots for Rainy Season Near Bengaluru

Travel

oi-Naveen Kumar N

|

Google Oneindia Kannada News

ವಾರಪೂರ್ತಿ ಆಫೀಸು, ಮನೆ, ಬೆಂಗಳೂರು ಟ್ರಾಫಿಕ್ ನೋಡಿ ನೋಡಿ ಸಾಕಾಗಿದೆಯಾ? ಒಂದೆರಡು ದಿನ ಹೊರಗೆ ಹೋಗಿ ಪ್ರಕೃತಿಯ ನಡುವೆ ಕಳೆದ ಹೋಗುವ ಮನಸ್ಸಾಗಿದೆಯಾ? ಮಳೆಗಾಲ ಬೇರೆ ಶುರುವಾಗಿದೆ ಎಲ್ಲಿಗೆ ಹೋಗೋದು ಎನ್ನುವ ಪ್ರಶ್ನೆ ಕಾಡುತ್ತಿದ್ದರೆ, ನಿಮಗಾಗಿ ಮಾನ್ಸೂನ್ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ.

ಮುಂಗಾರು ಮಳೆಯಲ್ಲಿ ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಕಾಫಿ ಹೀರಲು ಇಷ್ಟಪಡುವವರು, ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಾ ಚಾರಣ ಮಾಡಲು ಇಷ್ಟಪಡುವವರು, ಬೋರ್ಗರೆದು ಧುಮ್ಮಿಕ್ಕುವ ರುದ್ರ ರಮಣೀಯ ಜಲಪಾತವನ್ನು ನೋಡುತ್ತಾ ಪ್ರಕೃತಿಯ ಜೊತೆ ಕಳೆದುಹೋಗುವವರಿಗೆ ಇಲ್ಲಿದೆ ಅತ್ಯುತ್ತಮ ಟ್ರಾವೆಲ್ ಗೈಡ್.

ಕರ್ನಾಟಕ ಮಾತ್ರವಲ್ಲದೆ ಬೆಂಗಳೂರಿಗೆ ಸಮೀಪದಲ್ಲಿರುವ ಪಕ್ಕದ ರಾಜ್ಯಗಳ ಅದ್ಭುತ ಪ್ರವಾಸಿ ತಾಣಗಳ ಬಗ್ಗೆ ಕೂಡ ಮಾಹಿತಿ ಕೊಡಲಾಗಿದೆ. ಪ್ರವಾಸಿ ಪ್ರಿಯರಿಗೆ, ಚಾರಣ ಪ್ರಿಯರಿಗೆ, ಪ್ರಕೃತಿಯನ್ನು ಆಸ್ವಾದಿಸುವ ಮನಸ್ಸುಳ್ಳವರಿಗೆ ಕೆಲವು ಉತ್ತಮ ತಾಣಗಳನ್ನು ಪರಿಚಯ.

Places To Visit in Bangalore

1) ಸಾಯೋದ್ರೊಳಗೆ ಒಮ್ಮೆ ನೋಡು ಜೋಗದ್ ಗುಂಡಿ

ಜೋಗ್ ಫಾಲ್ಸ್, ಜಗತ್ತಿನ 7ನೇ ಆಳವಾದ ಮತ್ತು ಭಾರತದ ಎರಡನೇ ಅತಿ ದೊಡ್ಡ ಜಲಪಾತ. ಶರಾವತಿ ನದಿ ಇಲ್ಲಿ 253 ಮೀಟರ್ ಎತ್ತರದಿಂದ ಬೀಳುವುದನ್ನು ನೋಡುವುದೇ ಒಂದು ರೋಮಾಂಚನ ಅನುಭವ. ರಾಜಾ, ರಾಣಿ, ರೋರರ್ ಮತ್ತು ರಾಕೆಟ್ ನಾಲ್ಕು ಜಲಪಾತಗಳು ಒಟ್ಟಾಗಿ ಧುಮ್ಮಿಕ್ಕಿ ಭೋರ್ಗರೆಯುತ್ತವೆ. ಸುತ್ತಲೂ ಇರುವ ಹಸಿರ ಸಿರಿ, ಮಧ್ಯೆ ಹಾಲ್ನೊರೆಯಂತೆ ಕಂಗೊಳಿಸುವ ಜಲಪಾತ ಪ್ರಕೃತಿ ಪ್ರಿಯರಿಗೆ ಮಾತ್ರವಲ್ಲಿ ಚಾರಣಿಗರಿಗೂ ಸ್ವರ್ಗವೇ ಸರಿ.

