International
oi-Malathesha M
ಲಾಹೋರ್: ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಅಂದ್ರೆ ಜೈಲೂಟ ಫಿಕ್ಸ್ ಅಂತಿದ್ದಾರೆ ಜನ. ಯಾಕಂದ್ರೆ ಈವರೆಗೂ ಪಾಕಿಸ್ತಾನದಲ್ಲಿ ಜೈಲು ಸೇರಿದ ಮಾಜಿ ಪ್ರಧಾನಿಗಳ ಸಂಖ್ಯೆಯಂತು ಬೆಳೆಯುತ್ತಲೇ ಇದೆ. ಅದರಲ್ಲೂ ಇಮ್ರಾನ್ ಖಾನ್ ಈಗಾಗಲೇ ಜೈಲು ಸೇರಿ ಹೊರಬಂದು ಸುಧಾರಿಸಿಕೊಳ್ಳುತ್ತಿದ್ದಾರೆ. ಅಷ್ಟರಲ್ಲೇ 625 ಎಕರೆ ಭೂಮಿ ಖರೀದಿ ಹಗರಣದಲ್ಲಿ ಸಮನ್ಸ್ ಬಂದಿದೆ, ಅರೆಸ್ಟ್ ಆಗೋದು ಬಹುತೇಕ ಗ್ಯಾರಂಟಿ ಎನ್ನಲಾಗ್ತಿದೆ.
ಹೌದು, 625 ಎಕರೆ ಭೂಮಿ ಖರೀದಿ ಭ್ರಷ್ಟಾಚಾರ ಪ್ರಕರಣದ ಸಂಬಂಧ ವಿಚಾರಣೆಗೆ ಬರಲು ಸೂಚನೆ ನೀಡಲಾಗಿದೆ. ಜೂನ್ 19ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಪಡೆ ಇಮ್ರಾನ್ ಖಾನ್ ಮತ್ತು ಅವರ ತಂಗಿಗೆ ಸಮನ್ಸ್ ಜಾರಿ ಮಾಡಿದೆ. ಈ ಮೂಲಕ ಮತ್ತೊಂದು ಕಂಟಕದಲ್ಲಿ ಸಿಲುಕಿದ್ದಾರೆ ಇಮ್ರಾನ್ ಖಾನ್. ಪಂಜಾಬ್ ಪ್ರಾಂತ್ಯದ ಭೂಮಿ ಖರೀದಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಪಡೆ, ಇಮ್ರಾನ್ ಖಾನ್ ಸಹೋದರಿ ಉಜ್ಮಾ ಖಾನ್ ಹಾಗೂ ಆಕೆಯ ಪತಿ ಅಜದ್ ಮಜೀದ್‌ಗೂ ಬಲೆ ಬೀಸಿದೆ (Imran Khan Arrest).
ಖಾನ್ ಮನೆ ಬಾಗಿಲಿಗೆ ಬಿದ್ದ ನೋಟಿಸ್!
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಈವರೆಗೂ ಒಟ್ಟು 140 ಕೇಸ್‌ಗಳು ದಾಖಲಾಗಿವೆ. ಕೊಲೆ ಆರೋಪ ಸೇರಿದಂತೆ ನೂರಾರು ಕೇಸ್ ಇಮ್ರಾನ್ ಖಾನ್ ಬೆನ್ನುಹತ್ತಿವೆ. ಪರಿಸ್ಥಿತಿ ಹೀಗಿದ್ದಾಗ ಮತ್ತೊಂದು ಭ್ರಷ್ಟಚಾರ ಕೇಸ್ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿದೆ. 625 ಎಕರೆ ಭೂಮಿ ಖರೀದಿ ಭ್ರಷ್ಟಾಚಾರ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗಲು ಈ ಮೊದಲು ಜೂನ್ 16ರಂದು ಸಮನ್ಸ್ ನೀಡಲಾಗಿತ್ತು. ಆದ್ರೆ ಇಮ್ರಾನ್ ಹಾಜರಾಗಿರಲಿಲ್ಲ. ಈಗ ಮತ್ತೆ ಸಮನ್ಸ್ ಜಾರಿಯಾಗಿದ್ದು, ಲಾಹೋರ್‌ನ ಖಾನ್ ಮನೆ ಬಾಗಿಲಿಗೆ ಈ ನೋಟಿಸ್ ಅಂಟಿಸಲಾಗಿದೆ.
ಇಮ್ರಾನ್ ಖಾನ್ ಶತ್ರು ಪಾಕಿಸ್ತಾನಕ್ಕೆ ವಾಪಸ್: ಹೊತ್ತಿಕೊಳ್ಳುತ್ತಾ ಬೆಂಕಿ?
ಖಾನ್‌ಗೆ ದೊಡ್ಡ ಗಂಡಾಂತರ ಗ್ಯಾರಂಟಿ?
