ಜಾನಪದ ಕಲೆಗಳ ಅಭಿವೃದ್ಧಿಗಾಗಿ ಜನಪದ ಅಕಾಡೆಮಿ ಅಗತ್ಯ- ಚಿಂತಕರ ಒತ್ತಾಯ | Janapada Academy Is Essential For The Development Of Folk Arts

Mandya

lekhaka-Srinivasa K

By ಮಂಡ್ಯ, ಪ್ರತಿನಿಧಿ

|

Google Oneindia Kannada News

ಮಂಡ್ಯ, ಜೂನ್‌ 19: ಜಾನಪದ ಕ್ಷೇತ್ರದ ಉಳಿವು ಮತ್ತು ಬೆಳವಣಿಗೆಗಾಗಿ ರಾಜ್ಯ ಸರ್ಕಾರ ಜಾನಪದ ಕಲೆಗಳ ಅಭಿವೃದ್ಧಿ ಅಕಾಡೆಮಿ ರಚಿಸಬೇಕು ಎಂದು ಜನಪದ ಚಿಂತಕ ಡಾ. ಅಪ್ಪಗೆರೆ ತಿಮ್ಮರಾಜು ಸಲಹೆ ನೀಡಿದರು.

ಜನಕಲಾರಂಗ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಬೆಳಗಾಗಿ ನಾನೆದ್ದು ಜನಪದ ಹಾಡುಗಳು ಪುಸ್ತಕ ಬಿಡುಗಡೆ ಮತ್ತು ಸನ್ಮಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲೇ ಜಾನಪದ ಕಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಕಾಡೆಮಿ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

Janapada Academy Is Essential For The Development Of Folk Arts

ಜವರು ಜನರಿಗಾಗಿಯೇ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಹುಟ್ಟಿಕೊಂಡ ಕಲೆಯೇ ಜನಪದ ಎಂದು ವ್ಯಾಖ್ಯಾನಿಸಿದ ಅಪ್ಪಗೆರೆ, ಜಾನಪದ ಕಲೆಗಳಲ್ಲಿ ಪ್ರೀತಿ, ಮಾನವೀಯ ಸಂಬಂಧ, ನೀತಿ ಎಲ್ಲವೂ ಇರುತ್ತದೆ. ವಿಶೇಷವಾಗಿ ಸಂಬಂಧಗಳನ್ನು ಕಟ್ಟಿಕೊಳ್ಳುವ, ಉಳಿಸಿಕೊಳ್ಳುವ ಪರಂಪರೆ ಮುಖ್ಯವಾಗಿರುತ್ತದೆ ಎಂದು ವಿಶ್ಲೇಷಿಸಿದರು.

ಜನಪದ ಕ್ಷೇತ್ರದಲ್ಲಿ ಎಚ್.ಎಲ್. ನಾಗೇಗೌಡರು ಮತ್ತು ಜಿ.ಶಂ.ಪ ಅವರ ಕೊಡುಗೆ ಅಪಾರವಾದದ್ದು. ನಾಡಿನ ಹಲವರು ಜಾನಪದವನ್ನು ಸಂಗ್ರಹಿಸುವ ಮತ್ತು ಅದನ್ನು ಉಳಿಸುವ ಪ್ರಕ್ರಿಯೆಯಲ್ಲಿ ನಿರಂತರವಾಗಿದ್ದಾರೆ. ನಾವು ಮುಂದಿನ ತಲೆಮಾರಿಗೆ ಈ ಕಲೆಗಳನ್ನು ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹುರುಗಲವಾಡಿ ರಾಮಯ್ಯ ಅವರ ಬೆಳಗಾಗೇ ನಾನೆದ್ದು ಸಂಪಾದಿತ ಕೃತಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ ಎಂದು ಬಣ್ಣಿಸಿದರು.

