International
oi-Malathesha M
ಮಾಸ್ಕೋ: ರಷ್ಯಾ ಸೇನೆ ಮತ್ತು ಖಾಸಗಿ ಸೇನೆ ನಡುವೆ ನಡೆದ ಭೀಕರ ಆಂತರಿಕ ಕಲಹದ ಬಗ್ಗೆ ಕ್ಷಣಕ್ಕೊಂದು ಸುದ್ದಿ ಹೊರಬರ್ತಿದೆ. ಯೆವ್ಗೆನಿ ಪ್ರಿಗೊಝಿನ್ ನೇತೃತ್ವದ ಖಾಸಗಿ ಸೇನೆ ಮತ್ತು ರಷ್ಯಾ ಸರ್ಕಾರಿ ಪಡೆ ನಡುವೆ ಕಿತ್ತಾಟದ ಕಾರಣ ಅವರು ದಂಗೆ ಎದ್ದಿದ್ದರು ಅಂತಾ ಹೇಳಲಾಗಿತ್ತು. ಆದರೆ ಈಗ ಬೇರೆಯದ್ದೇ ಮಸಲತ್ತು ಬಯಲಾಗಿದ್ದು, ಖಾಸಗಿ ಸೇನೆ ದಂಗೆ ವಿಚಾರ ರಷ್ಯಾದ ಸರ್ಕಾರಿ ಸೇನೆಗೆ ಮೊದಲೇ ಗೊತ್ತಿತ್ತಂತೆ!
ಅಷ್ಟಕ್ಕೂ ರಷ್ಯಾ ಸೇನೆ ಮುಖ್ಯಸ್ಥನ ವಿರುದ್ಧ ದಂಗೆ ಎದ್ದಿದ್ದ ಖಾಸಗಿ ಸೇನಾ ಪಡೆ ‘ವ್ಯಾಗ್ನರ್’ ಗ್ರೂಪ್ ಮಸಲತ್ತು ಮೊದಲೇ ಗೊತ್ತಿತ್ತು ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಯೆವ್ಗೆನಿಯ ಕುತಂತ್ರ ಮೊದಲೇ ಗೊತ್ತಿತ್ತು, ರಷ್ಯಾ ಸೇನಾಧಿಕಾರಿಗೂ ಮೊದಲೇ ಮಾಹಿತಿ ಇತ್ತು ಎಂದು ಅಮೆರಿಕದ ‘ನ್ಯೂ ಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಈ ಮೂಲಕ ಮೊದಲೇ ಹೊತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಹಾಗಾದರೆ ಖಾಸಗಿ ಸೇನೆ ದಂಗೆ ಸಂಗತಿ ಬಗ್ಗೆ ಮೊದಲೇ ಗೊತ್ತಿದ್ದರೂ ರಷ್ಯಾ ಸೇನಾಧಿಕಾರಿ ಸೈಲೆಂಟ್ ಆಗಿದ್ದೇಕೆ? ಇದರ ಹಿಂದಿನ ಉದ್ದೇಶ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ (Wagner Group Coup).
ಉಕ್ರೇನ್ ನೆಲದಲ್ಲೇ ನಡೆದಿತ್ತಾ ಸ್ಕೆಚ್?
ಅಂದಹಾಗೆ ಈಗ ಉಕ್ರೇನ್ ಯುದ್ಧದಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ರಷ್ಯಾ ಉಪ ಕಮಾಂಡರ್ ಸೆರ್ಗೇ ಸುರೊವಿಕಿನ್ಗೆ ವ್ಯಾಗ್ನರ್ ಗ್ರೂಪ್ ದಂಗೆ ಏಳುವ ಯೋಜನೆ ಬಗ್ಗೆ ಮೊದಲೇ ಗೊತ್ತಿತ್ತಂತೆ. ಗುಪ್ತಚರ ಮಾಹಿತಿಗಳನ್ನು ಆಧರಿಸಿ ಅಮೆರಿಕದ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಉಕ್ರೇನ್ನಲ್ಲಿ ರಷ್ಯಾ ಸೇನೆ ಕಮಾಂಡರ್ ಆಗಿದ್ದ ಸೆರ್ಗೇ ದಂಗೆ ಏಳಲು ಖಾಸಗಿ ಸೇನೆಗೆ ನೆರವಾಗಿದ್ರಾ? ಎಂಬ ವಿಚಾರ ತಿಳಿಯಲು ಪ್ರಯತ್ನಿಸುತ್ತಿರುವುದಾಗಿ ಅಮೆರಿಕ ಅಧಿಕಾರಿಗಳು ಹೇಳಿರುವ ಬಗ್ಗೆಯೂ ಉಲ್ಲೇಖವಾಗಿದೆ. ಈ ಮೂಲಕ ರಷ್ಯಾ ಆಂತರಿಕ ಕಲಹಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ.
ರಷ್ಯಾ ಸೇನೆಗೆ ಭೀಕರ ಹಿನ್ನಡೆ, ಕಳೆದುಕೊಂಡ ಜಾಗ ವಾಪಸ್ ಪಡೆದ ಉಕ್ರೇನ್!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಂಟ್ರಿ!