ಇಮ್ರಾನ್ ಖಾನ್‌ಗೆ ದೊಡ್ಡ ಗಂಡಾಂತರ ಎದುರಾದಂತೆ ಕಾಣುತ್ತಿದೆ. ಏಕೆಂದರೆ ಪಾಕ್ ಸೇನೆ ಮತ್ತು ಪಾಕಿಸ್ತಾನದ ಕೇಂದ್ರ ಸರ್ಕಾರದ ವಿರುದ್ಧ ಇಮ್ರಾನ್ ತೊಡೆತಟ್ಟಿದ್ದಾರೆ. ಹೀಗಾಗಿಯೇ ಇಮ್ರಾನ್ ಖಾನ್ ಕೊಲೆಗೂ ಯತ್ನಿಸಲಾಗಿತ್ತೆಂಬ ಆರೋಪ ಕೇಳಿಬಂದಿತ್ತು. ಈ ನಡುವೆ ಇಮ್ರಾನ್‌ನ ಇನ್ನೊಮ್ಮೆ ಜೈಲಿಗೆ ಕಳುಹಿಸೋದಕ್ಕೂ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಕಿತ್ತಾಟದ ಮಧ್ಯೆ ಮತ್ತೊಂದು ಕೇಸ್ ಹಾಕಿ ಇಮ್ರಾನ್ ಖಾನ್‌ಗೆ ಶಾಕ್ ನೀಡಲಾಗಿದೆ. ಅದರಲ್ಲೂ ಈ ಕೇಸ್ ಕೂಡ ಲಾಹೋರ್ ಪ್ರಾಂತ್ಯದಲ್ಲೇ ದಾಖಲಾಗಿದ್ದು ವಿಶೇಷ!
ನೂರಾರು ಕೋಟಿ ರೂಪಾಯಿ ಭ್ರಷ್ಟಾಚಾರ?
ಇಮ್ರಾನ್ ವಿರುದ್ಧ ದಾಖಲಾಗಿರುವ ಕೇಸ್‌ಗಳ ಪೈಕಿ ಪಾಕ್‌ನ ಲಾಹೋರ್ ಪ್ರಾಂತ್ಯದಲ್ಲೇ ಅತಿಹೆಚ್ಚು ಕೇಸ್ ರಿಜಿಸ್ಟರ್ ಆಗಿವೆ. ಖಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ ಮತ್ತು ಧರ್ಮನಿಂದನೆ, ಕೊಲೆ ಯತ್ನ ಸೇರಿ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಈಗ ಖಾನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪಂಜಾಬ್‌ನ ಲಯ್ಯಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಂದ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಸಿದ್ದಾರೆ. ₹600 ಕೋಟಿ ಬೆಲೆ ಬಾಳುವ ಭೂಮಿಯನ್ನು ರಾಜಕೀಯ ಪ್ರಭಾವ ಬಳಸಿ ₹13 ಕೋಟಿಗೆ ಖರೀದಿ ಮಾಡಿದ್ಧಾರೆ ಅನ್ನೋ ಆರೋಪ ಪಾಕ್ ಮಾಜಿ ಪ್ರಧಾನಿ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಕ್ರಮಕ್ಕೆ ಮುಂದಾಗಿದೆ.
ಹಗರಣದಲ್ಲಿ ಇಮ್ರಾನ್ ಸಹೋದರಿ ಪಾತ್ರ?
ಈಗ ಕೇಳಿಬಂದ ಭ್ರಷ್ಟಾಚಾರ ಹಗರಣದಲ್ಲಿ ಇಮ್ರಾನ್ ಖಾನ್ ಜೊತೆಗೆ ಖಾನ್ ಸಹೋದರಿ ಉಜ್ಮಾ ಖಾನ್, ಆಕೆಯ ಪತಿ ಹಾಗೂ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮನ್ ಬುಜ್ದರ್ ಹೆಸರೂ ಸೇರಿದೆ. ಆದರೆ ಈ ಹಿಂದೆ ಬಂಧಿಸಲು ಹೋದಾಗ ಪರಾರಿಯಾಗಿದ್ದಾರೆ ಎಂದು ಪಾಕ್‌ನ ಭ್ರಷ್ಟಾಚಾರ ನಿಗ್ರಹ ದಳ ಆರೋಪಿಸಿತ್ತು. ಆದರೆ ಈಗ ನೇರವಾಗಿ ಇಮ್ರಾನ್‌ಗೆ ಸಮನ್ಸ್ ನೀಡಿ ಶಾಕ್ ಕೊಟ್ಟಿದೆ ಪಾಕ್‌ನ ಭ್ರಷ್ಟಾಚಾರ ನಿಗ್ರಹ ದಳ. ಈ ಮೂಲಕ ನಿಮ್ಮ ಸಹೋದರಿ ಹಾಗೂ ನೀವು ವಿಚಾರಣೆಗೆ ಬನ್ನಿ ಎಂಬ ಕರೆ ಸಿಕ್ಕಂತಾಗಿದೆ. ಆದರೆ ಇಮ್ರಾನ್ ಖಾನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
English summary
Imran Khan gets summons in 625 Acre land deal case.