Ramanagara
lekhaka-Ramesh Ramakirshna
ರಾಮನಗರ, ಜುಲೈ 05: ಸಪ್ತಗಿರಿಗಳ ನಗರಿ, ರೇಷ್ಮೆನಗರಿ ಖ್ಯಾತಿಯ ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಸುಮಾರು 300 ವರ್ಷಗಳ ಇತಿಹಾಸವುಳ್ಳ ಈ ಕರಗ ಮಹೋತ್ಸವಕ್ಕೆ ಜಿಲ್ಲೆಯಿಂದ ಅಲ್ಲದೇ ರಾಜ್ಯದ ವಿವಿಧ ಭಕ್ತರ ಸಾಗರವೇ ಹರಿದು ಬಂದಿತ್ತು.
ಚಾಮುಂಡೇಶ್ವರಿ ಕರಗ ಹಾಗೂ ಕೊಂಡ ಮಹೊತ್ಸವದ ಪ್ರಯುಕ್ತ ವಿವಿಧ ಬಣ್ಣಬಣ್ಣದ ಹೂಗಳಿಂದ ಚಾಮುಂಡೇಶ್ವರಿ ದೇವಾಲಯ ಅಲಂಕೃತಗೊಂಡಿತ್ತು. ಅಲ್ಲದೇ ನಗರದಾದ್ಯಂತ ತಳಿರು ತೋರಣ, ದೀಪಾಲಂಕಾರಗಳಿಂದ ನಗರ ನವ ವಧುವಿನಂತೆ ಶೃಂಗಾರಗೊಂಡಿತ್ತು. ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಸ ಮಂಜರಿ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ, ಖ್ಯಾತ ಗಾಯಕರು ಹಾಗೂ ಕಾಮಿಡಿ ಕಲಾವಿದರು ಜನರನ್ನು ರಂಜಿಸಿದರು.
ನಗರದ ಶಕ್ತಿ ದೇವತೆ ಚಾಮುಂಡಿ ತಾಯಿಯ ಕರಗಧಾರಿ ರಾತ್ರಿ 10 ಗಂಟೆ ದೇವಾಲಯದಿಂದ ಹೊರಟು ರಾತ್ರಿಯಿಡಿ ನಗರದ ಪ್ರಮುಖ ಬೀದಿಗಳಲ್ಲಿ ಅಮ್ಮನವರ ಕರಗ ಮೆರವಣಿಗೆ ಮೂಲಕ ಸಾಗಿ ಬೆಳ್ಳಿಗೆ ಸುಮಾರು 7:30 ಗಂಟೆ ಕೊಂಡ ಹಾಯ್ದು ದೇವಾಲಯ ಪ್ರವೇಶ ಮಾಡುವ ಮೂಲಕ ಅದ್ಧೂರಿ ಚಾಮುಂಡೇಶ್ವರಿ ಕೊಂಡಮಹೋತ್ಸವ ಜರುಗಿತ್ತು.
ಆಷಾಡ ಮಾಸದಲ್ಲಿ ನಡೆಯುವ ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಭಕ್ತಾದಿಗಳ ದಂಡೇ ಆಗಮಿಸಿತ್ತು. ಕಳೆದೆರಡು ದಿನಗಳಿಂದ ಲಕ್ಷಾಂತರ ಮಂದಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು. ಕರಗ ಮಹೋತ್ಸವನ್ನು ಜನತೆ ಭಕ್ತಿಭಾವದಿಂದ ಇಕ್ಕೆಲಗಳಲ್ಲಿ, ಮಹಡಿಗಳ ಮೇಲೆ ನಿಂತು ವೀಕ್ಷಿಸಿದಲ್ಲದೇ ಕರಗ ಹೊತ್ತವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಕರಗಧಾರಿ ದೇವಿ ಪ್ರಸಾದ್ ಪ್ರತಿಕ್ರಿಯೆ
ಕರಗಧಾರಿ ದೇವಿ ಪ್ರಸಾದ್ ಮಾತನಾಡಿ, ಕಳೆದ 21 ವರ್ಷಗಳಿಂದ ಕರಗ ಧಾರಣೆ ಮಾಡುತ್ತಿದ್ದು, ಈ ಬಾರಿಯೂ ಕರಗ ಹೊತ್ತು ಅಗ್ನಿ ಕೊಂಡ ಪ್ರವೇಶ ಮಾಡಿದ್ದೇನೆ. ಕೊಂಡಕ್ಕೂ 15 ದಿನಗಳ ಇರುವಂತೆ ಕಠಿಣ ವ್ರತಾಚರಣೆ ಮಾಡುತ್ತೇನೆ. ಆ ದಿನಗಳಲ್ಲಿ ಕಾಲಿಗೆ ಚಪ್ಪಲಿ ಹಾಕುವುದಿಲ್ಲ, ಮಿತವಾಗಿ ಊಟ ಮಾಡುತ್ತೇನೆ ಹಾಗೂ ಜಪ-ತಪ ಮಾಡುವ ಮೂಲಕ ತಾಯಿಯಿಂದ ಶಕ್ತಿ ಪಡೆಯುತ್ತೇನೆ ಎಂದರು.
