Hubballi
oi-Gururaj S
ಹುಬ್ಬಳ್ಳಿ, ಜೂನ್ 23: ವಿಸ್ಕಿ ಬಾಟಲ್ ಖರೀದಿ ಪ್ರಕರಣದಲ್ಲಿ ಧಾರವಾಡ ಜಿಲ್ಲಾಗ್ರಾಹಕರ ಆಯೋಗ 1.10 ಲಕ್ಷ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ. ದೋಷಪೂರಿತ ಬಾಟಲ್ ಬದಲಾವಣೆ ಮಾಡಿಕೊಡಲು ಒಪ್ಪದ ವೈನ್‌ಲ್ಯಾಂಡ್ ಈಗ ದಂಡವನ್ನು ಪಾವತಿ ಮಾಡಬೇಕಿದೆ.
ಬೆಳಗಾವಿ ಜಿಲ್ಲಾ ರಾಯಬಾಗ ತಾಲ್ಲೂಕಿನ ಯಳಪರಟ್ಟಿ ಗ್ರಾಮದ ಶಿವಪುತ್ರ ಕುಮಟಿ ಎಂಬುವವರು 09/07/2018ರಂದು ಹುಬ್ಬಳ್ಳಿಯ ಪಿಂಟೋ ರಸ್ತೆಯಲ್ಲಿನ ಪಿಂಟೋ ವೈನ್‍ಲ್ಯಾಂಡನಿಂದ 650 ರೂ. ನೀಡಿ ಇಂಪೇರಿಯಲ್ ಬ್ಲ್ಯೂ ವಿಸ್ಕಿ ಬಾಟಲ್ ಖರೀದಿಸಿದ್ದರು. ಬಾಟಲ್ ತೆಗೆಯುವ ಮುನ್ನವೇ ಅದರಲ್ಲಿ ಗಾಜಿನ ಚೂರುಗಳು ಕಾಣಿಸಿಕೊಂಡಿದ್ದವು. ಕಾರಣ ಬಾಟಲ್ ವಾಪಸ್ ಪಡೆದು, ಹೊಸ ಬಾಟಲ್ ನೀಡುವಂತೆ ಮನವಿ ಮಾಡಿದ್ದರು.
ಪಿಂಟೋ ವೈನ್‌ಲ್ಯಾಂಡ್‌ನವರು ಬಾಟಲ್‍ನಲ್ಲಿ ಗಾಜಿನ ಚೂರು ಇರುವುದು ತಮ್ಮ ತಪ್ಪಿನಿಂದಲ್ಲ. ಅದು ಉತ್ಪಾದಕರ ತಪ್ಪು ಎನ್ನುವ ಕಾರಣವನ್ನು ನೀಡಿದರು. ಬಾಟಲ್ ವಾಪಸ್ ಪಡೆದು, ಬೇರೆ ಬಾಟಲ್ ನೀಡಲು ನಿರಾಕರಿಸಿದ್ದರು. ಈ ಕುರಿತು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಲಾಯಿತು.
ದೂರಿನಲ್ಲಿ ಉಲ್ಲೇಖವೇನು?; ವಿಸ್ಕಿ ಬಾಟಲ್‌ನಲ್ಲಿ ಗಾಜಿನ ಚೂರು ಇದೆ. ಒಂದು ವೇಳೆ ಗಾಜಿನಚೂರು ಗಮನಿಸದೇ ಅದರಲ್ಲಿನ ಮದ್ಯ ಸೇವಿಸಿದ್ದರೇ ಜೀವಕ್ಕೆ ಅಪಾಯ ಆಗುವ ಸಂಭವವಿತ್ತು. ಬಾಟಲ್ ಮಾರಾಟ ಮಾಡಿದವರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಹಾಗೂ ಅನ್ಯಾಯದ ವ್ಯಾಪಾರ ಅಭ್ಯಾಸದ ಅಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ, ಪ್ರಭು. ಸಿ ಹಿರೇಮಠ ಸದರಿ ಪ್ರಕರಣದಲ್ಲಿ ನೋಟಿಸ್ ಜಾರಿಯಾದರೂ ಪಿಂಟೋ ವೈನ್‌ಲ್ಯಾಂಡ್‍ರವರು ಗೈರು ಹಾಜರಾಗಿದ್ದರು. ದೂರುದಾರರು ವಿಸ್ಕಿ ಬಾಟಲ್ ಉತ್ಪಾದಕರು, ಮಾರಾಟ ಮಾಡಿದವರಿಂದ ತನಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.