1400 ಮೆಟ್ಟಿಲುಗಳ ಮೂಲಕ ಬೆಟ್ಟದ ಅಡಿಗೆ ನೀವು ತಲುಪಬಹುದು, ಅಲ್ಲಿಂದ ನಿಮಗೆ ಜಲಪಾತ ಭೋರ್ಗರತೆ, ರುದ್ರ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಿ ಇಲ್ಲಿ ಇಳಿಯುವುದು ಅಪಾಯ, ನೀವು ಸಾಕಷ್ಟು ಎಚ್ಚರಿಕೆಯಿಂದ ಇರಬೇಖಾಗುತ್ತದೆ.

ಕುಟುಂಬದವರ ಜೊತೆ, ಸ್ನೇಹಿತರ ಜೊತೆ ನೀವು ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳ. ಜೋಗ ನೋಡಲು ಎಷ್ಟು ಚಂದವೋ ಅಲ್ಲಿಗೆ ಸಾಗುವ ಹಾದಿ ಕೂಡ ಅಷ್ಟೇ ಸುಂದರ, ಭತ್ತದ ಗದ್ದೆಗಳು, ಹಸಿರು ಕಾಡುಗಳು, ಹೊಳೆಗಳು, ಮಲೆನಾಡಿನ ಹಳ್ಳಿಯ ಮನೆಗಳು, ಮಧ್ಯೆ ಮಧ್ಯೆ ನಿಲ್ಲಿಸಿ ಬಿಸಿ ಬಿಸಿ ಚಹಾ, ಕಾಫಿ ಹೀರುವುದು ಸ್ವರ್ಗವಲ್ಲದೇ ಇನ್ನೇನು.

ಅಬ್ಬಾ.. ಎಂಥಾ ಸೌಂದರ್ಯ! ತಿರುಚ್ಚಿಯ ಈ ಸ್ಥಳ ಸ್ವರ್ಗ! ಬೆಂಗಳೂರಿನಿಂದ ಇಷ್ಟೇ ದೂರದಲ್ಲಿದೆ ಪುಲಿಂಚೋಲೈ....ಅಬ್ಬಾ.. ಎಂಥಾ ಸೌಂದರ್ಯ! ತಿರುಚ್ಚಿಯ ಈ ಸ್ಥಳ ಸ್ವರ್ಗ! ಬೆಂಗಳೂರಿನಿಂದ ಇಷ್ಟೇ ದೂರದಲ್ಲಿದೆ ಪುಲಿಂಚೋಲೈ….

ಹೋಗುವುದು ಹೇಗೆ?

ಬೆಂಗಳೂರಿನಿಂದ ದಾವಣಗೆರೆ ಮಾರ್ಗವಾಗಿ ತೆರಳಿದರೆ 427 ಕಿ.ಮೀ. ದೂರವಿದೆ. ಸ್ವಂತ ವಾಹನದಲ್ಲಿ ತೆರಳುವವರು ಈ ಮಾರ್ಗದಲ್ಲಿ ತೆರಳಬಹುದು. ಶಿವಮೊಗ್ಗ-ಸಾಗರ ಮಾರ್ಗವಾಗಿ ಕೂಡ ತೆರಳಬಹುದು ಇದು 386 ಕಿಮೀ ಅಂತರವಾಗಿರಲಿದೆ. ರೈಲಿನಲ್ಲಿ ಹೋಗುವವರು ಸಾಗರಕ್ಕೆ ತೆರಳಿ ಅಲ್ಲಿಂದ ಬಸ್‌ ಮೂಲಕ ಜೋಗ್‌ ಫಾಲ್ಸ್‌ಗೆ ಹೋಗಬಹುದು.