ಇನ್ನು ಇಷ್ಟೆಲ್ಲಾ ಮಾಹಿತಿಗಳು ಓಡಾಡುವಾಗಲೂ ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗಾನ್ ಆಗಲಿ, ಅಥವಾ ರಷ್ಯಾದ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ಆಗಲಿ ಸ್ಪಷ್ಟನೆ ನೀಡಿಲ್ಲ. ರಷ್ಯಾ ರಕ್ಷಣಾ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ಖಾಸಗಿ ಸೇನೆಯನ್ನ ದಂಗೆ ಬಳಿಕ ಬೆಲಾರಸ್ಗೆ ಗಡಿಪಾರು ಮಾಡಲಾಗಿದೆ. ಮತ್ತೊಂದ್ಕಡೆ ಹಲವು ದಿನಗಳ ಬಳಿಕ ಪುಟಿನ್ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ರಷ್ಯಾದ ಅಂತರ್ಯುದ್ಧ ಕೊನೆಗೊಳಿಸಿದ್ದಕ್ಕೆ ರಷ್ಯಾ ಸೇನಾ ಪಡೆಗಳನ್ನು ಶ್ಲಾಘಿಸಿದ್ದಾರೆ. ಮತ್ತೆ ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.
ಒಳಜಗಳ.. ಕಿತ್ತಾಟ.. ಉಕ್ರೇನ್ ಮೇಲೆ ಅಟ್ಯಾಕ್!
ವ್ಯಾಗ್ನರ್ ಪಡೆ ಅಂದ್ರೆ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ವಿರುದ್ಧ ಪುಟಿನ್ ಪರೋಕ್ಷವಾಗಿ ನಿನ್ನೆ ಆಕ್ರೋಶ ಹೊರಹಾಕಿದ್ರು. ಖಾಸಗಿ ಸೇನೆಯು ರಷ್ಯಾದಲ್ಲಿ ರಕ್ತ ಹರಿಸಲು ಬಂದಿತ್ತು ಎಂಬುದನ್ನೂ ಹೇಳಿದ್ದರು. ರಷ್ಯಾ ಜನ ಒಗ್ಗಟ್ಟಿನಿಂದ ಇರಬೇಕೆಂದು ಪುಟಿನ್ ಇದೇ ವೇಳೆ ಮನವಿ ಮಾಡಿದ್ದರು ವ್ಲಾದಿಮಿರ್ ಪುಟಿನ್. ಹೀಗೆ ರಷ್ಯಾ ಪರಿಸ್ಥಿತಿ ಗೊಂದಲದ ಗೂಡಾಗಿ ಬದಲಾಗಿರುವಾಗಲೇ ಉಕ್ರೇನ್ ಮೇಲೆ ಮಾರಣಾಂತಿಕ ದಾಳಿ ನಡೆಯುತ್ತಿದೆ. ನಿನ್ನೆ ದಿಢೀರ್ ರಷ್ಯಾ ಕ್ಷಿಪಣಿಗಳ ಮಳೆಯನ್ನೇ ಸುರಿಸಿದ್ದು, 3 ಉಕ್ರೇನ್ ನಾಗರಿಕರು ದಾಳಿಯಲ್ಲಿ ಬಲಿ ಆಗಿದ್ಧಾರೆ. ಅಲ್ಲದೆ ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನ ಮತ್ತಷ್ಟು ತೀವ್ರಗೊಳಿಸಿದೆ.
ಹೀಗೆ ರಷ್ಯಾ & ಉಕ್ರೇನ್ ಮಧ್ಯೆ ಯುದ್ಧ ಭೀಕರ ಸ್ವರೂಪ ಪಡೆಯುವಾಗಲೇ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ರಷ್ಯಾ ಬೆನ್ನಿಗೆ ಖಾಸಗಿ ಸೇನೆ ಚೂರಿ ಹಾಕಿದೆ ಎಂದು ಪುಟಿನ್ ಈ ಹಿಂದೆ ಗುಡುಗಿದ್ದರು, ಇದೀಗ ರಷ್ಯಾ ಸೇನೆಯ ಕೆಲವು ಅಧಿಕಾರಿಗಳು ಕೂಡ ದಂಗೆಯಲ್ಲಿ ಪಾತ್ರವಹಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈಗ ರಷ್ಯಾ ಅಧ್ಯಕ್ಷ ಪುಟಿನ್ ಅಲರ್ಟ್ ಆಗಿದ್ದು ಗಡಿಯಲ್ಲಿ ಭದ್ರತೆ ಬಿಗಿ ಮಾಡಿದ್ಧಾರೆ. ಅಲ್ಲದೆ ದಂಗೆ ಹಿಂದೆ ಇರುವ ಪ್ರತಿಯೊಬ್ಬ ಅಧಿಕಾರಿ ಮೇಲೂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಯಾವುದೂ ಅಧಿಕೃತವಾಗುತ್ತಿಲ್ಲ, ಹೀಗಾಗಿ ವ್ಲಾದಿಮಿರ್ ಪುಟಿನ್ ಅವರ ಮುಂದಿನ ನಡೆ ತುಂಬಾ ನಿಗೂಢವಾಗಿದೆ.
English summary
Wagner group coup creating storm in Russia
Story first published: Wednesday, June 28, 2023, 22:03 [IST]