Karnataka
oi-Ravindra Gangal
ಬೆಂಗಳೂರು, ಜೂನ್ 30: ಕರ್ನಾಟಕದ ವಿಧಾನಸಭೆಯಲ್ಲಿನ ಹೀನಾಯ ಸೋಲಿನಿಂದ ಬಿಜೆಪಿ ಒಡೆದ ಮನೆಯಂತಾಗಿದೆ. ಬಿಜೆಪಿಯ ಕೆಲ ಮುಖಂಡರು ತಮ್ಮದೇ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘಟನೆ ) ಬಿಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರಿಗ ಬಿಜೆಪಿ ನೋಟಿಸ್ ನೀಡಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ‘ಇಡೀ ಬಿಜೆಪಿ ಒಂದು ಪಂಚೆಯೊಳಗೆ ಬಂಧಿಯಾಗಿ ವಿಲವಿಲ ಒದ್ದಾಡುತ್ತಿದೆ. ಬಂಧನದಿಂದ ಹೊರಬರಬೇಕು ಎಂದರೆ ಆ “ಪಂಚೆ”ಯನ್ನು ಹರಿಯಲೇಬೇಕು’ ಎಂದು ವ್ಯಂಗ್ಯವಾಡಿದೆ.
ದುಡಿಯದೆ, ಬೆವರು ಹರಿಸದೆ, ತಿರುಗದೆ, ನಾಲ್ಕು ಮತವನ್ನು ಗಳಿಸುವ ಶಕ್ತಿಯೂ ಇಲ್ಲದ ಆ ‘ಸಂಘ’ಟನಾ ಕಾರ್ಯದರ್ಶಿಯ ವಿರುದ್ಧ ಮಾತನಾಡಿದ ಒಬ್ಬೇ ಒಬ್ಬ ವ್ಯಕ್ತಿ ಅಂದರೆ ರೇಣುಕಾಚಾರ್ಯ. ಬಿಜೆಪಿಯಲ್ಲಿ ಅವರು ಬದುಕುಳಿಯಲು ಸಾಧ್ಯವೇ ಎಂದು ಕಾದು ನೋಡಬೇಕು ಎಂದೂ ಕಾಂಗ್ರೆಸ್ ಟೀಕಿಸಿದೆ.
‘ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತು ಗೆಲ್ಲಲಾಗದ ದೊಣ್ಣೆನಾಯಕರೊಬ್ಬರು RSSನ ದೊಣ್ಣೆ ತೋರಿಸಿ ಇಡೀ ಬಿಜೆಪಿಯನ್ನು ಅಲ್ಲಾಡಿಸುತ್ತಿದ್ದಾರೆ. ಬಿಎಲ್ ಸಂತೋಷ್ ಅವರೇ, ರೇಣುಕಾಚಾರ್ಯರ ಈ ಮಾತನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ದಿಸಿ ಗೆದ್ದು ತೋರಿಸಿ. ನಿಮ್ಮ ದಮ್ಮು ತಾಕತ್ತು ನಿರೂಪಿಸಿ’ ಎಂದೂ ಕಾಂಗ್ರೆಸ್ ಸವಾಲು ಹಾಕಿದೆ.
ರೇಣುಕಾಚಾರ್ಯ ಹೇಳಿದ್ದೇನು?
ಬಿಎಲ್ ಸಂತೋಷ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿರುವ ಮಾಜಿ ಶಾಸಕ ರೇಣುಕಾಚಾರ್ಯ ಅವರು, ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲದವರು ನಮಗೆ ಪಾಠ ಮಾಡಲು ಬರ್ತಾರೆ’ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ತಮಿಳುನಾಡು ಘಟಕದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ರೇಣುಕಾಚಾರ್ಯ, ‘ತಮಿಳುನಾಡಿನಿಂದ ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಏನು ಅಣ್ಣಾಮಲೈ ದೊಡ್ಡ ಹೀರೋನಾ? ಈ ಹಿಂದೆ ಮುಖ್ಯಮಂತ್ರಿಗಳ ಎದುರಿ ಕೈಕಟ್ಟಿ ನಿಲ್ಲುತ್ತಿದ್ದ ಅಧಿಕಾರಿ, ಈಗ ನಮಗೆ ಮಾರ್ಗದರ್ಶನ ಕೊಡುತ್ತಾರೆ’ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೂ ಹರಿಹಾಯ್ದಿರುವ ರೇಣುಕಾಚಾರ್ಯ, ‘ಬೊಮ್ಮಾಯಿ ಅವರೇ, ಮಾಜಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸೋತಾರೆಂದು ಅವರ ಮನೆಗೆ ಹೋಗಿ ಸಾಂತ್ವನ ಹೇಳಿಬಂದಿದ್ದೀರ. ಬೇರೆ ಯಾರೂ ಸೋತ ಅಭ್ಯರ್ಥಿಗಳು ನಿಮಗೆ ಕಂಡಿಲ್ಲವೇ? ಎಂದು ಕೇಳಿದ್ದಾರೆ.
ನನಗೆ ಎರಡು ಸಚಿವ ಖಾತೆ ಕೊಡಲಿಲ್ಲವೆಂದರೆ, ಬಿಜೆಪಿಯನ್ನೇ ಮುಗಿಸುತ್ತೇನೆ ಎಂದು ಸುಧಾಕರ್ ಬೆದರಿಕೆ ಹಾಕಿದ್ದರು. ಅಂತವರ ಮನೆಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದೀರಿ. ನಮಗೆ ಒಂದು ಫೋನ್ ಕಾಲ್ ಮಾಡುವಷ್ಟೂ ಸೌಜನ್ಯ ಇರಲಿಲ್ಲವೇ ? ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಪಟ್ಟು: ಬಲಿಪಶು ದಾಳ ಬಳಸುತ್ತಿರುವ ಲಿಂಗಾಯತ ನಾಯಕ- ಬಿಎಲ್ ಸಂತೋಷ್ ಬಣದಲ್ಲಿ ತಳಮಳ
ಕಳೆದ ವರ್ಷ ಫೆಬ್ರವರಿಯಿಂದಲೇ ಕಾಂಗ್ರೆಸ್ ನಾಯಕರು ಗ್ಯಾರಂಟಿಗಳನ್ನು ಘೋಷಿಸುತ್ತಾ ಬಂದರು. ಆದರೆ, ನಮ್ಮ ಪಕ್ಷದ ನಾಯಕರು ಮಲಗಿದ್ದರು. ನಮ್ಮ ಪಕ್ಷದ ಪ್ರಣಾಳಿಕೆ ಜನರಿಗೆ ತಲುಪಲೇ ಇಲ್ಲ. ಸುಧಾಕರ್ ಅವರಿಗೆ ಪ್ರಣಾಳಿಕೆ ತಯಾರು ಮಾಡಲು ಹೇಳಿದರು. ಅವರಿಗಿಂತ ದೊಡ್ಡ ನಾಯಕರು ಪಕ್ಷದಲ್ಲಿ ಇರಲಿಲ್ಲವೇ? ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
English summary
Karnataka Politics: BJP’s crushing defeat in the Karnataka Assembly has left the house broken. Some BJP leaders have turned against their own party leaders
Story first published: Friday, June 30, 2023, 14:26 [IST]