ಆದರೆ ತಾವು ಪ್ರತಿಷ್ಠಿತ ಪಾನೀಯಗಳ ಉತ್ಪಾದಕರಿದ್ದು ಅವುಗಳ ಸ್ವಚ್ಛತೆಗೆ ಬೇಕಾದ ಎಲ್ಲ ನಿಯಮಗಳನ್ನು ಪಾಲಿಸಿ ಮಾರುಕಟ್ಟೆಗೆ ಸರಬರಾಜು ಮಾಡಿದ್ದೇವೆ. ತಮ್ಮ ಕಂಪನಿಯ ಹೆಸರು ದುರುಪಯೋಗಪಡಿಸಿಕೊಂಡು ನಕಲಿ ಉತ್ಪಾದಕರು ಅಂತಹ ಆಕ್ಷೇಪಾರ್ಹ ಪಾನೀಯಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಾರೆ. ಅವರು ಮಾಡಿದ ತಪ್ಪಿಗೆ ತಾವು ಹೊಣೆಗಾರರಾಗುವುದಿಲ್ಲ ಎಂದು ಉತ್ಪಾದಕರು ಆಕ್ಷೇಪಿಸಿದ್ದರು.
ಖರೀದಿಸಿದ ವಿಸ್ಕಿ ಬಾಟಲ್ 2 ಮತ್ತು 3ನೇ ಎದುರಾಳಿ ಉತ್ಪಾದಿಸಿದ ಪಾನೀಯ ಎಂದು ಋಜುವಾತು ಪಡಿಸುವಲ್ಲಿ ದೂರುದಾರ ವಿಫಲರಾಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಲಾಗಿದೆ. ಹಣ ಪಡೆದು ಆ ರೀತಿ ದೋಷಯುಕ್ತ ನಕಲಿ ವಿಸ್ಕಿ ಮಾರಾಟ ಮಾಡಿದ ಸಂಗತಿಯನ್ನು ಮೊದಲನೇ ಎದುರುದಾರರಾದ ಮಾರಾಟಗಾರರು ಅಲ್ಲಗಳೆದಿಲ್ಲ ಎಂಬುದನ್ನು ಗಮನಿಸಲಾಗಿದೆ.
ದೂರುದಾರರಿಗೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಹಾಗೂ ಮೋಸದ ವ್ಯಾಪಾರ ಅಭ್ಯಾಸ ಎಸಗಿದ್ದಾರೆಂದು ತೀರ್ಪಿನಲ್ಲಿ ಅಭಿಪ್ರಾಯ ಪಡಲಾಗಿದೆ. ದೋಷಯುಕ್ತ ಪಾನೀಯ ಸೇವಿಸಿದ್ದಲ್ಲಿ ದೂರುದಾರರ ಆರೋಗ್ಯದ ಮೇಲೆ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ಮತ್ತು ದೋಷಯುಕ್ತ ಪಾನೀಯ ಮಾರಾಟ ಮಾಡುವ ನೀತಿಯನ್ನು ಖಂಡಿಸಿ ಈ ತೀರ್ಪು ನೀಡಲಾಗಿದೆ.
ದೂರುದಾರರಿಗೆ ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ.1 ಲಕ್ಷ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ಎಂದು ರೂ.10,000 ನೀಡುವಂತೆ ಪ್ರಕರಣದ ಮೊದಲನೇ ಎದುರುದಾರ ಪಿಂಟೋ ವೈನ್ ಲ್ಯಾಂಡ್ ಮಾಲೀಕರಿಗೆ ಸೂಚನೆ ನೀಡಲಾಗಿದೆ.
English summary
Dharwad District Consumer Commission fined one lakh and ten thousand for supply damaged Whiskey bottle supply for consumer.
Story first published: Friday, June 23, 2023, 9:07 [IST]