India
oi-Malathesha M
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸಚಿವ ಸೆಂಥಿಲ್ ಬಾಲಾಜಿ ವಜಾ ಆದೇಶ ದೊಡ್ಡ ತಿರುವು ಪಡೆದುಕೊಂಡಿದೆ. ಸರ್ಕಾರದ ಒಪ್ಪಿಗೆ ಇಲ್ಲದೇ ನೇರವಾಗಿ ತಮಿಳುನಾಡು ರಾಜ್ಯಪಾಲರೇ ಸಚಿವ ಸೆಂಥಿಲ್ ಬಾಲಾಜಿಯನ್ನ ನಿನ್ನೆ ಸಂಪುಟದಿಂದ ವಜಾ ಮಾಡಿದ್ದರು. ಆದರೆ ದಿಢೀರ್ ತಮ್ಮ ಆದೇಶವನ್ನ ವಾಪಸ್ ಪಡೆದಿದ್ದಾರೆ. ಅದು ಯಾಕೆ ಗೊತ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಹೌದು, ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ರಾಜ್ಯಪಾಲ ಆರ್.ಎನ್.ರವಿ ನಿರ್ಧಾರ ಮಾಡಿದ್ದು, ಸಿಎಂ ಎಂ.ಕೆ.ಸ್ಟಾಲಿನ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೇ ಗುರುವಾರ ತಡರಾತ್ರಿ ಈ ಕುರಿತು ಮುಖ್ಯಮಂತ್ರಿಗೆ ಸಂದೇಶ ರವಾನಿಸಿದ್ದು, ಸಚಿವರನ್ನು ವಜಾಗೊಳಿಸಿದ ನಡೆ ಕುರಿತು ಅಟಾರ್ನಿ ಜನರಲ್‌ರಿಂದ ಕಾನೂನು ಸಲಹೆ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದೀಗ ತಮಿಳುನಾಡು ರಾಜ್ಯಪಾಲರು ತಮ್ಮ ಆದೇಶ ತಾತ್ಕಾಲಿಕವಾಗಿ ಹಿಂಪಡೆದು, ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ. ನಿನ್ನೆ ಈ ಆದೇಶ ತಮಿಳುನಾಡು ರಾಜ್ಯಪಾಲರು ಹಾಗೂ ತಮಿಳುನಾಡು ಸರ್ಕಾರದ ನಡುವೆ ಕಿಚ್ಚು ಹಚ್ಚಿತ್ತು.
ರಾಜ್ಯಪಾಲರ ತೀರ್ಮಾನಕ್ಕೆ ಸ್ಟಾಲಿನ್ ಆಕ್ರೋಶ
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (RN Ravi) ನಿನ್ನೆ ಸಚಿವ ಬಾಲಾಜಿ ಅವರನ್ನ ಸಂಪುಟದಿಂದ ವಜಾ ಮಾಡಿದ್ದರು. ಜೊತೆಗೆ ರಾಜಭವನದಿಂದ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ‘ಬಾಲಾಜಿ ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು ಮತ್ತು ಮನಿ ಲಾಂಡರಿಂಗ್ ಸೇರಿ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದು. ಹೀಗಾಗಿ ರಾಜ್ಯಪಾಲರು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾ ಮಾಡಿದ್ದಾರೆ’ ಎಂದು ತಿಳಿಸಲಾಗಿತ್ತು. ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಆದರೆ ಆದೇಶ ತಾತ್ಕಾಲಿಕವಾಗಿ ತಡೆಹಿಡಿದ ಬಗ್ಗೆ ಮಾಹಿತಿ ಹೊರಬಿದ್ದಿದೆ.
ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಯ ಅಕ್ರಮ ಬಂಧನ ಆರೋಪಗಳನ್ನು ನಿರಾಕರಿಸಿದ ಇಡಿ
ತಮಿಳುನಾಡು ರಾಜ್ಯಪಾಲರು VS ಸರ್ಕಾರ
ಡಿಎಂಕೆ ಸರ್ಕಾರ ತಮಿಳುನಾಡಲ್ಲಿ ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳಲ್ಲಿ ತಿಕ್ಕಾಟ ಶುರುವಾಗಿತ್ತು. ತಮಿಳುನಾಡು ರಾಜ್ಯಪಾಲರು ಹಾಗೂ ತಮಿಳುನಾಡು ಸರ್ಕಾರದ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಈ ಮಧ್ಯೆ ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು & ಮನಿ ಲಾಂಡರಿಂಗ್ ಸೇರಿ ಹಲವು ಆರೋಪದ ಅಡಿಯಲ್ಲಿ ಸಚಿವ ಸೆಂಥಿಲ್ ಬಾಲಾಜಿ ಬಂಧನವಾಗಿತ್ತು. ಈ ಘಟನೆ ಬಳಿಕ ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ತಿಕ್ಕಾಟ ಬಲು ಜೋರಾಗಿ ನಡೆಯುತ್ತಿತ್ತು. ನಿನ್ನೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಚಿವ ಸೆಂಥಿಲ್ ಬಾಲಾಜಿರನ್ನ ವಜಾ ಮಾಡಿ ಆದೇಶ ಹೊರಡಿಸಿದ್ದರು ತಮಿಳುನಾಡು ರಾಜ್ಯಪಾಲರು. ರಾಜ್ಯಪಾಲರ ಕಚೇರಿಯಿಂದ ಅಧಿಕೃತ ಹೇಳಿಕೆ ಕೂಡ ನೀಡಲಾಗಿತ್ತು.
ಸಚಿವ ಸೆಂಥಿಲ್ ಬಾಲಾಜಿ ಎಲ್ಲಿ?
ಜೂನ್ ಆರಂಭದಲ್ಲಿ ಜಾರಿ ನಿರ್ದೇಶನಾಲಯ ಸಚಿವ ಸೆಂಥಿಲ್ ಬಾಲಾಜಿ ಬಂಧಿಸಿತ್ತು. ಸಚಿವ ಬಾಲಾಜಿ ನ್ಯಾಯಾಂಗ ಬಂಧನವನ್ನ ಚೆನ್ನೈ ನ್ಯಾಯಾಲಯ ಜುಲೈ 12 ರವರೆಗೆ ವಿಸ್ತರಿಸಿತ್ತು. ಇದರ ಜೊತೆ ಬಂಧನಕ್ಕೂ ಮುನ್ನ ವೈದ್ಯಕೀಯ ತಪಾಸಣೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಸುಪ್ರೀಂ ಅನುಮತಿ ನೀಡಿತ್ತು. ಅಲ್ಲಿ ಸಚಿವ ಬಾಲಾಜಿಗೆ ಹೃದಯ ಶಸ್ತ್ರಚಿಕಿತ್ಸೆಯು ನಡೆದಿತ್ತು. ಅದಕ್ಕೂ ಮುನ್ನ ಎದೆನೋವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಎಲ್ಲಾ ಘಟನೆಗಳ ಬಳಿಕ ನಿನ್ನೆ ರಾಜ್ಯಪಾಲರು ದಿಢೀರ್ ಸಚಿವರನ್ನು ಸಂಪುಟದಿಂದ ವಜಾ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈಗ ತಮ್ಮ ಆದೇಶವನ್ನ ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.
English summary
Dismissing of Tamil Nadu minister Senthil Balaji is on hold.
Story first published: Friday, June 30, 2023, 17:48 [IST]