ಮಲ್ಲಿಗೆ ಹೂಗಳಿಂದ ಅಲಂಕರಿಸಿದ ಕರಗ ಹೊತ್ತು ರಾತ್ರಿ ಹೊರಟು ವಿವಿಧ ಬಡಾವಣೆಗಳಲ್ಲಿ ಸುಮಾರು 25 ಕಿಲೋಮೀಟರ್‌ಗಟ್ಟಲೆ ಮೆರವಣಿಗೆ ಮಾಡಿ, ಪ್ರತಿ ಬೀದಿಗಳಲ್ಲಿ ಹೂವಿನ ಹಾಸು ಹಾಸಿ, ಕರಗಕ್ಕೆ ಪೂಜೆ ಸಲ್ಲಿಸಿ. ನಂತರ ದೇವಾಲಯದ ಮುಂದೆ ಸಿದ್ಧಪಡಿಸಿದ್ದ ಕೊಂಡ ಪ್ರವೇಶ ಮಾಡಿದ್ದೇನೆ. ತಾಯಿ ಚಾಮುಂಡೇಶ್ವರಿಯಲ್ಲಿ ಮಳೆ ಬೆಳೆ ಕೊಟ್ಟು ನಾಡನ್ನು ಸಲಹು ತಾಯಿ ಎಂದು ಬೇಡಿಕೊಂಡೆ ಎಂದು ದೇವಿ ಪ್ರಸಾದ್ ತಿಳಿಸಿದರು.
ರಾಮನಗರ ಕರಗೋತ್ಸವ: ಶಕ್ತಿ ದೇವತೆಗೆ ಮಡಿಲಕ್ಕಿ ಸಮರ್ಪಿಸಿದ ಶಾಸಕ ಇಕ್ಬಾಲ್ ಹುಸೇನ್
ದೇವಾಲಯದ ಇತಿಹಾಸ
ರಾಮ ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮೇಲುಕೋಟೆಯ ಪ್ರತಾಪ್‌ಸಿಂಗ್ ಎನ್ನುವವರು ಸ್ಥಾಪಿಸಿದ್ದರು ಎನ್ನುವ ಇತಿಹಾಸವಿದೆ. ಮಕ್ಕಳಿಲ್ಲದ ಪ್ರತಾಪ್‌ಸಿಂಗ್ ಕನಸಿನಲ್ಲಿ ಚಾಮುಂಡೇಶ್ವರಿ ದೇವಿ ಗುಹೆಯಲ್ಲಿರುವ ವಿಗ್ರಹವನ್ನು ತಂದು ಗುಡಿ ಕಟ್ಟಿಸಿ ಪ್ರತಿಷ್ಠಾಪಿಸಿದರೆ ನಿನಗೆ ಮಕ್ಕಳ ಭಾಗ್ಯ ಕರುಣಿಸುವುದಾಗಿ ಹಾಗೂ ಭಕ್ತರ ಇಷ್ಟಾರ್ಥ ಪೂರೈಸಲು ಇಲ್ಲೇ ನೆಲೆಸುತ್ತೇನೆ ಎಂದು ಆಜ್ಞೆ ಮಾಡಿದ್ದರು ಎನ್ನುವುದು ಪ್ರತೀತಿಯಾಗಿದೆ.
ಅಂದಿನಿಂದಲೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಇಲ್ಲಿಗೆ ಆಗಮಿಸಿ ಪಾರ್ಥನೆ ಸಲ್ಲಿಸುತ್ತಾರೆ. ಅಲ್ಲದೇ ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದಂದು ಇಲ್ಲಿ ಅದ್ಧೂರಿ ಕರಗ ಮಹೋತ್ಸವ ನಡೆಸಲಾಗುತ್ತದೆ. ಒಂದೇ ದಿನದಲ್ಲಿ ಚಾಮುಂಡೇಶ್ವರಿ ದೇವಿ ಸೇರಿದಂತೆ ವಿವಿಧ ಬಡವಾಣೆಗಳ ಎಂಟು ದೇವತೆಗಳ ಕರಗ ಮಹೋತ್ಸವ ಸಹ ಜರುಗಿದ್ದು ವಿಶೇಷವಾಗಿತ್ತು.
English summary
Ramanagara Chamundeshwari Karaga Mahotsav 2023: More than 2 lakh devotees participated Know more
Story first published: Wednesday, July 5, 2023, 19:02 [IST]