Places To Visit in Bangalore

2) ಕಾಫಿ ನಾಡು ಚಿಕ್ಕಮಗಳೂರು

ಬೆಂಗಳೂರಿನಿಂದ 250 ಕಿಮೀ ದೂರದಲ್ಲಿರುವ ಕರ್ನಾಟಕದ ಕಾಫಿನಾಡು ಎಂದೇ ಕರೆಯುವ ಚಿಕ್ಕಮಗಳೂರು ನೀವು ಮಳೆಗಾಲದಲ್ಲಿ ನೀಡಬೇಕಾದ ಸುಂದರ ಪ್ರವಾಸಿ ತಾಣ. ಕಾಳುಮೆಣಸು, ಕಾಫಿ ಎಸ್ಟೇಟ್, ಕಾಡುಗಳು, ಬೆಟ್ಟ-ಗುಡ್ಡಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ.

ಬಾಬಾ ಬುಡನ್‌ಗಿರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕೆಮ್ಮಣ್ಣು ಗುಂಡಿ, ಭದ್ರಾ ವನ್ಯಜೀವಿ ಅಭಯಾರಣ್ಯ, ಕಲ್ಲತಿ ಫಾಲ್ಸ್, ಹೆಬ್ಬೆ ಜಲಪಾತ, ಶೃಂಗೇರಿ ಪ್ರಮುಖ ಪ್ರವಾಸಿ ತಾಣಗಳಾಗಿವೆ, ಸ್ವಂತ ವಾಹನದಲ್ಲಿ ಹೋದರೆ ಈ ಸ್ಥಳಗಳಿಗೆ ಸುಲಭವಾಗಿ ಭೇಟಿ ನೀಡಬಹುದು. ಚಿಕ್ಕಮಗಳೂರಿನಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿರುವ ಮುಳ್ಳಯ್ಯನಗಿರಿಯು ಚಾರಣಕ್ಕೆ ಉತ್ತಮ ಸ್ಥಳ.

Places To Visit in Bangalore

3) ಶಿವನಸಮುದ್ರ ಜಲಪಾತ

ಶಿವನಸಮುದ್ರ ಜಲಪಾತ ಒಂದು ದಿನದ ಪ್ರವಾಸಕ್ಕೆ ಅತ್ಯುತ್ತಮ ಸ್ಥಳವಾಗಿದೆ. ಮಳೆಗಾಲದಲ್ಲಿ ಜಲಪಾತ ಭೋರ್ಗರೆದು ಹರಿಯುವುದರಿಂದ ನೋಡಲು ಅದ್ಭುತವಾಗಿರುತ್ತದೆ. ತುಂಬಿ ಹರಿಯುವ ಸಂದರ್ಭದಲ್ಲಿ ಇದು ವಿಶ್ವ ವಿಖ್ಯಾತ ನಯಾಗರ ಜಲಪಾತದಂತೆ ಕಾಣುತ್ತದೆ. 320 ಅಡಿ ಎತ್ತರದಿಂದ ಬೀಳುವ ಜಲಪಾತ ನೋಡುಗರಲ್ಲಿ ರೋಮಾಂಚನ ಉಂಟುಮಾಡುತ್ತದೆ.

ಗಗನಚುಕ್ಕಿ ಜಲಪಾತ ಮತ್ತು ಭರಚುಕ್ಕಿ ಜಲಪಾತವೆಂದು ಎರಡು ಭಾಗಗಳಾಗಿ ಧುಮ್ಮಿಕ್ಕುತ್ತದೆ. ಒಂದೊಂದು ಜಲಪಾತ 5 ಕಿ.ಮೀ ಅಂತರದಲ್ಲಿವೆ. ಸರಳವಾಗಿ ವಾತಾವರಣವನ್ನು ಆನಂದಿಸುವುದರ ಜೊತೆಗೆ, ಪ್ರವಾಸಿಗರು ತಂಪಾದ ನೀರಿನಲ್ಲಿ ಈಜಬಹುದು. ಏಷ್ಯಾದ ಮೊದಲ ವಿದ್ಯುತ್ ಶಕ್ತಿ ಯೋಜನೆಗಳಲ್ಲಿ ಒಂದಾದ ಜಲವಿದ್ಯುತ್ ಸ್ಥಾವರವು ಇಲ್ಲಿನ ಇನ್ನೊಂದು ಆಕರ್ಷಣೆಯಾಗಿದೆ. ನೀವೇನಾದ್ರು ಮೀನು ಪ್ರಿಯರಾಗಿದ್ದರೆ ಇಲ್ಲಿ ತಾಜಾ ಮೀನುಗಳ ನಾಟಿ ಶೈಲಿಯ ಫ್ರೈ ಕೂಡ ಸಿಗುತ್ತದೆ ಅದನ್ನು ಸವಿಯಬಹುದಾಗಿದೆ. ಶಿವನಸಮುದ್ರ ಬೆಂಗಳೂರಿನಿಂದ 133 ಕಿಲೋ ಮೀಟರ್ ದೂರದಲ್ಲಿದ್ದು, ಕನಕಪುರ ಅಥವಾ ಹಾರೋಹಳ್ಳಿ ಮಾರ್ಗವಾಗಿ ಹೋಗಬಹುದಾಗಿದೆ.

