India
oi-Mamatha M
ಶ್ರೀನಗರ, , ಜುಲೈ. 27: ಸುಮಾರು ಮೂರು ದಶಕಗಳ ನಂತರ ಶಿಯಾ ಸಮುದಾಯದವರು ಗುರುವಾರ ಶ್ರೀನಗರದ ಸಾಂಪ್ರದಾಯಿಕ ಮಾರ್ಗದ ಲಾಲ್ ಚೌಕ್ ಪ್ರದೇಶದ ಮೂಲಕ ಹಾದುಹೋಗುವ ಮೊಹರಂ ಮೆರವಣಿಗೆಯನ್ನು ನಡೆಸಿದ್ದಾರೆ. ಮೆರವಣಿಗೆಯಲ್ಲಿ ಬಿಗಿ ಭದ್ರತೆಯ ನಡುವೆ ನೂರಾರು ಜನರು ಭಾಗವಹಿಸಿದ್ದರು.
ಆಡಳಿತವು ಬುಧವಾರ ಮೆರವಣಿಗೆಗೆ ಎರಡು ಗಂಟೆಗಳ ಕಾಲ ಅಂದರೆ ಗುರುವಾರ ಬೆಳಗ್ಗೆ 6 ರಿಂದ 8 ರವರೆಗೆ ಅನುಮತಿ ನೀಡಿತ್ತು. ಗುರುಬಜಾರ್ನಿಂದ ದಾಲ್ಗೇಟ್ ಮಾರ್ಗವಾಗಿ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದಾರೆ. “ಇಂದಿನ ಮೆರವಣಿಗೆ ಶಾಂತಿಯುತವಾಗಿತ್ತು” ಎಂದು ಶ್ರೀನಗರ ಡೆಪ್ಯುಟಿ ಕಮಿಷನರ್ ಐಜಾಜ್ ಅಸದ್ ಹೇಳಿದ್ದಾರೆ. ಮೆರವಣಿಗೆ ನಡೆಸಲು ಸಹಾಯ ನೀಡಿದ ಭದ್ರತಾ ಏಜೆನ್ಸಿಗಳು ಮತ್ತು ಸ್ಥಳೀಯ ಸ್ವಯಂಸೇವಕರಿಗೆ ಧನ್ಯವಾದ ಹೇಳಿದ್ದಾರೆ.
ಗುರುಬಜಾರ್ನಲ್ಲಿ 8 ನೇ ದಿನದ ಮೆರವಣಿಗೆಗಾಗಿ ಬೆಳಗ್ಗೆ 5.30 ರ ಸುಮಾರಿಗೆ ಜನರು ಜಮಾಯಿಸಿದ್ದರು. ಇಂದಿನ ಮೆರವಣಿಗೆ ಶಾಂತಿಯುವಾಗಿದ್ದ ಕಾರಣ ಶನಿವಾರದಂದು ಪ್ರಮುಖವಾದ 10 ನೇ ದಿನದ ಮೆರವಣಿಗೆಗೆ ಆಡಳಿತವು ಅವಕಾಶ ನೀಡುತ್ತದೆ ಎಂದು ಹಲವರು ಆಶಿಸಿದ್ದಾರೆ. ಇತ್ತ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಬೀದಿ ಹಿಂಸಾಚಾರ ಕೊನೆಗೊಂಡಿದೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿಯ ಯುಗ ಉದಯಿಸಿದೆ ಎಂದು ಹೇಳಿದ್ದು, ಮೊಹರಂ ಮೆರವಣಿಗೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
“ದಶಕಗಳ ನಂತರ ಇಂದು 8 ನೇ ಮೊಹರಂ ಮೆರವಣಿಗೆ ಶ್ರೀನಗರದಲ್ಲಿ ಶಾಂತಿಯುತವಾಗಿ ಮುಕ್ತಾಯವಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ರಾಜಕೀಯ ಮಾಡುವುದು ತಪ್ಪು” ಎಂದು ಸೂಫಿಸಂ ಕುರಿತು ಸಮಾವೇಶವನ್ನು ಉದ್ದೇಶಿಸಿ ಹೇಳಿದ್ದಾರೆ. ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದೆ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮೊಹರಂನ 8ನೇ ದಿನದ ಮೆರವಣಿಗೆಗೆ ಈ ಮಾರ್ಗದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮೆರವಣಿಗೆಗೆ ಅನುಮತಿ ನೀಡಬೇಕೆಂದು ಶಿಯಾ ಸಮುದಾಯದಿಂದ ಕಳೆದ ಕೆಲವು ವರ್ಷಗಳಿಂದ ಬೇಡಿಕೆ ಇತ್ತು, ಸರ್ಕಾರ ನಿರ್ಧಾರ ತೆಗೆದುಕೊಂಡ ನಂತರ ನಾವು ಅದಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿದ್ದೇವೆ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.
ಕಳೆದ 32-33 ವರ್ಷಗಳಿಂದ ಮೊಹರಂ ಮೆರವಣಿಗೆಗೆ ಅವಕಾಶವಿರಲಿಲ್ಲ ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ವಿ ಕೆ ಭಿದುರಿ ಬುಧವಾರ ಹೇಳಿದ್ದಾರೆ. ಮೆರವಣಿಗೆಗೆ ಅನುಮತಿ ನೀಡುವ ಆಡಳಿತದ ನಿರ್ಧಾರವು “ಐತಿಹಾಸಿಕ ಹೆಜ್ಜೆ” ಎಂದು ಹೇಳಿರುವ ಅವರು, ಕಾರ್ಯಕ್ರಮ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಆಡಳಿತವು ಇತರ ವಿಷಯಗಳ ಬಗ್ಗೆ ಇದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ; ಕೆಲವು ಗ್ರಾಮಗಳಲ್ಲಿ ಮೊಹರಂ ಹಬ್ಬದ ಆಚರಣೆ ನಿಷೇಧ
ಮೊಹರಂ ಮೆರವಣಿಗೆಗೆ ಅನುಮತಿ ನೀಡುವ ಸರ್ಕಾರದ ನಿರ್ಧಾರವನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸ್ವಾಗತಿಸಿದ್ದಾರೆ. “ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಅದೇ ಸಮಯದಲ್ಲಿ, ಸರ್ಕಾರವು ಇತರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ಮಿರ್ವೈಜ್ ಉಮರ್ ಫಾರೂಕ್ ಧಾರ್ಮಿಕ ಮುಖಂಡರಾಗಿದ್ದು ಅವರನ್ನು ಬಿಡುಗಡೆ ಮಾಡಬೇಕು. ಜಾಮಿಯಾ ಮಸೀದಿಯಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ಪ್ರಾರ್ಥನೆಗೆ ಅವಕಾಶ ನೀಡಬೇಕು ಮತ್ತು ಈದ್ ಪ್ರಾರ್ಥನೆ ಮಾಡಲು ಈದ್ಗಾದಲ್ಲಿ ಅನುಮತಿಮ ನೀಡಬೇಕು” ಎಂದು ಒಮರ್ ಅಬ್ದುಲ್ಲಾ ಪಿಟಿಐಗೆ ತಿಳಿಸಿದ್ದಾರೆ.
English summary
Shia community takes out Muharram procession in Srinagar Lal Chowk area in Jammu and Kashmir, After more than three decades. know more.
Story first published: Thursday, July 27, 2023, 21:52 [IST]