International
oi-Malathesha M
ವಾಷಿಂಗ್ಟನ್: ಇದಕ್ಕೆ ಅಲ್ವಾ ಹೇಳೋದು, ಕಾಲಚಕ್ರ ಸದಾ ತಿರುಗುತ್ತಲೇ ಇರುತ್ತದೆ ಅಂತಾ? ಈ ಪ್ರಶ್ನೆ ಯಾಕೆ ಅಂದ್ರೆ 30 ವರ್ಷಗಳ ಹಿಂದೆ ಸಾಮಾನ್ಯ ವ್ಯಕ್ತಿಯಾಗಿ ವೈಟ್ ಹೌಸ್ ಒಳಗೂ ಹೋಗಲಾಗದ ಭಾರತೀಯನಿಗೆ, ಇಂದು ಅದೇ ಶ್ವೇತಭವನ ಅದ್ಧೂರಿ ಸ್ವಾಗತ ಕೋರಿದೆ. ನಾವು ಹೇಳುತ್ತಿರುವುದು ಯಾರದ್ದೋ ಕಥೆಯಲ್ಲ, ಇದು ನೈಜ ಘಟನೆಯನ್ನ. ಪ್ರಧಾನಿ ಮೋದಿ ಅವರ ಬದುಕಿನ 30 ವರ್ಷಗಳ ಮಹಾನ್ ಸಾಧನೆಯನ್ನ.
ಜಗತ್ತಿನ ಶಕ್ತಿಶಾಲಿ ಹಾಗೂ ಶ್ರೀಮಂತ ರಾಷ್ಟ್ರ ಅಮೆರಿಕ. ಹೀಗಾಗಿಯೇ ಅಮೆರಿಕ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಅಮೆರಿಕದ ಜೊತೆ ಸಂಬಂಧ ಚನ್ನಾಗಿದ್ರೆ ಸಾಕು ಅಂತಿವೆ. ಆದ್ರೆ ಭಾರತದ ಜೊತೆ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಅಮೆರಿಕ ಪರದಾಡ್ತಿದೆ. ಯಾಕಂದ್ರೆ ಜಾಗತಿಕ ಮಟ್ಟದಲ್ಲಿ ಬಲಶಾಲಿಯಾಗಿ ಬೆಳೆದ ಭಾರತದ ಜೊತೆ ಮತ್ತಷ್ಟು ಆತ್ಮೀಯತೆ ಅಮೆರಿಕಗೆ ಈಗ ಅಗತ್ಯ. ಹೀಗಾಗಿ ಪ್ರಧಾನಿ ಮೋದಿ ಅವರಿಗೆ ವಿಶೇಷ ಆಹ್ವಾನ ನೀಡಿದ್ದರು ಅಮೆರಿಕ ಅಧ್ಯಕ್ಷ ಜೋ ಬೈಡನ್. ಇದೀಗ ಶ್ವೇತ ಭವನದಲ್ಲಿ ಪ್ರಧಾನಿ ಮೋದಿ 30 ವರ್ಷಗಳ ಹಿಂದಿನ ಘಟನೆ ಮೆಲುಕು ಹಾಕಿದ್ದಾರೆ.
1993ರಲ್ಲಿ ಸಾಮಾನ್ಯ ವ್ಯಕ್ತಿ, 2023ರಲ್ಲಿ ಪ್ರಧಾನಿ!
ಗುಜರಾತ್ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿರುವ ಹಿರಿಯ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು. ಆರ್‌ಎಸ್‌ಎಸ್ ಮೂಲಕ ಗುರುತಿಸಿಕೊಂಡಿದ್ದ ಪ್ರಧಾನಿ ಮೋದಿ ಭವಿಷ್ಯದಲ್ಲಿ ದೇಶದ ಪ್ರಧಾನಿ ಆಗುತ್ತಾರೆ ಅನ್ನೋದು ಯಾರಿಗೂ ಊಹೆ ಇರಲಿಲ್ಲ. ಹೀಗೆ 1993ರಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಹೋಗಿದ್ದಾಗ, ಅಲ್ಲಿನ ಅಧ್ಯಕ್ಷರ ನಿವಾಸ ಅಂದರೆ ವೈಟ್‌ಹೌಸ್ ಹೊರಗೆ ನಿಂತು ಫೋಟೋ ತೆಗೆಸಿಕೊಂಡಿದ್ದರು. ಅಂದು ಸಾಮಾನ್ಯ ವ್ಯಕ್ತಿಯಾಗಿದ್ದ ಪ್ರಧಾನಿ ಮೋದಿ ಅವರಿಗೆ ಶ್ವೇತಭವನದ ಒಳಗಡೆ ಹೋಗಲು ಆಗಿರಲಿಲ್ಲ. ಆದ್ರೆ ಈಗ 140 ಕೋಟಿ ಭಾರತೀಯರ ಪ್ರಧಾನಿ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಇದನ್ನ ಪ್ರಧಾನಿ ಮೋದಿ ಕೂಡ ಮೆಲುಕು ಹಾಕಿದ್ದಾರೆ.