Places To Visit in Bangalore

4) ಪ್ರಕೃತಿ, ಸಾಹಸಿಗರ ಸ್ವರ್ಗ ದಾಂಡೇಲಿ

ಬೆಂಗಳೂರಿನಿಂದ 461 ಕಿಲೋ ಮೀಟರ್ ದೂರದಲ್ಲಿರುವ ದಾಂಡೇಲಿ ಪ್ರಕೃತಿ ಪ್ರಿಯರು ಮತ್ತು ಸಾಹಸಿಗರ ಸ್ವರ್ಗವಾಗಿದೆ. ಬೆಂಗಳೂರಿನಿಂದ 6.5 ಗಂಟೆಗಳ ಪ್ರಯಾಣ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ದಾಂಡೇಲಿ ವನ್ಯಜೀವಿ ಅಭಯಾರಣ್ಯದಿಂದ ಮೊದಲಾಗಿ ಕುಲ್ಗಿ ನೇಚರ್ ಕ್ಯಾಂಪ್‌ನಿಂದ ಶಿರೋಲಿ ಶಿಖರದವರೆಗೆ ಅನೇಕ ರೋಮಾಂಚಕ ಅನುಭವ ಪಡೆಯಬಹುದು.

ಕಾಳಿ ನದಿಯ ದಡದಲ್ಲಿರುವ ದಾಂಡೇಲಿ ದಟ್ಟವಾದ ಕಾಡುಗಳಿಂದ ಆವೃತ್ತವಾಗಿದೆ. ಸಫಾರಿ, ಟ್ರೆಕ್ಕಿಂಗ್ ಜೊತೆ ಇಲ್ಲಿ ಅತ್ಯಂತ್ಯ ಜನಪ್ರಿಯವಾಗಿರುವುದು ರ್‍ಯಾಫ್ಟಿಂಗ್, ಬಂಡೆಗಳ ನಡುವೆ ಬೋರ್ಗರೆಯುತ್ತಾ ಸಾಗುವ ಕಾಳಿ ನದಿಯೊಂದಿಗೆ ರ್‍ಯಾಫ್ಟಿಂಗ್ ಮಾಡುವುದು ರೋಮಾನಂಚನಾರಿ ಅನುಭವ. ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್ ಜೊತೆಗೆ, ಸಂದರ್ಶಕರು ರಾಪ್ಪೆಲಿಂಗ್, ಕಯಾಕಿಂಗ್ ಮತ್ತು ಆಂಗ್ಲಿಂಗ್ ಅನ್ನು ಸಹ ಆನಂದಿಸಬಹುದು.

Places To Visit in Bangalore

5) ಮಾಂದಲಪಟ್ಟಿಯ ಸೊಬಗಿಗೆ ಸಾಟಿ ಏನಿದೆ?

ಮಾಂದಲಪಟ್ಟಿ ಕೊಡಗಿನಲ್ಲಿರುವ ಅದ್ಭುತ ತಾಣ. ನೀವು ಬೆಂಗಳೂರಿನಿಂದ 250 ಕಿಲೋ ಮೀಟರ್ ದೂರವಿರುವ ಮಡಿಕೇರಿಯನ್ನು ತಲುಪಿ ಅಲ್ಲಿಂದ 20 ಕಿಲೋ ಮೀಟರ್ ದೂರದಲ್ಲಿರುವ ಮಾಂದಲಪಟ್ಟಿಯನ್ನು ತಲುಪಬಹುದು.