ಪುಷ್ಪಾರ್ಚನೆ ನೆರವೇರಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಎಲ್ಲ ಕಲೆಗಳ ಮೂಲವೇ ಜನಪದ. ಇಂದಿನ ಆಧುನಿಕ ಜಗತ್ತಿನಲ್ಲಿ ನಶಿಸಿಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿಕೊಳ್ಳುವ ಮತ್ತು ಆ ಮೂಲಕ ಮಾನವೀಯ ವೌಲ್ಯಗಳನ್ನು ಎತ್ತಿ ಹಿಡಿಯುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಇಂದು ಕೆಲವು ಕಲಾವಿದರು ಲಾಭದ ದೃಷ್ಠಿಕೋನದಿಂದ ಕಲೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಹುರುಗಲವಾಡಿ ರಾಮಯ್ಯ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ, ರೈತ, ದಲಿತ ಮತ್ತು ಕನ್ನಡ ಪರ ಚಳವಳಿಗಳು ಸೇರಿದಂತೆ ಎಲ್ಲ ಚಳವಳಿಗಳಲ್ಲಿ ನಿಸ್ವಾರ್ಥದಿಂದ ತಮ್ಮ ಕಲಾವಂತಿಕೆಯನ್ನು ಪ್ರದರ್ಶಿಸಿ ಹೋರಾಟಗಳಿಗೆ ಸಾಂಸ್ಕೃತಿಕವಾದ ಮೆರಗನ್ನು ನೀಡುತ್ತಿದ್ದಾರೆ ಎಂದು ಪ್ರಶಂಶಿಸಿದರು.

ರೈತನಾಯಕಿ ಸುನಂದ ಜಯರಾಂ ಸಮಾರಂಭ ಉದ್ಘಾಟಿಸಿದರು. ದಲಿತ ಚಳವಳಿಯ ಹಿರಿಯ ಮುಖಂಡ ಪ್ರೊ. ಬಿ.ಎಸ್. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ. ಸ್ವಾಮಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ಅಧೀಕ್ಷಕ ಇಂಜಿನಿಯರ್ ಚಂದ್ರಹಾಸ್, ಕರವೇ ರಾಜ್ಯ ಉಪಾಧ್ಯಕ್ಷ ಎಂ.ಎಸ್. ಚಿದಂಬರ್, ರೈತ ಸಂಘದ ಮಹಿಳಾ ಮುಖಂಡರಾದ ಲತಾ ಶಂಕರ್, ಬೆಂಗಳೂರಿನ ಅಂಕ ಪ್ರಕಾಶನದ ಸಬ್ಬನಹಳ್ಳಿ ರಾಜು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗಾಯಕರಾದ ಚಾಮರಾಜನಗರದ ನರಸಿಂಹಮೂರ್ತಿ, ವಳಗೆರೆಹಳ್ಳಿ ಲೋಕೇಶ್, ಬೆಂಗಳೂರು ಸವಿತಾ, ಆಲದಹಳ್ಳಿ ಮಂಜುಳಾ, ಮೈಸೂರು ಕೀಬೋರ್ಡ್ ವಾದಕ ಚಿಕ್ಕಪ್ಪಾಜಿ, ಕೊಡಗಳ್ಳಿ ತಬಲ ವಾದಕ ಬಸವಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಪ್ಪಗೆರೆ ತಿಮ್ಮರಾಜು ಅವರ ಬಿದಿರೇ ನೀನಾರಿಗಲ್ಲಾದವಳು.. ಮತ್ತಿತರ ಜಾನಪದ ಹಾಡುಗಳನ್ನು ಹಾಡಿ ರಂಜಿಸಿದರು. ಗಾಯಕರಾದ ಸವಿತಾ, ಗೊರವಾಲೆ ಚಂದ್ರಶೇಖರ್, ದೇವರಾಜ್ ಕೊಪ್ಪ, ಸುಂದರೇಶ್, ರಘು ಹೊಸಕೆರೆ ಮತ್ತಿತರ ಗಾಯಕರು ಜಾನಪದ ಗೀತೆಗಳನ್ನು ಹಾಡಿದರು.

English summary

Folk artist demand for Janapada Academy is essential for the development of folk arts. Know more,

Story first published: Monday, June 19, 2023, 15:14 [IST]

Source link