ಭಾರತ & ಅಮೆರಿಕ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ: ಶ್ವೇತ ಭವನದಲ್ಲಿ ಭಾರತೀಯರ ಜೊತೆ ಪ್ರಧಾನಿ ಮೋದಿ ಮಾತು!
30 ವರ್ಷಗಳ ಮಹಾನ್ ಸಾಧನೆ!
1993ರ ಘಟನೆಯನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಮೆಲುಕು ಹಾಕಿಕೊಂಡರು. 3 ದಶಕದ ಹಿಂದೆ ನಾನು ಸಾಮಾನ್ಯ ವ್ಯಕ್ತಿಯಾಗಿ ಅಮೇರಿಕಾ ಪ್ರವಾಸಕ್ಕೆ ಬಂದಿದ್ದೆ. ಆಗ ವೈಟ್ ಹೌಸ್‌ನ ಹೊರಗಿಂದ ನೋಡಿದ್ದೆ. ಈಗ ಪ್ರಧಾನಿಯಾಗಿ ಇಲ್ಲಿ ಬಂದಿದ್ದೇನೆ ಎಂದರು. ಭಾರತೀಯ ಸಮುದಾಯದ ಜನರು ತಮ್ಮ ಜ್ಞಾನ, ಶಕ್ತಿ, ಸಾಮರ್ಥ್ಯ, ನಿಷ್ಠೆಯಿಂದ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕ & ಭಾರತದ ಸ್ನೇಹ ಇನ್ನಷ್ಟು ಗಟ್ಟಿ ಆಗಲು ಭಾರತೀಯರ ಕೊಡುಗೆ ಸಾಕಷ್ಟಿದೆ ಎಂದರು. ಈ ಮೂಲಕ 30 ವರ್ಷಗಳ ಬಳಿಕ ಅದೇ ಜಾಗಕ್ಕೆ ಪ್ರಧಾನಿ ಆಗಿ ಬಂದ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಂತಾಗಿದೆ ಎಂದರು ಪಿಎಂ ಮೋದಿ.
ಅದ್ಧೂರಿ ಸ್ವಾಗತಕ್ಕೆ ಪ್ರಧಾನಿ ಧನ್ಯವಾದ
ಅಮೆರಿಕ ಮತ್ತು ಭಾರತದ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕದ ಶ್ವೇತ ಭವನದ ಆವರಣದಲ್ಲಿ ಭಾರತ ಮೂಲದ ಅಮೆರಿಕನ್ನರ ಜೊತೆ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎರಡೂ ದೇಶಗಳು ಗೌರವಿಸುತ್ತವೆ. ಹಲವು ಅಭಿವೃದ್ಧಿಗೆ ಸಹಕಾರ, ಪರಸ್ಪರ ನೆರವು ನೀಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹಾಗೇ ತಮಗೆ ಆತ್ಮೀಯ ಸ್ವಾಗತ ಕೋರಿದ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಅಮೆರಿಕದ ನಾಗರಿಕರಿಗೂ ಇದೇ ವೇಳೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು.
ಒಟ್ನಲ್ಲಿ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತ ಈಗ ಜಗತ್ತಿನ ಎಲ್ಲಾ ದೇಶಗಳಿಗೂ ಬೇಕು. ಅದರಲ್ಲೂ ಅಮೆರಿಕ ಈಗ ಭಾರತದ ಜೊತೆ ಮತ್ತಷ್ಟು ಸ್ನೇಹ ಸಂಬಂಧ ವೃದ್ಧಿಗೆ ಮುಂದಾಗುತ್ತಿದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧದಲ್ಲಿ ಭಾರತದ ಸ್ನೇಹಕ್ಕೆ ಅಮೆರಿಕಗೆ ಅನಿವಾರ್ಯ ಕೂಡ. ಹೀಗಾಗಿ ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮುಂದಾಗಿರುವುದು ವಿಶೇಷ.
English summary
PM Modi remembered that his visit to White house in 1993.
Story first published: Thursday, June 22, 2023, 22:17 [IST]