ಮಳೆಗಾಲದ ಸಂದರ್ಭದಲ್ಲಿ ಆವರಿಸುವ ಮಂಜು, ಮೋಡಗಳು ನಿಮಗೆ ಸ್ವರ್ಗಕ್ಕೆ ಕರೆದೊಯ್ದಂತೆ ಬಾಸವಾಗುತ್ತವೆ. ಚಾರಣಿಗರಿಗೆ ಇದು ಅದ್ಭುತ ಸ್ಥಳವಾಗಿದೆ. ಸ್ವಂತ ವಾಹನದಲ್ಲಿ ಇಲ್ಲಿಗೆ ಹೋಗಲು ಸಾಧ್ಯವಿಲ್ಲ, ಇಲ್ಲಿ ಜೀಪುಗಳು ಬಾಡಿಗೆಗೆ ಲಭ್ಯವಿದ್ದು ಅವುಗಳಲ್ಲಿ ಪರ್ವತದ ತುದಿಗೆ ಹೋಗಬಹುದು. ಪುಷ್ಪಗಿರಿ ಬೆಟ್ಟಗಳ ಭವ್ಯವಾದ ನೋಟಗಳು, ಕನಸಿನ ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದು.

Places To Visit in Bangalore

6) ನೀಲಗಿರಿಯ ತಪ್ಪಲಿನಲ್ಲಿರುವ ಮಸಿನಗುಡಿ

ಮಸಿನಗುಡಿ ಊಟಿಯಿಂದ 30 ಕಿ.ಮೀ., ಬೆಂಗಳೂರಿನಿಂದ 237 ಮತ್ತು ಮೈಸೂರಿನಿಂದ 97 ಕಿ.ಮೀ ದೂರದಲ್ಲಿದೆ. ತಮಿಳುನಾಡಿ ನೀಲಗಿರಿ ಪ್ರದೇಶದಲ್ಲಿರುವ ಈ ಪಟ್ಟಣ ಮಳೆಗಾಲನ್ನು ಅನುಭವಿಸಲು ಅತ್ಯುತ್ತಮ ಸ್ಥಳವಾಗಿದೆ. ಮಸಿನಗುಡಿಯಿಂದ ಮರವಕಂಡಿ ಅಣೆಕಟ್ಟು ಕೇವಲ 1.5 ಕಿ.ಮೀ ದೂರದಲ್ಲಿದ್ದು, ರುದ್ರ ರಮಣೀಯವಾಗಿದೆ.

ಪ್ರಾಣಿ ಪ್ರಿಯರಿಗೆ ಕೂಡ ಇದು ಅತ್ಯುತ್ತಮ ಪ್ರವಾಸಿ ತಾಣವಾಗಿದ್ದು ಅನೇಕ ಪ್ರಾಣಿ, ಪಕ್ಷಿಗಳನ್ನು ನೋಡಬಹುದಾಗಿದೆ. ಕೆಲವೊಮ್ಮೆ ನಿಮಗೆ ಆನೆ, ಹುಲಿಗಳು ಕೂಡ ಕಾಣಸಿಗುತ್ತವೆ. ಹುಲಿಯನ್ನು ವೀಕ್ಷಿಸಲು ನೀವು ಆನೆಯ ಮೇಲೆ ಕೂತು ಸವಾರಿ ಮಾಡಬಹುದು. ಕಾಡಿನಲ್ಲಿ ಅನೇಕ ರೆಸಾರ್ಟ್‌ಗಳಿದ್ದು ಇಲ್ಲಿ ತಂಗಬಹುದಾಗಿದೆ.

Places To Visit in Bangalore

7) ಚೆಂಬ್ರಾ : ಬೆಟ್ಟದ ಮೇಲೊಂದು ಹೃದಯದ ಸರೋವರ!

