Karnataka
oi-Reshma P
ಬೆಂಗಳೂರು, ಜುಲೈ 01: ಬಾಂಬೆ ಬಾಯ್ಸ್ ವಿಚಾರ ನಾನು ಪ್ರಸ್ತಾಪ ಮಾಡಿಲ್ಲ. ಬಿಜೆಪಿಯಲ್ಲಿ ತುಂಬ ಅಶಿಸ್ತಿದೆ, ಕಾಂಗ್ರೆಸ್ಸಿನ ಅಶಿಸ್ತಿನ ಗಾಳಿ ಬೀಸಿದೆಯೇ ಎಂದೂ ಕೇಳಿದ್ದರು. ಕಾಂಗ್ರೆಸ್ ಅಶಿಸ್ತು ನಮ್ಮ ಪಕ್ಷದ ಮೇಲೂ ಬೀಸುತ್ತಿದೆ ಎಂದು ಹೇಳಿದ್ದೆ. ಅದನ್ನು ಬಿಜೆಪಿ ಸೇರಿದ 17 ಜನ ಶಾಸಕರ ಜೊತೆ ಸೇರಿಸುವ ಪ್ರಯತ್ನ ನಡೆಯಿತು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇತರ ಪಕ್ಷಗಳಿಂದ 17 ಜನರು ಬಂದ ಬಳಿಕ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದಿದ್ದೆ. ಆದರೆ, ಒಂದು ಟಿ.ವಿ.ಯಿಂದ ಈ ಸಮಸ್ಯೆ ಆಗಿದೆ. ಸಂಬಂಧಿತ ಟಿ.ವಿ.ಗೆ ಕೂಡಲೇ ಮಾತನಾಡಿ, ವಿಷಯ ತಿಳಿಸಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್- ಜೆಡಿಎಸ್ನಿಂದ ನಮ್ಮ ಪಕ್ಷಕ್ಕೆ ಬಂದ ಶಾಸಕರಿಂದ ಅಶಿಸ್ತು ಆಗಿಲ್ಲ. ಅವರಿಂದ ಸರಕಾರ ಅಧಿಕಾರಕ್ಕೆ ಬಂದಿದೆ. ಅವರ ಬಗ್ಗೆ ಒಂದೇ ಒಂದು ಆಪಾದನೆ ಮಾಡಿಲ್ಲ. ಅವರು ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿಗಳನ್ನು ಕೊಟ್ಟು ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದೆ. ಅವರು ಇದೀಗ ವಿದ್ಯುತ್ ದರ ಏರಿಸಿ ಬರೆ ಎಳೆದಿದ್ದಾರೆ. 200 ಯೂನಿಟ್ ವಿದ್ಯುತ್ ಉಚಿತ ಎಂದಿದ್ದರು. ವಿದ್ಯುತ್ ದರ ಏರಿಕೆ, ದಿನ ಬಳಕೆ ವಸ್ತುಗಳ ದರ ಏರಿಕೆಯಿಂದ ಜನಜೀವನ ಕಷ್ಟವಾಗಿದೆ. ನಿರುದ್ಯೋಗ ಭತ್ಯೆ, ಗೃಹಿಣಿಗೆ 2 ಸಾವಿರ ಕೊಡುವುದಾಗಿ ಹೇಳಿದ್ದು, ಅದು ಜಾರಿ ಆಗಿಲ್ಲ.
ಅಕ್ಕಿ ವಿಚಾರದಲ್ಲಿ ಕೇಂದ್ರವನ್ನು ಎಳೆದು ತಂದದ್ದು ಸರಿಯಲ್ಲ. 10 ಕೆಜಿ ಅಕ್ಕಿ ಕೊಡಲಾಗದುದಕ್ಕೆ ಹಣ ಕೊಡಲು ಕೇಳಿದ್ದೆವು. ಈಗ 5 ಕೆಜಿಗೆ 170 ರೂ. ಕೊಡುವುದಾಗಿ ಹೇಳಿದ್ದಾರೆ. ಕೇಂದ್ರದ 5 ಕೆಜಿಗೂ ನಿಮಗೂ ಸಂಬಂಧ ಇಲ್ಲ. ಆದ್ದರಿಂದ ಮಾರುಕಟ್ಟೆ ದರದಂತೆ ಪ್ರತಿ ಮನೆಯ ಪ್ರತಿ ವ್ಯಕ್ತಿಗೂ 10 ಕೆಜಿ ಅಕ್ಕಿಗೆ ಹಣ ಕೊಡಿ ಎಂದು ಆಗ್ರಹಿಸಿದರು. ಈ ವಿಚಾರದಲ್ಲೂ ಟೋಪಿ ಹಾಕದಿರಿ ಎಂದು ತಿಳಿಸಿದರು.
ಮನೆಯೊಡತಿಗೆ 2 ಸಾವಿರ ಕೊಡುವ ವಿಚಾರದಲ್ಲೂ ಮೋಸ ಆಗಿದೆ. ಇದರ ದಿನಾಂಕ ಪ್ರಕಟಿಸಿ ಎಂದು ಒತ್ತಾಯಿಸಿದರು. ಉಚಿತ ಬಸ್ ವಿಚಾರದಲ್ಲೂ ಮೋಸವಾಗಿದೆ; ಖಾಸಗಿ ಬಸ್ಸಿನಲ್ಲಿ ಓಡಾಡುವವರು ನಿಮ್ಮ ಮತದಾರರಲ್ಲವೇ? ಎಂದು ಕೇಳಿದರು. ಆಟೋ ರಿಕ್ಷಾದವರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕುವಂತಾಗಿದೆ ಎಂದರಲ್ಲದೆ, ಖಾಸಗಿ ಬಸ್ ಸಿಬ್ಬಂದಿ ಪರಿಸ್ಥಿತಿ ಸುಧಾರಣೆ ಹೇಗೆ ಎಂದು ಕೇಳಿದರು.
ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ಕೊಟ್ಟ ಆಶ್ವಾಸನೆ ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ಹೋರಾಟ ಮಾಡಲಿದೆ. ವಿಧಾನಮಂಡಲದ ಒಳಗೆ ನಮ್ಮ ಪಕ್ಷದ ಶಾಸಕರು, ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುವ ಪ್ರಸ್ತಾಪವನ್ನು ಅವರು ವಿರೋಧಿಸಿದರು. ಎಲ್ಲ ಸಾಧು ಸಂತರ ಆಶಯದಂತೆ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಬಾರದು; ಗೋಹತ್ಯಾ ನಿಷೇಧ ಕಾಯ್ದೆ ರದ್ದು ಮಾಡುವುದನ್ನು ಕೈಬಿಡಿ. ದ್ವೇಷದ ರಾಜಕಾರಣ ಮಾಡದಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು. ಸಿದ್ದರಾಮಯ್ಯನವರು ಕೇರಳ ಸ್ಟೋರಿ ನೋಡಲಿ ಎಂದು ಆಗ್ರಹಿಸಿದರು.
English summary
Former Minister KS Eshwarappa Said That there is discipline in the BJP party, I did not mention the issue of Bombay Boys.
Story first published: Saturday, July 1, 2023, 14:33 [IST]