ಚೆಂಬ್ರಾ ವಯನಾಡ್ ಜಿಲ್ಲೆಯ ಅತಿ ಎತ್ತರದ ಶಿಖರವಾಗಿದೆ. ಶಿಖರದ ತುದಿಯಲ್ಲಿರುವ ಹೃದಯದ ಆಕಾರದ ಕೊಳ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸಮುದ್ರ ಮಟ್ಟದಿಂದ 2,100 ಮೀಟರ್ ಎತ್ತರದಲ್ಲಿದೆ. ಶಿಖರಕ್ಕೆ ಹೋಗುವ ಮಾರ್ಗದಲ್ಲಿ ಜಲಪಾತಗಳು, ಕಾಡುಗಳು ನಿಮ್ಮನ್ನು ಮನಸೂರೆಗೊಳ್ಳುತ್ತವೆ.

ಇಲ್ಲಿ ಟ್ರೆಕ್ಕಿಂಗ್ ಮಾಡಲು ಅನುಮತಿ ಪಡೆಯುವುದು ಕಡ್ಡಾಯಾವಗಿದೆ. ಇದಕ್ಕೆ ಶುಲ್ಕವನ್ನು ನೀಡಬೇಕಾಗುತ್ತದೆ. ಚೆಂಬ್ರಾ ಶಿಖರಕ್ಕೆ ಪೂರ್ಣ ದಿನದ ಟ್ರೆಕ್ಕಿಂಗ್ ಪ್ಯಾಕೇಜ್ ಅನ್ನು ಅರಣ್ಯ ಇಲಾಖೆ ಆಯೋಜಿಸಿದೆ. ಚಹಾ ತೋಟಗಳ ಮೂಲಕ ಮಧ್ಯಮ ಟ್ರೆಕ್ಕಿಂಗ್ ಮಾರ್ಗವು ನಿಮಗೆ ಖುಷಿ ಕೊಡುತ್ತದೆ. ಬೆಳಗ್ಗೆ 7 ಗಂಟೆಗೆ ಟ್ರೆಕ್ಕಿಂಗ್ ಆರಂಭವಾಗುತ್ತದೆ. ಇಲ್ಲಿ ಟ್ರೆಕ್ಕಿಂಗ್ ಮಾಡಲು ಮಧ್ಯಾಹ್ನ 2 ಗಂಟೆಗೆ ತಲುಪಬೇಕಾಗುತ್ತದೆ.

ಬೆಂಗಳೂರಿನಿಂದ ಸುಮಾರು 300 ಕಿಲೋ ಮೀಟರ್ ದೂರದಲ್ಲಿದೆ. ಸ್ವಂತ ವಾಹನದಲ್ಲಿ ಹೋದರೆ ಹೋಗುವ ಮಾರ್ಗದಲ್ಲಿ ಇನ್ನಷ್ಟು ಹಲವು ಸ್ಥಳಗಳಿಗೆ ಭೇಟಿ ನೀಡಬಹುದು. ಹತ್ತಿರದ ರೈಲು ನಿಲ್ದಾಣ: ಕೋಝಿಕ್ಕೋಡ್, ಸುಮಾರು 79 ಕಿ.ಮೀ.

English summary

Explore the 7 best places to visit in Bangalore in Rainy Season and know the must-visit tourist spots in-around Bengaluru for Monsoon: ವಾರಪೂರ್ತಿ ಆಫೀಸು, ಮನೆ, ಬೆಂಗಳೂರು ಟ್ರಾಫಿಕ್ ನೋಡಿ ನೋಡಿ ಸಾಕಾಗಿದೆಯಾ? ಒಂದೆರಡು ದಿನ ಹೊರಗೆ ಹೋಗಿ ಪ್ರಕೃತಿಯ ನಡುವೆ ಕಳೆದ ಹೋಗುವ ಮನಸ್ಸಾಗಿದೆಯಾ? ಮಳೆಗಾಲ ಬೇರೆ ಶುರುವಾಗಿದೆ ಎಲ್ಲಿಗೆ ಹೋಗೋದು ಎನ್ನುವ ಪ್ರಶ್ನೆ ಕಾಡುತ್ತಿದ್ದರೆ, ನಿಮಗಾಗಿ ಮಾನ್ಸೂನ್ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ.

Source link